ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧವಾಗಲಿದೆ ‘ಬೆಂಗಳೂರು ವಿಷನ್ 2050’

ಬಿಡಿಎ ಅಧಿಕಾರಿಗಳ ಜೊತೆ ಸಚಿವ ಪರಮೇಶ್ವರ ಸಭೆ
Last Updated 3 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸಮಗ್ರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು 'ವಿಷನ್ ಬೆಂಗಳೂರು- 2050' ಯೋಜನೆ ಸಿದ್ಧಪಡಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳಿಗೆ ಸೂಚಿಸಿದರು.

ಪ್ರಾಧಿಕಾರದ ಅಧಿಕಾರಿಗಳ ಜೊತೆ ಶನಿವಾರ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

‘ರಾಮನಗರ,ಆನೇಕಲ್‌, ಹೊಸಕೋಟೆ, ದೊಡ್ಡಬಳ್ಳಾಪುರ, ದಾಬಸ್ ಪೇಟೆ ಪ್ರದೇಶಗಳನ್ನು ಸಂಪರ್ಕಿಸಲು ಹೊರ ವರ್ತುಲ ರಸ್ತೆಯ ಮಾದರಿಯಲ್ಲೇ ರಸ್ತೆಯೊಂದನ್ನು ನಿರ್ಮಿಸುವ ಯೋಜನೆಯನ್ನು ಬೆಂಗಳೂರು ಮಹಾನಗರ ‍ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಸಿದ್ಧಪಡಿಸಿದ್ದೇವೆ. ಈ ಪ್ರದೇಶಗಲಲ್ಲಿ ಉಪನಗರಗಳು ನಿರ್ಮಾಣವಾಗಲಿವೆ. ಇದರಿಂದ ನಗರದ ಕೇಂದ್ರ ಪ್ರದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಇಲ್ಲಿ ಸಂಚಾರ ದಟ್ಟಣೆ, ಕುಡಿಯುವ ನೀರು ಪೂರೈಕೆ ಹಾಗೂ ವಸತಿ ಸಮಸ್ಯೆಗಳನ್ನು ನೀಗಿಸಲು ಇದು ನೆರವಾಗಲಿದೆ' ಎಂದು ಅವರು ವಿವರಿಸಿದರು.

‘ನಗರ ಮಹಾಯೋಜನೆ 2031’ರ ಪರಿಷ್ಕೃತ ಕರಡನ್ನೇ ಬಿಡಿಎ ಅಂತಿಮಗೊಳಿಸಿಲ್ಲ. ಈ ಕರಡಿನ ಕುರಿತು ಬಿಡಿಎ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿತ್ತು. ಸಾರ್ವಜನಿಕರಿಂದ 13,046 ಅರ್ಜಿಗಳು ಸಲ್ಲಿಕೆಯಾಗಿದ್ದವು. ಬಿಬಿಎಂಪಿ ವಿಶೇಷ ಆಯುಕ್ತರ ನೇತೃತ್ವದಲ್ಲಿ ಸಮಿತಿ ಇವುಗಳ ಪರಿಶೀಲನೆ ನಡೆಸಿತ್ತು. ಅಂತಿಮ ಕರಡು ಪ್ರಕಟಿಸಲು ಸಿದ್ಧತೆ ನಡೆದಿರುವಂತೆಯೇ ಇದರ ಪುನರ್‌ಪರಿಶೀಲನೆಗಾಗಿ ಮತ್ತೆ ಬಿ.ಎಸ್‌.ಪಾಟೀಲ ನೇತೃತ್ವದ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಒಂದೂ ಸಭೆಯನ್ನೂ ನಡೆಸಿಲ್ಲ.

ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ನಗರ ಮಹಾಯೋಜನೆ 2031ಗೂ ವಿಷನ್‌ 2050ಗೂ ಸಂಬಂಧವಿಲ್ಲ. ಇವೆರಡು ಬೇರೆ ಬೇರೆ. ನಗರ ಮಹಾಯೋಜನೆಗೆ ಆಕ್ಷೇಪ ಸಲ್ಲಿಸಲು ನೀಡಿದ್ದ ಅವಧಿಯನ್ನು ಇನ್ನಷ್ಟು ವಿಸ್ತರಿಸಲು ಬಿಡಿಎ ಹಂತದಲ್ಲಿ ತೀರ್ಮಾನಿಸಿದ್ದೇವೆ. ಇದಕ್ಕೆ ಸರ್ಕಾರದ ಅನುಮೋದನೆ ಬಾಕಿ ಇದೆ’ ಎಂದರು.

ಪಿಆರ್‌ಆರ್– ಎತ್ತರಿಸಿದ ಮಾರ್ಗವಿಲ್ಲ:

'ಪೆರಿಫೆರಲ್ ವರ್ತುಲ ರಸ್ತೆ ನಿರ್ಮಿಸುವ ಕುರಿತು ಸಾರ್ವಜನಿಕರಲ್ಲಿ ಗೊಂದಲ ಬೇಡ. ಈ ಯೋಜನೆಯನ್ನು ಅನುಷ್ಠಾನಗೊಳಿಸಿಯೇ ಸಿದ್ಧ. ಇದರ ಭೂಸ್ವಾದೀನಕ್ಕೆ ₹ 6,200 ಕೋಟಿ ವೆಚ್ಚವಾಗಲಿದೆ.‌ ಇದನ್ನು ತಗ್ಗಿಸಲು ನೆಲಮಟ್ಟದ ರಸ್ತೆ ಬದಲು ಎತ್ತರಿಸಿದ ರಸ್ತೆ ನಿರ್ಮಿಸುವ ಚಿಂತನೆ ನಡೆಸಿದ್ದೆವು. ಆದರೆ, ಅದರಿಂದ ಯೋಜನಾ ವೆಚ್ಚದಲ್ಲಿ ಭಾರಿ ವ್ಯತ್ಯಾಸವೇನೂ ಆಗವುದಿಲ್ಲ. ಹಾಗಾಗಿ ಎತ್ತರಿಸಿದ ರಸ್ತೆ ನಿರ್ಮಿಸುವ ಪ್ರಸ್ತಾವ ಕೈಬಿಟ್ಟಿದ್ದೇವೆ. ಎಂಟು ಪಥಗಳ ರಸ್ತೆಯ ಮಧ್ಯದಲ್ಲಿ ‘ನಮ್ಮ ಮೆಟ್ರೊ’ ಎತ್ತರಿಸಿದ ಮಾರ್ಗಕ್ಕಾಗಿ ಜಾಗ ಕಾಯ್ದಿರಿಸಲಿದ್ದೇವೆ. ಈ ಪ್ರಸ್ತಾವಕ್ಕೆ ಶೀಘ್ರವೇ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುವುದು' ಎಂದು ವಿವರಿಸಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆಯ ಎರಡನೇ ಹಂತದಲ್ಲಿ ನಿವೇಶನ ಪಡೆದವರು ಶುಲ್ಕ ಪಾವತಿಸಲು 3 ತಿಂಗಳು ಕಾಲಾವಕಾಶವಿದೆ. ನಂತರದ ಒಂದು ತಿಂಗಳು ಅವರು ಶೇ 18ರಷ್ಟು ದಂಡನಾ ಶುಲ್ಕದೊಂದಿಗೆ ಪಾವತಿ ಮಾಡಬಹುದು.

‘ದಂಡನಾ ಶುಲ್ಕವಿಲ್ಲದೆ ಹಣ ಪಾವತಿಸಲು ಮೂರು ತಿಂಗಳ ಬದಲು ನಾಲ್ಕು ತಿಂಗಳು ಕಾಲಾವಕಾಶ ನೀಡುವಂತೆ ನಿವೇಶನದಾರರು ಕೋರಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸುಸಜ್ಜಿತ ಬಿಡಿಎ ಭವನ ನಿರ್ಮಾಣ’

ಅಧಿಕಾರಿಗಳ ಜೊತೆ ಸಭೆ ನಡೆಸುವುದಕ್ಕೆ ಮುನ್ನ ಪರಮೇಶ್ವರ ಅವರು ಬಿಡಿಎ ಕಚೇರಿಯಲ್ಲಿರುವ ಅಧಿಕಾರಿಗಳ ಕೊಠಡಿಗಳಿಗೆ ದಿಢೀರ್‌ ಭೇಟಿ ನೀಡಿದರು. ಕಡತಗಳಿರುವ ಕಪಾಟುಗಳನ್ನು ಕಾರಿಡಾರ್‌ನಲ್ಲಿ ಇಟ್ಟಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಕಪಾಟುಗಳನ್ನು ಇಡಲು ಸ್ಥಳಾವಕಾಶ ಇಲ್ಲ’ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

‘ಬಿಡಿಎಗೆ ಸಂಬಂಧಿಸಿದ ಪ್ರಮುಖ ಕಡತಗಳನ್ನು ಕೊಠಡಿಯ ಹೊರಗೆ ಇಡುವುದು ಸುರಕ್ಷಿತವಲ್ಲ. ಈ ದೃಷ್ಟಿಯಿಂದ ಸುಸಜ್ಜಿತವಾದ ಬಿಡಿಎ ಭವನ ನಿರ್ಮಾಣ ಮಾಡಲು ಪ್ರಸ್ತಾವ ಸಿದ್ಧಪಡಿಸುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ. ಕೇಂದ್ರ ಕಚೇರಿ ಆವರಣದಲ್ಲಿರುವ ಹಳೆಯ ಕಟ್ಟಡ ಕೆಡವಿ, ಅಲ್ಲೇ ಭವನ ನಿರ್ಮಿಸಬೇಕೋ ಅಥವಾ ಬೇರೆ ಜಾಗದಲ್ಲಿ ನಿರ್ಮಿಸಬೇಕೋ ಎಂದು ಇನ್ನೂ ನಿರ್ಧಾರ ಮಾಡಿಲ್ಲ’ ಎಂದು ಸಚಿವರು ತಿಳಿಸಿದರು.

‘ಆಸ್ತಿ–ಮಾರ್ಚ್‌ನಲ್ಲಿ ಸಮಗ್ರ ಮಾಹಿತಿ’

'ಬಿಡಿಎ ಆಸ್ತಿಗಳ ಸಮಗ್ರ ಮಾಹಿತಿ ಲಭ್ಯವಿಲ್ಲ. ಇವುಗಳ ನಿಖರ ವಿವರಗಳನ್ನು ಕಂಡುಹಿಡಿಯುವ ಉದ್ದೇಶದಿಂದ ಲ್ಯಾಂಡ್ ಆಡಿಟ್ ನಡೆಸುವಂತೆ ಸೂಚನೆ‌ ನೀಡಿದ್ದೇನೆ. ಈಗಾಗಲೇ ಇದರ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. 2019ರ ಮಾರ್ಚ್ ಒಳಗೆ ಲ್ಯಾಂಡ್‌ ಆಡಿಟ್‌ ಪೂರ್ಣಗೊಳ್ಳಲಿದೆ' ಎಂದು ಸಚಿವರು ತಿಳಿಸಿದರು.

ಅಂಕಿ ಅಂಶ

65 ಕಿ.ಮೀ.

ಪಿಆರ್‌ಆರ್‌ ಉದ್ದ

₹ 17 ಸಾವಿರ ಕೋಟಿ

ಈ ಯೋಜನೆಗೆ ತಗಲುವ ಒಟ್ಟು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT