ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬರವಣಿಗೆ ಪ್ರಶಸ್ತಿಗೆ ಮೀಸಲಾಗಿರಬಾರದು’

ಒಡಿಯಾ ಕಥೆಗಾರ್ತಿ ಪರಮಿತ ಸತ್ಪತಿ ತ್ರಿಪಾಠಿ ಅಭಿಮತ
Published 15 ಆಗಸ್ಟ್ 2023, 16:10 IST
Last Updated 15 ಆಗಸ್ಟ್ 2023, 16:10 IST
ಅಕ್ಷರ ಗಾತ್ರ

ಬೆಂಗಳೂರು: ‘ಬರವಣಿಗೆ ಪ್ರಶಸ್ತಿಗಳಿಗೆ ಮಾತ್ರ ಮೀಸಲಾಗಿರಬಾರದು. ಅದು ನಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಪಡಿಸುವ ಒಂದು ಮಾಧ್ಯಮವಾಗಿ ಹೊರಹೊಮ್ಮಬೇಕು’ ಎಂದು ಒಡಿಯಾ ಕಥೆಗಾರ್ತಿ ಹಾಗೂ ಆದಾಯ ತೆರಿಗೆ ಆಯುಕ್ತೆ ಪರಮಿತ ಸತ್ಪತಿ ತ್ರಿಪಾಠಿ ತಿಳಿಸಿದರು. 

ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾಸ್ಪರ್ಧೆ ಮತ್ತು ಕಾದಂಬರಿ ಪುರಸ್ಕಾರ ಸಮಾರಂಭದ ಭಾಗವಾಗಿ ನಗರದಲ್ಲಿ ಮಂಗಳವಾರ ನಡೆದ ಸಂವಾದದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಇತ್ತೀಚೆಗೆ ಸಾಹಿತ್ಯ ಕೃತಿಗಳ ಅನುವಾದ ಹೆಚ್ಚುತ್ತಿದೆ. ಆದರೆ, ಹೆಚ್ಚಿನ ಅನುವಾದಗಳು ಇಂಗ್ಲಿಷ್‌ನಿಂದ ಬೇರೆ ಭಾಷೆಗಳಿಗೆ ಆಗುತ್ತಿವೆ. ಒಡಿಯಾ ಅಥವಾ ಇತರೆ ಭಾರತೀಯ ಭಾಷೆಗಳಿಂದ ಕೃತಿಗಳ ಅನುವಾದಗಳು ಅಷ್ಟಾಗಿ ನಡೆಯುತ್ತಿಲ್ಲ. ಅನುವಾದ ಕ್ಷೇತ್ರವು ಬೇರೆ ಭಾಷೆಗಳ ಸಾಹಿತ್ಯಕ್ಕೂ ಪ್ರಾಮುಖ್ಯ ನೀಡಬೇಕು’ ಎಂದು ಹೇಳಿದರು. 

ತಮಿಳು ಕಾದಂಬರಿಕಾರ ಚಾರು ನಿವೇದಿತಾ, ‘25 ವರ್ಷಗಳ ಹಿಂದೆ ಪುಸ್ತಕ ಹೊರತರಲು ಮುಂದಾದಾಗ ನನ್ನ ಸಹಾಯಕ್ಕೆ ಯಾರೂ ಬರಲಿಲ್ಲ. ಹೀಗಾಗಿ, ಸ್ವಂತ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಬೇಕಾಯಿತು. ಆ ಸಮಯದಲ್ಲಿ ₹ 600 ನನ್ನ ಸಂಬಳವಾಗಿತ್ತು. ಹೆಂಡತಿಯು ತಾಳಿಯನ್ನು ಅಡವಿಟ್ಟು, ನನಗೆ ಸಹಾಯ ಮಾಡಿದ್ದಳು. ಆಗಿನ ಕಾಲದಲ್ಲಿ ಸಾಹಿತ್ಯದ ಸ್ಥಿತಿ ಗತಿ ಹೇಗಿತ್ತು ಅನುವುದಕ್ಕೆ ಇದೊಂದು ಉದಾಹರಣೆ’ ಎಂದರು.

‘ನಾನು ನೇರವಾಗಿ ಪುಸ್ತಕವನ್ನು ಬರೆಯುವುದಿಲ್ಲ. ಡೈರಿಯಲ್ಲಿ ಏನು ಬರೆಯುತ್ತೇನೆಯೋ ಅದೇ ಪುಸ್ತಕವಾಗಿರುತ್ತದೆ. ಜೀವನದಲ್ಲಿ ನಡೆಯುವ ಆಗು ಹೋಗುಗಳೇ ನನ್ನ ಬರಹಗಳು’ ಎಂದು ಹೇಳಿದರು.

ನಾಟಕಕಾರ ಡಿ.ಎಸ್. ಚೌಗಲೆ, ‘ನಗರ ಕೇಂದ್ರಿತ ಗ್ರಂಥಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ, ಪ್ರಸ್ತುತ ಓದುಗರು ಇಲ್ಲ ಎನ್ನುವುದು ಸುಳ್ಳು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT