ಮಂಗಳವಾರ, ಸೆಪ್ಟೆಂಬರ್ 29, 2020
21 °C

ಬಸ್‌ನಲ್ಲೇ ಸೈಕಲ್ ರ್‍ಯಾಕ್: ಐ.ಟಿ ಕಂಪನಿ ಉದ್ಯೋಗಿಗಳ ಸೆಳೆಯುವ ಯತ್ನ

ವಿಜಯಕುಮಾರ್‌ ಎಸ್‌.ಕೆ. Updated:

ಅಕ್ಷರ ಗಾತ್ರ : | |

ಬಿಎಂಟಿಸಿ ಬಸ್ ಮುಂಭಾಗದಲ್ಲಿ ಅಳವಡಿಸಿರುವ ಸೈಕಲ್ ರ್‍ಯಾಕ್

ಬೆಂಗಳೂರು: ಬೈಸಿಕಲ್ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಬಸ್‌ಗಳ ಮುಂಭಾಗ ಬೈಸಿಕಲ್ ರ್‍ಯಾಕ್ ಅಳವಡಿಸಲು ಬಿಎಂಟಿಸಿ ಮುಂದಾಗಿದ್ದು, ಮೊದಲ ಹಂತದಲ್ಲಿ 100 ಬಸ್‌ಗಳಲ್ಲಿ ರ್‍ಯಾಕ್ ಅಳವಡಿಕೆಯಾಗಲಿದೆ.

ಕೊರೊನಾ ಸೋಂಕಿನ ಕಾರಣಕ್ಕೆ ಬಸ್ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಇನ್ನೊಂದೆಡೆ, ಸೈಕಲ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಐ.ಟಿ ಕಂಪನಿ ಉದ್ಯೋಗಿಗಳು ಅಧಿಕ ಸಂಖ್ಯೆಯಲ್ಲಿ ಸೈಕಲ್ ಬಳಕೆ ಮಾಡುತ್ತಿದ್ದಾರೆ. ಸೈಕಲ್ ಸವಾರರನ್ನು ಸೆಳೆಯುವ ನಿಟ್ಟಿನಲ್ಲಿ ಬಿಎಂಟಿಸಿ ಈ ಪ್ರಯತ್ನಕ್ಕೆ ಕೈ ಹಾಕಿದೆ.

ಸಿಲ್ಕ್ ಬೋರ್ಡ್‌ನಿಂದ ಟಿನ್‌ ಫ್ಯಾಕ್ಟರಿ ತನಕ ಇರುವ ಬಸ್ ಆದ್ಯತಾ ಪಥದಲ್ಲಿ ಬೈಸಿಕಲ್ ಪಥ ನಿರ್ಮಾಣ ಮಾಡಲು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಉದ್ದೇಶಿಸಿದೆ. ಆದ್ಯತಾ ಪಥದಲ್ಲಿ ಸಂಚರಿಸುವ ಬಸ್‌ಗಳಿಗೆ ಬೈಸಿಕಲ್ ರ್‍ಯಾಕ್ ಅಳವಡಿಸಲು ಬಿಎಂಟಿಸಿ ಆಲೋಚಿಸಿದೆ.

‘ಬಿಎಂಟಿಸಿ ವರ್ಕ್‌ಶಾಪ್‌ನಲ್ಲೇ ನಮ್ಮ ಸಿಬ್ಬಂದಿ ಈ ರ್‍ಯಾಕ್ ಸಿದ್ಧಪಡಿಸಿದ್ದಾರೆ. ಬಸ್‌ ಮುಂಭಾಗದಲ್ಲೇ ಎರಡು ಸೈಕಲ್ ನಿಲ್ಲಿಸಬಹುದಾದ ರ್‍ಯಾಕ್ ಅನ್ನು ಒಂದು ಬಸ್‌ನಲ್ಲಿ ನಿರ್ಮಿಸಲಾಗಿದೆ. ಒಂದು ತಿಂಗಳಲ್ಲಿ ಉಳಿದ 99 ಬಸ್‌ಗಳಿಗೂ ಅಳವಡಿಸಲಾಗುವುದು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಎಂಟಿಸಿಯ ಈ ಪ್ರಯತ್ನವನ್ನು ಸೈಕಲ್ ಸವಾರರು ಸ್ವಾಗತಿಸಿದ್ದಾರೆ. ’ವಾಯುಮಾಲಿನ್ಯ ಕಡಿಮೆ ಮಾಡುವ ಮತ್ತು ಪ್ರಯಾಣಿಕರ ಆರೋಗ್ಯ ವೃದ್ದಿಗೂ ಇದು ಸಹಕಾರಿಯಾಗಲಿದೆ. ಮಡಿಸಬಹುದಾದ ಬೈಸಿಕಲ್‌ಗಳನ್ನು ಬಸ್‌ನ ಒಳಕ್ಕೇ ಕೊಂಡೊಯ್ಯಲು ಬಿಎಂಟಿಸಿ ಅವಕಾಶ ನೀಡಬೇಕು. ಸಂಸ್ಥೆಯ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಸೈಕಲ್ ನಿಲುಗಡೆಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಬೇಕು’ ಎಂಬುದು ಸೈಕಲ್ ಸವಾರ ಪ್ರಶಾಂತ್‌ ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು