ಶನಿವಾರ, ಜುಲೈ 31, 2021
25 °C
ಬಿಐಇಸಿ ಕೋವಿಡ್‌ ಕೇರ್‌ ಸೆಂಟರ್‌ ಬಾಡಿಗೆ ವಿವಾದ l ಏಜೆನ್ಸಿ ಜತೆ ಸರ್ಕಾರದ ಮಾತುಕತೆ l ಇಂದು ದರ ನಿಗದಿ

ಕೋವಿಡ್–19 | ಹಾಸಿಗೆ ಖರೀದಿ; ಉಳಿದವು ಬಾಡಿಗೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ‘ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ’ಕ್ಕೆ (ಬಿಐಇಸಿ) ಮಂಚ, ಹಾಸಿಗೆ ಸೇರಿದಂತೆ ಕೆಲವು ಸಲಕರಣೆಗಳನ್ನು  ಖರೀದಿಸಲು ಹಾಗೂ ಉಳಿದವುಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ತೀರ್ಮಾನಿಸಲಾಗಿದೆ.

ಬಿಐಇಸಿ ಕೋವಿಡ್‌ ಕೇರ್‌ ಕೇಂದ್ರದ ಉಸ್ತುವಾರಿ ಹೊತ್ತಿರುವ ಹಿರಿಯ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್‌ ಕಟಾರಿಯಾ ಅವರು ಮಂಗಳವಾರ ತಡ ರಾತ್ರಿವರೆಗೆ ಹಾಸಿಗೆ ಮತ್ತು ಮಂಚಗಳ ಪೂರೈಕೆದಾರ ನಾಲ್ಕು ಏಜೆನ್ಸಿಗಳ ಜತೆ ಸಭೆ ನಡೆಸಿ, ಬೆಲೆ ನಿಗದಿ ಸಂಬಂಧ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

‘ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಒಟ್ಟು 26 ಸಲಕರಣೆಗಳು ಇದ್ದು, ಅವುಗಳಲ್ಲಿ ಮಂಚ, ಹಾಸಿಗೆ,ದಿಂಬು, ಬೆಡ್‌ಶೀಟ್‌, ಬಕೆಟ್‌, ಮಗ್ ಇತ್ಯಾದಿ ಪ್ಲಾಸ್ಟಿಕ್‌ ವಸ್ತುಗಳನ್ನು ಖರೀದಿಸಲಾಗುವುದು. ಟಾಯ್ಲೆಟ್‌, ಪಾರ್ಟಿಷನ್‌ ಮುಂತಾದ ಮರು ಬಳಕೆಗೆ ಸಾಧ್ಯವಿಲ್ಲದ ವಸ್ತುಗಳನ್ನು ಬಾಡಿಗೆಗೆ ಪಡೆಯಲಾಗುವುದು. ಖರೀದಿ ಮಾಡುವ ಸಲಕರಣೆಗಳ ಮಾರುಕಟ್ಟೆ ದರ ಸರ್ವೇ ಮಾಡಿದ್ದು, ಸರ್ಕಾರ ಒಂದು ದರ ನಿಗದಿ ಮಾಡಿದೆ. ಏಜೆನ್ಸಿಯವರು ನಾಳೆ (ಬುಧವಾರ) ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ. ದರವನ್ನೂ ನಾಳೆಯೇ ನಿಗದಿ ಮಾಡಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ದೀರ್ಘ ಕಾಲ ಬಾಳಿಕೆ ಬರದ ಮತ್ತು ಮರುಬಳಕೆ ಸಾಧ್ಯವಿಲ್ಲದ ವಸ್ತುಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತವೆ. ಮರು ಬಳಕೆಗೆ ಸಾಧ್ಯವಿರುವ ವಸ್ತುಗಳನ್ನು ಖರೀದಿಸುತ್ತವೆ’ ಎಂದು ರಾಜೇಂದ್ರ ಕಟಾರಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಡಿಗೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಎಸ್‌ವೈ: ಮಂಚ, ಹಾಸಿಗೆ, ದಿಂಬು, ಫ್ಯಾನ್‌ ಇತ್ಯಾದಿಗಳನ್ನು ಬಾಡಿಗೆ ಆಧಾರದಲ್ಲಿ ಪೂರೈಕೆ ಮಾಡುವುದು ದುಬಾರಿ ಆಯಿತು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಲಕರಣೆಗಳನ್ನು ಬಾಡಿಗೆಗೆ ಪಡೆದರೆ ಅದರ ವೆಚ್ಚ ಹೆಚ್ಚಾಗಿ ಬೊಕ್ಕಸಕ್ಕೆ ನಷ್ಟ ಆಗುತ್ತದೆ ಎಂದು ರಾಜೇಂದ್ರ ಕುಮಾರ್‌ ಕಟಾರಿಯಾ ಅವರು ಜುಲೈ3 ರಂದೇ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಈ ವಿಷಯ ಸೋಮವಾರ ನಡೆದ ಸಚಿವರ ಕಾರ್ಯಪಡೆ ಸಭೆಯಲ್ಲಿ ಮುಖ್ಯಮಂತ್ರಿಯವರು ಪ್ರಸ್ತಾಪಿಸಿ ಅಧಿಕಾರಿಗಳು ಮತ್ತು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ‘ಇಂತಹ ಕ್ರಮಗಳ ಮೂಲಕ ವಿರೋಧಪಕ್ಷಗಳ ಆಹಾರವಾಗುವಂತೆ ಮಾಡುತ್ತಿದ್ದೀರಿ. ಸರ್ಕಾರ ಮೇಲಿನ ವಿಶ್ವಾಸ ಹೋಗುವಂತೆ ಮಾಡಿದ್ದೀರಿ. ಇದನ್ನು ಸಹಿಸಲು ಸಾಧ್ಯವಿಲ್ಲ. ತಕ್ಷಣವೇ ಈ ಗೊಂದಲವನ್ನು ಸರಿಪಡಿಸಬೇಕು’ ಎಂದು ತಾಕೀತು ಮಾಡಿದ್ದರು.

ಆ ಬಳಿಕ ಖರೀದಿಯ ಉಸ್ತುವಾರಿಯನ್ನು ಕಟಾರಿಯಾ ಅವರಿಗೆ ಮುಖ್ಯಮಂತ್ರಿ ವಹಿಸಿದರು ಎಂದು ಮೂಲಗಳು ಹೇಳಿವೆ.

ದಾರಿ ತಪ್ಪಿಸಿದ್ದು ಯಾರು: ಈ ಮಧ್ಯೆ, ಮಂಚ, ಹಾಸಿಗೆ, ದಿಂಬುಗಳನ್ನು ಬಾಡಿಗೆ ಆಧಾರದಲ್ಲಿ ಪೂರೈಕೆ ಮಾಡುವ ಸಂಬಂಧ ಮುಖ್ಯಮಂತ್ರಿ ಅವರನ್ನು ದಾರಿ ತಪ್ಪಿಸಿದವರು ಯಾರು ಎಂಬ ಚರ್ಚೆಯೂ ಆರಂಭವಾಗಿದೆ.

ಸರ್ಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟ ಮಾಡಲಿದ್ದ ‘ಬಾಡಿಗೆ’ ಐಡಿಯಾ ಕೊಟ್ಟಿದ್ದು ಅಧಿಕಾರಿಗಳೋ ಅಥವಾ ಸಚಿವರೋ, ಮುಖ್ಯಮಂತ್ರಿ ಗಮನಕ್ಕೆ ತರದೇ ನಿರ್ಣಯ ತೆಗೆದುಕೊಂಡಿದ್ದು ಹೇಗೆ ಎಂದು ವಿರೋಧಪಕ್ಷಗಳು ಪ್ರಶ್ನಿಸಿವೆ.

ಮುಖ್ಯಮಂತ್ರಿ ಅವರ ಸುಪರ್ದಿಯಲ್ಲೇ ಇರುವ ಹಣಕಾಸು ಇಲಾಖೆಯ ಗಮನಕ್ಕೆ ತರದೇ ಇವೆಲ್ಲವನ್ನು ಮಾಡಲು ಸಾಧ್ಯವಿತ್ತೇ ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ಕಟಾರಿಯಾ ಪತ್ರದ ಸಾರಾಂಶ: ‘ಯಾವುದೇ ಸಲಕರಣೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಸರಿಯಲ್ಲ. ಮಂಚ, ಹಾಸಿಗೆ, ದಿಂಬುಗಳ ಗುಣಮಟ್ಟವೂ ಸರಿಯಾಗಿಲ್ಲ. ಕೋವಿಡ್‌ ಆರೈಕೆ ಕೇಂದ್ರ ಇನ್ನೂ ಮೂರರಿಂದ ನಾಲ್ಕು ತಿಂಗಳು ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ವಸ್ತುಗಳ ಮೂಲ ಬೆಲೆಗಿಂತ ಮೂರು ನಾಲ್ಕು ಪಟ್ಟು ಹೆಚ್ಚು ಬಾಡಿಗೆಯನ್ನು ಸರ್ಕಾರ ನೀಡಬೇಕಾಗುತ್ತದೆ. ಅದರ ಬದಲಿಗೆ ಅವುಗಳನ್ನು ಖರೀದಿಸುವುದೇ ಸೂಕ್ತ’ ಎಂದು ಕಟಾರಿಯಾ ಪತ್ರದಲ್ಲಿ ತಿಳಿಸಿದ್ದರು.

ಆಂಬುಲೆನ್ಸ್‌ ಖರೀದಿ ಬದಲಿಗೆ ಬಾಡಿಗೆಗೆ
ಆಂಬುಲೆನ್ಸ್‌ಗಳನ್ನು ಖರೀದಿ ಮಾಡುವ ಬದಲಿಗೆ ಬಾಡಿಗೆ ಮೇಲೆ ಪಡೆಯಲು ನಿರ್ಧರಿಸಲಾಗಿದೆ. ಮಹೇಂದ್ರ ಕಂಪನಿಯವರು ಆಂಬುಲೆನ್ಸ್‌ಗಳನ್ನು ಮಾರಾಟಕ್ಕೆ ಸಿದ್ಧ ಎಂದಿದ್ದರು. ಖರೀದಿ ಮಾಡುವ ಬದಲು ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳಬಹುದು ಎಂದು ಮುಖ್ಯಮಂತ್ರಿ ಸೂಚಿಸಿದ್ದರು. ಬಾಡಿಗೆ ಮೇಲೆ ಆಂಬುಲೆನ್ಸ್‌ ಪಡೆಯುವ ಉಸ್ತುವಾರಿಯನ್ನು ಹಿರಿಯ ಪೊಲೀಸ್‌ ಅಧಿಕಾರಿ ಬಿ.ಆರ್‌.ರವಿಕಾಂತೇಗೌಡರಿಗೆ ನೀಡಲಾಗಿದೆ ಎಂದು ಎಸ್‌.ಆರ್‌. ವಿಶ್ವನಾಥ್‌ ತಿಳಿಸಿದರು.

ಕೋವಿಡ್‌ ರೋಗ ಲಕ್ಷಣ ಇದ್ದವರಿಗೆ ಆಂಬುಲೆನ್ಸ್‌ನಲ್ಲಿ ಒಯ್ಯಬೇಕಾಗುತ್ತದೆ. ರೋಗ ಲಕ್ಷಣ ಇಲ್ಲದವರು ಸಾಮಾನ್ಯ ವಾಹನಗಳಲ್ಲೂ ಹೋಗಬಹುದು. ನಗರದಲ್ಲಿ ಈಗ ಆಂಬುಲೆನ್ಸ್ ಮತ್ತು ಟೆಂಪೊ ಟ್ರಾವೆಲರ್‌ಗಳು ಸೇರಿ ಒಟ್ಟು 450 ಇವೆ ಎಂದರು.

**

ಮುಖ್ಯಮಂತ್ರಿಯವರನ್ನೇ ಕತ್ತಲಿನಲ್ಲಿಟ್ಟು ಬಾಡಿಗೆ ಮೇಲೆ ಹಾಸಿಗೆ‌ ಪಡೆಯುವ ಹಿಂದಿನ ಅಸಲಿಯತ್ತು ಏನು? ಇಂಥ ವಿಚಾರದಲ್ಲೂ ಅಸಹ್ಯ ಹುಟ್ಟಿಸುವ ವರ್ತನೆ.
-ಈಶ್ವರ ಖಂಡ್ರೆ, ಕಾರ್ಯಧ್ಯಕ್ಷ, ಕೆಪಿಸಿಸಿ

**

ಎಲ್ಲವೂ ಪಾರದರ್ಶಕ ಆಗಿರಬೇಕು. ಆದ್ದರಿಂದ ಕೆಲವು ವಸ್ತುಗಳನ್ನು ಖರೀದಿಸಲಾಗುವುದು, ಕೆಲವನ್ನು ಬಾಡಿಗೆಗೆ ಪಡೆಯುತ್ತೇವೆ.
-ರಾಜೇಂದ್ರ ಕಟಾರಿಯಾ, ಬಿಐಇಸಿ, ಉಸ್ತುವಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು