ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಟ್ರೊ: ಸವಾಲು ನೀಗುವ ಸಮಯ

ಪ್ರಯಾಣಿಕರ ಸಂಖ್ಯೆ ಶೇ 25 ಮಾತ್ರ * ವೆಚ್ಚ ತಗ್ಗಿಸಲು ಬಿಎಂಆರ್‌ಸಿಎಲ್ ಹರಸಾಹಸ * ಕಾರ್ಯಾಚರಣೆ ವಿಧಾನದಲ್ಲಿಯೇ ಬದಲಾವಣೆ ಚಿಂತನೆ
Last Updated 17 ಜನವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಬಿಕ್ಕಟ್ಟು ವಿಶ್ವ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಈ ಬಿಕ್ಕಟ್ಟಿನಿಂದ ಹೆಚ್ಚು ನಷ್ಟ ಮತ್ತು ಸಂಕಷ್ಟಕ್ಕೆ ಒಳಗಾಗಿದ್ದು ಸಾರ್ವಜನಿಕ ಸಾರಿಗೆ ವಲಯ. ಮಹಾನಗರಗಳಲ್ಲಿ ಕ್ಷಿಪ್ರ ಸಾರಿಗೆ ಸೇವೆ ಒದಗಿಸುವ ಮೆಟ್ರೊ ರೈಲು ಸೇವೆಯೂ ಇದರಲ್ಲೊಂದು. ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಆರ್ಥಿಕವಾಗಿಯೂ ಚೇತರಿಸಿಕೊಳ್ಳಬೇಕಾದ ಸವಾಲು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಮುಂದಿದೆ. ತಿಂಗಳಿಗೆ ಸದ್ಯ ₹20 ಕೋಟಿ ನಷ್ಟವನ್ನು ನಿಗಮ ಅನುಭವಿಸುತ್ತಿದ್ದು, ಅದರ ಪರಿಣಾಮ ರಾಜಧಾನಿಯ ಅಭಿವೃದ್ಧಿಯ ಮೇಲೂ ಆಗಲಿದೆ.

‘ಸೆಪ್ಟೆಂಬರ್‌ನಿಂದ ವಾಣಿಜ್ಯ ಸೇವೆ ಪುನರಾರಂಭಗೊಂಡಿತು. ಆದರೆ, ಈಗಲೂ ನಿಗಮಕ್ಕೆ ಪ್ರತಿ ತಿಂಗಳಿಗೆ ₹20 ಕೋಟಿ ನಷ್ಟವಾಗುತ್ತಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಹೇಳುತ್ತಾರೆ.

‘ವಾಣಿಜ್ಯ ಸೇವೆಯಿಂದ ತಿಂಗಳಿಗೆ ₹30 ಕೋಟಿ ವರಮಾನ ಬರುತ್ತಿತ್ತು. ಈಗ ₹10 ಕೋಟಿ ಮಾತ್ರ ವರಮಾನ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ವರಮಾನ ಹೆಚ್ಚುತ್ತಿದೆ’ ಎಂದು ಅವರು ಹೇಳಿದರೂ, ಮೆಟ್ರೊವನ್ನು ಅವಲಂಬಿಸಿದ ಇತರೆ ವಲಯಗಳೂ ಹಿನ್ನಡೆ ಅನುಭವಿಸುತ್ತಿವೆ.

ಸೆಪ್ಟೆಂಬರ್‌ನಲ್ಲಿ ಅನೇಕ ನಿರ್ಬಂಧಗಳೊಂದಿಗೆ ಬಿಎಂಆರ್‌ಸಿಎಲ್‌ ವಾಣಿಜ್ಯ ಸೇವೆ ಆರಂಭಿಸಿತು. ಕೋವಿಡ್‌ ಪೂರ್ವದಲ್ಲಿ ದಿನಕ್ಕೆ ಸರಾಸರಿ 4.5 ಲಕ್ಷ ಪ್ರಯಾಣಿಕರು ಮೆಟ್ರೊ ರೈಲಿನಲ್ಲಿ ಸಂಚರಿಸುತ್ತಿದ್ದರು. ಸರಾಸರಿ ₹1 ಕೋಟಿಯಿಂದ ₹1.50 ಕೋಟಿ ಆದಾಯ ಟಿಕೆಟ್ ಮಾರಾಟದಿಂದಲೇ ನಿಗಮಕ್ಕೆ ಬರುತ್ತಿತ್ತು.

ಈಗ ಈ ಸಂಖ್ಯೆ 1.10 ಲಕ್ಷದಿಂದ 1.25 ಲಕ್ಷಕ್ಕೆ ಬಂದು ನಿಂತಿದೆ. ಕೋವಿಡ್‌ ಪೂರ್ವದಲ್ಲಿನ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಇದು ಶೇ 25 ಮಾತ್ರ. ಅಂದರೆ, ಟಿಕೆಟ್ ಮಾರಾಟದಿಂದ ದಿನಕ್ಕೆ ಸುಮಾರು ₹25 ಲಕ್ಷದಿಂದ ₹30 ಲಕ್ಷ ಮಾತ್ರ ವರಮಾನ ಬರುತ್ತಿದೆ.

ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ದಿನಕ್ಕೆ 30 ಸಾವಿರದಿಂದ 35 ಸಾವಿರ ಪ್ರಯಾಣಿಕರು ಮಾತ್ರ ಮೆಟ್ರೊ ಸೇವೆ ಬಳಸಿದ್ದರು. 2019ರಲ್ಲಿ ಹಬ್ಬದ ಸಂದರ್ಭದಲ್ಲಿ ದಿನಕ್ಕೆ 6 ಲಕ್ಷ ಜನರು ಪ್ರಯಾಣಿಸಿದ ಉದಾಹರಣೆಗಳೂ ಇದ್ದವು. ಈ ಬಾರಿ ಹಬ್ಬದ ಸಂದರ್ಭದಲ್ಲಿಯೂ 1.50 ಲಕ್ಷ ಮೀರಲಿಲ್ಲ.

ಆದಾಯದಲ್ಲಿ ಖೋತಾ ಆಗಿದ್ದರಿಂದ ನಿಗಮದಲ್ಲಿನ ಇತರೆ ಕಾರ್ಯಾಚರಣೆಗಳ ಮೇಲೂ ವ್ಯತಿರಿಕ್ತ ಪರಿಣಾಮವಾಗಲಿದೆ. ಸಿಬ್ಬಂದಿ ಕಡಿತವಾಗುತ್ತದೆಯಲ್ಲದೆ, ಎರಡನೇ ಹಂತದ ಯೋಜನೆಗಳು ಪೂರ್ಣಗೊಳ್ಳುವುದು ವಿಳಂಬವಾಗಲಿದೆ. ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾದಂತೆ, ನಿರ್ಮಾಣ ವೆಚ್ಚವೂ ಹೆಚ್ಚಲಿದೆ. ವಿವಿಧ ಬ್ಯಾಂಕ್‌ಗಳಿಂದ ನಿಗಮವು ಪಡೆದಿರುವ ಸಾಲದ ಮರುಪಾವತಿ ಅವಧಿಯೂ ವಿಸ್ತರಣೆಯಾಗುವುದರಿಂದ ನಿಗಮಕ್ಕೆ ಆರ್ಥಿಕ ಹೊರೆಯೂ ಹೆಚ್ಚಲಿದೆ.

ವರಮಾನ ಕಡಿಮೆಯಾಗುತ್ತದೆ ಎಂದು ರೈಲುಗಳ ಸಂಖ್ಯೆ ಕಡಿಮೆ ಮಾಡಿದರೆ ಪ್ರಯಾಣಿಕರ ನಡುವೆ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಅಂತರ ಕಾಪಾಡಿಕೊಳ್ಳಲು ರೈಲುಗಳ ಸಂಖ್ಯೆ ಹೆಚ್ಚಿಸಿದರೆ ಆರ್ಥಿಕವಾಗಿ ಮತ್ತಷ್ಟು ಹೊರೆ ಬೀಳುತ್ತದೆ. ಹೀಗಾಗಿ, ಸಾರಿಗೆ ಸೇವೆ ನೀಡುವ ವ್ಯವಸ್ಥೆಯಲ್ಲಿಯೇ ಬದಲಾವಣೆ ಮಾಡಿಕೊಳ್ಳಬೇಕಾದ ಒತ್ತಡದಲ್ಲಿದೆ ಬಿಎಂಆರ್‌ಸಿಎಲ್.

ಎಲ್ಲ ಯೋಜನೆ ಆರು ತಿಂಗಳು ವಿಳಂಬ !

ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ‘ನಮ್ಮ ಮೆಟ್ರೊ’ದ ಎಲ್ಲ ಕಾಮಗಾರಿಗಳು ಆರು ತಿಂಗಳು ವಿಳಂಬವಾಗಿವೆ ಎಂದು ಅಜಯ್‌ ಸೇಠ್ ಹೇಳುತ್ತಾರೆ.

‘ನಮ್ಮ ಮೆಟ್ರೊ’ದ ರೈಲು ಕಾಮಗಾರಿ ಆರಂಭವಾಗಿ 15 ವರ್ಷಗಳೇ ಆಗಿವೆ. ಆದರೆ, ಈವರೆಗೂ ಎರಡನೇ ಹಂತದ ಕಾಮಗಾರಿಗಳೂ ಪೂರ್ಣಗೊಂಡಿಲ್ಲ. 2020ರೊಳಗೇ ಈ ಎಲ್ಲ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆ ಆರಂಭವಾಗಬೇಕಾಗಿತ್ತು. ಗಡುವನ್ನು ಹಲವು ಬಾರಿ ಪರಿಷ್ಕೃತಗೊಳಿಸಿದ ನಂತರವೂ ‘ಆಮೆ ವೇಗ’ದಲ್ಲಿಯೇ ಕಾಮಗಾರಿಗಳು ನಡೆದಿವೆ. ಕೋವಿಡ್‌ ಬಿಕ್ಕಟ್ಟು ಈ ವೇಗವನ್ನು ಮತ್ತಷ್ಟು ತಗ್ಗಿಸಿದೆ.

ಕನಕಪುರ ರಸ್ತೆಯಲ್ಲಿ ಜ.15ರಿಂದ ಸಾರ್ವಜನಿಕ ಸೇವೆ ಆರಂಭವಾಗಿದೆ. ಆದರೆ, ಮೈಸೂರು ರಸ್ತೆ ವಿಸ್ತರಿತ ಮಾರ್ಗದಲ್ಲಿ ಕೆಂಗೇರಿಯವರೆಗೆ ಈಗಾಗಲೇ ಮೆಟ್ರೊ ರೈಲು ಸದ್ದು ಕೇಳಿ ಬರಬೇಕಿತ್ತು. ಈ ಗಡುವು ಜೂನ್‌ಗೆ ಹೋಗಿದೆ.

ವೈಟ್‌ಫೀಲ್ಡ್‌ ಮತ್ತು ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯಲ್ಲಿ ಮೆಟ್ರೊ ರೈಲು ಕಾಣಿಸಬೇಕೆಂದರೆ ಕನಿಷ್ಠ ಎರಡು ವರ್ಷ ಕಾಯಬೇಕಾಗಿದೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಮಿಕರ ಕೊರತೆ ಇತ್ತು. ಅಕ್ಟೋಬರ್‌ ನಂತರ ಈ ಸಮಸ್ಯೆ ಎದುರಾಗಿಲ್ಲ. ಫೆಬ್ರುವರಿ–ಮಾರ್ಚ್‌ನಲ್ಲಿ 9 ಸಾವಿರ ಕಾರ್ಮಿಕರು ಇದ್ದರು. ಈಗ 10,000 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ’ ಎಂದು ಅಜಯ್‌ ಸೇಠ್ ಹೇಳಿದರು.

ಇತರೆ ಆದಾಯಕ್ಕೂ ಕತ್ತರಿ !

ಲಾಕ್‌ಡೌನ್‌ ನಂತರದ ಮೂರು ತಿಂಗಳ ನಷ್ಟವೂ ಸೇರಿದಂತೆ, 2019–20ರಲ್ಲಿ ಮೆಟ್ರೊಗೆ ₹598.58 ಕೋಟಿ ನಷ್ಟವಾಗಿತ್ತು. 2018–19ಕ್ಕೆ ಹೋಲಿಸಿದರೆ, ₹100 ಕೋಟಿ ಹೆಚ್ಚು ನಷ್ಟವಾಗಿದೆ. ಅಂದರೆ, 2018–19ರಲ್ಲಿ ₹498.41 ಕೋಟಿ ವರಮಾನ ಕಡಿಮೆಯಾಗಿತ್ತು. ಆದರೆ, ಪ್ರಯಾಣಿಕರ ಟಿಕೆಟ್‌ ಮಾರಾಟದಿಂದ ಬಂದ ವರಮಾನ ಪ್ರಮಾಣವು ₹376.88 ಕೋಟಿಗೆ ಏರಿದೆ. ಅದರ ಹಿಂದಿನ ವರ್ಷ ₹355.02 ಕೋಟಿ ಇತ್ತು.

ಕಳೆದ ಏಪ್ರಿಲ್‌ ವೇಳೆಗೆ ವಾಣಿಜ್ಯ ಸೇವೆಯಿಂದ ಪಡೆದ ವರಮಾನದಲ್ಲಿ ಶೇ 6.16ರಷ್ಟು ವೃದ್ಧಿಯಾಗಿತ್ತು. ಈ ಆರ್ಥಿಕ ವರ್ಷದಲ್ಲಿ ಐದು ತಿಂಗಳವರೆಗೆ ವಾಣಿಜ್ಯ ಸೇವೆಯನ್ನೇ ಮೆಟ್ರೊ ರೈಲು ಸೇವೆ ಆರಂಭಿಸದಿರುವುದು ಆರ್ಥಿಕವಾಗಿ ಹೊಡೆತ ಬಿದ್ದಿದೆ.

ಸಾರ್ವಜನಿಕರ ಪ್ರಯಾಣದಿಂದ ಬರುತ್ತಿದ್ದ ವರಮಾನವಲ್ಲದೆ, ಇತರೆ ಮೂಲಗಳಿಂದ ನಿಗಮಕ್ಕೆ ಬರುತ್ತಿದ್ದ ಆದಾಯವೂ ಕಡಿಮೆಯಾಗಿದೆ. ನಿಲ್ದಾಣಗಳಲ್ಲಿನ ಮಳಿಗೆಗಳಿಂದ ಬರುತ್ತಿದ್ದ ಬಾಡಿಗೆ, ಜಾಹೀರಾತಿನಿಂದ ಬರುವ ಆದಾಯ ಖೋತಾ ಆಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಈ ಮೂಲಗಳಿಂದ ₹47.33 ಕೋಟಿ ಆದಾಯ ಬಂದಿತ್ತು. ಈ ವರ್ಷ ಅಂದರೆ, 2019–20ರಲ್ಲಿ ₹41.91 ಕೋಟಿಗೆ ಇಳಿದಿದೆ. ಲಾಕ್‌ಡೌನ್‌ ನಂತರ ಈ ಪ್ರಮಾಣದಲ್ಲಿಯೂ ಗಣನೀಯ ಕುಸಿತವಾಗಿದೆ.

ಸಾಲ ಮರುಪಾವತಿ ಸವಾಲು

ಮೆಟ್ರೊ ಕಾಮಗಾರಿ ಒಂದೊಂದು ದಿನ ವಿಳಂಬವಾದಷ್ಟೂ ಕಾರ್ಮಿಕರ ಸಂಬಳ, ನಿರ್ವಹಣಾ ವೆಚ್ಚ ಸೇರಿದಂತೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಲಿದೆ. ಇದಕ್ಕಿಂತ ಮುಖ್ಯವಾಗಿ ಮೆಟ್ರೊ ಯೋಜನೆಗಳಿಗೆ ತೆಗೆದುಕೊಂಡಿರುವ ಸಾಲವನ್ನು ಮರುಪಾವತಿಸುವ ಸವಾಲು ಎದುರಾಗಬಹುದು. ಅಲ್ಲದೆ, ಬ್ಯಾಂಕ್‌ಗಳು ಹೊಸ ಸಾಲ ಒದಗಿಸಲು ಹಿಂದೇಟು ಹಾಕುವ ಸಾಧ್ಯತೆಯೂ ಇದೆ.

ಸಿಲ್ಕ್‌ ಬೋರ್ಡ್‌–ಕೆ.ಆರ್.ಪುರ– ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 55 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ₹3,680 ಕೋಟಿ ಸಾಲ ನೀಡಿದೆ. ಅದೇ ರೀತಿ, ಇದೇ ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಉಪಕರಣಗಳು, ಯಂತ್ರಗಳ ಖರೀದಿಗೆ ಜಪಾನ್‌ ಅಂತರರಾಷ್ಟ್ರೀಯ ಸಹಕಾರ ನಿಗಮ (ಜೈಕಾ) ₹2,342 ಕೋಟಿ ಸಾಲ ನೀಡಿದೆ.

ಮಿತವ್ಯಯಕ್ಕೆ ಆದ್ಯತೆ: ಸೇಠ್

ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಬಿಎಂಆರ್‌ಸಿಎಲ್‌ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ.

‘ತೀರಾ ಅಗತ್ಯವಿರುವ ಕಾರ್ಯಾಚರಣೆಯನ್ನು ಮಾತ್ರ ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಬೇಡವೆನಿಸುವ, ಮುಂದೂಡಿದರೂ ಸಮಸ್ಯೆ ಇಲ್ಲ ಎನ್ನುವ ಕೆಲಸಗಳನ್ನು ಮುಂದೂಡಲಾಗುತ್ತಿದೆ’ ಎಂದು ಅಜಯ್‌ ಸೇಠ್‌ ಹೇಳಿದರು.

‘ಪ್ರತಿ ನಿಲ್ದಾಣಗಳಲ್ಲಿ ನಾಲ್ಕು ಪ್ರವೇಶ ದ್ವಾರಗಳು ಇವೆ. ಈಗ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಎರಡು ಪ್ರವೇಶ ದ್ವಾರಗಳನ್ನು ಮಾತ್ರ ತೆರೆಯಲಾಗುತ್ತಿದೆ. ಇದರಿಂದ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನೂ ಕಡಿಮೆ ಮಾಡಬಹುದು. ನಿರ್ವಹಣಾ ವೆಚ್ಚವೂ ತಗ್ಗಲಿದೆ. ಹೊರಗುತ್ತಿಗೆ ನೌಕರರ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ’ ಎಂದೂ ಅವರು ತಿಳಿಸಿದರು.

‘ಸಾರ್ವಜನಿಕರು ಕೂಡ ಎಲ್ಲ ಸಹಕಾರ ನೀಡುತ್ತಿದ್ದಾರೆ. ಆನ್‌ಲೈನ್‌ನಲ್ಲಿ, ಕ್ರೆಡಿಟ್‌ ಕಾರ್ಡ್‌ ಬಳಸುವ ಮೂಲಕ ಸ್ಮಾರ್ಟ್‌ ಕಾರ್ಡ್‌ ರಿಚಾರ್ಜ್‌ ಮಾಡಿಸುತ್ತಿದ್ದಾರೆ. ಕೌಂಟರ್‌ನಲ್ಲಿನ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಲು ಇದರಿಂದ ಸಾಧ್ಯವಾಗುತ್ತಿದೆ’ ಎಂದರು.

‘ಕನಕಪುರ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಐದು ನಿಲ್ದಾಣಗಳಲ್ಲಿ ಮಾರ್ಚ್‌ ವೇಳೆಗೆ ಸೌರ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ 1.25 ಮೆಗಾವಾಟ್‌ ಸೌರವಿದ್ಯುತ್ ಉತ್ಪಾದಿಸಬಹುದಾಗಿದೆ’ ಎಂದು ಹೇಳಿದರು.

‘ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಟೋಕನ್‌ ವಿತರಣೆ ಪ್ರಾರಂಭವಾದರೆ ಈ ಸಂಖ್ಯೆ ಹೆಚ್ಚುವ ನಿರೀಕ್ಷೆಯೂ ಇದೆ. ವರಮಾನವೂ ಕ್ರಮೇಣ ಹೆಚ್ಚಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT