ಮಂಗಳವಾರ, ಮಾರ್ಚ್ 28, 2023
23 °C
ಪೀಠೋಪಕರಣಗಳು ಸರ್ಕಾರಿ ಹಾಸ್ಟೆಲ್‌ಗಳಿಗೆ, ಆಸ್ಪತ್ರೆಗಳಿಗೆ ಹಸ್ತಾಂತರ

ಬಿಐಇಸಿ: ಕೋವಿಡ್‌ ಆರೈಕೆ ಕೇಂದ್ರ 15ರಿಂದ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆ೦ಗಳೂರು ಅ೦ತರರ್ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಬಿಬಿಎಂಪಿ ವತಿಯಿಂದ ಆರಂಭಿಸಿದ್ದ ಕೋವಿಡ್‌ ಆರೈಕೆ ಕೇಂದ್ರವನ್ನು ಇದೇ 15ರಿಂದ ಸ್ಥಗಿತಗೊಳಿಸಲಾಗುತ್ತಿದೆ. ಈ ಕುರಿತು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ.

ಈ ಆರೈಕೆ ಕೇಂದ್ರಗಳಲ್ಲಿರುವ ಕೋವಿಡ್‌ ಸೋಂಕಿತರನ್ನು ಸಮೀಪದಲ್ಲಿರುವ ಬೇರೆ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲು ಆಯುಕ್ತರು ಸೂಚಿಸಿದ್ದಾರೆ.

ಈ ಕೇಂದ್ರಕ್ಕೆ ಇತ್ತೀಚಿನ ದಿನಗಳಲ್ಲಿ ಕೋವಿಡ್‌ ಸೋಂಕಿತರು ದಾಖಲಾಗುತ್ತಿಲ್ಲ. ಹಾಗಾಗಿ ಇದನ್ನು ಮುಚ್ಚಬಹುದು ಎಂದು ಕೋವಿಡ್‌ ಆರೈಕೆ ಕೇಂದ್ರಗಳ ಕಾರ್ಯಪಡೆಯ ಮುಖ್ಯಸ್ಥರು ಸಲಹೆ ನೀಡಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಆ.31ರಂದು ನಡೆದ ಸಭೆಯಲ್ಲಿ ಈ ಆರೈಕೆ ಕೇಂದ್ರವನ್ನು ಮುಚ್ಚಲು ತೀರ್ಮಾನಿಸಲಾಗಿತ್ತು. 

ಈ ಕೇಂದ್ರದಲ್ಲಿ ಬಿಬಿಎಂಪಿ ವತಿಯಿಂದ ಖರೀದಿಸಲಾದ ಉಕ್ಕಿನ ಮಂಚಗಳು, ಹಾಸಿಗೆಗಳು, ಫ್ಯಾನ್‌ಗಳು ಕಸದ ಬುಟ್ಟಿಗಳು, ಬಕೆಟ್‌ಗಳು, ಮಗ್‌ಗಳು, ಕುಡಿಯುವ ನೀರು ಪೂರೈಸುವ ಪರಿಕರಗಳು ಹಾಗೂ ಇತರ ಪೀಠೋಪಕರಣಗಳನ್ನು ಸರ್ಕಾರಿ ಹಾಸ್ಟೆಲ್‌ಗಳಿಗೆ ಹಾಗೂ ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.   

ಬಾಗಲಕೋಟೆಯಲ್ಲಿರುವ ತೋಟಗಾರಿಕಾ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಿಗೆ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಹಾಗೂ ಜಿಕೆವಿಕೆಗೆ ತಲಾ 1 ಸಾವಿರ ಪೀಠೋಪಕರಣಗಳು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ 2,500 ಪೀಠೋಪಕರಣಗಳನ್ನು ಹಸ್ತಾಂತರಿಸಬೇಕು. ಉಳಿದ ಪೀಠೋಪಕರಣಗಳನ್ನು ಸರ್ಕಾರದ ಆಸ್ಪತ್ರೆಗಳಿಂದ ಹಾಗೂ ಹಾಸ್ಟೆಲ್‌ಗಳಿಂದ ಬರುವ ಕೋರಿಕೆಗಳ ಆಧಾರದಲ್ಲಿ ಹಸ್ತಾಂತರಿಸಬೇಕು ಎಂದು ಆಯುಕ್ತರು ಈ ಆರೈಕೆ ಕೇಂದ್ರದ ನೋಡಲ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರೋಗ ಲಕ್ಷಣ ಇಲ್ಲದ 10 ಸಾವಿರ ಕೋವಿಡ್ ಸೋಂಕಿತರಿಗೆ ಏಕಕಾಲದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಆರೈಕೆ ಕೇಂದ್ರವನ್ನು ಆರಂಭಿಸಲಾಗಿತ್ತು. ಇಲ್ಲಿ 6 ಸಾವಿರ ಹಾಸಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅದರಲ್ಲಿ 1,500 ಹಾಸಿಗೆಗಳನ್ನು ತಿಂಗಳ ಹಿಂದೆ ಉದ್ಘಾಟಿಸಲಾಗಿತ್ತು. 1,500 ಹಾಸಿಗೆಗಳನ್ನು ಇಲ್ಲಿ ಚಿಕಿತ್ಸೆ ನೀಡುವ ವೈದ್ಯರು ಮತ್ತು ಶೂಶ್ರೂಷಕರ ಪ್ರತ್ಯೇಕ ವಾಸಕ್ಕಾಗಿ ಕಾಯ್ದಿರಿಸಲಾಗಿತ್ತು. ಇತ್ತೀಚೆಗೆ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾಗಿ ಈ  ಕೇಂದ್ರದ 1,500 ಹಾಸಿಗೆಗಳೂ ಭರ್ತಿ ಆಗಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು