ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಸಿಬ್ಬಂದಿಯಲ್ಲಿ ಹೆಚ್ಚುತ್ತಿದೆ ಸೋಂಕು

*ನೌಕರರಿಗೆ 12 ತಾಸು ಕೆಲಸ *ಮೊದಲಿನಂತೆ ಪಾಳಿ ವ್ಯವಸ್ಥೆ ತರಲು ಒತ್ತಾಯ
Last Updated 12 ಅಕ್ಟೋಬರ್ 2020, 7:58 IST
ಅಕ್ಷರ ಗಾತ್ರ

ಬೆಂಗಳೂರು: ದಿನಕ್ಕೆ 12 ತಾಸು ಕೆಲಸ,ಕುಡಿಯಲು ನೀರಿನ ವ್ಯವಸ್ಥೆ ಇಲ್ಲ, ವಿಶ್ರಾಂತಿಗೆ ಕೋಣೆ ಇಲ್ಲ. ಹೆಚ್ಚು ಬಸ್‌ಗಳು ಸಂಚರಿಸುತ್ತಿಲ್ಲ. ಆದರೆ, ಬಸ್‌ನಲ್ಲಿ ಜನರು ನಿಂತು ಪ್ರಯಾಣಿಸಿದರೆ ನಿರ್ವಾಹಕರು, ಚಾಲಕರಿಗೆ ಅಮಾನತು ಶಿಕ್ಷೆ...

ತಮಗೆ, ಮನೆ ಮಂದಿಗೆ ಸೋಂಕು ಹರಡುವ ಆತಂಕದಲ್ಲಿಯೂ ನಿತ್ಯ ಕೆಲಸ ಮಾಡುತ್ತಿರುವ ನಿರ್ವಾಹಕರು–ಚಾಲಕರು, ಈ ಮೊದಲಿನಂತೆಯೇ ಪಾಳಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ.

‘ಮೊದಲು ಎರಡು–ಮೂರು ಪಾಳಿ ಇತ್ತು. ಈಗ ಒಂದೇ ಪಾಳಿ ಇದ್ದು, ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಕೆಲಸ ಮಾಡಬೇಕಾಗಿದೆ. ಹೆಚ್ಚುವರಿ ಭತ್ಯೆಯೂ ಕೊಡುವುದಿಲ್ಲ. ಕರ್ತವ್ಯಕ್ಕೆ ಬರಲು ಬೆಳಿಗ್ಗೆ 6.30ಕ್ಕೆ ಮನೆ ಬಿಡಬೇಕು. ಹೋಗುವುದು ರಾತ್ರಿ 8 ಆಗುತ್ತದೆ. ಸುಮಾರು 12ರಿಂದ 14 ತಾಸು ಹೊರಗಡೆಯೇ ಇರಬೇಕಾಗುತ್ತದೆ. ಸೋಂಕು ತಗುಲುವ ಆತಂಕ ಹೆಚ್ಚಾಗುತ್ತಿದೆ’ ಎಂದು ನಿರ್ವಾಹಕ ಶ್ರೀನಿವಾಸ ಅಳಲು ತೋಡಿಕೊಂಡರು.

‘ಸರ್ಕಾರ ಒಂದು ಆದೇಶ ನೀಡಿದರೆ, ಅಧಿಕಾರಿಗಳೇ ಮತ್ತೊಂದು ಮಾಡುತ್ತಾರೆ. ಬಸ್‌ಗಳ ಸಂಖ್ಯೆ ಕಡಿಮೆ ಮಾಡಿದ್ದಾರೆ. ದಟ್ಟಣೆ ಸಂದರ್ಭದಲ್ಲಿ ಜನ ಹೆಚ್ಚಾಗುತ್ತಿದ್ದಾರೆ. ಹೆಚ್ಚು ಜನ ಹತ್ತಬೇಡಿ ಎಂದು ಹೇಳಿದರೂ ಕೇಳುವುದಿಲ್ಲ. ಬಸ್‌ನಲ್ಲಿ ಪ್ರಯಾಣಿಕರು ನಿಂತು ಪ್ರಯಾಣಿಸಿದರೆ ನಿರ್ವಾಹಕರು–ಚಾಲಕರನ್ನು ಅಮಾನತು ಮಾಡಲಾಗುತ್ತಿದೆ. ಕೆಲವರಿಗೆ ನೋಟಿಸ್ ನೀಡಲಾಗಿದೆ’ ಎಂದು ನಿರ್ವಾಹಕರೊಬ್ಬರು ಹೇಳಿದರು.

‘ಬಹಳಷ್ಟು ಉದ್ಯೋಗಿಗಳಿಗೆ ಬಲವಂತದ ರಜೆ ಕೊಟ್ಟು ಕಳುಹಿಸಲಾಗಿದೆ. ವೆಚ್ಚ ಕಡಿಮೆ ಮಾಡಲು ಈ ಕ್ರಮ ಅನಿವಾರ್ಯ ಎನ್ನುತ್ತಾರೆ. ಆದರೆ, ನಿರಂತರ ಕೆಲಸದಿಂದ ಬಹಳಷ್ಟು ಸಿಬ್ಬಂದಿಗೆ ಮತ್ತು ಅವರ ಮನೆಯವರಿಗೆ ಸೋಂಕು ತಗುಲುತ್ತಿದೆ’ ಎಂದರು.

‘ಬಿಎಂಟಿಸಿಯಲ್ಲಿ 20 ನೌಕರರು ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ₹30 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದ ಸರ್ಕಾರ, ಈವರೆಗೆ ಯಾವುದೇ ನೆರವು ಘೋಷಿಸಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT