ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ನೇಹಿ ಸಂಚಾರ ವ್ಯವಸ್ಥೆ ಅನುಷ್ಠಾನ ಗುರಿ: ಪಿ. ಹರಿಶೇಖರನ್‌

‘ಫೋನ್‌ ಇನ್‌’ ಕಾರ್ಯಕ್ರಮ
Last Updated 4 ಜೂನ್ 2019, 10:48 IST
ಅಕ್ಷರ ಗಾತ್ರ

‘ಬೆಂಗಳೂರುನಗರದಲ್ಲಿ ವಾಹನ ಸಂಚಾರ ನಿರ್ವಹಣೆಗೆಸಮರ್ಪಕವಾದ ಯೋಜನೆ (ಪ್ಲ್ಯಾನ್‌) ಈವರೆಗೆ ರೂಪುಗೊಂಡಿಲ್ಲ...’ ಎಂದು ನಗರದ ಟ್ರಾಫಿಕ್‌ ಸಮಸ್ಯೆಯ ಮೂಲ ಕಾರಣ ತೆರೆದಿಟ್ಟವರು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಪಿ.ಹರಿಶೇಖರನ್ ‘ಪ್ರಜಾವಾಣಿ’ ಕಚೇರಿಯಲ್ಲಿ ನಡೆದಫೋನ್ ಇನ್ ಕಾರ್ಯಕ್ರಮದಲ್ಲಿಸಾರ್ವಜನಿಕರ ಫೋನ್ ಕರೆ ಸ್ವೀಕರಿಸಿ ಮಾತನಾಡಿದ ಅವರು ಹಲವು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ಕೊಟ್ಟರು.

ಬೆಂಗಳೂರು: ‘ಸಿಲ್ಕ್ ಬೋರ್ಡ್‌ ಜಂಕ್ಷನ್‌, ಟಿನ್‌ ಫ್ಯಾಕ್ಟರಿ ರಸ್ತೆಯಲ್ಲಿ ನಿತ್ಯ ಕಿರಿಕಿರಿಯಾಗಿ ಕಾಡುತ್ತಿರುವ ವಾಹನ ದಟ್ಟಣೆಗೆ ತಿಂಗಳೊಳಗೆ ಪರಿಹಾರ ಕಂಡುಕೊಳ್ಳುತ್ತೇನೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಪಿ. ಹರಿಶೇಖರನ್‌ ಭರವಸೆ ನೀಡಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಎದುರಾದ ನೂರಾರು ಪ್ರಶ್ನೆಗಳಿಗೆ ಉತ್ತರಿಸುತ್ತಲೇ ನಗರದ ಸಂಚಾರ ದಟ್ಟಣೆಯ ವಿಶ್ವರೂಪವನ್ನೇ ಅವರು ತೆರೆದಿಟ್ಟರು.

‘ಇಡೀ ನಗರದಲ್ಲಿ ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಸಮರ್ಪಕವಾದ ಯೋಜನೆ (ಪ್ಲ್ಯಾನ್‌) ಇಲ್ಲ. ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ವಾಹನ ಸಂಚಾರಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಇದೇ ಮೂಲ ಕಾರಣ’ ಎಂದು ಅವರು ಅಭಿಪ್ರಾಯಪಟ್ಟರು.

ಎರಡು ಗಂಟೆ ನಡೆದ ‘ಫೋನ್‌ ಇನ್‌’ಗೆ ಒಂದರ ಹಿಂದೆ ಒಂದರಂತೆ ನಿರಂತರ ಪ್ರಶ್ನೆಗಳ ಕರೆಗಳು ತೂರಿ ಬಂದವು. ‍ಅವೆಲ್ಲವುಗಳಿಗೆ ಸಾವಕಾಶದಿಂದ ಉತ್ತರಿಸಿದ ಅವರು, ಮಡಿವಾಳ ಫ್ಲೈ ಓವರ್‌ನಲ್ಲಿ ರಾತ್ರಿ ವೇಳೆ ಸಾಲು ಸಾಲಾಗಿ ಖಾಸಗಿ ಬಸ್‌ಗಳ ನಿಲುಗಡೆಯಿಂದ ಎದುರಾಗುವ ಸಮಸ್ಯೆ ಸೇರಿದಂತೆ ಕೆಲವು ತೊಂದರೆಗಳನ್ನು ತಕ್ಷಣ ಪರಿಹಾರ ಒದಗಿಸುವಂತೆ ಕುಳಿತಲ್ಲಿಂದಲೇ ಸಂಬಂಧಿಸಿದ ಪೊಲೀಸ್‌ ಅಧಿಕಾರಿಗಳಿಗೆ ಕರೆ ಮಾಡಿ ತಾಕೀತು ಮಾಡಿದರು.

ನಿಲ್ದಾಣವೇ ಇಲ್ಲದಿರುವುದರಿಂದ ಎಲ್ಲೆಂದರದಲ್ಲಿ ನಿಲುಗಡೆಯಾಗುವ ಬಿಎಂಟಿಸಿ ಬಸ್‌ಗಳು, ಸಂಚಾರ ನಿಯಂತ್ರಿಸುವ ಬದಲು ಮೊಬೈಲ್‌ ವೀಕ್ಷಿಸುತ್ತಲೇ ಸಮಯ ಕಳೆಯುವ ಟ್ರಾಫಿಕ್‌ ಪೊಲೀಸರು, ‌ಬಡಾವಣೆಗಳಲ್ಲಿ ಮನೆಗಳ ಮುಂಭಾಗದಲ್ಲಿ, ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡಿದ ಬಳಿಕ ದಬ್ಬಾಳಿಕೆ ತೋರಿಸುವ ವಾಹನ ಮಾಲೀಕರು, ಫುಟ್‌ಪಾತ್‌ಗಳನ್ನೇ ರಸ್ತೆ ಮಾಡಿಕೊಂಡು ಓಡಾಡುವ ದ್ವಿಚಕ್ರ ವಾಹನಗಳು...ಹೀಗೆ ಹಲವು ವಿಷಯಗಳ ಬಗ್ಗೆ ಸಾರ್ವಜನಿಕರು ಕಮಿಷನರ್‌ ಅವರ ಗಮನ ಸಳೆದರು.

ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವ ಭರವಸೆ ನೀಡಿದ ಹರಿಶೇಖರನ್‌, ‘ಬಿಬಿಎಂಪಿ ಸದಸ್ಯರೂ ಈ ನಿಟ್ಟಿನಲ್ಲಿ ಕೈ ಜೋಡಿಸಬೇಕು. ಸಂಚಾರ ದಟ್ಟಣೆಗೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರತ್ಯೇಕ ಅಭಿವೃದ್ಧಿ ನಿಧಿಯನ್ನು ಮೀಸಲಿಡಬೇಕು. ಸಾರ್ವಜನಿಕರೂ ಸಹಕಾರ ನೀಡಿದರೆ ಮಾತ್ರ ವ್ಯವಸ್ಥಿತ ಜನಸ್ನೇಹಿ ಸಂಚಾರ ವ್ಯವಸ್ಥೆ ಅನುಷ್ಠಾನ ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT