ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳತೆಯೇ ರಂಗ ಕಲಾವಿದರಿಗೆ ಭೂಷಣ: ರಂಗಕರ್ಮಿ ಬಿ.ವಿ. ರಾಜಾರಾಂ

ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ರಂಗಕರ್ಮಿ ಬಿ.ವಿ. ರಾಜಾರಾಂ ಅಭಿಮತ
Published 30 ಮಾರ್ಚ್ 2024, 14:05 IST
Last Updated 30 ಮಾರ್ಚ್ 2024, 14:05 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಗೀತ–ನೃತ್ಯ ಕಲಾವಿದರ ರೀತಿ ರಂಗಭೂಮಿಯವರಿಗೆ ವಿಶೇಷ ಸೌಲಭ್ಯಗಳು ಬೇಕಾಗುವುದಿಲ್ಲ. ಉಳಿಯಲು ಕೊಠಡಿಗಳು ಸಿಗದಿದ್ದಾಗ ರಂಗ ಕಲಾವಿದರು ರೈಲು ನಿಲ್ದಾಣಗಳ ಪ್ಲಾಟ್ ಫಾರ್ಮ್‌ಗಳಲ್ಲಿ ಮಲಗಿಯೂ ಪ್ರದರ್ಶನಗಳನ್ನು ನೀಡಿದ ಉದಾಹರಣೆಗಳಿವೆ’ ಎಂದು ರಂಗಕರ್ಮಿ ಬಿ.ವಿ. ರಾಜಾರಾಂ ತಿಳಿಸಿದರು. 

ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಅವ್ವರಸಿ’, ‘ರಂಗಭೀಷ್ಮ ಅಬ್ಬೂರು ಜಯತೀರ್ಥ’ ಹಾಗೂ ‘ನೆನೆ ನೆನೆ ಪ್ರಾತಃಸ್ಮರಣೀಯರ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

‘ರಂಗಭೂಮಿ ಕಲಾವಿದರು ಸರಳವಾಗಿ ಇರುತ್ತಾರೆ. ರಂಗಕರ್ಮಿ ಅಬ್ಬೂರು ಜಯತೀರ್ಥ ಅವರಲ್ಲಿಯೂ ಈ ಸರಳತೆಯನ್ನು ಕಾಣಬಹುದು. ನಾಟಕಗಳಿಗೆ ಅಗತ್ಯವಾದ ಧ್ವನಿ ಮತ್ತು ಬೆಳಕಿನ ನೆರವು ನೀಡುವ ಕಲೆಯಲ್ಲಿ ಅವರು ಸಿದ್ಧಹಸ್ತರಾಗಿದ್ದರು. ನಿರ್ದೇಶನ, ಅಭಿನಯದಲ್ಲಿಯೂ ಪರಿಣತಿ ಹೊಂದಿದ್ದ ಅವರು, ರಂಗಭೂಮಿಗೆ ಅನೇಕ ಕಲಾವಿದರನ್ನು ನೀಡಿದ್ದಾರೆ. ಅವರು ರಂಗ ಪ್ರದರ್ಶನಗಳಿಗೆ ವಿವಿಧೆಡೆ ತೆರಳಿದರೂ ಹೋಟೆಲ್‌ಗಳಲ್ಲಿ ಇರಲು ಇಷ್ಟಪಡುತ್ತಿರಲಿಲ್ಲ’ ಎಂದು ರಾಜಾರಾಂ ಹೇಳಿದರು. 

ಕವಿ ಎಚ್.ಎಸ್. ವೆಂಕಟೇಶಮೂರ್ತಿ, ‘ಅಬ್ಬೂರು ಜಯತೀರ್ಥ ಅವರದ್ದು ತ್ರಿವಿಕ್ರಮ ವ್ಯಕ್ತಿತ್ವ. ನಾಟಕದ ಹಿನ್ನೆಲೆಯಲ್ಲಿ ಅಗತ್ಯವಾದ ಧ್ವನಿಗಾಗಿ ದೊಡ್ಡ ಶಬ್ದ ಭಂಡಾರವನ್ನೇ ಹೊಂದಿದ್ದರು. 20ನೇ ಶತಮಾನದ ರಂಗಭೂಮಿ ದಿಗ್ಗಜರೊಂದಿಗೆ ಕೆಲಸ ಮಾಡಿದ ಅನುಭವ ಅವರಿಗಿದೆ. ನನ್ನ ಅನೇಕ ನಾಟಕಗಳ ಸಾಹಿತ್ಯದ ಸ್ವಾರಸ್ಯ ಹಾಗೂ ಬದುಕಿನ ಘನತೆ ಗುರುತಿಸಿ, ಲೋಪ ಬಾರದಂತೆ ರಂಗಭೂಮಿಗೆ ತಂದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಅಬ್ಬೂರು ಜಯತೀರ್ಥ ಹಾಗೂ ಪತ್ರಕರ್ತ ರು. ಬಸಪ್ಪ ಅವರನ್ನು ಗೌರವಿಸಲಾಯಿತು. 

ಪುಸ್ತಕ ಪರಿಚಯ 

ಪುಸ್ತಕ: ‘ಅವ್ವರಸಿ’

ಪುಟಗಳು: 56

ಬೆಲೆ: ₹50

ಪುಸ್ತಕ: ‘ರಂಗಭೀಷ್ಮ ಅಬ್ಬೂರು ಜಯತೀರ್ಥ’

ಲೇಖಕ: ಜಿ.ಪಿ.ನಾಗರಾಜನ್

ಪುಟಗಳು: 174

ಬೆಲೆ: ₹200

ಪುಸ್ತಕ: ‘ನೆನೆ ನೆನೆ ಪ್ರಾತಃಸ್ಮರಣೀಯರ’

ಸಂಪಾದನೆ: ಎಂ.ಬಸವರಾಜು ಶೈಲಜ ಉದಯಶಂಕರ್ 

ಪುಟಗಳು: 175

ಬೆಲೆ: ₹200

ಮೂರು ಪುಸ್ತಕಗಳನ್ನೂ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ಪ್ರಕಟಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT