ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಐಸಿ ಹಬ್ಬ’ಕ್ಕೆ ಸಂಭ್ರಮದ ತೆರೆ: ವಿಚಾರಗಳ ಮಂಥನ, ಸಂಗೀತದ ಅನುರಣನ

ಹೂವಿನ ಕತೆ, ಮಡಿವಾಳರ ವ್ಯಥೆ ಬಿಚ್ಚಿಟ್ಟ ಕಿರುಚಿತ್ರಗಳು l ಲಾಲ್‌ಬಾಗ್‌ ಇತಿಹಾಸದ ಮೆಲುಕು
Last Updated 27 ಫೆಬ್ರುವರಿ 2023, 4:12 IST
ಅಕ್ಷರ ಗಾತ್ರ

ಬೆಂಗಳೂರು: ಸಂಗೀತದ ಹೊನಲು, ಗೋಷ್ಠಿಗಳಲ್ಲಿ ವಿಚಾರಗಳ ಮಂಥನ, ಮಕ್ಕಳಿಗೆ ಕಾರ್ಯಾಗಾರ ಹಾಗೂ ಕಿರುಚಿತ್ರ ಪ್ರದರ್ಶನಗಳು ‘ಬಿಐಸಿ ಹಬ್ಬ’ದ ಎರಡನೇ ದಿನವನ್ನು ಚೆಂದಗಾಣಿಸಿಕೊಟ್ಟಿತು. ಸಾಹಿತ್ಯಾಸಕ್ತರು, ಚಿಣ್ಣರು, ಯುವಕ–ಯುವತಿಯರು ಕಾರ್ಯಕ್ರಮಗಳಲ್ಲಿ ಮಿಂದೇಳುವುದರೊಂದಿಗೆ ಹಬ್ಬವು ಭಾನುವಾರ ಸಡಗರದಿಂದ ತೆರೆ ಕಂಡಿತು.

ದೊಮ್ಮಲೂರಿನಲ್ಲಿರುವ ‘ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ(ಬಿಐಸಿ)’ದಲ್ಲಿ ನಡೆದ ಐದನೇ ಆವೃತ್ತಿಯ ಹಬ್ಬದಲ್ಲಿ ಹಲವು ವೈಚಾರಿಕ ವಿಚಾರಗಳು ಹೊರಹೊಮ್ಮಿದವು.

ದೆಹಲಿಯ ಶಾಶ್ವತಿ ಮಂಡಲ್‌ ಅವರ ಹಿಂದೂಸ್ತಾನಿ ಸಂಗೀತ ಕಛೇರಿಗೆ ಸಂಗೀತಾಸಕ್ತರು ತಲೆದೂಗಿದರು. ‌

ಬೆಂಗಳೂರು ಕುರಿತು ಆರು ಕಿರುಚಿತ್ರಗಳು ಪ್ರದರ್ಶನಗೊಂಡವು. ರೆಹಾನ್ ಡಿಯಾಜ್ ಅವರು ಬೆಂಗಳೂರಿನ ರುದ್ರಭೂಮಿ ಹಾಗೂ ಧೋಬಿ ಘಾಟ್‌ ಸ್ಥಳ ಆಧರಿಸಿ, ನಿರ್ಮಿಸಿದ ಕಿರುಚಿತ್ರಗಳು ಗಮನ ಸೆಳೆದವು.

ರುದ್ರಭೂಮಿ ಕುರಿತ ಚಿತ್ರದ ಕೊನೆಯಲ್ಲಿ ‘ಸಾವಿನ ಸ್ಥಳವಲ್ಲ. ನಿಶ್ಚಲ ನೆಲೆಗಳ ಬೀಡು...’ ಎಂದು ಬರೆದ ಸಾಲು ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವಂತೆ ಮಾಡಿತು.

‘ಬೇರೆ ನಗರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿರುವ ರುದ್ರಭೂಮಿಗಳು ವಿಶಾಲವಾಗಿವೆ. ಈ ಸ್ಥಳಗಳ ಮಹತ್ವ ತಿಳಿಸುವ ಉದ್ದೇಶದಿಂದ ಈ ವಿಷಯ ಆಯ್ಕೆ ಮಾಡಿಕೊಂಡಿದ್ದೇನೆ’ ಎಂದು ರೆಹಾನ್‌ ಸಂವಾದದಲ್ಲಿ ಹೇಳಿದರು.

ಧೋಬಿ ಫಾಟ್‌ ಕಿರುಚಿತ್ರದಲ್ಲಿ ಮಡಿವಾಳರ ಸಮಸ್ಯೆಗಳು ತೆರೆದುಕೊಂಡವು. ಅಶೋಕನಗರದ ಧೋಬಿ ಘಾಟ್‌ನಲ್ಲಿನ ನೀರು, ವಿದ್ಯುತ್ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿತು. ಮಲ್ಲೇಶ್ವರ ಸೇರಿದಂತೆ ನಗರದ ಕೆಲವು ಧೋಬಿ ಘಾಟ್‌ಗಳು ಆಧುನೀಕರಣಗೊಂಡಿವೆ. ಆದರೆ, ಅಶೋಕನಗರದ ಮಡಿವಾಳ ಸಮುದಾಯದವರು ಇನ್ನೂ ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಆಸುಪಾಸಿನಲ್ಲಿ ಪ್ರತಿಷ್ಠಿತ ಹೋಟೆಲ್‌ಗಳು, ವಸತಿ ಸಮುಚ್ಚಯಗಳಿದ್ದರೂ ಈ ಸ್ಥಳ ಮಾತ್ರ ಆಧುನೀಕರಣಕ್ಕೆ ತೆರೆದುಕೊಂಡಿಲ್ಲ ಎಂಬುದನ್ನು ಹೇಳುವ ಮೂಲಕ ಬಟ್ಟೆ ತೊಳೆಯುವ ಕೈಗಳ ಸಂಕಟಗಳನ್ನು ಕಟ್ಟಿಕೊಟ್ಟಿತು.

‘ನಗರವು ವಿಶ್ವ ಪ್ರಸಿದ್ಧಿಯಾಗಿದ್ದರೂ ಈ ಪ್ರದೇಶದ ಮಡಿವಾಳರಿಗೆ ಸೌಲಭ್ಯಗಳು ಸಿಕ್ಕಿಲ್ಲ ಎಂಬುದೇ ನನಗೆ ಚಿತ್ರೀಕರಣದ ವೇಳೆ ಅಚ್ಚರಿ ಮೂಡಿಸಿತು’ ಎಂದು ರೆಹಾನ್‌ ಹೇಳಿದರು.

ಕೆ.ಆರ್‌.ಮಾರುಕಟ್ಟೆಗೆ ಬರುವ ಬಗೆಬಗೆಯ ಹೂವುಗಳು, ಗ್ರಾಹಕರನ್ನು ವ್ಯಾಪಾರಿಗಳು ಸೆಳೆಯುವ ತಂತ್ರ, ಹೂವುಗಳ ಜೋಡಣೆ, ಕೊನೆಯಲ್ಲಿ ಉಳಿದ ಹೂವುಗಳು ಬಾಡಿ ತ್ಯಾಜ್ಯವಾಗುವ ಬಗೆಯನ್ನು ಅನುಷ್ಕಾ ಅವರು ಕಿರುಚಿತ್ರದ ಮೂಲಕ ಕಟ್ಟಿಕೊಟ್ಟರು.

ಮುನೀರಾ ಸೇನ್‌ ಅವರು, ತಮ್ಮ ಅಭಿನಯದ ಮೂಲಕವೇ ಲಾಲ್‌ಬಾಗ್‌ನಲ್ಲಿರುವ ಪಾರಂಪರಿಕ ಕಟ್ಟಡ ಕೃಂಬಿಗಲ್‌ ಹಾಲ್‌ನ ಚಿತ್ರಣ ಕಟ್ಟಿಕೊಟ್ಟರು. ಜೊತೆಗೆ ಲಾಲ್‌ಬಾಗ್‌ ಇತಿಹಾಸ ಮೆಲುಕು ಹಾಕಿದರು. ತೋಟಗಾರಿಕೆ ಕ್ಷೇತ್ರಕ್ಕೆ ಕೃಂಬಿಗಲ್‌ ಸಲ್ಲಿಸಿದ ಕೊಡುಗೆ, ಬೆಂಗಳೂರು ಉದ್ಯಾನಕ್ಕಾಗಿ ಅವರು ಹಾಕಿದ ಶ್ರಮ, ಅವರ ಜನ್ಮಶತಮಾನೋತ್ಸವ ಆಚರಣೆ... ಹೀಗೆ ಅನೇಕ ಸಂಗತಿಗಳು ಈ ಗೋಷ್ಠಿಯಲ್ಲಿ ಪ್ರಸ್ತಾಪವಾದವು.

‘ಹೂವು ಹಬ್ಬ ಗೋಷ್ಠಿ’ಯಲ್ಲಿ ಪರಿಸರ ಪ್ರೇಮಿ ಪ್ರಿಯಾ ಚೆಟ್ಟಿ, ನಗರದ ಕಬ್ಬನ್‌ ಉದ್ಯಾನ, ಲಾಲ್‌ಬಾಗ್‌ನಲ್ಲಿ ಚಿತ್ತಾಕರ್ಷಕವಾಗಿ ಅರಳುವ ಗುಲ್‌ಮೊಹರ್‌ ಸೌಂದರ್ಯ ವರ್ಣಿಸಿದರು. ಅಲ್ಲದೆ, ಹೂವುಗಳು ಸಿಲಿಕಾನ್‌ ಸಿಟಿಗೆ ರಂಗು ತುಂಬಿದ ರೀತಿ ವಿವರಿಸಿ, ಉದ್ಯಾನಗಳ ರಕ್ಷಣೆಗೆ ಹೋರಾಡಿದವರನ್ನು ಸ್ಮರಿಸಿದರು. ಈ ಗೋಷ್ಠಿಯಲ್ಲಿ ಮಾತನಾಡಿದ ಸುರೇಶ್‌ ಜಯರಾಂ, ‘ನಗರದ ಭವಿಷ್ಯಕ್ಕೆ ಉದ್ಯಾನ ಹಾಗೂ ಮರಗಳ ರಕ್ಷಣೆ ಅಗತ್ಯ. ಪರಿಸರ ಬಗ್ಗೆ ಕುತೂಹಲ ಇರಬೇಕು. ಮೊಬೈಲ್‌ ಬಿಟ್ಟು ಉದ್ಯಾನದಲ್ಲಿ ಮೌನವಾಗಿ ಸುತ್ತಾಡಿ. ಆಗ ಪರಿಸರದ ಮಹತ್ವ ಅರಿವಿಗೆ ಬರಲಿದೆ’ ಎಂದು ಪ್ರತಿಪಾದಿಸಿದರು.

ರಸ್ತೆ ವಿಸ್ತರಣೆ ಹೆಸರಿನಲ್ಲಿ ಬಿಬಿಎಂಪಿಯು ಸಾವಿರಾರು ಮರಗಳನ್ನು ತೆರವುಗೊಳಿಸುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ಅಗತ್ಯ ಎಂಬ ಅಭಿಪ್ರಾಯವೂ ಸಂವಾದದಲ್ಲಿ ಕೇಳಿಬಂತು. ಬಳಿಕ ನೆಲದ ಕವಿತೆ, ಹರಟೆಕಟ್ಟೆ ಗೋಷ್ಠಿಗಳು ನಡೆದವು.

ಮಳಿಗೆಗಳಲ್ಲಿ ಪುಸ್ತಕ, ಕರಕುಶಲ ವಸ್ತುಗಳು, ರಾಗಿ ಹಾಗೂ ಕೊಬ್ಬರಿಯ ಮೌಲ್ಯವರ್ಧನೆ ಪದಾರ್ಥಗಳು ಇದ್ದವು. ಬಳ್ಳಾರಿಯ ಲಂಬಾಣಿ ಸಮುದಾಯದ ಮಹಿಳೆಯರು ಸ್ಥಳದಲ್ಲೇ ಬ್ಯಾಗ್ ತಯಾರಿಸಿ, ನೋಡುಗರ ಮೆಚ್ಚುಗೆಗೆ ಪಾತ್ರರಾದರು.

ಸೀರೆ ಉಡುವುದೂ ಕಲೆ
‘ನೇಕಾರ ಪರಂಪರೆ ಗೋಷ್ಠಿ’ಯಲ್ಲಿ ಶುಭ ಸಮಾರಂಭಕ್ಕೆ ಸೀರೆ ಉಡುವ ಕಲೆಯ ಬಗ್ಗೆ ವಸ್ತ್ರ ವಿನ್ಯಾಸಗಾರ ಪ್ರಸಾದ್‌ ಬಿದ್ದಪ್ಪ ವಿವರಿಸಿದರು.

ಕೊಡವ ಶೈಲಿ, ಸೀದಾ ಪಲ್ಲು, ಉಲ್ಟಾ ಪಲ್ಲು ಶೈಲಿಯಲ್ಲಿ ಸೀರೆ ಧರಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

‘ಭಾರತೀಯ ಮಹಿಳೆಯರು ಸೀರೆ ಧರಿಸುವುದರ ಮೂಲಕ ಸಂಸ್ಕೃತಿ ಉಳಿಸುತ್ತಿದ್ದಾರೆ. ಕೈಮಗ್ಗ ಉತ್ಪನ್ನಗಳ ರಫ್ತಿನಿಂದ ಭಾರತದ ಆರ್ಥಿಕತೆಯೂ ಬೆಳೆದಿದೆ’ ಎಂದು ಪ್ರಸಾದ್‌ ಬಿದ್ದಪ್ಪ ಹೇಳಿದರು. ಮೈಸೂರು, ಮೊಳಕಾಲ್ಮುರು, ಇಳಕಲ್‌ ಹಾಗೂ ಧಾರವಾಡದ ಸೀರೆಗಳು ಕರ್ನಾಟಕ ರಾಜ್ಯದ ಹೆಮ್ಮೆಯ ಸಂಕೇತ. ಗುಜರಾತ್‌, ತಮಿಳುನಾಡು, ರಾಜಸ್ಥಾನ, ಒಡಿಶಾ ರಾಜ್ಯಗಳು ವಿವಿಧ ಮಾದರಿಯ ಕೈಮಗ್ಗ ಉಡುಪುಗಳ ತಯಾರಿಕೆಗೆ ಪ್ರಸಿದ್ಧಿ ಪಡೆದಿವೆ ಎಂದು ವಿವರಿಸಿದರು.

ಚಿಣ್ಣರ ಕಲರವ
ಭಾನುವಾರ ಮಕ್ಕಳ ಕಲರವ ಆವರಣದ ತುಂಬೆಲ್ಲ ಹರಡಿತ್ತು. ಬೊಂಬೆ ತಯಾರಿಕೆ, ಕಥೆ ಹೇಳುವ ಕಲೆ, ಸ್ವಯಂ ರಕ್ಷಣೆ, ಎಲೆಗಳಿಂದ ಕಲಾಕೃತಿ ರಚನೆ, ಪೇಂಟಿಂಗ್ ಬಗ್ಗೆ ಮಕ್ಕಳಿಗೆ ತರಬೇತಿ ನೀಡಲಾಯಿತು. ಟೆರ್‍ರಾಕೋಟಾ ಕಲೆಯ ಬಗ್ಗೆ ತಿಳಿಸಲಾಯಿತು. ಈ ಎಲ್ಲ ಚಟುವಟಿಕೆಗಳಲ್ಲೂ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬಿಲ್ಡಿಂಗ್‌ ಬ್ಲಾಕ್ಸ್‌ಗಳಿಂದ ತಮಗೆ ಇಷ್ಟಬಂದ ಕಲಾಕೃತಿ ರಚಿಸಿ ಸಂಭ್ರಮಿಸಿದರು.

‘ಇದು ನನಗೆ ಹೊಸ ಅನುಭವ ನೀಡಿತು. ಹಬ್ಬಕ್ಕೆ ಬಂದು ಹೊಸ ಕಲೆಗಳನ್ನು ಕಲಿತೆ’ ಎಂದು ಸೇನಾ ಶಾಲೆಯ 5ನೇ ತಗರತಿ ವಿದ್ಯಾರ್ಥಿನಿ ಸಹನಾ ಪ್ರತಿಕ್ರಿಯಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT