ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಆದ್ಯತಾ ಪಥ: ವಾಹನ ದಟ್ಟಣೆಯ ಮುಕ್ತಿ ಪಥ

ಮತ್ತಷ್ಟು ಕಾರಿಡಾರ್‌ಗಳಲ್ಲೂ ಜಾರಿ l ಉಲ್ಲಂಘನೆ ತಡೆಗೆ ಕಟ್ಟುನಿಟ್ಟಿನ ಕ್ರಮ; ಪ್ರಯಾಣಿಕರ ಒತ್ತಾಯ
Last Updated 4 ಅಕ್ಟೋಬರ್ 2020, 19:58 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ದಟ್ಟಣೆ ನಗರದ ಪ್ರಮುಖ ಸಮಸ್ಯೆಗಳಲ್ಲೊಂದು. ನಗರವು ಶರವೇಗದಲ್ಲಿ ಬೆಳೆದಂತೆಯೇ ವಾಹನ ದಟ್ಟಣೆಯ ಬಿಕ್ಕಟ್ಟು ಕೂಡ ಹೆಚ್ಚುತ್ತಲೇ ಇದೆ. ಖಾಸಗಿ ವಾಹನ ಬಳಕೆ ನಿಯಂತ್ರಿಸಿ ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜಿಸುವುದೊಂದೇ ಈ ಬಿಕ್ಕಟ್ಟಿನಿಂದ ಮುಕ್ತಿ ಪಡೆಯಲು ಇರುವ ಏಕೈಕ ಮಾರ್ಗೋಪಾಯ ಎಂಬುದು ತಜ್ಞರ ಅಭಿಮತ. ಈ ಸಲುವಾಗಿಯೇ ಹೊರವರ್ತುಲ ರಸ್ತೆಯಲ್ಲಿ ಸಿಲ್ಕ್ ಬೋರ್ಡ್‍ನಿಂದ ಕೆ.ಆರ್.ಪುರದ ಟಿನ್ ಫ್ಯಾಕ್ಟರಿವರೆಗೆ 'ಬಸ್ ಆದ್ಯತಾ ಪಥ'ವನ್ನು ಪ್ರಾಯೋಗಿಕವಾಗಿ ರೂಪಿಸಲಾಗಿದೆ.

ಕೊರೊನಾ ನಿಯಂತ್ರಣಕ್ಕೆ ವಿಧಿಸಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ಬಸ್‌ ಆದ್ಯತಾ ಪಥದ ಮೂಲಸೌಕರ್ಯಗಳನ್ನೂಬಿಬಿಎಂಪಿ ಮತ್ತು ಬಿಎಂಟಿಸಿ ಸಹಯೋಗದಲ್ಲಿ ಪೂರ್ಣ ಪ್ರಮಾಣದಲ್ಲಿ ಅಳವಡಿಸಲಾಗಿದೆ. ಲಾಕ್‌ಡೌನ್‌ ತೆರವುಗೊಂಡು ನಗರವು ಮತ್ತೆ ಸಹಜ ಸ್ಥಿತಿಗೆ ಬರುತ್ತಿರುವ ಸಂದರ್ಭವನ್ನು ವಾಹನ ದಟ್ಟಣೆ ಸಮಸ್ಯೆ ನಿವಾರಣೆ ಸದ್ಬಳಕೆ ಮಾಡಿಕೊಳ್ಳಬೇಕು. ಹೆಚ್ಚು ದಟ್ಟಣೆ ಇರುವ ಇನ್ನಷ್ಟು ಕಾರಿಡಾರ್ ಗಳಲ್ಲಿ ಶೀಘ್ರವೇ ಬಸ್‌ ಆದ್ಯತಾ ಪಥಗಳನ್ನು ನಿರ್ಮಿಸಿ ನಗರದ ಜನಜೀವನದಲ್ಲಿ ವಾಹನ ದಟ್ಟಣೆಯ ಕರಾಳ ಅಧ್ಯಾಯಕ್ಕೆ ಅಂತ್ಯ ಹಾಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.

'ಎರಡನೇ ಹಂತದಲ್ಲಿ 12 ಕಾರಿಡಾರ್‌ಗಳಲ್ಲಿ ಬಸ್ ಆದ್ಯತಾ ಪಥ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಹೊರ ವರ್ತುಲ ರಸ್ತೆಗಳಲ್ಲಿ ಮಾತ್ರ ಪಥ ನಿರ್ಮಾಣದಿಂದ ದಟ್ಟಣೆ ತಗ್ಗದು. ಇದು ನಗರದಾದ್ಯಂತ ವಿಸ್ತರಣೆ ಮಾಡಿದಾಗ ಮಾತ್ರ ವಾಹನ ದಟ್ಟಣೆ ನಿಯಂತ್ರಣಕ್ಕೆ ತರಲು ಸಾಧ್ಯ. ಕೊರೊನಾ ಕಾರಣದಿಂದ ವಾಹನ ದಟ್ಟಣೆ ಕೊಂಚ ತಗ್ಗಿದೆ. ನಗರದೆಲ್ಲೆಡೆ ಆದ್ಯತಾ ಪಥಗಳನ್ನು ಅಳವಡಿಸಲು ಇದು ಸೂಕ್ತ ಸಮಯ' ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸಲಹೆ ನೀಡಿದೆ.

ಸಿಲ್ಕ್ ಬೋರ್ಡ್‍ನಿಂದ ಕೆ.ಆರ್.ಪುರ ಟಿನ್ ಫ್ಯಾಕ್ಟರಿ ತನಕ ಹೊರವರ್ತುಲ ರಸ್ತೆಯಲ್ಲಿ ಸಿದ್ಧಪಡಿಸಿರುವ ಬಸ್‍ ಆದ್ಯತಾ ಪಥದಲ್ಲಿ ಸಂಚರಿಸುವ ಬಸ್ ಚಾಲಕರಿಗೆ ಬಿಎಂಟಿಸಿ ತರಬೇತಿಯನ್ನೂ ನೀಡಿದೆ. ಪ್ರಯಾಣಕ್ಕೆ ಬಸ್ ಬಳಸುವಂತೆ ಜನಜಾಗೃತಿ ಮೂಡಿಸಲಾಗುತ್ತಿದೆ.

2019ರ ನವೆಂಬರ್‌ನಿಂದಲೇ ಈ ಪ್ರತ್ಯೇಕ ಪಥ ಆರಂಭವಾಗಿತ್ತು. ಆದರೆ, ಅದಕ್ಕೆ ಅಗತ್ಯವಿರುವ ಪರಿಕರಗಳನ್ನು, ಮಾರ್ಗಸೂಚಿಗಳನ್ನು ಅಳವಡಿಸುವ ಕಾರ್ಯ ಆಗ ಪೂರ್ಣಗೊಂಡಿರಲಿಲ್ಲ. ಈಗ ಈ ಕಾರ್ಯ ಪೂರ್ಣಗೊಂಡಿದೆ. ಈ ಪಥದಲ್ಲಿ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಬಿಎಂಟಿಸಿ ಬಸ್‍, ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಯೋಜನೆ ಆರಂಭಿಸಿದಾಗ ಆದ್ಯತೆ ಪಥದೊಳಗೆ ಬೇರೆ ವಾಹನಗಳು ನುಸುಳುವುದನ್ನು ತಡೆಯಲು ಕಬ್ಬಿಣದ ಬೊಲ್ಲಾರ್ಡ್‍ಗಳನ್ನು ಬಿಬಿಎಂಪಿ ಅಳವಡಿಸಿತ್ತು. ಖಾಸಗಿ ವಾಹನಗಳು ಬೊಲ್ಲಾರ್ಡ್‍ಗಳಿಗೇ ಡಿಕ್ಕಿ ಹೊಡೆದು ಸರಣಿ ಅಪಘಾತಗಳಿಂದ ಸಮಸ್ಯೆ ಸೃಷ್ಟಿಯಾಗಿತ್ತು. ಇದೀಗ ಕಬ್ಬಿಣದ ಬೊಲ್ಲಾರ್ಡ್ ತೆಗೆದು ಹಾಕಿ, ಎಫ್‌ಆರ್‌ಪಿ (ಫೈಬರ್ ರಿಇನ್‌ಫೋರ್ಸಡ್ ಪ್ಲಾಸ್ಟಿಕ್) ಬೊಲ್ಲಾರ್ಡ್‍ಗಳನ್ನು ಅಳವಡಿಸಲಾಗಿದೆ.

ಆದರೆ, ಈಗಲೂ ಕೆಲ ಖಾಸಗಿ ವಾಹನಗಳು ರಾಜಾರೋಷವಾಗಿ ಆದ್ಯತಾ ಪಥದಲ್ಲಿ ಸಂಚರಿಸುತ್ತಿವೆ. ಇದರ ನಿಯಂತ್ರಣಕ್ಕಾಗಿ ಪಾಲಿಕೆ ವತಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದ್ದು, ನಿಯಮ ಉಲ್ಲಂಘಿಸುವ ಖಾಸಗಿ ವಾಹನಗಳಿಗೆ ಭಾರಿ ದಂಡ ವಿಧಿಸಲಾಗುತ್ತದೆ.

ನಿತ್ಯ ಸರಾಸರಿ ಕನಿಷ್ಠ 7 ಲಕ್ಷ ವಾಹನಗಳು ಸಂಚರಿಸುವ ಹಾಗೂ ಸದಾ ದಟ್ಟಣೆಗೆ ಮತ್ತೊಂದು ಹೆಸರಾಗಿದ್ದ ಸಿಲ್ಕ್ ಬೋರ್ಡ್-ಟಿನ್‍ಫ್ಯಾಕ್ಟರಿ ಮಾರ್ಗದಲ್ಲಿ ಬಸ್ ಆದ್ಯತಾ ಪಥ ಜಾರಿಗೆ ಬಂದ ಬಳಿಕ ಈ ಹಿಂದಿನ ಪ್ರಯಾಣದ ಅವಧಿಗೆ ಹೋಲಿಸಿದರೆ, ಪ್ರತಿ ಒಂದು ಗಂಟೆ ಪ್ರಯಾಣದಲ್ಲಿ ಸರಾಸರಿ 7 ನಿಮಿಷ ಉಳಿತಾಯವಾಗುತ್ತಿದೆ ಎಂದು 'ಸಿಟಿಜನ್ಸ್ ಫಾರ್ ಬೆಂಗಳೂರು' (ಸಿಎಫ್‍ಬಿ) ಸಂಘಟನೆಯು ಬಸ್ ಪ್ರಯಾಣಿಕರ ಅನಿಸಿಕೆಗಳನ್ನು ಆಧರಿಸಿ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ.

ದಟ್ಟಣೆ ಅವಧಿಯಲ್ಲಿ ಸಂಚರಿಸುವ ಬಿಎಂಟಿಸಿ ಬಸ್‍ಗಳ ಸಂಚಾರದ ಸರಾಸರಿ ವೇಗ ಹೆಚ್ಚಳವಾಗಿದೆ. ಬೆಳಿಗ್ಗೆ ಮತ್ತು ಸಂಜೆ ದಟ್ಟಣೆ ಅವಧಿಯಲ್ಲಿ ಸಿಲ್ಕ್ ಬೋರ್ಡ್‍ನಿಂದ ಟಿನ್ ಫ್ಯಾಕ್ಟರಿ ತಲುಪಲು ಈ ಹಿಂದೆ ಸರಾಸರಿ 1 ಗಂಟೆ 30 ನಿಮಿಷ ಬೇಕಿತ್ತು. ಈಗ ಅದು 1 ಗಂಟೆ 14 ನಿಮಿಷಗಳಿಗೆ ಇಳಿದಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ನಗರದಲ್ಲಿ ಕೊರೊನಾ ಸೋಂಕು ಹರಡುವ ಮುನ್ನ ಈ ಸಮೀಕ್ಷೆ ನಡೆಸಲಾಗಿತ್ತು.

'ಈ ಮಾರ್ಗದಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿರುವ ಆದ್ಯತಾ ಪಥವು ಭವಿಷ್ಯದಲ್ಲಿ ನಗರ ಸುಗಮ ಸಂಚಾರಕ್ಕೆ ಬುನಾದಿಯಾಗಲಿದೆ. ಬಹುತೇಕ ಖಾಸಗಿ ಸಂಸ್ಥೆಗಳು ಹೊರವರ್ತುಲ ರಸ್ತೆಗಳ ಆಸುಪಾಸಿನಲ್ಲಿರುವುದರಿಂದ ಇಲ್ಲಿನ ಸಂಚಾರ ವ್ಯವಸ್ಥೆ ಸುಲಭವಾಗಬೇಕು' ಎನ್ನುತ್ತಾರೆ ಸಿಎಫ್‍ಬಿ ಸಹಸಂಸ್ಥಾಪಕ ಶ್ರೀನಿವಾಸ ಅಲವಿಲ್ಲಿ.

'ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಹೊರವರ್ತುಲ ರಸ್ತೆಗಳೇ ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣ ಎನ್ನಬಹುದು. ಪ್ರಯಾಣಿಕರಿಗೆ ಈ ರಸ್ತೆಗಳಲ್ಲಿ ಸಾರ್ವಜನಿಕ ಸಾರಿಗೆ ಹೆಚ್ಚು ಸುಲಭ ಹಾಗೂ ಸರಳೀಕರಿಸಿದರೆ, ಬಸ್ ಬಳಕೆಗೆ ಜನ ಒಲವು ತೋರುವುದರಲ್ಲಿ ಅನುಮಾನವಿಲ್ಲ. ಇದರಿಂದ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರವೂ ತಗ್ಗಲಿದೆ' ಎಂದು ಸಲಹೆ ನೀಡಿದರು.

'ಆದ್ಯತಾ ಪಥದಲ್ಲಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ನೀಡಬೇಕು. ನಿಯಮ ಉಲ್ಲಂಘಿಸುವ ಖಾಸಗಿ ವಾಹನಗಳಿಗೆ ಮೊದಲಿಗೆ ಭಾರಿ ದಂಡ ವಿಧಿಸಬೇಕು. ದಂಡದ ಪ್ರಮಾಣ ಹೆಚ್ಚಿಸಿದರೆ ಅನ್ಯ ವಾಹನಗಳು ಆದ್ಯತಾ ಪಥದತ್ತ ಸುಳಿಯದಂತೆ ಮಾಡಬಹುದು. ವಾಹನ ದಟ್ಟಣೆ ನಿಯಂತ್ರಣ ಹಾಗೂ ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡಲು ಆದ್ಯತಾ ಪಥಗಳೇ ಏಕೈಕ ಪರಿಹಾರ' ಎಂದರು.

ನೂರಾರು ವಾಹನಗಳ ಸಂಚಾರವಿಲ್ಲ: 'ಈ ಮಾರ್ಗದಲ್ಲಿ ಇಲ್ಲಿನ ಖಾಸಗಿ ಕಂಪನಿಗಳಿಗೆ ಉದ್ಯೋಗಿಗಳನ್ನು ಕರೆತರುವ ಖಾಸಗಿ ವಾಹನಗಳೇ ಹೆಚ್ಚು ಸಂಚರಿಸುತ್ತಿದ್ದವು. ಒಂದೇ ಸಂಸ್ಥೆಗೆ ಸೇರಿದ 200ಕ್ಕೂ ಅಧಿಕ ಬಸ್‍ಗಳು ನಿತ್ಯ ಈ ಮಾರ್ಗದಲ್ಲಿ ಹೋಗಿಬರುತ್ತವೆ. ಆದರೆ, ಕೊರೊನಾ ಬಂದ ನಂತರ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವುದರಿಂದ ಈ ಬಸ್‍ಗಳು ರಸ್ತೆಗೆ ಇಳಿಯುತ್ತಿಲ್ಲ. ಇಷ್ಟು ಸಂಖ್ಯೆಯ ಬಸ್‍ಗಳು ಒಂದು ರಸ್ತೆಯಲ್ಲಿ ಕಡಿಮೆಯಾದರೆ, ದಟ್ಟಣೆಯೇ ಇರುವುದಿಲ್ಲ' ಎಂದು ಹೊರವರ್ತುಲ ರಸ್ತೆಯ ರೇನ್‍ಬೋ ಜಂಕ್ಷನ್ ಬಳಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಪಥ ಪ್ರವೇಶಿಸಿದರೆ ಸಿಸಿಟಿವಿ ಕಣ್ಗಾವಲು’

‘ಆದ್ಯತಾ ಪಥದಲ್ಲಿ ಬಿಎಂಟಿಸಿ ಹೊರತುಪಡಿಸಿ, ಬೇರೆ ಖಾಸಗಿ ವಾಹನಗಳು ಸಂಚರಿಸಿದರೆ ದಂಡ ವಿಧಿಸಲು ಅನುಕೂಲವಾಗುವಂತೆ ಈ ಮಾರ್ಗದ ಎರಡೂ ಬದಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. 15 ದಿನಗಳಲ್ಲಿ ಇದು ಪೂರ್ಣಗೊಳ್ಳಲಿದೆ’ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು. ‘ಮೊದಲ ಹಂತದ ಬಸ್ ಆದ್ಯತಾ ಪಥದ ಗುರಿ ತಲುಪಿದ ಬಳಿಕ, ನಗರದ ಉದ್ದೇಶಿತ ಸ್ಥಳಗಳಲ್ಲಿ ಆದ್ಯತಾ ಪಥಗಳನ್ನು ನಿರ್ಮಾಣ ಮಾಡಲಿದ್ದೇವೆ’ ಎಂದರು. ‘ಸಿಸಿಟಿವಿ ಕ್ಯಾಮೆರಾಗಳು ಕನಿಷ್ಠ 250 ಮೀಟರ್ ದೂರದವರೆಗೆ ಸಂಚರಿಸುವ ವಾಹನಗಳ ನೋಂದಣಿ ಸಂಖ್ಯೆ ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ. 1 ಕಿ.ಮೀ ವ್ಯಾಪ್ತಿಗೆ ನಾಲ್ಕು ಕ್ಯಾಮೆರಾ ಅಳವಡಿಸಹುದು’ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಭಿನ್ನವಾಗಿರಲಿವೆ ಪಥಗಳ ವಿನ್ಯಾಸ

‘ಟಿನ್‍ಫ್ಯಾಕ್ಟರಿಯಿಂದ ಸಿಲ್ಕ್ ಬೋರ್ಡ್‍ವರೆಗಿನ ರಸ್ತೆಗೆ ಅನುಗುಣವಾಗಿ ಆದ್ಯತಾ ಪಥವನ್ನು ವಿನ್ಯಾಸ ಮಾಡಲಾಗಿದೆ. ನಗರದ ವಿವಿಧ ಕಾರಿಡಾರ್ ಗಳಲ್ಲಿ ಉದ್ದೇಶಿಸಿರುವ ಆದ್ಯತಾ ಪಥವನ್ನು ಅಲ್ಲಿನ ರಸ್ತೆಗಳಿಗೆ ಹೋಲುವಂತೆ ವಿನ್ಯಾಸ ಮಾಡಲಾಗುವುದು. ಹಾಗಾಗಿ, ಎಲ್ಲ ಕಾರಿಡಾರ್ ಗಳಲ್ಲಿ ನಿರ್ಮಾಣವಾಗುವ ಆದ್ಯತಾ ಪಥಗಳು ಭಿನ್ನವಾಗಿ ಇರಲಿವೆ’ ಎಂದು ನಗರ ಭೂಸಾರಿಗೆ ನಿರ್ದೇಶನಾಲಯದ (ಡಲ್ಟ್) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಂಕಿ ಅಂಶ

16 ಕಿ.ಮೀ – ಸಿಲ್ಕ್ ಬೋರ್ಡ್-ಟಿನ್‍ ಫ್ಯಾಕ್ಟರಿವರೆಗಿನ ದೂರ

3.5 ಮೀಟರ್ – ಬಸ್ ಆದ್ಯತಾ ಪಥದ ವಿಸ್ತೀರ್ಣ

₹15 ಕೋಟಿ – ಬಸ್ ಆದ್ಯತಾ ಪಥದ ನಿರ್ಮಾಣ ವೆಚ್ಚ

***

ಬಸ್ ಆದ್ಯತಾ ಪಥ ನಿರ್ಮಾಣದಿಂದ ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡಿದ್ದರಿಂದ ದಟ್ಟಣೆಯೂ ಕಡಿಮೆಯಾಗಿದೆ. ಬಸ್ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

- ಸಿ.ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT