ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಪಡೆಯುವವರ ಸಂಖ್ಯೆ ಇಳಿಕೆ; ಮೂಲೆ ಸೇರುತ್ತಿವೆ ಬೈಕ್ ಆಂಬುಲೆನ್ಸ್

ತುರ್ತು ಚಿಕಿತ್ಸಾ ವಾಹನ ಸೇವೆ ಸ್ಥಗಿತ
Last Updated 19 ಆಗಸ್ಟ್ 2022, 22:04 IST
ಅಕ್ಷರ ಗಾತ್ರ

ಬೆಂಗಳೂರು:ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತಾಗಿ ಸೇವೆ ಒದಗಿಸುವ ಉದ್ದೇಶದಿಂದ ನಗರದಲ್ಲಿ ಸಂಚಾರ ಪ್ರಾರಂಭಿಸಿದ್ದ ಬೈಕ್ ಆಂಬುಲೆನ್ಸ್‌ಗಳು ಏಳು ವರ್ಷಗಳಿಗೇ ಸೇವೆಯನ್ನು ಸ್ಥಗಿತಗೊಳಿಸಿ, ಮೂಲೆ ಸೇರಲಾರಂಭಿಸಿವೆ.

2015ರಲ್ಲಿ ಪ್ರಾರಂಭವಾದ ಬೈಕ್ ಆಂಬುಲೆನ್ಸ್ ಸೇವೆಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದಲ್ಲಿ ಸಂಚರಿಸುತ್ತಿದ್ದ 19 ಬೈಕ್‌ ಆಂಬುಲೆನ್ಸ್‌ಗಳಲ್ಲಿ ಸದ್ಯ 13 ಬೈಕ್ ಆಂಬುಲೆನ್ಸ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.ಸಿಬ್ಬಂದಿ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ಇದರ ನಿರ್ವಹಣೆಯೂ ಆರೋಗ್ಯ ಇಲಾಖೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ ಕೆಟ್ಟು ನಿಂತ ಆರು ಬೈಕ್‌ ಆಂಬುಲೆನ್ಸ್‌ಗಳ ರಿಪೇರಿ ಕಾರ್ಯ ನಡೆದಿಲ್ಲ.

ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬೈಕ್‌ ಆಂಬುಲೆನ್ಸ್‌ಗಳನ್ನು ಪರಿಚಯಿಸಲಾಗಿತ್ತು. ರಸ್ತೆ ಅಪಘಾತಗಳಿಂದ ಸಂಭವಿಸುತ್ತಿದ್ದ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ಸಂಚಾರ ದಟ್ಟಣೆಯ ನಡುವೆಆದಷ್ಟು ಶೀಘ್ರ ವೈದ್ಯಕೀಯ ಸೇವೆ ಒದಗಿಸುವುದು ಇದರ ಉದ್ದೇಶವಾಗಿತ್ತು. ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಅವಕಾಶ ಇಲ್ಲದಿರುವುದರಿಂದ ರೋಗಿಗಳು ಹಾಗೂ ಅವರ ಕಡೆಯವರು ಈ ಸೇವೆ ನಿರಾಕರಿಸಲಾರಂಭಿಸಿದ್ದಾರೆ.

ಸಂಖ್ಯೆ ಇಳಿಮುಖ:ಜಿವಿಕೆ ಇಎಂಆರ್‌ಐ ಸಂಸ್ಥೆ ಬೈಕ್ ಆಂಬುಲೆನ್ಸ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 2018ರಿಂದ 2022ರ ಜುಲೈ ಅಂತ್ಯದವರೆಗೆ 92,905 ಮಂದಿ ನಗರದಲ್ಲಿ ಈ ಸೇವೆ ಪಡೆದಿದ್ದಾರೆ. ಆದರೆ,ವರ್ಷದಿಂದ ವರ್ಷಕ್ಕೆ ಬೈಕ್ ಆಂಬುಲೆನ್ಸ್ ಸೇವೆ ಪಡೆಯುವವರ ಸಂಖ್ಯೆ ಇಳಿಮುಖ ಆಗುತ್ತಿದೆ.

‘ರಸ್ತೆ ಅಪಘಾತ ಸಂಭವಿಸಿದಾಗ ವ್ಯಕ್ತಿ ಗಂಭೀರವಾಗಿ ಗಾಯಗೊಂಡಲ್ಲಿ ಆಂಬುಲೆನ್ಸ್‌ಗೆ ಮೊರೆ ಹೋಗುತ್ತಾರೆ. ಸಣ್ಣ ಗಾಯವಾದವರು ಬೈಕ್ ಆಂಬುಲೆನ್ಸ್ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಹತ್ತಿರದ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಬೈಕ್ ಆಂಬುಲೆನ್ಸ್ ಸೇವೆಗೆ ಹಿನ್ನಡೆಯಾಗಿದೆ. ಸಂಚಾರ ದಟ್ಟಣೆಯ ಪ್ರದೇಶದಲ್ಲಿ ತ್ವರಿತಗತಿಯಲ್ಲಿ ಸ್ಥಳ ತಲುಪುವುದು ಸವಾರರಿಗೂ ಸವಾಲಾಗಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಕೆಲ ರಾಷ್ಟ್ರಗಳಲ್ಲಿ ಬೈಕ್ ಆಂಬುಲೆನ್ಸ್ ಸೇವೆ ಯಶಸ್ವಿ ಯಾಗಿದೆ. ಅಧಿಕ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಶೀಘ್ರ ಸೇವೆ ಒದಗಿಸಲು ಸಹಕಾರಿ ಎಂಬ ಕಾರಣಕ್ಕೆ ಈ ಸೇವೆ ಪರಿಚಯಿಸಲಾಯಿತು. ಆದರೆ, ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಸಿಬ್ಬಂದಿ ರಜಾ ಇದ್ದಲ್ಲಿ ಸೇವೆಯಲ್ಲಿ ವ್ಯತ್ಯಯವಾಗುತ್ತದೆ’ ಎಂದು ಹೇಳಿದರು.

‘ನರ್ಸಿಂಗ್ ಪದವೀಧರರ ನಿರಾಸಕ್ತಿ’
‘ಗಾಯಗೊಂಡವರಿಗೆ ಬೈಕ್‌ ಆಂಬುಲೆನ್ಸ್‌ನ ಸವಾರರೇ ಶೂಶ್ರೂಷೆ ಮಾಡಬೇಕಾಗುತ್ತದೆ. ಹೀಗಾಗಿ ನರ್ಸಿಂಗ್ ಕೋರ್ಸ್ ಓದಿದವರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕಾಗಿದೆ. ಆದರೆ, ನರ್ಸಿಂಗ್ ಪದವೀಧರರು ಬೈಕ್ ಆಂಬುಲೆನ್ಸ್‌ ಸೇವೆ ಒದಗಿಸಲು ಅಷ್ಟಾಗಿ ಮುಂದೆ ಬರುತ್ತಿಲ್ಲ. ಆಸ್ಪತ್ರೆಗಳಲ್ಲಿಯೇ ಸೇವೆ ಸಲ್ಲಿಸಲು ಹೆಚ್ಚು ಆಸಕ್ತಿ ತೋರುತ್ತಾರೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಬೈಕ್ ಆಂಬುಲೆನ್ಸ್ ಯೋಜನೆ ಹಿನ್ನಡೆ ಅನುಭವಿಸಲು ಸಿಬ್ಬಂದಿ ಸಮಸ್ಯೆ ಕೂಡ ಕಾರಣ. ಪ್ರತಿ ಬೈಕ್ ಆಂಬುಲೆನ್ಸ್‌ಗೆ ಒಬ್ಬ ಬೈಕ್‌ ಸವಾರ ಮಾತ್ರ ಇರುತ್ತಾರೆ. ಒಂದು ವೇಳೆ ಅವರು ರಜೆ ಪಡೆದಲ್ಲಿ ಆ ಬೈಕ್‌ನ ಸೇವೆ ಸ್ಥಗಿತಗೊಳಿಸಬೇಕಾಗುತ್ತದೆ’ ಎಂದರು.

ಲಭ್ಯವಿರುವ ಸೇವೆಗಳು: ಗ್ಲುಕೊಮೀಟರ್, ಆಕ್ಸಿಜನ್ ಸಿಲಿಂಡರ್, ಹೃದಯಬಡಿತ ಹಾಗೂ ರಕ್ತದೊತ್ತಡ ಪರೀಕ್ಷಿಸುವ ಉಪಕರಣಗಳು, ಇನ್ಕ್ಯುಬೇಟರ್ ಕಿಟ್, ಬ್ಯಾಂಡೇಜ್, ಜೀವರಕ್ಷಕ ಔಷಧ, ಉಪಕರಣಗಳು.

ನಗರದಲ್ಲಿ ವರ್ಷವಾರು ಸೇವೆ ಪಡೆದವರು
ವರ್ಷ; ಸೇವೆ ಪಡೆದವರು
2018
: 29,113
2019: 28,887
2020: 15,102
2021: 12,898
2022(ಜುಲೈವರೆಗೆ); 6,905

*

ಬೈಕ್ ಆಂಬುಲೆನ್ಸ್‌ ನಿರ್ವಹಣೆ ಹಾಗೂ ಕಾರ್ಯವಿಧಾನದ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುವುದು.
-ಡಿ. ರಂದೀಪ್, ಆರೋಗ್ಯ ಇಲಾಖೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT