ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸವಾಲುಗಳ ಮಧ್ಯೆ ಆಡು ಭಾಷೆ ವಿಸ್ತರಣೆ: ಭಾಷಾ ತಜ್ಞರ ಅಭಿಮತ

ತುಳು–ಕೊಂಕಣಿ–ಕೊಡವ–ಬ್ಯಾರಿ ಭಾಷೆ ಬಗ್ಗೆ ಭಾಷಾ ತಜ್ಞರ ಅಭಿಮತ
Published 9 ಆಗಸ್ಟ್ 2024, 14:49 IST
Last Updated 9 ಆಗಸ್ಟ್ 2024, 14:49 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಭಾಷೆಯ ಜತೆಗೆ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಕೊಂಕಣಿ ಹೊರತುಪಡಿಸಿ ಇಲ್ಲಿನ ಉಳಿದ ಭಾಷೆಗಳಿಗಿದೆ. ಭಾಷಾ ಅಕಾಡೆಮಿಗಳ ಸ್ಥಾಪನೆ ಸೇರಿ ವಿವಿಧ ಕ್ರಮಗಳಿಂದ ತುಳು, ಕೊಡವ ಮತ್ತು ಬ್ಯಾರಿ ಭಾಷೆಗಳ ಬಳಕೆಯ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ...’

ಬುಕ್ ಬ್ರಹ್ಮ ಸಾಹಿತ್ಯೋತ್ಸವದಲ್ಲಿ ನಡೆದ ‘ತುಳು–ಕೊಂಕಣಿ–ಕೊಡವ–ಬ್ಯಾರಿ ಸೊಗಡು’ ಗೋಷ್ಠಿಯಲ್ಲಿ ಭಾಷಾ ತಜ್ಞರ ಮನದಾಳದ ಮಾತುಗಳಿವು.

ಬ್ಯಾರಿ ಭಾಷೆ ಬಗ್ಗೆ ಮಾತನಾಡಿದ ಬಿ.ಎ. ಮುಹಮ್ಮದ್ ಅಲಿ, ‘ಬ್ಯಾರಿ ಭಾಷೆ ಉಳಿಸಲು ಸಾಮುದಾಯಿಕ ಪ್ರಯತ್ನಗಳು ನಡೆದಿವೆ. ಬ್ಯಾರಿಗಳಿಗೆ 1,500 ವರ್ಷಗಳ ಇತಿಹಾಸವಿದೆ. ಈ ಭಾಷೆ ಬಳಸುವವರು ಸುಮಾರು 25 ಲಕ್ಷ ಜನರಿದ್ದಾರೆ. ಕೊಂಕಣಿ ಭಾಷೆಗೆ ಹೋಲಿಸಿದರೆ ಬ್ಯಾರಿ, ಕೊಡವ ಹಾಗೂ ತುಳು ಭಾಷೆಗಳು ಬಹಳ ಕೆಳಗಿವೆ’ ಎಂದರು.  

ತುಳು ಭಾಷೆ ಕುರಿತು ವಿಜಯಾ ಶೆಟ್ಟಿ ಸಾಲೆತ್ತೂರು, ‘ತುಳು ಭಾಷೆಯನ್ನು ಸುಮಾರು 20 ಲಕ್ಷದಷ್ಟು ಜನರು ಮಾತನಾಡುತ್ತಾರೆ. ಪಶ್ಚಿಮಘಟ್ಟದಿಂದ ಅರಬ್ಬಿ ಸಮದ್ರದವರೆಗಿನ ಪ್ರದೇಶ ತುಳುನಾಡು. ಈ ಪ್ರದೇಶವನ್ನು ಕನ್ನಡಿಗರು ಆಳ್ವಿಕೆ ಮಾಡಿದರು. ಇದರಿಂದ ಅಲ್ಲಿಯವರು ಕನ್ನಡದಲ್ಲಿಯೇ ಬರೆದರು. ರಾಜಾಶ್ರಯ ಇಲ್ಲದೆ ನಮ್ಮ ಭಾಷೆ ಸೊರಗಿತು’ ಎಂದು ಬೇಸರ ವ್ಯಕ್ತಪಡಿಸಿದರು. 

ಕೊಂಕಣಿ ಬಗ್ಗೆ ಮಾತನಾಡಿದ ರೇಮಂಡ್ ಡಿಕೂನಾ ತಾಕೊಡೆ, ‘ಕೊಂಕಣಿ ಭಾಷೆಯು ಗೋವಾ ರಾಜ್ಯದ ಅಧಿಕೃತ ಭಾಷೆಯಾಗಿದೆ. ನಮ್ಮ ರಾಜ್ಯದಲ್ಲಿ ಈ ಭಾಷೆಗೆ ಅಕಾಡೆಮಿಯಿದೆ. ಕೊಂಕಣಿಯಲ್ಲಿ ಅಪಾರ ಸಾಹಿತ್ಯವಿದೆ. ಈ ಭಾಷೆಯನ್ನು ಉಳಿಸಿ, ಬೆಳೆಸಲು ಎಲ್ಲ ಕೆಲಸಗಳು ನಡೆಯುತ್ತಿವೆ’ ಎಂದು ಹೇಳಿದರು.

ಕೊಡವ ಭಾಷೆ ಕುರಿತು ಮಾತನಾಡಿದ ರೇಖಾ ವಸಂತ, ‘ಕೊಡವ ಭಾಷೆ ಮತ್ತು ಸಂಸ್ಕೃತಿಗೆ 2,000 ವರ್ಷಕ್ಕಿಂತ ಹೆಚ್ಚು ದೀರ್ಘ ಇತಿಹಾಸವಿದೆ. ಕೊಡವ ಅಕಾಡೆಮಿ ಸ್ಥಾಪನೆ ಬಳಿಕ ಈ ಭಾಷೆ ಕಲಿಸುವ ಪ್ರಯತ್ನ ಹೆಚ್ಚಿತು. ಅಮೆರಿಕ, ಇಂಗ್ಲೆಂಡ್‌ನಲ್ಲಿ ಕೊಡವ ಸಂಘವಿದ್ದು, ಭಾಷೆ ಬಳಕೆಯ ವ್ಯಾಪ್ತಿ ಹೆಚ್ಚುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT