ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ವೇತನ ₹21 ಸಾವಿರಕ್ಕೆ ಏರಿಸಲು ಭಾರತೀಯ ಮಜ್ದೂರ್‌ ಸಂಘದ ಒತ್ತಾಯ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವೇತನ ಪರಿಷ್ಕರಣೆಗೆ ಆಗ್ರಹ
Last Updated 6 ಫೆಬ್ರುವರಿ 2023, 21:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ, ಭಾರತೀಯ ಮಜ್ದೂರ್‌ ಸಂಘದ (ಬಿ.ಎಂ.ಎಸ್‌) ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

‘ಆರೋಗ್ಯ ಇಲಾಖೆಯ ಒಳ ಹಾಗೂ ಹೊರ ಗುತ್ತಿಗೆ ನೌಕರರಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಶ್ರೀನಿವಾಸಾಚಾರಿ ವರದಿ ತಕ್ಷಣ ಜಾರಿಗೊಳಿಸಬೇಕು. ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಬೇಕು. ಕೆಎಸ್‌ಆರ್‌ಟಿಸಿ ನೌಕರರ ವೇತನ ಪರಿಷ್ಕರಣೆ ಮಾಡಬೇಕು. ಅವರಿಗೆ ಸರ್ಕಾರಿ ನೌಕರರಿಗೆ ಸಮವಾದ ವೇತನ ಮಂಜೂರು ಮಾಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

‘ಎಲ್ಲ ಇಲಾಖೆಯಲ್ಲಿ ಒಳ ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕ ಪದ್ಧತಿ ಕೈಬಿಡಬೇಕು. ಗುತ್ತಿಗೆ ಕಾರ್ಮಿಕರ ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಂಡಳಿಯಲ್ಲಿ ಫಲಾನುಭವಿಗಳ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು’ ಎಂದು ಆಗ್ರಹಿಸಿದರು.

‘ಕಾರ್ಮಿಕರ ಕನಿಷ್ಠ ವೇತನವನ್ನು ₹ 21 ಸಾವಿರಕ್ಕೆ ಏರಿಕೆ ಮಾಡಿ, 3 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. ಎಲ್ಲ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಪಿ.ಎಫ್‌ ನಿಧಿಯಿಂದ ನೀಡಲಾಗುತ್ತಿರುವ ಪಿಂಚಣಿಯನ್ನು ₹ 5 ಸಾವಿರಕ್ಕೆ ಏರಿಸಬೇಕು’ ಎಂದು ಆಗ್ರಹಿಸಿದರು.

‘ಗ್ರಾಚ್ಯುಟಿಯನ್ನು 15 ದಿನದಿಂದ ಒಂದು ತಿಂಗಳಿಗೆ ಏರಿಸಬೇಕು. ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಮಿಕ ಭವನ ನಿರ್ಮಿಸಬೇಕು. ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಿ ಪುನಶ್ಚೇತನಗೊಳಿಸಬೇಕು. ಮೈಸೂರು ಕಾಗದ ಕಾರ್ಖಾನೆಯನ್ನು ಮತ್ತೆ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಮುನಿರತ್ನ ಭೇಟಿ:
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತೋಟಗಾರಿಕಾ ಸಚಿವ ಮುನಿರತ್ನ ಅವರು ಮನವಿ ಸ್ವೀಕರಿಸಿ ಮಾತನಾಡಿ, ‘ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರ ಇದುವರೆಗೂ ಗಮನಿಸಿದೆ. ನಿಮ್ಮ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಅವುಗಳ ಪರಿಹಾರಕ್ಕೆ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಬಿಎಂಎಸ್‌ನ ಅಧ್ಯಕ್ಷ ಶಂಕರ್‌ ಸುಲೇಗಾವ್‌, ರಾಷ್ಟ್ರೀಯ ಉಪಾಧ್ಯಕ್ಷ ಜಿ.ಮಲ್ಲೇಶಂ, ದಕ್ಷಿಣ ಪ್ರಾಂತ್ಯದ ಸಂಘಟನಾ ಕಾರ್ಯದರ್ಶಿ ದೊರೆಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್‌, ರಾಜ್ಯ ಕಾರ್ಯದರ್ಶಿ ವಿಶ್ವಾರಾಧ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT