ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸಕ್ಕೆ ಬರಲು ಸಿಬ್ಬಂದಿ ಪೈಪೋಟಿ

ಗೈರಾದ ನೌಕರರ ಖಾತೆಯಲ್ಲಿ ರಜೆ ಇಲ್ಲದೇ ಇದ್ದರೆ ವೇತನ ಕಡಿತಕ್ಕೆ ಬಿಎಂಟಿಸಿ ನಿರ್ಧಾರ
Last Updated 3 ಜೂನ್ 2020, 22:22 IST
ಅಕ್ಷರ ಗಾತ್ರ

ಬೆಂಗಳೂರು: ಮೇ 18ರ ನಂತರ ಕೆಲಸಕ್ಕೆ ಗೈರಾದ ಬಿಎಂಟಿಸಿ ನೌಕರರ ಸಂಬಳ ಕಡಿತಗೊಳ್ಳುವ ಆತಂಕ ಎದುರಾಗಿದ್ದು,ಕೆಲಸಕ್ಕೆ ಹಾಜರಾಗಲು ಚಾಲಕ ಮತ್ತು ನಿರ್ವಾಹಕರು ಪೈಪೋಟಿಯಲ್ಲಿ ಮುಗಿ ಬಿದ್ದಿದ್ದಾರೆ.

ಮೇ 18ರಿಂದ ಬಸ್ ಸಂಚಾರವನ್ನು ಬಿಎಂಟಿಸಿ ಆರಂಭಿಸಿತು. ₹70 ಪಾವತಿಸಿ ದಿನದ ಪಾಸ್ ಪಡೆದೇ ಪ್ರಯಾಣ ಮಾಡಬೇಕಾದ ವ್ಯವಸ್ಥೆ ಇದ್ದಾಗ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಟಿಕೆಟ್ ವಿತರಣೆ ಆರಂಭಿಸಿದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಈ ನಡುವೆ, 18ರ ನಂತರ ಕರ್ತವ್ಯಕ್ಕೆ ಬಾರದ ಸಿಬ್ಬಂದಿಯ ಖಾತೆಯಲ್ಲಿ ರಜೆಗಳು ಉಳಿದಿಲ್ಲದಿದ್ದರೆ ಗೈರು ಹಾಜರಿ ಎಂದು ಪರಿಗಣಿಸಿ ಸಂಬಳ ಕಡಿತ ಮಾಡಲು ಬಿಎಂಟಿಸಿ ನಿರ್ಧರಿಸಿದೆ. ಬಹುತೇಕ ನೌಕರರ ಖಾತೆಯಲ್ಲಿ ವೈದ್ಯಕೀಯ ರಜೆಗಳು ಉಳಿದಿಲ್ಲ. ಏಕೆಂದರೆ, ಲಾಕ್‌ಡೌನ್ ಆರಂಭವಾಗಿ ಬಸ್ ಸಂಚಾರ ಸ್ಥಗಿತಗೊಂಡ ದಿನದಿಂದಲೂ ಈ ರಜೆಗಳನ್ನು ನೌಕರರ ಖಾತೆಯಿಂದ ಕಡಿತಗೊಳಿಸಲಾಗಿದೆ.ರಜೆಗಳು ಉಳಿಯದಿರುವ ಕಾರಣ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಯ ವೇತನ ಕಡಿತವಾಗಲಿದೆ.

ಸದ್ಯ ಘಟಕಕ್ಕೆ ಹಾಜರಾಗಿದ್ದರೂ ಕರ್ತವ್ಯ ನಿರ್ವಹಿಸಲು ಎಲ್ಲರಿಗೂ ಅವಕಾಶ ಸಿಗುತ್ತಿಲ್ಲ.ಅವರ ಖಾತೆಯಲ್ಲಿ ರಜೆ ಇಲ್ಲದಿದ್ದರೆ ಗೈರು ಹಾಜರಿ ಎಂದು ಪರಿಗಣಿಸಲಾಗುತ್ತಿದೆ. ಇದೇ ಕಾರಣಕ್ಕಾಗಿ ಕೆಲ ನೌಕರರು ಘಟಕದಲ್ಲೇ ಉಳಿದು ಕೆಲಸಕ್ಕೆ ಹಾಜರಾಗಲು ಪೈಪೋಟಿ ನಡೆಸುತ್ತಿದ್ದಾರೆ.

‘ಈ ಸ್ಥಿತಿ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಇದೆ. ನೌಕರರ ಸಂಬಳ ಕಡಿತ ಆಗದಂತೆ ಕ್ರಮ ಕೈಗೊಳ್ಳಲು ‌ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಮನವಿ ಮಾಡಿದ್ದೇವೆ. ಘಟಕಕ್ಕೆ ಬಂದು ಸಹಿ ಹಾಕಿದ್ದರೆ ಅವರಿಗೆ ಹಾಜರಾತಿ ನೀಡಬೇಕು. ಬಾರದಿದ್ದವರಿಗೆ ಅವರ ಖಾತೆಯಲ್ಲಿನ ರಜೆ ಕಡಿತ ಮಾಡಿಕೊಂಡು ಪೂರ್ಣಪ್ರಮಾಣದ ವೇತನ ನೀಡಬೇಕು’ ಎಂದು ಕರ್ನಾಟಕ ಸಾರಿಗೆ ಸಂಸ್ಥೆಗಳ ನೌಕರರ ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ ಒತ್ತಾಯಿಸಿದರು.

ನೋಟಿಸ್ ನೀಡಲಾಗಿತ್ತು: ಸಿ.ಶಿಖಾ
‘ಮೇ 18ರಿಂದ ಕೆಲಸಕ್ಕೆ ಹಾಜರಾಗುವಂತೆ ಮೇ 15ರಂದೇ ಎಲ್ಲಾ ನೌಕರರಿಗೆ ನೋಟಿಸ್ ನೀಡಲಾಗಿತ್ತು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ತಿಳಿಸಿದರು. ‘ಮೇ 18ರ ನಂತರವೂ ಕೆಲಸಕ್ಕೆ ಬಾರದ ನೌಕರರ ಖಾತೆಯಲ್ಲಿ ರಜೆ ಇದ್ದರೆ ಕಡಿತ ಮಾಡಿಕೊಳ್ಳಲಾಗುವುದು. ಇಲ್ಲದಿದ್ದರೆ ಗೈರು ಹಾಜರಿ ಎಂದು ಪರಿಗಣಿಸಲಾಗುವುದು. ಘಟಕಗಳಿಗೆ ಬಂದವರಿಗೆ ಕೆಲಸ ನಿರ್ವಹಿಸಲು ಅವಕಾಶ ಸಿಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT