ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಸಿಸಿಬಿ ಪೊಲೀಸರಿಂದ ಶೇ 88 ರಷ್ಟು ಮೊತ್ತ ಜಪ್ತಿ!

Published 23 ಸೆಪ್ಟೆಂಬರ್ 2023, 0:45 IST
Last Updated 23 ಸೆಪ್ಟೆಂಬರ್ 2023, 0:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಂಚಿಸಿದ್ದ ಪ್ರಕರಣದ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಬಂಧಿತ ಆರೋಪಿಗಳಿಂದ ₹ 3.67 ಕೋಟಿ ಜಪ್ತಿ ಮಾಡಿದ್ದಾರೆ. ₹ 25 ಲಕ್ಷ ಕೊಟ್ಟು ಹಾಲವೀರಪ್ಪ ಸ್ವಾಮೀಜಿ ಖರೀದಿಸಿದ್ದ ಇನ್ನೋವಾ ಕಾರನ್ನು ಪೊಲೀಸರು ಸುಪರ್ದಿಗೆ ಪಡೆದಿದ್ದಾರೆ.

‘ಪ್ರಕರಣದ ಪ್ರಮುಖ ಆರೋಪಿಗಳಾದ ಚೈತ್ರಾ ಕುಂದಾಪುರ, ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲವೀರಪ್ಪ ಸ್ವಾಮೀಜಿ ಹಾಗೂ ಇತರರಿಗೆ ಸೇರಿದ್ದ ಜಾಗಗಳಲ್ಲಿ ನಿರಂತರವಾಗಿ ಶೋಧ ನಡೆಸಲಾಗಿದೆ. ನಗದು, ಚಿನ್ನಾಭರಣ, ಠೇವಣಿ, ಆಸ್ತಿ ದಾಖಲೆಗಳು ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹ 3.67 ಕೋಟಿ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ವಂಚನೆಗೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ದೂರಿನಲ್ಲಿದ್ದ ಸಂಗತಿಗಳಿಗೆ ‍ಪೂರಕವಾದ ಪುರಾವೆಗಳನ್ನು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಅದಕ್ಕೆ ತಕ್ಕಂತೆ ಮಹಜರು ಹಾಗೂ ಜಪ್ತಿ ಪ್ರಕ್ರಿಯೆ ಸಹ ನಡೆಸಲಾಗಿದೆ’ ಎಂದು ಹೇಳಿದರು.

‘ಹಾಲಶ್ರೀ ಸ್ವಾಮೀಜಿಗೆ ಸಂಬಂಧಿಸಿದ ಮಹಜರು ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇರುವುದರಿಂದ, ಸ್ವಾಮೀಜಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅವರಿಂದ ಹೇಳಿಕೆ ಪಡೆದ ನಂತರ, ಬೇರೆ ಯಾರಾದರೂ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾದರೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಗೋವಿಂದ್ ಬಾಬು ಅವರಿಂದ ಹಣ ಪಡೆದಿದ್ದ ಸ್ವಾಮೀಜಿ, ಅದರಲ್ಲಿ ₹ 25 ಲಕ್ಷ ಕೊಟ್ಟು ಇನ್ನೋವಾ ಕ್ರಿಸ್ಟಾ ಕಾರು ಖರೀದಿಸಿದ್ದರು. ಅದೇ ಕಾರನ್ನು ಮಠದ ಬಳಿ ನಿಲ್ಲಿಸಿ ಸ್ವಾಮೀಜಿ ತಲೆಮರೆಸಿಕೊಂಡಿದ್ದರು. ಮಠದಲ್ಲಿ ಶೋಧ ನಡೆಸಿದ್ದ ಸಂದರ್ಭದಲ್ಲಿ ಕಾರು ಜಪ್ತಿ ಮಾಡಿ, ಬೆಂಗಳೂರಿಗೆ ತರಲಾಗಿದೆ’ ಎಂದು ಹೇಳಿದರು.

ಚೈತ್ರಾ ನ್ಯಾಯಾಲಯಕ್ಕೆ ಇಂದು: ‘ಚೈತ್ರಾ ಕುಂದಾಪುರ, ಗಗನ್ ಹಾಗೂ ಇತರೆ ಆರೋಪಿಗಳ ಕಸ್ಟಡಿ ಅವಧಿ ಶನಿವಾರ ಮುಗಿಯಲಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಮಹಜರು, ಹೇಳಿಕೆ ದಾಖಲು ಹಾಗೂ ಇತರೆ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಶನಿವಾರ ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಅಧಿಕಾರಿ ತಿಳಿಸಿದರು.

‘ಆರೋಪಿಗಳ ವಿಚಾರಣೆ ಮುಕ್ತಾಯವಾಗಿದೆ. ಕಸ್ಟಡಿ ಅವಧಿ ವಿಸ್ತರಣೆ ಬಗ್ಗೆ ನ್ಯಾಯಾಲಯಕ್ಕೆ ಯಾವುದೇ ಕೋರಿಗೆ ಸಲ್ಲಿಸುವ ಅಗತ್ಯವಿಲ್ಲ’ ಎಂದು ಹೇಳಿದರು.

[object Object]
ಅಭಿನವ ಹಾಲವೀರಪ್ಪ ಸ್ವಾಮೀಜಿ

ಪ್ರಮುಖ ಆರೋಪಿಗಳ ಜಪ್ತಿ ವಿವರ

ಚೈತ್ರಾ ಕುಂದಾಪುರ– ₹ 81 ಲಕ್ಷ ನಗದು ₹ 23 ಲಕ್ಷ ಮೌಲ್ಯದ ಚಿನ್ನಾಭರಣ ₹ 1.8 ಕೋಟಿ ಮೊತ್ತದ ನಿಶ್ಚಿತ ಠೇವಣಿ ₹ 12 ಲಕ್ಷ ಮೌಲ್ಯದ ಕಿಯಾ ಕಾರು

ಹಾಲಶ್ರೀ ಸ್ವಾಮೀಜಿ; ಮಠದಲ್ಲಿ ₹ 56 ಲಕ್ಷ ಪರಿಚಯಸ್ಥನ ಬಳಿ ₹ 25 ಲಕ್ಷ ₹ 25 ಲಕ್ಷ ಮೌಲ್ಯದ ಇನ್ನೋವಾ ಕಾರು

ಗಗನ್ ಕಡೂರು– ₹ 20 ಲಕ್ಷ ನಗದು ಧನರಾಜ್ ಹಾಗೂ ರಮೇಶ್: ₹ 6 ಲಕ್ಷ

ಶೇ 88.50 ರಷ್ಟು ಜಪ್ತಿ

ಸಿಸಿಬಿ ಸಾಧನೆ ‘ವಂಚನೆ ಪ್ರಕರಣದ ತನಿಖೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಡಿಸಿಪಿ ಅಬ್ದುಲ್ ಅಹದ್ ಹಾಗೂ ಎಸಿಪಿ ರೀನಾ ಸುವರ್ಣಾ ನೇತೃತ್ವದ ತಂಡ ಶೇ 88.50ರಷ್ಟು ಜಪ್ತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಇತರೆ ವಂಚನೆ ಪ್ರಕರಣಗಳಿಗೆ ಹೋಲಿಸಿದರೆ ಟಿಕೆಟ್ ವಂಚನೆ ಪ್ರಕರಣದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಜಪ್ತಿ ಆಗಿದೆ. ಇದು ತಂಡದ ಸಾಧನೆ’ ಎಂದು ಪೊಲೀಸ್ ಅಧಿಕಾರಿ ಹೊಗಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT