ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.1ರಿಂದ ರಾತ್ರಿ 12ರವರೆಗೆ ಮೆಟ್ರೊ ಸೇವೆ

ಮೆಟ್ರೊ ರೈಲು ಸಂಚಾರ ಅವಧಿಯನ್ನು ಅರ್ಧ ಗಂಟೆ ವಿಸ್ತರಿಸಲಿರುವ ಬಿಎಂಆರ್‌ಸಿಎಲ್‌
Last Updated 9 ಡಿಸೆಂಬರ್ 2019, 20:31 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಬರುವ ಜನವರಿ 1ರಿಂದ ರಾತ್ರಿ 12ರವರೆಗೆ ಮೆಟ್ರೊ ರೈಲುಗಳು ಸಂಚರಿಸಲಿವೆ. ಆ ಮೂಲಕ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ತನ್ನ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನೀಡಿದೆ.

‘ಮೆಟ್ರೊ ರೈಲು ಸಂಚಾರ ಅವಧಿಯನ್ನು ಜ.1ರಿಂದ ಅರ್ಧ ಗಂಟೆ ವಿಸ್ತರಿಸಲಾಗುವುದು. ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ (ಮೆಜೆಸ್ಟಿಕ್‌) ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ರಾತ್ರಿ 12ಕ್ಕೆ ಹೊರಡುತ್ತದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೆಟ್ರೊ ರೈಲು ಸಂಚಾರ ಅವಧಿಯನ್ನು ವಿಸ್ತರಿಸಬೇಕು ಎಂಬುದು ಪ್ರಯಾಣಿಕರ ಬಹುದಿನದ ಬೇಡಿಕೆಯಾಗಿತ್ತು. ಪ್ರಮುಖವಾಗಿ ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿರುವ ಮಹಿಳೆಯರು ಈ ನಿಟ್ಟಿನಲ್ಲಿ ಹಲವು ಬಾರಿ ನಿಗಮಕ್ಕೆ ಮನವಿ ಸಲ್ಲಿಸಿದ್ದರು.

ಸದ್ಯ, ನೇರಳೆ ಮಾರ್ಗದಲ್ಲಿ ಕೊನೆಯ ರೈಲು ಬೈಯಪ್ಪನಹಳ್ಳಿ ನಿಲ್ದಾಣದಿಂದ ರಾತ್ರಿ 11ಕ್ಕೆ ಮತ್ತು ಮೈಸೂರು ರಸ್ತೆ ನಿಲ್ದಾಣದಿಂದ ರಾತ್ರಿ 11.05ಕ್ಕೆ ಹೊರಡುತ್ತದೆ. ಹಸಿರು ಮಾರ್ಗದಲ್ಲಿ, ಕೊನೆಯ ರೈಲು ನಾಗಸಂದ್ರದಿಂದ ರಾತ್ರಿ 10.50ಕ್ಕೆ ಮತ್ತು ಯಲಚೇನಹಳ್ಳಿ ನಿಲ್ದಾಣದಿಂದ ರಾತ್ರಿ 11ಕ್ಕೆ ಹೊರಡುತ್ತದೆ. ಮೆಜೆಸ್ಟಿಕ್‌ ನಿಲ್ದಾಣದಿಂದ ಎಲ್ಲ ದಿಕ್ಕುಗಳಿಗೆ ರಾತ್ರಿ 11.25ಕ್ಕೆ ಕೊನೆಯ ರೈಲು ಹೋಗುತ್ತದೆ. ಈ ಅವಧಿಯು ಜ.1ರಿಂದ 35 ನಿಮಿಷ ವಿಸ್ತರಣೆಯಾಗಲಿದೆ.

‘ಈಗ ಬೆಳಿಗ್ಗೆ 5ರಿಂದಲೇ ಸೇವೆ ನೀಡಲಾಗುತ್ತಿದೆ. ಮುಂದೆ, ರಾತ್ರಿ 12.30ರ ವೇಳೆಗೆ ಸೇವೆ ಮುಕ್ತಾಯವಾಗಲಿದೆ. ನಿರ್ವಹಣೆಗೆ ಕಡಿಮೆ ಸಮಯ ಸಿಗುವುದರಿಂದ ಹೆಚ್ಚು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಆದರೂ, ಪ್ರಯಾಣಿಕರು ಮತ್ತು ಮುಖ್ಯವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸಮಯ ವಿಸ್ತರಣೆಯ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಅವರು ಹೇಳಿದರು.

12ಕ್ಕೆ ಏರಿಕೆ: ಹಸಿರು ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆಯ ವೇಳೆ ಹೆಚ್ಚು ದಟ್ಟಣೆ ಇರುತ್ತದೆ. ಈ ಕಾರಣಕ್ಕಾಗಿ, ಮೂರು ಬೋಗಿಯ ಒಂದು ರೈಲಿನ ನಂತರ, ಆರು ಬೋಗಿಯ ರೈಲು ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ. ಸದ್ಯ, ಈ ಮಾರ್ಗದಲ್ಲಿ ಆರು ಬೋಗಿಗಳ ಎಂಟು ರೈಲುಗಳು ಸಂಚರಿಸುತ್ತಿವೆ. ಡಿಸೆಂಬರ್‌ ಅಂತ್ಯದ ವೇಳೆಗೆ ಈ ಸಂಖ್ಯೆಯನ್ನು 12ಕ್ಕೆ ಏರಿಸಲಾಗುವುದು. ಅಲ್ಲದೆ, ಆರು ಬೋಗಿಗಳ ರೈಲಿನಲ್ಲಿ ಮೊದಲ ಬೋಗಿಯನ್ನು ಮಹಿಳೆಯರಿಗಾಗಿ ಮೀಸಲಿಡಲಾಗುವುದು ಎಂದು ಅಜಯ್‌ ಸೇಠ್‌ ತಿಳಿಸಿದರು.

‘ಬಸ್‌ ಸೇವೆ ವಿಸ್ತರಣೆಗೂ ಕ್ರಮ’

‘ಮೆಟ್ರೊ ರೈಲು ಸಂಚಾರವನ್ನು ರಾತ್ರಿ 12ರವರೆಗೆ ವಿಸ್ತರಿಸುವ ಬಿಎಂಆರ್‌ಸಿಎಲ್‌ನ ನಿರ್ಧಾರ ಸ್ವಾಗತಾರ್ಹ. ಇದಕ್ಕೆ ತಕ್ಕಂತೆ, ಆಯಾ ಸ್ಥಳಗಳಲ್ಲಿ ಬಿಎಂಟಿಸಿ ಬಸ್‌ ಸಂಚಾರ ಸಮಯವನ್ನೂ ವಿಸ್ತರಿಸಲು ಕ್ರಮ
ಕೈಗೊಳ್ಳಲಾಗುವುದು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕುರಿತು ಬಿಎಂಆರ್‌ಸಿಎಲ್‌ ಅಧಿಕಾರಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಸದ್ಯ, ರಾತ್ರಿ 1ರವರೆಗೆ ಬಿಎಂಟಿಸಿ ಬಸ್‌ ಸೇವೆ ನೀಡಲಾಗುತ್ತಿದೆ. ಆದರೆ, ಈ ಸಂಖ್ಯೆ ಕಡಿಮೆ ಇದೆ. ಮೆಟ್ರೊ ರೈಲು ಸೇವೆ ಸಮಯ ವಿಸ್ತರಣೆ ನಂತರ, ಹೆಚ್ಚು ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT