ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬುಕ್ ಬ್ರಹ್ಮ: ಆಗಸ್ಟ್‌ 9ರಿಂದ ಸಾಹಿತ್ಯ ಉತ್ಸವ

ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಆಯೋಜನೆ
Published : 7 ಆಗಸ್ಟ್ 2024, 14:41 IST
Last Updated : 7 ಆಗಸ್ಟ್ 2024, 14:41 IST
ಫಾಲೋ ಮಾಡಿ
Comments

ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ಕ್ಕೆ ಶುಕ್ರವಾರ ಚಾಲನೆ ದೊರೆಯಲಿದೆ. ಕನ್ನಡದ ಸಾಹಿತಿಗಳೊಂದಿಗೆ ಹೊರ ರಾಜ್ಯಗಳು ಹಾಗೂ ವಿದೇಶಿ ಬರಹಗಾರರೂ ಈ ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಗಸ್ಟ್‌ 9ರಿಂದ 11ರವರೆಗೆ ಮೂರೂ ದಿನ ಬೆಳಿಗ್ಗೆ 9ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಸಾಹಿತ್ಯ ಗೋಷ್ಠಿಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. 300 ಬರಹಗಾರರು ಈ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಕೆಲ ವಿದೇಶಿ ಬರಹಗಾರರು ಭಾಗವಹಿಸುತ್ತಾರೆ. ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಇಂಗ್ಲಿಷ್ ಭಾಷೆಯ 50ಕ್ಕೂ ಅಧಿಕ ಪುಸ್ತಕ ಮಳಿಗೆಗಳು ಉತ್ಸವದಲ್ಲಿ ಇರಲಿವೆ. ದಕ್ಷಿಣದ ಐದು ರಾಜ್ಯಗಳಿಂದ ನೂರಕ್ಕೂ ಅಧಿಕ ಪ್ರಕಾಶಕರು ಭಾಗವಹಿಸಲಿದ್ದು, ಉತ್ಸವದಲ್ಲಿ ಪ್ರಕಾಶಕರ ಸಮಾವೇಶವೂ ನಡೆಯಲಿದೆ.

ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ಗೋಷ್ಠಿಗಳು, ಕಲಾ ಪ್ರದರ್ಶನ, ಪುಸ್ತಕ ಬಿಡುಗಡೆ ಹಾಗೂ ಲೇಖಕರ ಜತೆಗೆ ಸಂವಾದಗಳು ನಡೆಯಲಿವೆ. ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಸುಮಾರು ನೂರು ಕಲಾವಿದರಿಂದ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. 20ಕ್ಕೂ ಅಧಿಕ ಯುವ ಕಲಾವಿದರಿಂದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.

ಮಕ್ಕಳಿಗಾಗಿಯೇ ಪ್ರತ್ಯೇಕ ವೇದಿಕೆ ಇರಲಿದ್ದು, ಕಥೆ ಹೇಳುವಿಕೆ, ಚಿತ್ರ ಬಿಡಿಸುವಿಕೆ ಸೇರಿ ವಿವಿಧ ಚಟುವಟಿಕೆಗಳು ನಡೆಯಲಿವೆ. ಉತ್ಸವದಲ್ಲಿ ಜಯಂತ ಕಾಯ್ಕಿಣಿ, ಎಚ್.ಎಸ್. ಶಿವಪ್ರಕಾಶ್ ಸೇರಿ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಮುಖರು ಹಾಗೂ ದಕ್ಷಿಣದ ಎಲ್ಲ ರಾಜ್ಯಗಳ ಹಲವರು ಈ ಸಾಹಿತ್ಯ ಹಬ್ಬದಲ್ಲಿ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ: ಮೂರು ದಿನಗಳ ಉತ್ಸವದಲ್ಲಿ ಒಟ್ಟು 80 ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದ ಮೊದಲ ದಿನವಾದ ಆ.9ರಂದು ಕಲಾವಿದೆ ಮಾನಸಿ ಸುಧೀರ್ ಅವರಿಂದ ‘ಕಾವ್ಯಾಭಿನಯ’, ಮೈಸೂರಿನ ನಟನ ರಂಗ ತಂಡದಿಂದ ‘ಕನ್ನಡ ಕಾವ್ಯ ಕಣಜ’ ಎಂಬ ಕನ್ನಡ ಸಾಹಿತ್ಯದ ಇತಿಹಾಸ ಸಾರುವ ರಂಗ ಪ್ರಸ್ತುತಿ ಹಮ್ಮಿಕೊಳ್ಳಲಾಗಿದೆ.

ಆ. 10ರ ಬೆಳಿಗ್ಗೆ ಗಾಯಕಿ ಬಿಂದುಮಾಲಿನಿ ಅವರಿಂದ ‘ಬೆಳಗಿನ ಗಾಯನ’ ಕಾರ್ಯಕ್ರಮ ಮತ್ತು ಮಧ್ಯಾಹ್ನ ನಿರ್ದಿಗಂತ ತಂಡದಿಂದ ‘ಸಮತೆ ಮತ್ತು ಮಮತೆಯ ಸೊಲ್ಲುಗಳು’ ಪ್ರದರ್ಶನ ನಡೆಯಲಿದೆ. ಅದೇ ದಿನ ಸಂಜೆ, ಗಾಯಕ ಆರ್‌.ಕೆ.ಪದ್ಮನಾಭ ಅವರಿಂದ ಕರ್ನಾಟಕ ಸಂಗೀತ ಗಾಯನ ನಡೆಯಲಿದೆ.

ಉತ್ಸವದ ಕೊನೆಯ ದಿನವಾದ ಆ.11ರಂದು ಬೆಳಿಗ್ಗೆ ವೆಂಕಟೇಶ್ ಕುಮಾರ್ ಅವರಿಂದ ಹಿಂದೂಸ್ಥಾನಿ ಗಾಯನ, ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಂದ ‘ಭಾಷೆ ಬೇರೆಯಾದರೂ, ಭಾವವೊಂದೇ’ ಎಂಬ ರಂಗ ಪ್ರಯೋಗ ನಡೆಯಲಿದೆ. ಬಳಿಕ ಮೇಘನಾ ಚಂದ್ರಮೌಳಿ ಅವರಿಂದ ‘ಕಾವ್ಯಾಭಿಕ್ತಿ’ ನೃತ್ಯ ಪ್ರದರ್ಶನ ಹಾಗೂ ಕೆರೆಮನೆ ಯಕ್ಷಗಾನ ಮಂಡಳಿ ಮೇಳದಿಂದ ‘ಪಂಚವಟಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’

ಪ್ರದಾನ ಭಾರತೀಯ ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿಸಿ ಮಹತ್ವದ ಕೊಡುಗೆ ನೀಡಿದ ಸಾಹಿತಿಗಳಿಗೆ ಗೌರವ ಸಲ್ಲಿಸಲು ಬುಕ್ ಬ್ರಹ್ಮ ಸಂಸ್ಥೆಯು ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’ ಸ್ಥಾಪಿಸಿದೆ. ಈ ‍ಪುರಸ್ಕಾರವು ₹ 2 ಲಕ್ಷ ನಗದು ಒಳಗೊಂಡಿದ್ದು ಉತ್ಸವದಲ್ಲಿಯೇ ಪುರಸ್ಕೃತರ ಹೆಸರು ಘೋಷಿಸಿ ಪ್ರದಾನ ಮಾಡಲಾಗುತ್ತದೆ. ಇದೇ ಉತ್ಸವದಲ್ಲಿ ‘ಬುಕ್ ಬ್ರಹ್ಮ ಕಾದಂಬರಿ ಪುರಸ್ಕಾರ’ವನ್ನು ತಮಿಳಿನ ಸಾಹಿತಿ ಪೆರುಮಾಳ್ ಮುರುಗನ್ ‘ಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ’ ವಿಜೇತರಿಗೆ ಮಲಯಾಳಂ ಲೇಖಕ ಬೆನ್ಯಮಿನ್ ಅವರು ಬಹುಮಾನಗಳನ್ನು ವಿತರಿಸುತ್ತಾರೆ ಎಂದು ಸಂಸ್ಥೆ ತಿಳಿಸಿದೆ.

ಪ್ರಕಾಶ್ ರಾಜ್
ಪ್ರಕಾಶ್ ರಾಜ್
ಜಯಂತ ಕಾಯ್ಕಿಣಿ
ಜಯಂತ ಕಾಯ್ಕಿಣಿ
ವೆಂಕಟೇಶ್‌ ಕುಮಾರ್‌
ವೆಂಕಟೇಶ್‌ ಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT