ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯೋಜನೆ ಕೋರಿಕೆಗೆ ಶಿಫಾರಸು

ಗರ್ಭಿಣಿ ಕಂಡಕ್ಟರ್‌ ರೂಟ್‌ ಕರ್ತವ್ಯ ಬದಲಿಸುವ ಪ್ರಸ್ತಾವ
Last Updated 1 ಮೇ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳಾ ನಿರ್ವಾಹಕಿಯರು (ಕಂಡಕ್ಟರ್‌) ಗರ್ಭಿಣಿ ಆಗಿರುವ ಬಗ್ಗೆ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಸಲ್ಲಿಸಿದರೆ, ಅಂತಹವರಿಗೆ ರೂಟ್‌ ಕೆಲಸದ ಬದಲಿಗೆ 4ನೇ ತಿಂಗಳಿನಿಂದಲೇ ಕಚೇರಿ ಕೆಲಸ ನಿರ್ವಹಿಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್‌ಆರ್‌ಟಿಸಿ) ಶಿಫಾರಸು ಮಾಡಲಾಗಿದೆ’ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಈ ಕುರಿತಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಸೂಚನೆಗೆ ಲಿಖಿತ ಉತ್ತರ ನೀಡಿರುವ ಅವರು, ‘ಇದು ಕಾರ್ಯನೀತಿಯ (ಪಾಲಿಸಿ) ವಿಷಯವಾಗಿದ್ದು, ಇದನ್ನು ಕೆಎಸ್ಆರ್‌ಟಿಸಿಯೇ ತೀರ್ಮಾನಿಸಬೇಕಾಗಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಏಕ ರೀತಿಯ ಪದ್ಧತಿ ಇರಬೇಕಾದ ಕಾರಣ ಕೆಎಸ್ಆರ್‌ಟಿಸಿಯೇ ತೀರ್ಮಾನ ಕೈಗೊಳ್ಳಬೇಕಿದೆ’ ಎಂದು ಹೇಳಿದ್ದಾರೆ.

‘ಸಂಸ್ಥೆಯಲ್ಲಿ ಹಾಲಿ 2,943 ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 1,511 ಮಹಿಳಾ ಕಂಡಕ್ಟರ್‌ಗಳು ಇದ್ದಾರೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಶಿಫಾರಸುಗಳು ಏನು?:

*ಐದು ಮತ್ತು ಆರನೇ ತಿಂಗಳಲ್ಲಿ ಗರ್ಭಿಣಿ ಕಂಡಕ್ಟರ್‌ಗಳಿಗೆ ಅವರ ಖಾತೆಯಲ್ಲಿರುವ ರಜೆ ಮಂಜೂರು ಮಾಡಬೇಕು. ಒಂದು ವೇಳೆ ರಜೆ ಇಲ್ಲದೇ ಹೋದರೆ ಮುಂಗಡ ರಜೆ ನೀಡಿ ಅನುಕೂಲ ಮಾಡಿಕೊಡಬೇಕು.

*ಏಳನೇ ತಿಂಗಳಿನಿಂದ ಅವರು ಮೂರು ತಿಂಗಳ ಹೆರಿಗೆ ಪೂರ್ವದ ರಜೆ ಮೇಲೆ ಹೋಗುತ್ತಾರೆ ಮತ್ತು ಹೆರಿಗೆ ನಂತರದಲ್ಲಿ ಮೂರು ತಿಂಗಳ ರಜೆಗೆ ಅರ್ಹರಿರುತ್ತಾರೆ.

*ಹೆರಿಗೆ ನಂತರದ ಮೂರು ತಿಂಗಳ ರಜೆ ಮುಗಿದ ನಂತರದಲ್ಲಿ ಅವರು ತಮ್ಮ ಖಾತೆಯಲ್ಲಿ ಹೊಂದಿರುವ ಮೂರು ತಿಂಗಳ ರಜೆಯನ್ನು ಮಂಜೂರು ಮಾಡಬೇಕು.

*ಈ ಸೌಲಭ್ಯವನ್ನು ಇಬ್ಬರು ಮಕ್ಕಳಿಗೆ ಮಾತ್ರವೇ ಸೀಮಿತಗೊಳಿಸುವುದು.

ಪ್ರಾಧಿಕಾರದ ಪತ್ರಕ್ಕೆ ಎಚ್ಚೆತ್ತ ಬಿಎಂಟಿಸಿ

‘ಗರ್ಭಿಣಿ ಕಂಡಕ್ಟರ್‌ಗಳ ಮತ್ತು ಗರ್ಭದಲ್ಲಿರುವ ಭ್ರೂಣದ ಆರೋಗ್ಯದ ದೃಷ್ಟಿಯಿಂದ ಅಂತಹವರನ್ನು ರೂಟ್‌ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸುವುದು ಸೂಕ್ತವಲ್ಲ. ಅಂತಹವರನ್ನು ನಿಯೋಜನೆಯ ಮೇರೆಗೆ ಕಚೇರಿ ಕೆಲಸಕ್ಕೆ ಕಳುಹಿಸಬೇಕು’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವ ಕುಮಾರ್‌ ಬಿಎಂಟಿಸಿಗೆ ಪತ್ರ ಬರೆದು ವಿವರಣೆ ಕೇಳಿದ್ದರು.

‘ಈ ಕುರಿತು ಶೀಘ್ರ ಕ್ರಮ ಕೈಗೊಳ್ಳದೇ ಹೋದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಸೂಕ್ತ ನಿರ್ದೇಶನ ಪಡೆಯಬೇಕಾಗುತ್ತದೆ’ ಎಂದು ಎಚ್ಚರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT