ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮಾನದಂಡ ಅನುಸರಿಸದ ಎಸ್‌ಟಿಪಿಗಳು

ಎನ್‌ಜಿಟಿ ನಿಯಮ: ಬಿಡಬ್ಲ್ಯೂಎಸ್‌ಎಸ್‌ಬಿಯ 31 ಎಸ್‌ಟಿಪಿಗಳಲ್ಲಿ 8 ಮಾತ್ರ ಪಾಸ್‌
Last Updated 20 ಫೆಬ್ರುವರಿ 2023, 23:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ನಿರ್ವಹಣೆ ಮಾಡುತ್ತಿರುವ 31 ಎಸ್‌ಟಿಪಿಗಳಲ್ಲಿ 8 ಮಾತ್ರ ನಿಯಮಗಳಂತೆ ತ್ಯಾಜ್ಯ ನೀರಿನ ಸಂಸ್ಕರಣೆ ಮಾಡುತ್ತಿದ್ದು, ಉಳಿದ ಎಸ್‌ಟಿಪಿಗಳು ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಮೀರಿವೆ ಎಂದು ಆ್ಯಕ್ಷನ್‌ ಏಡ್‌ ಸಂಸ್ಥೆ ವರದಿ ತಿಳಿಸಿದೆ.

ಬಿಡಬ್ಲ್ಯುಎಸ್‌ಎಸ್‌ಬಿಯ ವೆಬ್‌ಸೈಟ್‌ನಲ್ಲೇ ದಾಖಲಾಗಿರುವ ಎಸ್‌ಟಿಪಿಗಳ ಅಂಕಿ–ಅಂಶಗಳನ್ನು 45 ದಿನ ಅನುಸರಿಸಿ, ಅವುಗಳ ಅಧ್ಯಯನ ವರದಿಯನ್ನು ಸಂಸ್ಥೆ ಸಿದ್ಧಪಡಿಸಿದೆ. 31 ಎಸ್‌ಟಿಪಿಗಳಲ್ಲಿ ಪ್ರತಿದಿನ 1042.5 ದಶಲಕ್ಷ ಲೀಟರ್‌ ತ್ಯಾಜ್ಯ ನೀರನ್ನು ಸಂಸ್ಕರಿಸಲಾಗುತ್ತಿದೆ. 2022ರ ನ.1ರಿಂದ ಡಿ.15ವರೆಗೆ ಅಧ್ಯಯನ ಮಾಡಲಾಗಿದೆ. ನೀರಿನ ಸಂಸ್ಕರಣೆಯ ಗುಣಮಟ್ಟವನ್ನು ಅರಿಯಲು ಆರು ಮಾನದಂಡಗಳನ್ನು ತುಲನೆ ಮಾಡಲಾಗಿದೆ.

ಕೆಮಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌ (ಸಿಒಡಿ), ಬಯೊಲಾಜಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌ (ಬಿಒಡಿ), ಪೊಟೆನ್ಷಿಯಲ್ ಹೈಡ್ರೋಜನ್‌ (ಪಿಎಚ್‌), ಟೋಟಲ್‌ ಸಸ್ಪೆಂಡೆಡ್‌ ಸಾಲಿಡ್ಸ್‌ (ಟಿಎಸ್‌ಎಸ್‌), ಅಮೋನಿಕಲ್‌ ನೈಟ್ರೋಜನ್‌ ಮತ್ತು ಟೋಟಲ್‌ ನೈಟ್ರೋಜನ್‌ ಮಟ್ಟಗಳ ಮಾಪನವನ್ನು ಅನುಸರಿಸಿ ಅಧ್ಯಯನ ಮಾಡಲಾಗಿದೆ. 8 ಎಸ್‌ಟಿಪಿಗಳನ್ನು ಹೊರತುಪಡಿಸಿದರೆ ಇನ್ಯಾವುವೂ ಈ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು ಆ್ಯಕ್ಷನ್ ಏಡ್‌ನ ಕಾರ್ಯಕ್ರಮ ವ್ಯವಸ್ಥಾಪಕ ರಾಘವೇಂದ್ರ ಬಿ. ಪಚ್ಚಾಪುರ್‌ ತಿಳಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡದಂತೆ ಟಿಎಸ್‌ಎಸ್ ಮಟ್ಟ ಒಂದು ಲೀಟರ್‌ಗೆ 10 ಎಂ.ಜಿಗಿಂತ ಕಡಿಮೆ ಇರಬೇಕು. ಆದರೆ ಜಲಮಂಡಳಿ ಈ ಮಟ್ಟನ್ನು 20 ಎಂ.ಜಿಗೆ ನಿಗದಿಪಡಿಸಿದೆ. ಅದೇ ರೀತಿ ಪಿಎಚ್‌ ಮಟ್ಟ 6.5–8.5 ಬದಲು 6.5–9 ನಿಗದಿ ಮಾಡಿದ್ದರೆ, ಹಲವು ರೋಗಗಳಿಗೆ ಕಾರಣವಾಗುವ ಮಾನವ–ಪ್ರಾಣಿ ತ್ಯಾಜ್ಯ ಒಳಗೊಂಡಿರು‌ವ ‘ಕೋಲಿಫಾರ್ಮ್‌’ ಪ್ರಮಾಣದ ಮಾಪನವೇ ಎಸ್‌ಟಿಪಿಗಳಲ್ಲಿ ಇಲ್ಲದಾಗಿದೆ.

ಯಾವ ಎಸ್‌ಪಿಟಿ ಹೇಗಿವೆ?:

ದೊಡ್ಡಬೆಲೆ, ಕಬ್ಬನ್‌ಪಾರ್ಕ್‌, ಎಲೆಮಲ್ಲಪ್ಪ ಚೆಟ್ಟಿ, ಮೈಲಸಂದ್ರ, ಕೆಂಪಾಂಬುಧಿ, ರಾಜಕ್ಯಾನಲ್‌ (ಹೊಸ), ಅಗರ ಮತ್ತು ಹುಳಿಮಾವಿನಲ್ಲಿರುವ ಎಸ್‌ಟಿಪಿಗಳು ಮಾತ್ರ ಎಲ್ಲ ಮಾನದಂಡಗಳನ್ನು ಅನುಸರಿಸುತ್ತಿವೆ.

ಕೆಂಗೇರಿ, ರಾಜಕ್ಯಾನಲ್‌ (ಹಳೆ), ಹೆಬ್ಬಾಳ, ಕೆಆ್ಯಂಡ್‌ಸಿ ವ್ಯಾಲಿ–30 ಮತ್ತು 218ಗಳ ಮಾದರಿಯ ಅಂಕಿ–ಅಂಶಗಳನ್ನೇ ಒದಗಿಸುತ್ತಿಲ್ಲ.

ಯಲಹಂಕ ಟಟಿಪಿ, ಹಲಸೂರು, ಬೆಳ್ಳಂದೂರು ಅಮಾನಿ ಕೆರೆಗಳಲ್ಲಿ ಎಸ್‌ಟಿಪಿಗಳ ದತ್ತಾಂಶಗಳು ಆತಂಕ ತರುವ ರೀತಿಯಲ್ಲಿದ್ದು, ತಪ್ಪು ಮಾಹಿತಿಯಿಂದ ಕೂಡಿವೆ. ಜಕ್ಕೂರು ಎಸ್‌ಟಿಪಿ ಅತ್ಯಂತ ದುಃಸ್ಥಿತಿಯಲ್ಲಿದೆ. ಎಲ್ಲ ಮಾನದಂಡಗಳನ್ನೂ ಮೀರಿದೆ.

ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ), ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲ ಮಾನದಂಡಗಳನ್ನು ಅನುಸರಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಇದನ್ನು ಮೇಲ್ವಿಚಾರಣೆ ಮಾಡಬೇಕು. ಕೆರೆ ಹಾಗೂ ಇತರ ಪ್ರದೇಶಗಳಿಗೆ ಹರಿಸುವ ಸಂಸ್ಕರಿತ ನೀರು ಮಾನದಂಡಗಳಂತೆಯೇ ಇರಬೇಕು ಎಂದು ಅಧ್ಯಯನದಲ್ಲಿ ಸಲಹೆ ನೀಡಲಾಗಿದೆ.

‘ಮೀನು ಬದುಕಲೂ ಯೋಗ್ಯವಲ್ಲ...

ಬಿಡಬ್ಲ್ಯುಎಸ್‌ಎಸ್‌ಬಿ ತನ್ನ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳಿಂದ (ಎಸ್‌ಟಿಪಿ) ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಹೇಳುತ್ತದೆ. ಜನರು ಉಪಯೋಗಿಸುವುದು ದೂರದ ಮಾತು. ಮೀನುಗಳು ಬದುಕಲು ಸಾಧ್ಯವಾದಂತಹ ನೀರು ಕೆರೆಯಲ್ಲಿದ್ದರೆ ಸಾಕು. ಅಂತಹ ಉದ್ದೇಶದಿಂದ ಎಸ್‌ಟಿಪಿಗಳಿಂದ ಹರಿಯುತ್ತಿರುವ ನೀರನ್ನು ಅವರದ್ದೇ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಂಕಿ–ಅಂಶಗಳನ್ನು ಒಟ್ಟುಗೂಡಿಸಿ ಅಧ್ಯಯನ ನಡೆಸಿದೆವು. ಇದರ ಪ್ರತಿಯನ್ನು ಬಿಡಬ್ಲ್ಯುಎಸ್‌ಎಸ್‌ಬಿ, ನಗರಾಭಿವೃದ್ಧಿ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೂ ಸಲ್ಲಿಸಲಾಗುತ್ತದೆ ಎಂದು ಆ್ಯಕ್ಷನ್ ಏಡ್‌ನ ರಾಘವೇಂದ್ರ ಬಿ. ಪಚ್ಚಾಪುರ್‌ ತಿಳಿಸಿದರು.

ಉನ್ನತೀಕರಣ ಮಾಡಲಾಗುತ್ತದೆ...

ಬಿಡಬ್ಲ್ಯುಎಸ್‌ಎಸ್‌ಬಿಯ ಹಲವು ಎಸ್‌ಟಿಪಿಗಳು ತುಂಬಾ ಹಳೆಯದಾಗಿದ್ದು, ಇದೀಗ ನಿಗದಿಪಡಿಸಿರುವ ಮಾನದಂಡಗಳನ್ನು ಇವು ಪೂರೈಸಲು ಸಾಧ್ಯವಿಲ್ಲ. ಹೀಗಾಗಿ, ಎನ್‌ಜಿಟಿ ಮಾನದಂಡಗಳನ್ನು ನಿರ್ವಹಿಸಲು ಎಸ್‌ಟಿಪಿಗಳನ್ನು ಉನ್ನತೀಕರಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿಯ ಎಸ್‌ಟಿಪಿ ವಿಭಾಗದ ಗಂಗಾಧರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT