ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬವಣೆಗಳಿಗೆ ಕಿವಿಗೊಟ್ಟ ಬಿಎಂಟಿಸಿ

ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಪ್ರಯಾಣಿಕರು l ಕಾಲಮಿತಿಯೊಳಗೆ ಪರಿಹಾರ: ಅಧ್ಯಕ್ಷ ನಂದೀಶ್‌ ರೆಡ್ಡಿ್
Last Updated 8 ಜನವರಿ 2020, 20:11 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಬಡಾವಣೆಗೆ ಬರುತ್ತಿದ್ದ ಬಸ್‌ ಸೇವೆ ದಿಢೀರ್‌ ಸ್ಥಗಿತಗೊಂಡಿದೆ. ಕೊನೆಯ ನಿಲ್ದಾಣದವರೆಗೆ ಬಸ್‌ ಬರುತ್ತಿಲ್ಲ; ಚಾಲಕರು ಬಸ್‌ ಬೇ ಬದಲು ಎಲ್ಲೆಲ್ಲೋ ಬಸ್‌ ನಿಲ್ಲಿಸುತ್ತಾರೆ, ಹಿರಿಯರು ಓಡೋಡಿ ಬಸ್‌ ಹತ್ತುವುದಾದರೂ ಹೇಗೆ... ದಟ್ಟಣೆ ಅವಧಿಯಲ್ಲಿ ಬಸ್‌ ಒಳಗೆ ನಿಲ್ಲುವುದಕ್ಕೂ ಜಾಗ ಇರಲ್ಲ, ದಯವಿಟ್ಟು ಬಸ್‌ ಸಂಖ್ಯೆ ಹೆಚ್ಚಿಸಿ...

ನಗರದ ಬಸ್‌ ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ ಎನ್‌.ಎಸ್‌.ನಂದೀಶ್ ರೆಡ್ಡಿ ಅವರ ಬಳಿ ತೋಡಿಕೊಂಡ ಅಳಲುಗಳಿವು. ‘ಪ್ರಜಾವಾಣಿ’ ವತಿಯಿಂದ ಬುಧವಾರ ಏರ್ಪಡಿಸಿದ್ದ ಫೋನ್‌ ಇನ್‌ ಕಾರ್ಯಕ್ರಮ ಬಸ್‌ ಬಳಕೆದಾರರು ಹಾಗೂ ಬಿಎಂಟಿಸಿ ನಡುವೆ ಸೇತುವೆ ಕಲ್ಪಿಸಿತು.

ಬಸ್‌ ಸೌಕರ್ಯ ಇಲ್ಲದೇ ಅನುಭವಿಸುವ ಬವಣೆಗಳನ್ನು ಬಳಕೆದಾರರು ಎಳೆಎಳೆಯಾಗಿ ಬಿಡಿಸಿಟ್ಟರು. ನಗರದ ಬಸ್‌ ಸಾರಿಗೆ ವ್ಯವಸ್ಥೆಯ ಲೋಪಗಳ ಬಗ್ಗೆ ಬೆಳಕು ಚೆಲ್ಲಿ ಪರಿಹಾರ ಕಂಡುಕೊಳ್ಳುವುದಕ್ಕೆ ಕಾರ್ಯಕ್ರಮ ನೆರವಾಯಿತು.

ಸುಮಾರು ಎರಡು ಗಂಟೆ ಕಾಲ 70ಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದ ನಂದೀಶ್‌ ರೆಡ್ಡಿ, ಒಬ್ಬೊಬ್ಬರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಪರಿಹಾರ ಸೂಚಿಸುವ ಭರವಸೆ ನೀಡಿದರು. ಖಾಸಗಿ ವಾಹನ ಬಳಸುವ ಬದಲು ಬಿಎಂಟಿಸಿ ಬಸ್‌ಗಳನ್ನೇ ಹೆಚ್ಚು ಬಳಸುವಂತೆ ಕೋರಿದರು. ಸೇವೆ ಸುಧಾರಣೆಗೆ ಸಂಸ್ಥೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವಿವರಿಸಿದರು.

ಈ ಹಿಂದೆ ಇದ್ದ ಬಸ್‌ ಸೇವೆಯನ್ನು ರದ್ದುಪಡಿಸಿದ ಬಗ್ಗೆಯೇಹೆಚ್ಚಿನ ಕರೆಗಳು ಬಂದವು. ನಗರದ ಹೊರ ವಲಯಗಳಿಗೆ ಬಸ್‌ ಸೌಕರ್ಯ ಹೆಚ್ಚಿಸುವಂತೆ ಅನೇಕರು ಒತ್ತಾಯಿಸಿದರು. ‘ಕೇವಲ ಒಂದು ವಾರ ಪ್ರಾಯೋಗಿಕವಾಗಿ ಬಸ್‌ ಸಂಚಾರ ಆರಂಭಿಸಿ, ನಷ್ಟದ ಕಾರಣ ನೀಡಿ ಸೇವೆ ನಿಲ್ಲಿಸುವ ಪರಿಪಾಠ ಸರಿಯಲ್ಲ. ಹೆಚ್ಚು ದಿನಗಳವರೆಗೆ ಸೇವೆ ನೀಡಿದರೆ ಪ್ರಯಾಣಿಕರು ತನ್ನಿಂದ ತಾನೇ ಬರುತ್ತಾರೆ’ ಎಂಬ ಸಲಹೆಯನ್ನೂ ನೀಡಿದರು.

ಕೆಲವು ನಿಲ್ದಾಣಗಳ ಬಳಿ ಚಾಲಕರು ಬಸ್‌ ನಿಲ್ಲಿಸದೆಯೇ ಹೋಗುವ ಬಗ್ಗೆಯೂ ಅನೇಕರು ದೂರು ಹೇಳಿದರು. ಪ್ರಯಾಣಿಕರ ನಿಲ್ದಾಣದ ಬಳಿ ಅಕ್ಕಪಕ್ಕದಲ್ಲಿ ಬಸ್‌ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿರುವ ಬಗ್ಗೆಯೂ ಕೆಲವರು ಗಮನ ಸೆಳೆದರು.

ಸಂಸ್ಥೆಯ ನಿರ್ದೇಶಕ (ಭದ್ರತೆ ಮತ್ತು ಜಾಗೃತಿ) ಅನುಪಮ್‌ ಅಗ್ರವಾಲ್‌, ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್‌, ಉಪ ಸಂಚಾರ ವ್ಯವಸ್ಥಾಪಕ ನಾಗರಾಜ್‌, ಸಂಚಾರ ನಿರೀಕ್ಷಕ ಅಶ್ವತ್ಥ್‌ ಭಾಗವಹಿಸಿದರು.

19 ಸಾವಿರ ಸಿಬ್ಬಂದಿಗೆ ಸನ್ನಡತೆ ತರಬೇತಿ

ಪ್ರಯಾಣಿಕರ ಜೊತೆ ನಿರ್ವಾಹಕರು ಮತ್ತು ಚಾಲಕ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಾರೆ ಎಂಬ ಬಗ್ಗೆಯೂ ಕೆಲವು ದೂರುಗಳು ಬಂದವು.

‘ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿ ಅತ್ಯಂತ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರಿಗೂ ಅನೇಕ ಸಮಸ್ಯೆಗಳಿವೆ. ಪ್ರಯಾಣಿಕರ ಜೊತೆ ವರ್ತನೆ ಹೇಗೆ ಉತ್ತಮಪಡಿಸಿಕೊಳ್ಳುವುದು ಹೇಗೆ, ಒತ್ತಡವನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಚಾಲಕರಿಗೆ ಹಾಗೂ ನಿರ್ವಾಹಕ ಸಿಬ್ಬಂದಿಗೆ ತರಬೇತಿ ನೀಡಿದ್ದೇವೆ. ಇದುವರೆಗೆ 19 ಸಾವಿರ ಸಿಬ್ಬಂದಿ ಇದರ ಪ್ರಯೋಜನ ಪಡೆದಿದ್ದಾರೆ’ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್‌ ಮಾಹಿತಿ ನೀಡಿದರು.

‘ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಸಿಬ್ಬಂದಿಗೆ ಯೋಗ ಕಲಿಸುವ ಚಿಂತನೆಯೂ ಇದೆ’ ಎಂದು ನಂದೀಶ್‌ ರೆಡ್ಡಿ ಹೇಳಿದರು.

‘ಗರ್ಭಿಣಿಯರಿಗೆ ಆಸನ ಮೀಸಲಿಡಿ’

‘ಬಸ್‌ಗಳಲ್ಲಿ ಗರ್ಭಿಣಿಯರಿಗೆ ಕಿಟಕಿ ಪಕ್ಕದ ಆಸನ ಮೀಸಲಿಡಬೇಕು. ಇದರಿಂದ ಉದ್ಯೊಗಸ್ಥ ಗರ್ಭಿಣಿಯರಿಗೆ ಅನುಕೂಲವಾಗುತ್ತದೆ’ ಎಂದು ಶ್ರುತಿ ಹಾಸನ್‌ ಸಲಹೆ ನೀಡಿದರು.

‘ಈ ಪ್ರಸ್ತಾವ ಸಂಸ್ಥೆಯ ಮುಂದಿದೆ. ಬಸ್‌ಗಳಲ್ಲಿ ಮಹಿಳೆಯರಿಗೆ ಈಗಾಗಲೇ 16 ಸೀಟುಗಳನ್ನು ಮೀಸಲಿಟ್ಟಿದ್ದೇವೆ. ಗರ್ಭಿಣಿಯರಿಗೆ ಎರಡು ಆಸನ ಮೀಸಲಿಡುವ ಬಗ್ಗೆ ಪರಿಶೀಲಿಸುತ್ತೇವೆ’ ಎಂದು ಅಧ್ಯಕ್ಷರು ಭರವಸೆ ನೀಡಿದರು.

ಪ್ರಯಾಣ ದರ– ತಾರತಮ್ಯ ನಿವಾರಣೆಗೆ ಕ್ರಮ

ಪ್ರಯಾಣ ದರ ನಿಗದಿ ಮಾಡುವಾಗ ತಾರತಮ್ಯ ಆಗಿರುವ ‌‌ಬಗ್ಗೆ ಗಂಗಾಧರ್‌ ಗಮನ ಸೆಳೆದರು.

‘ಕೆಲವು ಕಡೆ 10 ಕಿ.ಮೀ ಪ್ರಯಾಣಕ್ಕೆ ₹ 17 ದರ ಇದ್ದರೆ, ಇನ್ನೂ ಕೆಲವೆಡೆ ಕೇವಲ 4 ಕಿ.ಮೀ.ಗೆ ಅಷ್ಟು ಮೊತ್ತ ವಸೂಲಿ ಮಾಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಹಂತಗಳ ಆಧಾರದಲ್ಲಿ ಟಿಕೆಟ್‌ ದರ ನಿಗದಿ ಮಾಡುವುದರಿಂದ ಈ ರೀತಿ ಆಗಿರುವ ಸಾಧ್ಯತೆ ಇದೆ. ಇದನ್ನು ಸರಿಪಡಿಸುತ್ತೇವೆ’ ಎಂದು ನಂದೀಶ್‌ ರೆಡ್ಡಿ ತಿಳಿಸಿದರು.

‘ನನ್ನದಲ್ಲದ ತಪ್ಪಿಗೆ ದಂಡ ಕಟ್ಟಿಸಿದರು’

‘ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ ಟಿಕೆಟ್‌ ನೀಡಿರಲಿಲ್ಲ. ಮುಂದಿನ ನಿಲ್ದಾಣದ ಬಳಿ ಬಸ್‌ ಹತ್ತಿದ ಸಹಾಯಕ ಸಂಚಾರ ನಿರೀಕ್ಷಕರು ಟಿಕೆಟ್‌ ತಪಾಸಣೆ ನಡೆಸಿದರು. ಚಿಲ್ಲರೆ ಇಲ್ಲದ ಕಾರಣಕ್ಕೆ ನಿರ್ವಾಹಕ ಟಿಕೆಟ್‌ ನೀಡಿಲ್ಲ ಎಂದರೂ ಕೇಳಲಿಲ್ಲ. ಹಿರಿಯ ನಾಗರಿಕ ಎಂಬುದನ್ನೂ ನೋಡದೇ ನನ್ನನ್ನು ಯಲಹಂಕ ಠಾಣೆಗೆ ಕರೆದೊಯ್ದರು. ನನ್ನದಲ್ಲದ ತಪ್ಪಿಗೆ ದಂಡ ಕಟ್ಟಬೇಕಾಯಿತು. ಸಿಬ್ಬಂದಿಯ ಜಬರದಸ್ತ್‌ ವರ್ತನೆ ಬೇಸರ ತಂದಿದೆ’ ಎಂದು ರಾಮಯ್ಯ ಎಂಬುವರು ನೋವು ಹೇಳಿಕೊಂಡರು.

‘ನನ್ನನ್ನು ಮಾತ್ರವಲ್ಲ ಬಸ್‌ನಲ್ಲಿದ್ದ ಇನ್ನೊಬ್ಬ ಮಹಿಳೆಯ ಜತೆಯೂ ಸಿಬ್ಬಮದಿ ಅನುಚಿತವಾಗಿ ವರ್ತಿಸಿದರು. ಆ ಮಹಿಳೆ ಕಣ್ಣೀರಿಟ್ಟುಕೊಂಡು ಹೋದರು. ಪ್ರಯಾಣಿಕರ ಜತೆ ಸೌಜನ್ಯದಿಂದ ವರ್ತಿಸುವಂತೆ ಸಿಬ್ಬಂದಿಗೆ ಬುದ್ಧಿ ಹೇಳಿ. ನನ್ನ ಜೊತೆ ಅನುಚಿತ ವರ್ತನೆ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಕೇಳಿಕೊಂಡರು.

ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಂದೀಶ್‌ ರೆಡ್ಡಿ, ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

‘ಮುಂದೆಂದೂ ಇಂಥ ಘಟನೆ ಮರುಕಳಿಸದು’

ಮಾಗಡಿ ರಸ್ತೆಯಲ್ಲಿ ಸೋಮವಾರ ಸಂಭವಿಸಿದ ಅಪಘಾತದಿಂದ ಇಬ್ಬರು ಸತ್ತ ಬಗ್ಗೆ ಪ್ರತಿಕ್ರಿಯಿಸಿದ ನಂದೀಶ ರೆಡ್ಡಿ, ‘ಮುಂದೆಂದೂ ಇಂತಹ ಘಟನೆ ಮರುಕಳಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪ್ರಯಾಣಿಕರ ಸುರಕ್ಷತೆ ಬಗ್ಗೆ ಸಂಸ್ಥೆ ಸಾಕಷ್ಟು ಎಚ್ಚರ ವಹಿಸುತ್ತದೆ. ಆದರೂ, ಆಕಸ್ಮಿಕವಾಗಿ ಈ ದುರ್ಘಟನೆ ಸಂಭವಿಸಿದೆ. ಎಲ್ಲಿ ಲೋಪ ಆಗಿದೆ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ಅಂಗವಿಕಲರ ಪಾಸ್‌: ಅಲೆದಾಡಿಸದಿರಿ

ಅಂಗವಿಕಲದ ಪಾಸ್‌ ಬಗ್ಗೆ ಅನಗತ್ಯ ಗೊಂದಲ ಮೂಡಿಸಲಾಗಿದೆ ಎಂದು ಪ್ರಯಾಣಿಕ ಸತ್ಯನಾರಾಯಣ ದೂರಿದರು.

‘ನನ್ನ ಮಗ ಅಂಗವಿಕಲ. ಪಾಸ್‌ ಅವಧಿ ಮುಗದಿದೆ ಎಂದು ನಿರ್ವಾಹಕರೊಬ್ಬರು ಅರ್ಧದಾರಿಯಲ್ಲೇ ಆತನನ್ನು ಬಸ್‌ನಿಂದ ಕೆಳಗಿಳಿಸಿದ್ದರು. ಪಾಸ್ ನವೀಕರಿಸಲು ಶಾಂತಿನಗರ ಡಿಪೊಗೆ ಹೋದಾಗ, ಫೆ. 29ರ ವರೆಗೆ ಅದರ ಅವಧಿ ವಿಸ್ತರಿಸಲಾಗಿದೆ ಎಂದು ಹೇಳಿ ಪಾಸ್‌ ಮೇಲೆ ಸೀಲ್‌ ಹಾಕಿ ಕೊಟ್ಟರು. ಈಗಲೂ ಅನೇಕ ಬಸ್‌ಗಳ ನಿರ್ವಾಹಕರು ಹಳೆ ಪಾಸ್‌ ಒಪ್ಪುತ್ತಿಲ್ಲ. ನನಗೀಗ 64 ವರ್ಷ. ಅಂಗವಿಕಲ ಮಗನ ಸಲುವಾಗಿ ಓಡಾಡಬೇಕಾದ ಸ್ಥಿತಿ ನನ್ನದು. ದಯವಿಟ್ಟು ಅಂಗವಿಕಲರನ್ನು ಪಾಸ್‌ ಸಲುವಾಗಿ ಅಲೆದಾಡಿಸದಿರಿ’ ಎಂದು ಪೋಷಕರೊಬ್ಬರು ಮನವಿ ಮಾಡಿದರು.

‘ನಿಮಗೆ ಈ ರೀತಿ ಸಮಸ್ಯೆ ಆಗಿದ್ದಕ್ಕೆ ವಿಷಾದವಿದೆ. ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೇ ಬಂದು ಸಮಸ್ಯೆ ಇತ್ಯರ್ಥಪಡಿಸಲಿದ್ದಾರೆ’ ಎಂದು ನಂದೀಶ ರೆಡ್ಡಿ ಆಶ್ವಾಸನೆ ನೀಡಿದರು.

ಪ್ರಮುಖ ಸಲಹೆಗಳು

*ಬಸ್‌ಗಳಲ್ಲಿ ಶುಚಿತ್ವ ಕಾಪಾಡುವುದಕ್ಕೆ ಮಹತ್ವ ನೀಡಬೇಕು

* ಬಸ್‌ನ ಎಲ್‌ಸಿಡಿ ಬೋರ್ಡ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು

* ಬಸ್‌ಗಳು ಸಕಾಲಕ್ಕೆ ಬರುವಂತೆ ನೊಡಿಕೊಳ್ಳಬೇಕು

* ಅನಿಯಮಿತವಾಗಿ ಸಂಚಾರ ಮಾರ್ಗ ಬದಲಿಸುವುದನ್ನು ತಪ್ಪಿಸಬೇಕು

* ಪ್ರಯಾಣಿಕರ ತಂಗುದಾಣಗಳ ಬಳಿಯ ಬಸ್‌ ಬೇಗಳಲ್ಲೇ ಬಸ್‌ ನಿಲ್ಲಿಸುವಂತೆ ಕ್ರಮಕೈಗೊಳ್ಳಬೇಕು

* ನಿಲ್ದಾಣಗಳ ಬಳಿ ಅಕ್ಕ ಪಕ್ಕದಲ್ಲಿ ಬಸ್‌ ನಿಲ್ಲಿಸದಂತೆ ಚಾಲಕರಿಗೆ ಸೂಚನೆ ನೀಡಿ

***

* 6460 -ನಗರದಲ್ಲಿ ಕಾರ್ಯಾಚರಿಸುತ್ತಿರುವ ಬಿಎಂಟಿಸಿ ಬಸ್‌ಗಳು

* 33,504 -ಬಿಎಂಟಿಸಿಯಲ್ಲಿರುವ ಸಿಬ್ಬಂದಿ

* 40 ಲಕ್ಷ - ನಿತ್ಯ ಬಿಎಂಟಿಸಿ ಬಸ್‌ ಬಳಸುವ ಪ್ರಯಾಣಿಕರ ಸರಾಸರಿ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT