ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ ಬೀಳಲಿ: ಸಾಹಿತಿ ಕೆ.ಮರುಳಸಿದ್ದಪ್ಪ ಆಗ್ರಹ

ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಕೆ.ಮರುಳಸಿದ್ದಪ್ಪ ಆಗ್ರಹ
Published 13 ಏಪ್ರಿಲ್ 2024, 15:16 IST
Last Updated 13 ಏಪ್ರಿಲ್ 2024, 15:16 IST
ಅಕ್ಷರ ಗಾತ್ರ

ಬೆಂಗಳೂರು: ‘ಬಡ ರೋಗಿಗಳ ಸುಲಿಗೆ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರ್ಕಾರವು ಬಿಗಿ ನಿಲುವು ತೆಗೆದುಕೊಂಡು, ದುಬಾರಿ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ ಹಾಕಬೇಕು’ ಎಂದು ಸಾಹಿತಿ ಕೆ.ಮರುಳಸಿದ್ದಪ್ಪ ಹೇಳಿದರು.

ನಗರದಲ್ಲಿ ಶನಿವಾರ ವಸಂತ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯರಾದ ವಸುಂಧರಾ ಭೂಪತಿ ಅವರ ಸಂಪಾದಕತ್ವದಲ್ಲಿ ಹೊರತರಲಾಗಿರುವ ಆರೋಗ್ಯ ಚಿಂತನ ಮಾಲಿಕೆಯ 4ನೇ ಕಂತಿನ 12 ಕೃತಿಗಳ ಬಿಡುಗಡೆ ಮತ್ತು ಮನೋವೈದ್ಯ ಡಾ.ಸಿ.ಆರ್‌.ಚಂದ್ರಶೇಖರ್‌ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಖಾಸಗಿ ಆಸ್ಪತ್ರೆಗಳ ಧನದಾಹ ಕಂಡರೆ ದೇಶದ ಬಡವರಿಗೆ ಕಾಯಿಲೆಗಳೇ ಬರುವುದು ಬೇಡವೆಂದು ಪ್ರಾರ್ಥಿಸುವ ಸ್ಥಿತಿಯಿದೆ. ಬಡವರು ಬದುಕಬೇಕಾದರೆ ಸರ್ಕಾರಿ ಆಸ್ಪತ್ರೆಗಳ ಸಂಖ್ಯೆಗಳನ್ನು ಹೆಚ್ಚಿಸಬೇಕು. ಅವುಗಳ ಸ್ಥಿತಿ ಸುಧಾರಣೆ ಮಾಡಬೇಕು. ಬಡ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ದೊರೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ’ ಎಂದು ಹೇಳಿದರು.

‘ಇಂದು ಜನರಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರ ಕಾಣಿಸುತ್ತಿದೆ. ‘ಆರೋಗ್ಯ ನಮ್ಮ ಹಕ್ಕು’ ಎಂದು ಜನರು ಪ್ರತಿಪಾದಿಸುತ್ತಿದ್ದಾರೆ’ ಎಂದು ಹೇಳಿದರು.

‘ದೇಶದ ಅಭಿವೃದ್ಧಿಯೆಂದರೆ ಹೆದ್ದಾರಿ, ಕ್ರೀಡಾಂಗಣ, ದೊಡ್ಡ ಕಟ್ಟಡ ಕಟ್ಟುವುದಲ್ಲ. ಉತ್ತಮ ಶಿಕ್ಷಣ, ಗುಣಮಟ್ಟದ ಆರೋಗ್ಯ ಸೇವೆ ದೊರೆತರೆ ಮಾತ್ರ ಅಭಿವೃದ್ಧಿಗೆ ಅರ್ಥ ಬರುತ್ತದೆ’ ಎಂದರು.

ಸ್ತ್ರೀರೋಗ ತಜ್ಞೆ ಡಾ.ವೀಣಾಭಟ್‌ ಮಾತನಾಡಿ, ‘ಮನುಷ್ಯನ ದೇಹ, ರೋಗಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಲೇ ಇರುತ್ತದೆ. ಜನ್ಮದಾತವಾಗಿ ಕೆಲವು ರೋಗಗಳು ಬಂದಿರುತ್ತವೆ. ಈ ವೇಗದ ಕಾಲದಲ್ಲಿ ಅವುಗಳಿಂದಲೂ ರಕ್ಷಣೆ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.

ವಸುಂಧರಾ ಭೂಪತಿ ಮಾತನಾಡಿ, ‘ವೈದ್ಯರ ಅನುಭವಗಳನ್ನು ಸಮಾಜದ ಎದುರು ಪ್ರಸ್ತುತಪಡಿಸುವ ಅಗತ್ಯವಿದೆ. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದೆ. ಹಿರಿಯರು ಹಾಗೂ ಕಿರಿಯ ಕೃತಿಗಳನ್ನು ಹೊರತರಲಾಗಿದೆ. ಎಲ್ಲ ವೈದ್ಯ ಲೇಖಕರೂ ಸರಳವಾದ ಭಾಷೆಯಲ್ಲಿ ಕೃತಿ ರಚಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಇದೇ ವೇಳೆ ‘ಅಸ್ಮಿತೆ ಪ್ರಕಾಶನ’ ಹೊರತಂದಿರುವ, ಕೆ. ಪ್ರಭಾಕರ್ ಅವರು ಕನ್ನಡಕ್ಕೆ ಅನುವಾದಿಸಿರುವ ರಾಸಿತ್‌ ಅಶೋಕನ್‌ ಅವರ ‘ಧನ್ಯವಾದಗಳು ಗಿಲ್ಲನ್‌ ಬ್ಯಾರಿ ಸಿಂಡ್ರೋಮ್‌’ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ವೈದ್ಯರಾದ ಆರ್.ಕೆ.ಸರೋಜಾ, ಎಚ್‌.ಜಿ.ಜಯಲಕ್ಷ್ಮಿ, ಸುರೇಶ್‌ ವಿ. ಸಗರದ, ಕೆ.ಎಸ್‌.ಪವಿತ್ರಾ ಹಾಜರಿದ್ದರು.

ಬಿಡುಗಡೆಯಾದ ಕೃತಿಗಳ ವಿವರ

ಕೃತಿಯ ಶೀರ್ಷಿಕೆ; ವೈದ್ಯ ಲೇಖಕರು ಆರೋಗ್ಯ ಮತ್ತು ಜೀವನ;ಪಿ.ಎಸ್‌.ಶಂಕರ್ಹರೆಯದವರ ಮನೋಲೋಕ;ಸಿ.ಆರ್‌.ಚಂದ್ರಶೇಖರ್‌ಆರೋಗ್ಯ ಮತ್ತು ಅರಿವು;ವಸುಂಧರಾ ಭೂಪತಿಚರ್ಮ ರೋಗಗಳು;ಬಿ.ಡಿ.ಸತ್ಯನಾರಾಯಣಮಾನವ ದೇಹದ ಮಿಲಿಟರಿ ಪಡೆ;ನಾ.ಸೋಮೇಶ್ವರಜೀವನ ಶೈಲಿಯ ಕಾಯಿಲೆಗಳು;ಸುರೇಶ ವಿ. ಸಗರದಕಣ್ಣಿನ ಕಾಯಿಲೆಗಳು;ಎಚ್‌.ಎಂ.ರವೀಂದ್ರನಾಥ್‌ಪ್ರಕೃತಿಯ ಅದ್ಭುತ ಸೃಷ್ಟಿ ಸ್ತ್ರಿ;ವೀಣಾ ಎನ್‌. ಸುಳ್ಯಚಿತ್ತ ವೃತ್ತಿ;ಕೆ.ಎಸ್‌.ಪವಿತ್ರಾಮಕ್ಕಳ ಮನ ಮೊಗ್ಗಿನ ಹೂವನ;ಅರುಣ ಯಡಿಯಾಳ್‌ಸ್ವಯಂ ಪ್ರತಿರೋಧಕ ಕಾಯಿಲೆಗಳು;ವೀಣಾ ಅರ್ಹಂತ್‌ಸಾಮಾನ್ಯ ಪ್ರಯೋಗಾಲಯ ಪರೀಕ್ಷೆಗಳು;ವಿನಯ ಶ್ರೀನಿವಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT