ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಎಸ್’ ಬಾಂಬ್ ಸ್ಫೋಟ ಬೆದರಿಕೆ ಟ್ವೀಟ್

Last Updated 28 ಆಗಸ್ಟ್ 2020, 21:26 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಸ್ ಉಗ್ರಗಾಮಿ ಸಂಘಟನೆ ಸಹಾಯದಿಂದ ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟಿಸುತ್ತೇನೆ’ ಎಂದು ವ್ಯಕ್ತಿಯೊಬ್ಬರು ಬೆದರಿಕೆ ಟ್ವೀಟ್‌ ಮಾಡಿದ್ದು, ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳುವಂತೆ ಕೇಂದ್ರ ಗುಪ್ತದಳದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ರಾಜ್ಯದ ಎಲ್ಲ ಕಮಿಷನರ್‌ಗಳು, ಎಸ್ಪಿಗಳು, ರೈಲ್ವೆ ಹಾಗೂ ವಿಮಾನ ನಿಲ್ದಾಣದ ರಕ್ಷಣಾ ಪಡೆಗಳ ಅಧಿಕಾರಿಗಳಿಗೆ ತುರ್ತು ಸಂದೇಶ ಕಳುಹಿಸಲಾಗಿದೆ.

ಕಾಕಿನಾಡ್‌ ಕೆವಿಸಿಯ ಸಿಇಒ ಹಾಗೂ ಸಂಸ್ಥಾಪಕ ಎನ್ನಲಾದ ಶ್ರೀಪಾದ್ ಎಂಬಾತ ನಿರ್ವಹಣೆ ಮಾಡುತ್ತಿರುವ @ಗುರುಕೇರಳ_ರಾಮೇಶ್ವರ ಟ್ವೀಟರ್ ಖಾತೆಯಲ್ಲಿ ಬೆದರಿಕೆ ಟ್ವೀಟ್ ಇದೆ. ‘ನಾನು ಬೆಂಗಳೂರಿಗೆ ಭೇಟಿ ನೀಡುತ್ತಿದ್ದೇನೆ. ಬೆಂಗಳೂರು ಮೆಟ್ರೊ ಹಾಗೂ ಯಶವಂತಪುರದ ರೈಲ್ವೆ ನಿಲ್ದಾಣಗಳಿಗೆ ವಾರದೊಳಗೆ ಸೂಕ್ತ ಭದ್ರತೆ ಕೈಗೊಳ್ಳಿ. ಐಎಸ್‌ ಸಹಾಯದಿಂದ ಬಾಂಬ್‌ ಸ್ಫೋಟಿಸಿ ವಿಮಾನ ಹಾಗೂ ರೈಲ್ವೆಗಳನ್ನು ಸುಟ್ಟು ಹಾಕುತ್ತೇನೆ’ ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ. ಇದನ್ನೇ ಗುಪ್ತದಳದ ಅಧಿಕಾರಿಗಳು ತುರ್ತು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

‘ಯಶವಂತಪುರ, ಕೇಂದ್ರ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿ’ ಎಂದೂ ಎಚ್ಚರಿಕೆ ನೀಡಿದ್ದಾರೆ. ಅದರನ್ವಯ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಭದ್ರತೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಗಲಭೆಗೂ ನಂಟು?: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‌ಭೈರಸಂದ್ರದಲ್ಲಿ ನಡೆದ ಗಲಭೆಗೂ ಉಗ್ರ ಸಂಘಟನೆ ನಂಟು ಇರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಇಂಥ ಸಂದರ್ಭದಲ್ಲೇ ಬೆದರಿಕೆ ಟ್ವೀಟ್‌ ಎಲ್ಲೆಡೆ ಹರಿದಾಡುತ್ತಿದೆ. ಗಲಭೆ ಪ್ರಕರಣಗಳ ಆರೋಪಿಗಳು ಹಾಗೂ ಅವರನ್ನು ಭೇಟಿಯಾಗುವ ಪ್ರತಿಯೊಬ್ಬರ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಸೂಕ್ಷ್ಮ ಪ್ರದೇಶಗಳು ಹೆಚ್ಚಿರುವ ಪೂರ್ವ ಹಾಗೂ ಪಶ್ಚಿಮ ವಿಭಾಗದಲ್ಲಿ ಪೊಲೀಸರು ಶುಕ್ರವಾರ ಗಸ್ತು ತಿರುಗಿದರು. ಕ್ಷಿಪ್ರ ಕಾರ್ಯಪಡೆ ಹಾಗೂ ಕೆಎಸ್‌ಆರ್‌ಪಿ ಪೊಲೀಸರು ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT