ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಚಾಲಕರಿಗೆ ‘ಸಂಚಾರ ನಿಯಮ’ ಪಾಠ

ಬಸ್‌ಗಳಿಂದ ಸಂಭವಿಸುವ ಅಪಘಾತ ನಿಯಂತ್ರಣಕ್ಕೆ ಕ್ರಮ * ಪ್ರತಿದಿನ 50 ಸಾರಥಿಗಳಿಗೆ ತರಬೇತಿ
Published 18 ಮೇ 2024, 20:13 IST
Last Updated 18 ಮೇ 2024, 20:13 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ಬಸ್‌ಗಳ ಕೆಲ ಚಾಲಕರ ನಿರ್ಲಕ್ಷ್ಯ ಹಾಗೂ ಅತೀ ವೇಗದ ಚಾಲನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಅಪಘಾತಗಳನ್ನು ನಿಯಂತ್ರಿಸಲು ಮುಂದಾಗಿರುವ ಸಂಚಾರ ಪೊಲೀಸರು, ಬಿಎಂಟಿಸಿ ಚಾಲಕರಿಗೆ ಸಂಚಾರ ನಿಯಮಗಳ ಪಾಠ ಮಾಡುತ್ತಿದ್ದಾರೆ.

ಬಿಎಂಟಿಸಿ ಚಾಲಕರನ್ನು ಸಂಚಾರ ನಿರ್ವಹಣೆ ಕೇಂದ್ರಕ್ಕೆ (ಟಿಎಂಸಿ) ಆಹ್ವಾನಿಸುತ್ತಿರುವ ಪೊಲೀಸರು, ಪರಿಣಿತರಿಂದ ತರಬೇತಿ ಕೊಡಿಸುತ್ತಿದ್ದಾರೆ. ಸಂಚಾರ ನಿಯಮ ಪಾಲನೆ, ರಸ್ತೆ ಸುರಕ್ಷತೆ, ಅಪಘಾತಕ್ಕೆ ಕಾರಣಗಳು, ಅ‍ಪಘಾತ ಸಂಭವಿಸದಂತೆ ಚಾಲನೆ ಮಾಡುವುದು ಹೇಗೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ವಿಡಿಯೊ ಪ್ರಾತ್ಯಕ್ಷಿಕೆ ಸಮೇತ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ 50 ಚಾಲಕರು ತರಬೇತಿಗೆ ಹಾಜರಾಗುತ್ತಿದ್ದಾರೆ. ಇದುವರೆಗೂ ಸುಮಾರು 6 ಸಾವಿರ ಚಾಲಕರು ತರಬೇತಿ ಪಡೆದುಕೊಂಡಿದ್ದಾರೆ.

‘ಬಿಎಂಟಿಸಿ ಚಾಲಕರು, ಅತೀ ವೇಗದಲ್ಲಿ ಬಸ್ ಚಲಾಯಿಸುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಗಳ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಹಲವು ಅಪಘಾತಗಳಿಗೆ ಬಿಎಂಟಿಸಿ ಚಾಲಕರು ಕಾರಣವೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಎಂಟಿಸಿ ಬಸ್‌ಗಳಿಂದ ಸಂಭವಿಸಿದ್ದ ಅಪಘಾತಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗಿತ್ತು. ಚಾಲಕರು, ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರಿಂದ ಅಪಘಾತಗಳಾಗಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಬಿಎಂಟಿಸಿ ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು. ಇದಾದ ನಂತರವೇ, ಚಾಲಕರಿಗೆ ತರಬೇತಿ ನೀಡುವ ಕೆಲಸ ಆರಂಭಿಸಲಾಗಿದೆ’ ಎಂದು ಹೇಳಿದರು.

ಅಪಘಾತದ ವಿಡಿಯೊ ಪ್ರದರ್ಶನ: ‘ಬಿಎಂಟಿಸಿ ಬಸ್‌ಗಳಿಂದ ಸಂಭವಿಸಿದ್ದ ಕೆಲ ಅಪಘಾತಗಳ ದೃಶ್ಯಗಳು, ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಂಥ ದೃಶ್ಯಗಳನ್ನು ಒಟ್ಟುಗೂಡಿಸಿ ವಿಡಿಯೊ ಸಿದ್ಧಪಡಿಸಲಾಗಿದ್ದು, ಇದನ್ನೇ ಚಾಲಕರಿಗೆ ತೋರಿಸಲಾಗುತ್ತಿದೆ. ಅಪಘಾತಕ್ಕೆ ಕಾರಣವಾದ ಅಂಶಗಳನ್ನು ಮನದಟ್ಟು ಮಾಡಿಕೊಡಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ವೃದ್ಧರು, ಮಹಿಳೆಯರು, ಮಕ್ಕಳು ರಸ್ತೆ ದಾಟುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವಂತೆ ಚಾಲಕರಿಗೆ ತಿಳಿಸಲಾಗುತ್ತಿದೆ. ಸಂಚಾರ ನಿಯಮಗಳ ಪಾಲನೆ, ರಸ್ತೆ ಸುರಕ್ಷತಾ ಕ್ರಮಗಳ ಜಾರಿ, ಸಾರ್ವಜನಿಕರ ಬಗ್ಗೆ ಕಾಳಜಿ ಹಾಗೂ ಇತರೆ ವಿಷಯಗಳನ್ನು ಚಾಲಕರಿಗೆ ತಿಳಿಸಲಾಗುತ್ತಿದೆ’ ಎಂದರು.

ಮೃತಪಟ್ಟವರ ಕುಟುಂಬದವರ ಯಾತನೆ: ‘ಬಿಎಂಟಿಸಿ ಬಸ್‌ಗಳಿಂದ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರ ಜೀವನದ ಬಗ್ಗೆ ಚಾಲಕರಿಗೆ ತಿಳಿಸಲಾಗುತ್ತಿದೆ. ವ್ಯಕ್ತಿ ಮೃತಪಟ್ಟ ನಂತರ, ಕುಟುಂಬದವರು ಅನುಭವಿಸಿದ ಸಂಕಟಗಳು ಹಾಗೂ ಇತರೆ ಸಮಸ್ಯೆಗಳನ್ನು ಪುರಾವೆಗಳ ಸಮೇತ ತೋರಿಸಲಾಗುತ್ತಿದೆ. ಇದು ಚಾಲಕರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ‘ಅಪಘಾತ ಉಂಟಾಗದಂತೆ ಬಸ್ ಚಲಾಯಿಸುವೆ’ ಎಂಬುದಾಗಿ ಚಾಲಕರು ಪ್ರತಿಜ್ಞೆ ಸಹ ಮಾಡುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ನಗರದಲ್ಲಿ ನಿತ್ಯವೂ ಲಕ್ಷಾಂತರ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಸಾರ್ವಜನಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು ಬಿಎಂಟಿಸಿ ಬಸ್‌ಗಳ ಪಾತ್ರ ದೊಡ್ಡದಿದೆ. ಇತರೆ ವಾಹನಗಳ ಜೊತೆ ಪೈಪೋಟಿಗೆ ಇಳಿಯದೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವಂತೆ ಚಾಲಕರಿಗೆ ತಿಳಿಸಲಾಗುತ್ತಿದೆ. ಜೊತೆಗೆ, ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸುವಂತೆಯೂ ತಿಳಿವಳಿಕೆ ಮೂಡಿಸಲಾಗುತ್ತಿದೆ’ ಎಂದರು.

ಸಂಚಾರ ನಿಯಮ ಪಾಲನೆ ಬಗ್ಗೆ ಬಿಎಂಟಿಸಿ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ. ಬಿಎಂಟಿಸಿ ಬಸ್‌ಗಳಿಂದ ಸಂಭವಿಸುತ್ತಿದ್ದ ಅಪಘಾತಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ
ಎಂ.ಎನ್. ಅನುಚೇತ್ ಜಂಟಿ ಪೊಲೀಸ್ ಕಮಿಷನರ್ (ಸಂಚಾರ)

‘ಸಂಚಾರ ನಿಯಮಗಳ ಅರಿವು; ಚಾಲಕರ ಪ್ರತಿಜ್ಞೆ’

‘ಬಹುಪಾಲು ಚಾಲಕರಿಗೆ ಸಂಚಾರ ನಿಯಮಗಳ ಅರಿವು ಇರಲಿಲ್ಲ. ಸಿಗ್ನಲ್ ಜಂಪ್‌ ಮೊಬೈಲ್‌ನಲ್ಲಿ ಮಾತನಾಡುತ್ತ ಚಾಲನೆ ಹಾಗೂ ಇತರೆ ನಿಯಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಲ್ಲಂಘನೆ ಮಾಡುತ್ತಿದ್ದರು. ಪೊಲೀಸರು ತರಬೇತಿ ನೀಡಿದ ನಂತರ ನಿಯಮ ಉಲ್ಲಂಘನೆ ಪ್ರಮಾಣ ಕಡಿಮೆಯಾಗಿದೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ತರಬೇತಿ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಅಪಘಾತಗಳ ವಿಡಿಯೊ ಸಮೇತ ಪೊಲೀಸರು ವಿವರಣೆ ನೀಡುತ್ತಿದ್ದಾರೆ. ಇದು ಚಾಲಕರ ಮನಸ್ಸಿಗೆ ತಟ್ಟುತ್ತಿದೆ. ಅಪಘಾತದಲ್ಲಿ ಮೃತಪಟ್ಟವರ ಮನೆಯ ಪರಿಸ್ಥಿತಿ ಬಗ್ಗೆ ತಿಳಿದು ಚಾಲಕರು ಮರುಕಪಡುತ್ತಿದ್ದಾರೆ. ‘ಸಂಚಾರ ನಿಯಮ ಉಲ್ಲಂಘಿಸುವುದಿಲ್ಲ. ಅಪಘಾತಕ್ಕೆ ಆಸ್ಪದ ನೀಡುವುದಿಲ್ಲ’ ಎಂಬುದಾಗಿ ಚಾಲಕರು ಪ್ರತಿಜ್ಞೆ ಸ್ವೀಕರಿಸುತ್ತಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಕಡಿಮೆಯಾಗುತ್ತಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT