ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕಸರತ್ತು: 2 ಹಂತದಲ್ಲಿ ಪಟ್ಟಿ ಪ್ರಕಟ

Published 12 ಮಾರ್ಚ್ 2024, 0:56 IST
Last Updated 12 ಮಾರ್ಚ್ 2024, 0:56 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಲೋಕಸಭಾ ಕ್ಷೇತ್ರಗಳೂ ಸೇರಿದಂತೆ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲು ಬಿಜೆಪಿ ವರಿಷ್ಠರು ಸೋಮವಾರ ತಡರಾತ್ರಿಯವರೆಗೆ ಕಸರತ್ತು ನಡೆಸಿದರು. 

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ಭಾಗಿಯಾದರು. 

ಬಿಜೆಪಿಯು 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಎರಡನೇ ಪಟ್ಟಿಯನ್ನು ಮಂಗಳವಾರ ಅಥವಾ ಬುಧವಾರ ಪ್ರಕಟಿಸುವ ನಿರೀಕ್ಷೆ ಇದೆ. 
ರಾಜ್ಯದಲ್ಲಿ ಜೆಡಿಎಸ್‌ಗೆ ಮೂರು ಅಥವಾ ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಟ್ಟು ಉಳಿದ ಕ್ಷೇತ್ರಗಳಲ್ಲಿ ಕೇಸರಿ ಪಡೆ ಸ್ಪರ್ಧಿಸಲಿದೆ. ಎರಡನೇ ಪಟ್ಟಿಯಲ್ಲಿ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ಸಂಭವ ಇದೆ. ಮೈಸೂರು ಕ್ಷೇತ್ರದ ಸಂಸದ ಪ್ರತಾಪಸಿಂಹ ಅವರಿಗೆ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತ ಎಂದು ಉನ್ನತ ಮೂಲಗಳು ತಿಳಿಸಿವೆ. 

ಮೈಸೂರು, ಉತ್ತರ ಕನ್ನಡ, ಉಡುಪಿ–ಚಿಕ್ಕಮಗಳೂರು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಸೇರಿದಂತೆ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿದೆ. ಹಾಲಿ ಸಂಸದರಾದ ಅನಂತ ಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್, ಭಗವಂತ ಖೂಬಾ, ಪ್ರತಾಪ ಸಿಂಹ, ಶೋಭಾ ಕರಂದ್ಲಾಜೆ ಕಾರ್ಯವೈಖರಿಗೆ ಬಿಜೆಪಿಯಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಬಣ ಕಿತ್ತಾಟದಿಂದ ಅಭ್ಯರ್ಥಿಗಳ ಆಯ್ಕೆ‌ ಮಾಡುವುದು ಕಮಲ ಪಾಳಯಕ್ಕೆ ಸವಾಲಾಗಿದೆ. ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವ ಅನಂತ ಕುಮಾರ್ ಹೆಗಡೆ ವಿರುದ್ಧ ಪಕ್ಷದ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಟಿಕೆಟ್ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದೆ.

ಶೋಭಾ ಕರಂದ್ಲಾಜೆ ಅವರ ಬೆನ್ನಿಗೆ ಬಿ.ಎಸ್. ಯಡಿಯೂರಪ್ಪ ನಿಂತಿದ್ದು, ಶೋಭಾ ಅವರನ್ನು ಕಣಕ್ಕಿಳಿಸಲು ವರಿಷ್ಢರು ಒಮ್ಮತಕ್ಕೆ ಬಂದಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಯುವ ಮುಖ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರದಿಂದ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಕಣಕ್ಕಿಳಿಸಲು ವರಿಷ್ಠರು ಉತ್ಸುಕರಾಗಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆ ಮಾಡುವ ಬಗ್ಗೆ ಚರ್ಚೆಗಳು ಆಗಿವೆ. ಯುವ ಮುಖಂಡರಾದ ಸಪ್ತಗಿರಿ ಗೌಡ, ಡಾ.ನಿರಂತರ ಗಣೇಶ್ ಹೆಸರುಗಳು ಮುಂಚೂಣಿಗೆ ಬಂದಿವೆ.

ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಗ್ರಾಮಾಂತರದಿಂದ ಸ್ಪರ್ಧಿಸಲು ಅವರು ಒಪ್ಪಿಲ್ಲ. ಬೆಂಗಳೂರು ಉತ್ತರ ಅಥವಾ ಉಡುಪಿ ಚಿಕ್ಕಮಗಳೂರಿಗೆ ತಮ್ಮನ್ನು ಪರಿಗಣಿಸುವಂತೆ ವರಿಷ್ಠರಿಗೆ ಕೋರಿದ್ದಾರೆ. ತಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದೂ‌ ಮುನಿಸಿಕೊಂಡಿದ್ದಾರೆ. 
ಕರ್ನಾಟಕದ ನಾಯಕರ ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘28 ಕ್ಷೇತ್ರಗಳ ಬಗ್ಗೆಯೂ ಚರ್ಚೆಯಾಗಿದೆ. ಎರಡು ಹಂತದಲ್ಲಿ ಪಟ್ಟಿ ಪ್ರಕಟವಾಗಲಿದೆ. ಎರಡು ಮೂರು ದಿನಗಳಲ್ಲಿ ಎಲ್ಲವೂ ಸ್ಪಷ್ಡವಾಗಲಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT