ಸೋಮವಾರ, ಮೇ 23, 2022
30 °C
‘ಭಾಷೆ, ಸಾಂಸ್ಕೃತಿಕ ಅಸ್ಮಿತೆಯೇ ಬಿಜೆಪಿಗೆ ಸವಾಲು’

ಪ್ರಜಾವಾಣಿ ಸಂವಾದ: ದಕ್ಷಿಣ ಭಾರತದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣಗಳೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾಷೆ ಮತ್ತು ಸಾಂಸ್ಕೃತಿಕ ಅಸ್ಮಿತೆಯೇ ಮುಖ್ಯವಾಗಿರುವ ದಕ್ಷಿಣ ಭಾರತದತ್ತ ಬಿಜೆಪಿ ಚಿತ್ತ ಹರಿಸಿದೆ. ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಇದುವರೆಗೆ ಸಾಧ್ಯವಾಗಿಲ್ಲ. ಈ ರಾಜ್ಯಗಳಲ್ಲಿ ಅಸ್ತಿತ್ವ ಕಂಡುಕೊಳ್ಳಲು ಸಾಹಸ ಮಾಡುತ್ತಿರುವ ಬಿಜೆಪಿ, ವಿವಿಧ ರೀತಿಯ ಕಾರ್ಯತಂತ್ರಗಳನ್ನು ರೂಪಿಸಿದ್ದರೂ ಸಫಲವಾಗಿಲ್ಲ. ‘ದಕ್ಷಿಣ ಭಾರತದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣಗಳೇನು?’ ಎನ್ನುವ ಕುರಿತು ‘ಪ್ರಜಾವಾಣಿ’ ಗುರುವಾರ ಆಯೋಜಿಸಿದ್ದ ಫೇಸ್‌ ಬುಕ್‌ ಲೈವ್‌ ಸಂವಾದದಲ್ಲಿ ಅತಿಥಿಗಳು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

‘ಪ್ರಾದೇಶಿಕ ಪಕ್ಷಗಳಿಗೆ ಆದ್ಯತೆ’

ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಈ ಪ್ರಾದೇಶಿಕ ಪಕ್ಷಗಳನ್ನು ಬದಿಗೊತ್ತಲು ಬಿಜೆಪಿ ಯತ್ನಿಸುತ್ತಿದೆ. ಹುಸಿ ಭರವಸೆಗಳಿಂದ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಇದುವರೆಗೆ ಸಾಧ್ಯವಾಗಿಲ್ಲ. ಭವಿಷ್ಯದಲ್ಲಿಯೂ ಸಾಧ್ಯವಿಲ್ಲ. ಕರ್ನಾಟಕದಲ್ಲಿಯೂ ‘ಆಪರೇಷನ್‌ ಕಮಲ’ದ ಮೂಲಕ ಅಧಿಕಾರಕ್ಕೆ ಬಂದಿದೆಯೇ ಹೊರತು ಜನರು ನೀಡಿರುವ ಸ್ಪಷ್ಟ ಬಹುಮತದಿಂದ ಅಲ್ಲ. ಬಿಜೆಪಿಯ ಕಾರ್ಯಸೂಚಿ ಸ್ಪಷ್ಟವಾಗಿಲ್ಲ. ಬಿಜೆಪಿಯ ರಿಮೋಟ್‌ ಕಂಟ್ರೋಲ್‌ ಆರ್‌ಎಸ್‌ಎಸ್‌ ಬಳಿ ಇದೆ. ಮೊದಲು ಆರ್‌ಎಸ್‌ಎಸ್‌ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿತ್ತು. ಆದರೆ, ಈಗ ರಾಜಕೀಯ ಆಸೆಗೋಸ್ಕರ ಬಿಜೆಪಿಯನ್ನು ಬೆಳೆಸುತ್ತಿದೆ. ಇದರ ಬದಲು ಆರ್‌ಎಸ್‌ಎಸ್‌ ನೇರವಾಗಿ ರಾಜಕೀಯಕ್ಕೆ ಧುಮಕಬೇಕಾಗಿತ್ತು. ಬಿಜೆಪಿ ಈ ಹಂತಕ್ಕೆ ಬೆಳೆಯಲು ಆರ್‌ಎಸ್‌ಎಸ್‌ ಕಾರಣವಾಗಿರಬಹುದು. ಆದರೆ, ಸದ್ಯ ಆರ್‌ಎಸ್‌ಎಸ್‌ ತತ್ವ ಸಿದ್ಧಾಂತಗಳನ್ನು ಅನುಸರಿಸುವವರು ಬಿಜೆಪಿಯಲ್ಲಿ ಯಾರೂ ಇಲ್ಲ. ಮುಖ್ಯಮಂತ್ರಿ ಅವರಿಗೂ ಆರ್‌ಎಸ್‌ಎಸ್‌ ಹಿನ್ನೆಲೆ ಇಲ್ಲ.  ಬಿಜೆಪಿ ಹೇಳುವುದು ಒಂದು. ಆಚರಣೆಯಲ್ಲಿ ತರುವುದೇ ಇನ್ನೊಂದು. ಗುಪ್ತ ಕಾರ್ಯಸೂಚಿ ಜಾರಿಗೊಳಿಸಲು ಬಿಜೆಪಿ ಯತ್ನಿಸುತ್ತಿದೆ.

- ಸಿ.ಎಂ. ಧನಂಜಯ, ಕೆಪಿಸಿಸಿ ವಕ್ತಾರ, ಶಿಸ್ತು ಸಮಿತಿ ಸದಸ್ಯ

‘ಜನರ ನಾಡಿಮಿಡಿತ ಅರಿತು ಹೋರಾಟ’

ಪ್ರತಿಯೊಂದು ರಾಜ್ಯದಲ್ಲಿಯೂ ಬಿಜೆಪಿ ಶಕ್ತಿಯಾಗಿ ಬೆಳೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೀಗಾಗಿ, ದಕ್ಷಿಣ ಭಾರತದಲ್ಲಿಯೂ ಶಕ್ತಿ ಮೀರಿ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ. ದಕ್ಷಿಣ ಭಾರತದ ರಾಜಕೀಯ ಸನ್ನಿವೇಶ ವಿಭಿನ್ನವಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ. ಅಲ್ಲಿ ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸಿವೆ. ಕರ್ನಾಟಕದಲ್ಲಿ 1990ರ ನಂತರ ಬಿಜೆಪಿಗೆ ಮನ್ನಣೆ ಸಿಗುತ್ತಿದೆ. ದೊಡ್ಡ ಸಮುದಾಯದ ಬೆಂಬಲ ನಮಗೆ ಸಿಕ್ಕಿದೆ. ಅದನ್ನೇ ಆಧಾರವನ್ನಾಗಿಟ್ಟುಕೊಂಡು ಸಂಘಟನೆಯಲ್ಲಿ ತೊಡಗಿದ್ದೇವೆ. ಕೇರಳ ಮತ್ತು ತಮಿಳುನಾಡಿನಲ್ಲಿ ಸಾಂಸ್ಕೃತಿಕ ಮತ್ತು ಭಾಷೆ ಅಸ್ಮಿತೆಗಳೇ ಮುಖ್ಯವಾಗಿವೆ. ಹೀಗಾಗಿ, ಈ ರಾಜ್ಯಗಳ ಜನತೆಯ ನಾಡಿಮಿಡಿತ ಅರಿತುಕೊಂಡು ಕಾರ್ಯನಿರ್ವಹಿಸಬೇಕಾಗಿದೆ. ಅಲ್ಲಿನ ಜನರ ಜತೆಗೆ ಬಿಜೆಪಿ ಗುರುತಿಸಿಕೊಳ್ಳಬೇಕಾಗಿದೆ. ‘ಸಬ್‌ಕಾ ಸಾಥ್‌, ಸಬ್‌ಕಾ ವಿಶ್ವಾಸ್‌, ಸಬ್‌ಕಾ ವಿಕಾಸ’ ಎನ್ನುವ ಆಶಯದೊಂದಿಗೆ ಸಂಘಟನೆಯಲ್ಲಿ ಪಕ್ಷವು ತೊಡಗಿದೆ. ದಕ್ಷಿಣ ಭಾರತದಲ್ಲಿ ನಮ್ಮ ಶಕ್ತಿ ಎಲ್ಲಿ ಕಡಿಮೆ ಇದೆ ಎನ್ನುವುದನ್ನು ಗುರುತಿಸಿ ಕೆಲಸ ಮಾಡಬೇಕಾಗಿದೆ. ಕೇರಳದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಣ್ಣ ಶಕ್ತಿಯಾಗಿ ಬಿಜೆಪಿ ಈಗಾಗಲೇ ಹೊರಹೊಮ್ಮಿದೆ.

- ಸುರೇಶ ನೆಲಮಂಗಲ, ಬೆಂಗಳೂರು ಜಿಲ್ಲಾ ಬಿಜೆಪಿ ವಕ್ತಾರ

‘ಧರ್ಮ ರಾಜಕಾರಣ ಜನರು ಒಪ್ಪಿಕೊಳ್ಳುವುದಿಲ್ಲ’

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆಗಳು ಕ್ಷೀಣಿಸಿವೆ. ಈ ರಾಜ್ಯಗಳಲ್ಲಿ ಬಿಜೆಪಿಗೆ ನೆಲೆಯೂ ಇಲ್ಲ. ಧರ್ಮ ಮತ್ತು ಜಾತಿ ರಾಜಕಾರಣ ಮಾಡುತ್ತಿರುವ ಬಿಜೆಪಿಯನ್ನು ದಕ್ಷಿಣ ಭಾರತದ ಜನತೆ ಒಪ್ಪಿಕೊಳ್ಳುವುದು ಕಷ್ಟ ಸಾಧ್ಯ. ದಕ್ಷಿಣ ಭಾರತದವರ ಮನಸ್ಥಿತಿಯೇ ವಿಭಿನ್ನ. ಕರ್ನಾಟಕದಲ್ಲೂ ಬಿಜೆಪಿ, ಶಾಸಕರನ್ನು ಖರೀದಿಸಿ, ದುಷ್ಟ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆಯೇ ಹೊರತು ಜನರು ಸಂಪೂರ್ಣ ಬಹುಮತ ನೀಡಿಲ್ಲ. ಜತೆಗೆ, ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿಯ ಬಗ್ಗೆಯೂ ಜನರಿಗೆ ಭ್ರಮನಿರಸವಾಗಿದೆ. ಮೋದಿ ಅವರು ಸರ್ವಾಧಿಕಾರಿಯಂತೆ ನಡೆಸುತ್ತಿದ್ದಾರೆ. ಪ್ರಜಾಸತ್ತಾತ್ಮಕ ಆಡಳಿತ ನಡೆಸಿದರೆ ಮಾತ್ರ ಜನರು ಬೆಂಬಲಿಸುತ್ತಾರೆ. ಉತ್ತರ ಭಾರತದಲ್ಲಿ ಭಯ ಹುಟ್ಟಿರುವುದರಿಂದ, ಬಿಜೆಪಿ ಈಗ ದಕ್ಷಿಣ ಭಾರತದತ್ತ ಗಮನಹರಿಸಿದೆ. ಪ್ರಾದೇಶಿಕವಾಗಿ ಬಲಿಷ್ಠವಾಗಿರುವ ಮತ್ತು ಜನಪರವಾಗಿರುವ ಜೆಡಿಎಸ್‌ ಶಕ್ತಿ ಕಡಿಮೆಯಾಗಿರಬಹುದು. ಆದರೆ, ನೆಲೆ ಗಟ್ಟಿಯಾಗಿದೆ. ಜೆಡಿಎಸ್‌ ಧರ್ಮ ಅಥವಾ ಜಾತಿ ರಾಜಕೀಯ ಮಾಡುತ್ತಿಲ್ಲ.

- ಮಲ್ಲಿಕಾರ್ಜುನ ಯಂಡಿಗೇರಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ, ವಿಜಯಪುರ

‘ಹಿಂದುತ್ವದ ಆಧಾರದ ಸಂಘಟನೆ ಕಷ್ಟಸಾಧ್ಯ’

ಕರ್ನಾಟಕದ ಬಿಜೆಪಿಗೂ ಇಡೀ ರಾಷ್ಟ್ರದಲ್ಲಿನ ಬಿಜೆಪಿಗೂ ಅಪಾರ ವ್ಯತ್ಯಾಸವಿದೆ. ರಾಜ್ಯದಲ್ಲಿ ಹಿಂದುತ್ವದ ಆಧಾರದ ಮೇಲೆ ಪಕ್ಷ ಬೆಳೆದಿಲ್ಲ. ರೈತ ಚಳವಳಿ ಮತ್ತು ಇತರ ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ಪಕ್ಷ ಬೆಳೆದಿದೆ. ತಮಿಳುನಾಡಿನಲ್ಲಿ ಒಂದು ಪ್ರಾದೇಶಿಕ ಪಕ್ಷಕ್ಕೆ ಇನ್ನೊಂದು ಪ್ರಾದೇಶಿಕ ಪಕ್ಷ ಇದೆ. ಕಾಂಗ್ರೆಸ್‌ ಧೋರಣೆಗಳನ್ನು ಟೀಕಿಸಿ ಸಂಘಟನೆ ಮಾಡಿರುವ ರಾಜ್ಯಗಳಲ್ಲಿ ಬಿಜೆಪಿ ಯಶಸ್ಸು ಸಾಧಿಸಿದೆ. ಕಾಂಗ್ರೆಸ್‌ ಅಸ್ತಿತ್ವ ಕ್ಷೀಣಿಸಿರುವ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳೇ ಪ್ರಬಲವಾಗಿವೆ. ದಕ್ಷಿಣ ಭಾರತದಲ್ಲಿ ಭಾಷೆಯೂ ಮುಖ್ಯವಾಗಿದೆ. ಹಿಂದಿ ಭಾಷೆ ಮಾತನಾಡುವ ರಾಜ್ಯಗಳಲ್ಲಿ ಹಿಂದುತ್ವದ ಅಂಶವೂ ಪ್ರಮುಖವಾಗಿ ಎದ್ದು ಕಾಣುತ್ತಿದೆ. ಜತೆಗೆ, ಪ್ರಬಲ ಸಮುದಾಯಗಳ ಜತೆಯೇ ಬಿಜೆಪಿ ಗುರುತಿಸಿಕೊಂಡು ಅಧಿಕಾರ ಹಿಡಿಯುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಒಟ್ಟು ಮತಗಳಲ್ಲಿ ಶೇಕಡ 16ರಷ್ಟು ಪಾಲು ಮಾತ್ರ ಹೊಂದಿದೆ. ದಕ್ಷಿಣ ಭಾರತದ ಸಾಂಸ್ಕೃತಿಕ ಮತ್ತು ನಾಡಿಮಿಡಿತ ಹಿನ್ನೆಲೆ ವಿಭಿನ್ನವಾಗಿದೆ. ಹೀಗಾಗಿ, ಇಲ್ಲಿ ಬಿಜೆಪಿ ಅಸ್ತಿತ್ವ ಕಷ್ಟವಾಗುತ್ತಿದೆ. ಈ ರಾಜ್ಯಗಳಲ್ಲಿ ಹಿಂದುತ್ವ ಎನ್ನುವುದೇ ಅವರಿಗೆ ತಿರುಗುಬಾಣವಾಗುವ ಸಾಧ್ಯತೆಗಳಿವೆ.

- ರಾಜಲಕ್ಷ್ಮಿ ಅಂಕಲಗಿ, ವಕೀಲರು, ಸಾಮಾಜಿಕ ಕಾರ್ಯಕರ್ತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು