ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಶಿಕ್ಷಣದ ಕೃತಿಗಳು ಕನ್ನಡದಲ್ಲಿ ಪ್ರಕಟವಾಗಲಿ: ಡಾ. ಸಿ.ಎನ್. ಮಂಜುನಾಥ್

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಮತ *‘ನಮ್ಮ ದೇಹದ ವಿಜ್ಞಾನ’ ಕೃತಿ ಲೋಕಾರ್ಪಣೆ
Last Updated 18 ಸೆಪ್ಟೆಂಬರ್ 2021, 17:45 IST
ಅಕ್ಷರ ಗಾತ್ರ

ಬೆಂಗಳೂರು: ‘ವೈದ್ಯಕೀಯ ಶಿಕ್ಷಣವನ್ನು ಕನ್ನಡಲ್ಲಿಯೂ ನೀಡಬೇಕೆಂಬ ಕೂಗು ಇದೆ. ಇದು ಸಾಕಾರವಾಗಬೇಕಾದರೆ ಈ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗಬೇಕು’ ಎಂದುಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.

ನವಕರ್ನಾಟಕ ಪ್ರಕಾಶನವು60ರ ಸಂಭ್ರಮದ ಅಂಗವಾಗಿ ನಗರದಲ್ಲಿ ಶನಿವಾರ ಆಯೋಜಿಸಿದ ಸಮಾರಂಭದಲ್ಲಿ ಡಾ.ಟಿ.ಆರ್. ಅನಂತರಾಮು ಮತ್ತು ಡಾ.ನಾ. ಸೋಮೇಶ್ವರ ಅವರ ‘ನಮ್ಮ ದೇಹದ ವಿಜ್ಞಾನ’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ‘ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಕನ್ನಡದಲ್ಲಿ ವಿರಳ. ಆಂಗ್ಲ ಭಾಷೆಯಲ್ಲಿ ಲಕ್ಷಾಂತರ ಪುಸ್ತಕಗಳು ಇವೆ. ಕನ್ನಡದಲ್ಲಿಯೂ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತಜ್ಞರು ಬರೆಯಬೇಕು’ ಎಂದರು.

‘ನಮ್ಮ ದೇಹದ ವಿಜ್ಞಾನ’ ಕೃತಿ ವೈದ್ಯಕೀಯ ಕ್ಷೇತ್ರಕ್ಕೆ ಕೊಟ್ಟ ಅದ್ಭುತ ಕೊಡುಗೆಯಾಗಿದೆ. ಅಂತರರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪುಸ್ತಕಗಳಿಗೆ ಸರಿಸಮವಾದ ಈ ಕೃತಿಯಲ್ಲಿ ಮನುಷ್ಯನ ತಲೆಯಿಂದ ಕಾಲಿನ ವರೆಗಿನ ಪ್ರತಿಯೊಂದು ಭಾಗದ ಬಗ್ಗೆ ವಿವರಣೆ ನೀಡಲಾಗಿದೆ.ವೈದ್ಯಕೀಯ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಓದಲೇ ಬೇಕಾದ ಪುಸ್ತಕ ಇದು. ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳೂ ಈ ಪುಸ್ತಕವನ್ನು ಹೊಂದಿರಬೇಕು’ ಎಂದು ಹೇಳಿದರು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಿರ್ದೇಶಕಿ, ಡಾ. ಪ್ರತಿಮಾ ಮೂರ್ತಿ, ‘ಕೃತಿಯಲ್ಲಿ ಅಂಗಾಂಗಗಳು ಯಾವ ರೀತಿ ಕೆಲಸ ಮಾಡುತ್ತವೆ ಎನ್ನುವುದನ್ನು ಸರಳವಾಗಿ ತಿಳಿಸಲಾಗಿದೆ. ಮಿದುಳು ಮತ್ತು ಮನಸ್ಸಿನ ಬಗ್ಗೆ ಸಾಕಷ್ಟು ವಿವರಣೆಗಳಿವೆ.ದೇಹವನ್ನೂ ಒಂದು ವಿಭಿನ್ನ ಲೋಕದಂತೆ ಚಿತ್ರಿಸಿ, ಸಾಮಾನ್ಯ ಜನರಲ್ಲೂ ಕುತೂಹಲ ಹುಟ್ಟಿಸುವಂತಹ ವಿಶಿಷ್ಟ ಬರಹಗಳು ಈ ಕೃತಿಯಲ್ಲಿವೆ’ ಎಂದುಮೆಚ್ಚುಗೆ ವ್ಯಕ್ತಪಡಿಸಿದರು.

ಸಂಪಾದಕರಾದಡಾ.ಟಿ.ಆರ್. ಅನಂತರಾಮು, ಡಾ.ನಾ. ಸೋಮೇಶ್ವರ,ನವಕರ್ನಾಟಕ ಪ್ರಕಾಶನದ ಕಾರ್ಯನಿರ್ವಾಹಕ ನಿರ್ದೇಶಕ ಎ. ರಮೇಶ್ ಉಡುಪ, ವ್ಯವಸ್ಥಾಪಕ ನಿರ್ದೇಶಕ ಡಾ. ಸಿದ್ದನಗೌಡ ಪಾಟೀಲ, ಲೇಖಕರಾದ ಡಾ.ಸಿ.ಆರ್. ಚಂದ್ರಶೇಖರ್, ಡಾ.ಕೆ.ಎಸ್. ಚೈತ್ರಾ, ಡಾ.ಎಚ್.ಆರ್. ಕೃಷ್ಣಮೂರ್ತಿ, ಡಾ.ಕೆ.ಎಸ್. ಪವಿತ್ರ, ಪ್ರೊ.ಕೆ.ಎಸ್. ನಟರಾಜ್, ಡಾ. ಕಿರಣ್ ವಿ.ಎಸ್, ಡಾ.ಕೆ.ಎಸ್. ಶುಭ್ರತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT