ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಸಿಆರ್‌ಐ: 63 ಮಂದಿಗೆ ಸೋಂಕು

Last Updated 26 ಏಪ್ರಿಲ್ 2021, 21:05 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) 38 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. 25 ಮಂದಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಲ್ಲೂ ಸೋಂಕು ದೃಢಪಟ್ಟಿದೆ. ಈ ವಿದ್ಯಾರ್ಥಿಗಳು ವಿಕ್ಟೋರಿಯಾ ಆಸ್ಪತ್ರೆಯ ವಿವಿಧ ಬ್ಲಾಕ್‌ಗಳಲ್ಲಿ ಕೊರೊನಾ ಸೇನಾನಿಗಳಾಗಿ ಕೆಲಸ ಮಾಡುತ್ತಿದ್ದರು.

ಸೋಂಕಿಗೊಳಗಾಗಿರುವ ಒಟ್ಟು 63 ಮಂದಿಯೂ ಚರಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜ್ಯಕ್ಕೆ ಕೋವಿಡ್‌ ಕಾಲಿಟ್ಟ ದಿನದಿಂದ ಇದುವರೆಗೂ ಬಿಎಂಸಿಆರ್‌ಐಯ ಒಟ್ಟು 350 ವಿದ್ಯಾರ್ಥಿಗಳು ಕೋವಿಡ್‌ ಪೀಡಿತರಾದಂತಾಗಿದೆ.

‘ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡ ಬಳಿಕ 60 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಈ ಪೈಕಿ 25 ಸಕ್ರಿಯ ಪ್ರಕರಣಗಳಿವೆ. ಏಪ್ರಿಲ್‌ 23ರಂದು ನಾವು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದೆವು. ಕೋವಿಡ್‌ ಕೆಲಸಕ್ಕೆ ನಿಯೋಜಿತರಾಗಿರುವವರ ಪ್ರತ್ಯೇಕ ವಾಸಕ್ಕೆ ಹೋಟೆಲ್‌ ಅಥವಾ ಇನ್ನಿತರ ಕಟ್ಟಡದಲ್ಲಿ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದೆವು. ಈಗ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ವಾರದಲ್ಲಿ ಎಂಟರಿಂದ 10 ಮಂದಿ ವೈದ್ಯರಿಗೆ ಸೋಂಕು ತಗುಲುತ್ತಿದೆ ಎಂದೂ ಮನವರಿಕೆ ಮಾಡಿಕೊಡಲಾಗಿತ್ತು.

ಪ‍ರಿಸ್ಥಿತಿ ಹೀಗೆ ಮುಂದುವರಿದರೆ ಕೋವಿಡ್‌ ಕರ್ತವ್ಯಕ್ಕೆ ವೈದ್ಯರೇ ಸಿಗುವುದಿಲ್ಲ ಎಂಬುದನ್ನೂ ಗಮನಕ್ಕೆ ತಂದಿದ್ದೆವು. ಹೀಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಕರ್ನಾಟಕ ರೆಸಿಡೆಂಟ್‌ ಡಾಕ್ಟರ್ಸ್‌ ಅಸೋಸಿಯೇಷನ್‌ನ (ಕೆಎಆರ್‌ಡಿ) ಅಧ್ಯಕ್ಷ ಡಾ.ದಯಾನಂದ ಸಾಗರ್‌ ‘ಪ್ರಜಾವಾಣಿ’ಗೆತಿಳಿಸಿದರು.

‘ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ಪೈಕಿ ಐದು ಮಂದಿ ಒಂದೇ ಸ್ನಾನದ ಕೋಣೆ ಬಳಸುವ ಪರಿಸ್ಥಿತಿ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಮಾದರಿಗಳನ್ನು ಬಿಎಂಸಿಆರ್‌ಐಗೆ ಕಳುಹಿಸಲಾಗುತ್ತಿರುವ ಕಾರಣ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿರುವವರ ಪೈಕಿ ಆರು ಮಂದಿ ಸೋಂಕಿಗೊಳಪಟ್ಟಿದ್ದಾರೆ’ ಎಂದು ಹೇಳಿದ್ದಾರೆ.

‘ಪಿಪಿಇ ಕಿಟ್‌ ತೆಗೆದ ಬಳಿಕ ಸ್ನಾನ ಮಾಡಬೇಕು. ಆದರೆ ಅದಕ್ಕೆ ಯಾವ ವ್ಯವಸ್ಥೆಯೂ ಇಲ್ಲ. ಹೀಗಾಗಿ ನಾವು ನೇರವಾಗಿ ಮನೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ನಮ್ಮಿಂದ ಕುಟುಂಬದ ಇತರ ಸದಸ್ಯರಿಗೂ ಸೋಂಕು ಪಸರಿಸುವ ಅಪಾಯವಿದೆ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT