ಭಾನುವಾರ, ಜುಲೈ 3, 2022
23 °C

ಸಿಗ್ನಲ್‌ ರಹಿತ ಪ್ರಯಾಣಕ್ಕೊಂದು ನೀಲನಕ್ಷೆ

ಶರತ್ ಹೆಗ್ಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಸ್ತೆಗಳ ಧಾರಣಾ ಸಾಮರ್ಥ್ಯವನ್ನೂ ಮೀರಿ ವಾಹನಗಳು ಓಡಾಟ ನಡೆಸುತ್ತಿರುವುದರಿಂದ ರಾಜಧಾನಿಯ ಸಂಚಾರ ವ್ಯವಸ್ಥೆ ದಿಕ್ಕೆಟ್ಟಿದೆ. ಆದರೆ, ಇರುವ ರಸ್ತೆಗಳಲ್ಲೇ ಸುಗಮ ಸಂಚಾರ ಸಾಧ್ಯಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯಗಳಿಂದ ಪೂರಕ ಸಲಹೆಗಳು ವ್ಯಕ್ತವಾಗುತ್ತಿವೆ.

ದಟ್ಟಣೆ ನಿವಾರಣೆಗೆ ಕೆನರಾಬ್ಯಾಂಕ್‌ ಉದ್ಯೋಗಿ ಎ.ವಿ.ಮಂಜುನಾಥ್ ನೀಲನಕ್ಷೆಯೊಂದನ್ನು ರೂಪಿಸಿದ್ದಾರೆ. ಅದು ಯಥಾವತ್ತಾಗಿ ಅನುಷ್ಠಾನಗೊಂಡರೆ, ನಗರದ ಹೃದಯಭಾಗದಲ್ಲಿ ಉಂಟಾಗುವ ವಿಪರೀತ ದಟ್ಟಣೆಯನ್ನು ತಡೆಗಟ್ಟಬಹುದು ಎಂಬುದು ಅವರ ವಿಶ್ವಾಸ.

ಈ ಹಿಂದೆ ಅರಮನೆ ರಸ್ತೆ ಬಳಿಯ ಮಹಾರಾಣಿ ಕಾಲೇಜು ಸಮೀಪದ ಅಂಡರ್‌ಪಾಸ್‌ ಯೋಜನೆಯೂ ಮಂಜುನಾಥ್‌ ಅವರ ನಕ್ಷೆ ಪ್ರಕಾರವೇ ರೂಪಿತವಾಗಿದೆ. 

‘2005ರಿಂದ ಒಟ್ಟು ಆರು ಯೋಜನೆಗಳನ್ನು ರೂಪಿಸಿದ್ದೆ. ಸಂಚಾರ ವಿಭಾಗದ ಪೊಲೀಸ್‌ ಕಮಿಷನರ್‌ ಅವರಿಂದಲೂ ಇವುಗಳು ಶಿಫಾರಸುಗೊಂಡಿವೆ. ಬಿಬಿಎಂಪಿಯ ದಕ್ಷಿಣ ವಲಯದ ನಗರ ಯೋಜನಾ ವಿಭಾಗದವರು ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದರು. ಆದರೆ, ಏಕೋ ನನೆಗುದಿಗೆ ಬಿದ್ದಿವೆ’ ಎಂದು ಅವರು ಹೇಳುತ್ತಾರೆ. 

ಆರ್‌.ವಿ. ರಸ್ತೆ ಜಂಕ್ಷನ್‌ನಿಂದ ಮೆಜೆಸ್ಟಿಕ್‌ವರೆಗೆ ಸಿಗ್ನಲ್‌ರಹಿತ ಸಂಚಾರ ವ್ಯವಸ್ಥೆ ರೂಪಿಸಲು ಸಹ ಅವರು ಯೋಜನೆ ರೂಪಿಸಿದ್ದಾರೆ. ನಗರ ಸಂಚಾರ ವ್ಯವಸ್ಥೆ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಎಡಿಜಿಪಿ ಎಂ.ಎ. ಸಲೀಂ ಸಹ ಈ ಯೋಜನೆ ಅನುಷ್ಠಾನಯೋಗ್ಯವಾಗಿದೆ ಎಂಬ ಅಭಿಪ್ರಾಯ ನೀಡಿದ್ದಾರೆ.

ಹೇಗೆ ಸಾಧ್ಯ?

ಆರ್‌.ವಿ. ರಸ್ತೆ ಜಂಕ್ಷನ್‌ನಿಂದ ಮಿನರ್ವ ಸರ್ಕಲ್‌ ಮಾರ್ಗವಾಗಿ ಜೆ.ಸಿ ರಸ್ತೆ ಮೂಲಕ ರವೀಂದ್ರ ಕಲಾ ಕ್ಷೇತ್ರದವರೆಗೆ ಎತ್ತರಿಸಲ್ಪಟ್ಟ ದ್ವಿಪಥ ಮಾರ್ಗ ರೂಪಿಸಬೇಕು. ಅಲ್ಲಿಂದ ಮುಂದೆಯೂ ರೂಪಿಸಬಹುದು. ಆದರೆ, ಪುರಭವನ ಮತ್ತು ಕೆಂಪೇಗೌಡ ವೃತ್ತ ಆಸುಪಾಸಿನ ಪಾರಂಪರಿಕ ಕಟ್ಟಡಗಳಿಗೆ ಅಡ್ಡವಾಗಿ ಎತ್ತರಿಸಲ್ಪಟ್ಟ ಮಾರ್ಗ ನಿರ್ಮಾಣಕ್ಕೆ ಅವಕಾಶ ಇಲ್ಲ. ಹಾಗಾಗಿ ಪುರಭವನದ ಮುಂದಿನ ಜಂಕ್ಷನ್‌ನಿಂದ ಮುಂದೆ ಕಸ್ತೂರಬಾ ರಸ್ತೆವರೆಗೆ ಅಂಡರ್‌ಪಾಸ್‌ ನಿರ್ಮಿಸಬೇಕು. ಈ ಮೂಲಕ ಎಂ.ಜಿ. ರಸ್ತೆ ಕಡೆಗೆ ನೇರ ಸಂಪರ್ಕ ಕಲ್ಪಿಸಲು ಸಾಧ್ಯ ಎನ್ನುವುದು ಮಂಜುನಾಥ್‌ ಅವರ ಸಲಹೆ.

ಹಡ್ಸನ್‌ ವೃತ್ತದ ಬಳಿಯಿರುವ ಪಲ್ಲವಿ ಚಿತ್ರಮಂದಿರದಿಂದ ಕೆ.ಜಿ. ರಸ್ತೆವರೆಗೆ (ನೃ‍ಪತುಂಗ ವೃತ್ತದಿಂದ ಸ್ವಲ್ಪ ಮುಂದೆ) ಫ್ಲೈಓವರ್‌ ನಿರ್ಮಿಸಬೇಕು. ಆನಂದರಾವ್‌ ವೃತ್ತದ ಬಳಿಯ ಫ್ಲೈಓವರ್‌ನ್ನು ಎಸ್‌ಜೆಪಿ ಕಾಲೇಜಿನವರೆಗೆ ವಿಸ್ತರಿಸಬೇಕು. ಇದನ್ನು ದ್ವಿಪಥ ಮಾಡಬೇಕು. ಆಗ ಮೆಜೆಸ್ಟಿಕ್‌ಗೆ ನೇರ ಸಂಪರ್ಕ ಸಾಧ್ಯ. ಕೆ.ಆರ್‌. ವೃತ್ತದ ಬಳಿಯಿಂದಲೂ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸಬಹುದು ಎಂದು ವಿವರಿಸುತ್ತಾರೆ.  

ಈ ಯೋಜನೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಅಂಡರ್‌ಪಾಸ್‌ಗಳು ಬರುತ್ತವೆ. ಪ್ರತಿ ರಸ್ತೆಯೂ ದ್ವಿಮುಖ ಸಂಚಾರ ವ್ಯವಸ್ಥೆ ಹೊಂದಿರುತ್ತದೆ. ವಾಹನಗಳು ಒಂದೇ ಸಮ ಸಂಚರಿಸುತ್ತವೆ. ಹೀಗಾಗಿ ಎಲ್ಲಿಯೂ ದಟ್ಟಣೆ ಉಂಟಾಗದು. ಮುಖ್ಯ ರಸ್ತೆ ಸಂಪರ್ಕಿಸುವ ಅಡ್ಡ ರಸ್ತೆಗಳಿಗೆ ಅಲ್ಲಲ್ಲಿ ಸಂಪರ್ಕ ರಸ್ತೆ (ಲೂಪ್‌ ರಸ್ತೆ) ಕಲ್ಪಿಸಬೇಕು ಎಂದು ಯೋಜನಾ ನಕ್ಷೆಯಲ್ಲಿ ಪ್ರಸ್ತಾಪಿಸಿದ್ದಾರೆ.

ದೀರ್ಘಾವಧಿಗೆ ಉತ್ತಮ ಯೋಜನೆ

ಆರ್ಥಿಕ ದೃಷ್ಟಿಯಿಂದ ತುಸು ಹೊರೆಯೆನಿಸಬಹುದಾದರೂ ದೀರ್ಘಾವಧಿಯ ದೃಷ್ಟಿಯಲ್ಲಿ ನೋಡಿದರೆ ಇದೊಂದು ಉತ್ತಮ ಯೋಜನೆ. ಸರ್ಕಾರ ಇದರ ಪ್ರಯೋಜನವನ್ನು ಮನಗಂಡು ಸರಿಯಾದ ಯೋಜನಾ ವರದಿ ರೂಪಿಸಬೇಕು. ಆರ್ಥಿಕ ಸಂಸ್ಥೆಗಳು ಇಂಥ ಯೋಜನೆಗೆ ನೆರವು ನೀಡುತ್ತವೆ. 

– ಡಾ.ಲೋಕೇಶ್‌ ಹೆಬ್ಬಾನಿ, ಮೂಲಸೌಕರ್ಯ ಮತ್ತು ರಸ್ತೆ ಸುರಕ್ಷತೆ ಸಂಬಂಧಿಸಿ ವಿಶ್ವಬ್ಯಾಂಕ್‌ ಸಲಹೆಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು