ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು: ಸಣ್ಣ ಕೈಗಾರಿಕೆಗಳ ಮುಂದಿದೆ ದೊಡ್ಡ ಸವಾಲುಗಳ ಸರಮಾಲೆ

ಹಸಿ ಗಾಯದ ಮೇಲೆ ಬರೆ ಎಳೆದಂತೆ ಬಂದೆರಗಿದ ಎರಡನೇ ಲಾಕ್‌ಡೌನ್‌
Last Updated 20 ಜೂನ್ 2021, 18:48 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಸಣ್ಣ ಕೈಗಾರಿಕೆಗಳ ತವರು. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್ ಮೇಲೆ ಲಾಕ್‌ಡೌನ್ ಹೇರಿಕೆಯಾಗುತ್ತಿರುವುದು ಸಣ್ಣ ಕೈಗಾರಿಕೆಗಳಿಗೆ ಹಸಿ ಗಾಯಗಳ ಮೇಲೆ ಬರೆ ಎಳೆದಂತೆ ಆಗುತ್ತಿದೆ. ನಿರ್ಬಂಧಗಳು ಸಡಿಲವಾದರೂ ಕೈಗಾರಿಕೋದ್ಯಮಿಗಳು ಸವಾಲುಗಳ ಸರಮಾಲೆಯನ್ನೇ ಎದುರಿಸಬೇಕಾಗಿದೆ.

ದಕ್ಷಿಣ ಏಷ್ಯಾದಲ್ಲಿನ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶವೂ ಒಂದು. ಇದನ್ನೂ ಒಳಗೊಂಡಂತೆ ಬೆಂಗಳೂರು ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳ ಹಬ್ ಎಂದೇ ಕರೆಸಿಕೊಳ್ಳುತ್ತದೆ. ಆಟೊಮೊಬೈಲ್ ಬಿಡಿಭಾಗ, ಪೌಡರ್ ಕೋಟಿಂಗ್, ಫ್ಯಾಬ್ರಿಕೇಷನ್, ಪ್ಯಾಕೇಜಿಂಗ್ ಇಂಡಸ್ಟ್ರಿ, ಎಲೆಕ್ಟ್ರೊ ಪ್ಲೇಟಿಂಗ್, ಮೆಷೀನ್ ಟೂಲ್ ಕಾಂಪೊನೆಂಟ್ಸ್‌ ತಯಾರಿಕೆಯಲ್ಲಿ ಸಣ್ಣ ಸಣ್ಣ ಕೈಗಾರಿಕೆಗಳು ದೊಡ್ಡ ಮಟ್ಟದ ಕೊಡುಗೆ ನೀಡುತ್ತಿವೆ.

ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ 2019ರಲ್ಲಿ ಆರ್ಥಿಕ ಹಿಂಜರಿತದಿಂದ ಕೈಗಾರಿಕೆಗಳಿಗೆ ಕೆಲಸ ಇಲ್ಲದಂತಾಗಿತ್ತು. ಇನ್ನೇನು ಚೇತರಿಕೆ ಹಾದಿಯಲ್ಲಿದಾಗ ಕೋವಿಡ್ ಮೊದಲನೇ ಅಲೆಯ ಲಾಕ್‌ಡೌನ್ ಎದುರಾಯಿತು. ಅದರಿಂದಲೂ ಸುಧಾರಿಸಿಕೊಳ್ಳುವ ತವಕದಲ್ಲಿದ್ದಾಗ ಎರಡನೇ ಅಲೆಯ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಲಾಯಿತು. ಇದರಿಂದ ಚೇತರಿಸಿಕೊಳ್ಳುವುದು ಹೇಗೆ ಎಂಬ ಆತಂಕ ಉದ್ಯಮಿಗಳನ್ನು ಕಾಡುತ್ತಿದೆ.

ಕಚ್ಚಾ ವಸ್ತುಗಳ ದರ ಏರಿಕೆ, ಕಾರ್ಮಿಕರ ಕೊರತೆ, ಬ್ಯಾಂಕ್ ಸಾಲದ ಕಂತಿನ ಬಾಕಿ, ವಿದ್ಯುತ್ ದರ ಏರಿಕೆಗಳಿಂದ ಸಣ್ಣ ಕೈಗಾರಿಕೋದ್ಯಮಿಗಳು ಕಂಗಾಲಾಗಿದ್ದಾರೆ. ಅದರಲ್ಲೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿರುವುದು ಪೆಟ್ಟಿನ ಮೇಲೆ ಪೆಟ್ಟು ತಿಂದು ತೆವಳುತ್ತಿದ್ದ ಹೆಳವ ಎದ್ದು ನಿಲ್ಲಲು ಪ್ರಯತ್ನದಲ್ಲಿದ್ದಾಗ ‌ಆತನ ಕಾಲು ಮುರಿದಂತಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ವಿದ್ಯುತ್ ನಿಗದಿತ ಶುಲ್ಕ ಪಾವತಿಗೆ ವಿನಾಯಿತಿ ನೀಡಲಾಗಿದೆ. ಅದೊಂದು ಉಪಕಾರ ಬಿಟ್ಟರೆ, ಸರ್ಕಾರದಿಂದ ಈ ಕ್ಷೇತ್ರದ ಬೇರೆ ಬೇಡಿಕೆಗಳಿಗೆ ಮನ್ನಣೆ ದೊರೆತಿಲ್ಲ. ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಬ್ಯಾಂಕ್ ಸಾಲದ ಕಂತು ಪಾವತಿಗೆ ವಿನಾಯಿತಿ ದೊರೆತಿತ್ತು. ಈ ಬಾರಿ ಅದನ್ನೂ ಸರ್ಕಾರ ಮಾಡಿಲ್ಲ. ಲಾಕ್‌ಡೌನ್ ಕಾರಣವನ್ನು ಪರಿಗಣನೆಗೇ ಪಡೆಯದೆ ಕಂತು ಪಾವತಿಸಲೇಬೇಕು ಎಂದು ಬ್ಯಾಂಕ್‌ಗಳು ಪಟ್ಟು ಹಿಡಿದಿವೆ.

‘ದುಡಿಯುವ ಛಲದೊಂದಿಗೆ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಯಂತ್ರ ಖರೀದಿಸಿ ಕೈಗಾರಿಕೆ ಆರಂಭಿಸಿದ್ದೇವೆ. ಯಂತ್ರಗಳ ಚಲನೆಯನ್ನೇ ನಿಲ್ಲಿಸಿದರೆ ದುಡಿಯುವುದು ಹೇಗೆ, ಯಾವ ಹಣದಲ್ಲಿ ಸಾಲದ ಕಂತು ಪಾವತಿಸಬೇಕೋ ತಿಳಿಯದು. ಕಂತು ಪಾವತಿ ಮೂರು ತಿಂಗಳು ನಿಂತರೆ ವಸೂಲಾಗದ ಸಾಲ(ಎನ್‌ಪಿಎ) ಎಂದು ಪರಿಗಣಿಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರಿಗಳು ಮುಂದಾಗುತ್ತಾರೆ’ ಎಂದು ಉದ್ಯಮಿಗಳು ಅಳಲು ತೋಡಿಕೊಳ್ಳುತ್ತಾರೆ.

ಲಾಕ್‌ಡೌನ್ ಅವಧಿಯ ಬ್ಯಾಂಕ್ ಸಾಲದ ಕಂತು ಪಾವತಿಯನ್ನು ಮುಂದೂಡಬೇಕು ಎಂಬ ಮನವಿಯನ್ನು ಪೀಣ್ಯ ಕೈಗಾರಿಕಾ ಸಂಘ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ) ಸರ್ಕಾರಕ್ಕೆ ಸಲ್ಲಿಸಿವೆ. ಆದರೂ, ಸರ್ಕಾರ ಅವುಗಳನ್ನು ಪರಿಗಣಿಸಿಲ್ಲ ಎಂಬುದು ಉದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಕೈಗಾರಿಕೆಗಳ ಉಸಿರಾಟಕ್ಕೂ ಬೇಕಿದೆ ಆಮ್ಲಜನಕ
ಕೋವಿಡ್‌ ಎರಡನೇ ಅಲೆಯ ರಭಸ ಉತ್ತುಂಗದಲ್ಲಿದ್ದಾಗ ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ ಎದುರಾಗಿದ್ದರಿಂದ ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆಯನ್ನು ಸರ್ಕಾರ ನಿಷೇಧಿಸಿತ್ತು. ಈಗಲೂ ಆಮ್ಲಜನಕ ಪಡೆಯಲು ಅವಕಾಶ ಕಲ್ಪಿಸಿಲ್ಲ.

ಆಮ್ಲಜನಕ ಲಭ್ಯ ಇಲ್ಲದ ಕಾರಣ ಪೀಣ್ಯ ಕೈಗಾರಿಕಾ ಪ್ರದೇಶವೊಂದರಲ್ಲೇ ಸುಮಾರು 2 ಸಾವಿರದಷ್ಟು ಕೈಗಾರಿಕೆಗಳು ಕೆಲಸ ಆರಂಭಿಸಲು ಆಗಿಲ್ಲ. ಕಟ್ಟಿಂಗ್ ಮಷಿನ್‌ಗಳು ಆಮ್ಲಜನಕ ಇಲ್ಲದೆ ಕಾರ್ಯ ಆರಂಭಿಸಲು ಸಾಧ್ಯವೇ ಇಲ್ಲ. ಹೀಗಾಗಿ, ತುರ್ತಾಗಿ ಆಮ್ಲಜನಕ ಪೂರೈಕೆಗೆ ಸರ್ಕಾರ ಮುಂದಾಗಬೇಕು ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಸಿ. ಪ್ರಕಾಶ್ ಒತ್ತಾಯಿಸಿದರು.

‘ಕೋವಿಡ್ ಪ್ರಕರಣಗಳು ಜಾಸ್ತಿ ಆಗಿದ್ದ ಸಂದರ್ಭದಲ್ಲಿ ಜೀವ ಉಳಿಯುವುದು ಮುಖ್ಯ ಎಂಬ ಕಾರಣಕ್ಕೆ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸಲು ನಾವು ಸಹಕಾರ ನೀಡಿದ್ದೇವೆ. ಈಗ ಪರಿಸ್ಥಿತಿ ಸುಧಾರಿಸಿದೆ. ಸರ್ಕಾರ ಕೂಡಲೇ ನಿಷೇಧ ಹಿಂಪಡೆಯಬೇಕು’ ಎಂದು ಮನವಿ ಮಾಡಿದರು.

‘ಕಾರ್ಮಿಕರ ಕೊರತೆ ಉದ್ಯಮವನ್ನು ಬಹುವಾಗಿ ಕಾಡುತ್ತಿದೆ. ಲಾಕ್‌ಡೌನ್ ವೇಳೆ ಊರಿನ ಹಾದಿ ಹಿಡಿದ ಕಾರ್ಮಿಕರು ವಾಪಸ್ ಬಂದಿಲ್ಲ. ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅವರು ವಾಪಸ್ ಬರುವುದಕ್ಕೆ ಮನಸ್ಸೂ ಮಾಡುತ್ತಿಲ್ಲ. ಸರ್ಕಾರ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಬೇಕಿದೆ ವಿಶೇಷ ಪ್ಯಾಕೇಜ್
ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಾ ವಲಯಗಳಿಗೂ ಪ್ಯಾಕೇಜ್ ಘೋಷಣೆ ಮಾಡಿದ ಸರ್ಕಾರ, ಸಣ್ಣ ಕೈಗಾರಿಕೆಗಳನ್ನು ಮರೆತಿದೆ. ನೌಕರರಿಗೆ ಸಂಬಳ ಕೊಡಲಾಗದ ಸ್ಥಿತಿಯಲ್ಲಿ ಉದ್ಯಮ ಇದೆ ಎಂದು ಸಿ. ಪ್ರಕಾಶ್ ಹೇಳಿದರು.

ಈ ಉದ್ಯಮ ನಡೆಸಲು ಬರುವುದೇ ಕಷ್ಟ‍ ಎಂಬ ಸ್ಥಿತಿ ಇದೆ. ಈ ಸಂದರ್ಭದಲ್ಲಿ ಉದ್ಯಮಿಗಳಿಗೆ ನೆರವು ಸಿಗದಿದ್ದರೆ ಈ ಕ್ಷೇತ್ರದಿಂದಲೇ ಹೊರ ಹೋಗುವ ಅತಂಕ ಇದೆ. ಹೀಗಾಗಿ, ಸರ್ಕಾರ ಪ್ಯಾಕೇಜ್‌ ಘೋಷಣೆ ಮಾಡಬೇಕು. ಕಾರ್ಮಿಕರಿಗೂ ನೆರವು ಸಿಗಬೇಕು ಎಂದು ಆಗ್ರಹಿಸಿದರು.

ಬೇರೆಯವರಂತೆ ಮನೆಯಿಂದಲೇ ಕೆಲಸ ಮಾಡಲು ಇಲ್ಲಿ ಸಾಧ್ಯವಿಲ್ಲ. ಹೀಗಾಗಿ ಕಾರ್ಮಿಕರನ್ನು ಕೋವಿಡ್ ಮುಂಚೂಣಿ ಯೋಧರು ಎಂದು ಪರಿಗಣಿಸಬೇಕು. ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ಕಾರ್ಖಾನೆ ಪರವಾನಗಿ ನವೀಕರಣ, ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆಯುವುದನ್ನಾದರೂ ಸರ್ಕಾರ ಮುಂದೂಡಬೇಕು ಎಂದು ಮನವಿ ಮಾಡಿದರು. ಈ ಸಂಬಂಧ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಚ್ಚಾ ವಸ್ತು: ಕಬ್ಬಿಣದ ಕಡಲೆ
ಕೈಗಾರಿಕೆಗಳಿಗೆ ದುಬಾರಿಯಾಗಿರುವ ಕಚ್ಚಾ ವಸ್ತುಗಳಲ್ಲಿ ಕಬ್ಬಿಣದ ಬೆಲೆಯಂತೂ ಕೈಗೆ ಎಟುಕದೇ ಅಕ್ಷರಶಃ ‘ಕಬ್ಬಿಣದ ಕಡಲೆ’ಯೇ ಆಗಿದೆ.

ಕಚ್ಚಾ ಕಬ್ಬಿಣವನ್ನು ವಿದೇಶಗಳಿಗೆ ರಫ್ತು ಮಾಡಲು ಅವಕಾಶ ನೀಡಲಾಗಿದೆ. ಡಾಲರ್ ರೂಪದಲ್ಲಿ ಹಣ ದೊರೆಯುತ್ತಿರುವ ಕಾರಣ ಸ್ಟೀಲ್ ಕಂಪನಿಗಳು ಹೆಚ್ಚಾಗಿ ರಫ್ತು ಮಾಡುತ್ತಿವೆ. ಪರಿಣಾಮವಾಗಿ ದೇಸಿ ಕೈಗಾರಿಕೆಗಳಿಗೆ ಕಬ್ಬಿಣ ಸಿಗದಂತಾಗಿದ್ದು, ಬೆಲೆ ದುಪ್ಪಟ್ಟಾಗಿದೆ.

‘ಒಂದು ವರ್ಷಕ್ಕೆ ಬೇಕಾಗುವಷ್ಟು ಬಿಡಿಭಾಗಗಳನ್ನು ತಯಾರಿಸಿಕೊಡುವ ಒಪ್ಪಂದವನ್ನು ಸಣ್ಣ ಕೈಗಾರಿಕೆಗಳು ಮಾಡಿಕೊಂಡಿರುತ್ತವೆ. ಕಚ್ಚಾ ವಸ್ತು ಬೆಲೆ ಏರಿಕೆಯಾಗಿದೆ ಎಂಬ ಕಾರಣಕ್ಕೆ ಒಪ್ಪಂದ ಮೀರಲು ಆಗುವುದಿಲ್ಲ. ಅದೇ ಬೆಲೆಯಲ್ಲಿ ಬಿಡಿಭಾಗ ತಯಾರಿಸಿಕೊಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕುತ್ತಿವೆ’ ಎನ್ನುತ್ತಾರೆ ಪೀಣ್ಯ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಡಿ.ಟಿ. ವೆಂಕಟೇಶ್.

‘ರಫ್ತು ಹೆಚ್ಚಳದಿಂದ ಜಿಎಸ್‌ಟಿ ಸಂಗ್ರಹ ಹೆಚ್ಚಳ ಆಗಲಿದೆ ಎಂಬ ಕಾರಣಕ್ಕೆ ಸರ್ಕಾರವೂ ಅವಕಾಶ ನೀಡಿದೆ. ಜಿಎಸ್‌ಟಿ ಒಂದರ ಮೇಲೆ ಸರ್ಕಾರ ಕಣ್ಣಿಟ್ಟರೆ ಅದರ ಪರಿಣಾಮವು ದೇಶದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಮೇಲೆ ಬೀರಲಿದೆ. ಅದನ್ನೂ ಸರ್ಕಾರ ಗಮನಿಸಬೇಕಾಗುತ್ತದೆ’ ಎಂದು ಅವರು ವಿವರಿಸಿದರು.‌

ಕೆಲಸ ಕೈತಪ್ಪುವ ಆತಂಕ
ಬೃಹತ್ ಕೈಗಾರಿಕೆಗಳು ತಮಗೆ ಬೇಕಿರುವ ಬಿಡಿಭಾಗ ತಯಾರಿಸಿಕೊಡುವ ಕೆಲಸವನ್ನು ಸಣ್ಣ ಕೈಗಾರಿಕೆಗಳಿಗೆನೀಡುತ್ತವೆ. ಲಾಕ್‌ಡೌನ್ ಕಾರಣದಿಂದ ಈ ಕೆಲಸವೂಕೈತಪ್ಪುವ ಆತಂಕ ಎದುರಾಗಿದೆ ಎಂದು ರಾಜ್ಯ ಸಣ್ಣಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಕೆ.ಬಿ.ಅರಸಪ್ಪ ಹೇಳಿದರು.

‘ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್‌ನಲ್ಲಿ ಬೃಹತ್ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಿ ಸಣ್ಣ ಕೈಗಾರಿಕೆಗಳನ್ನು ಸರ್ಕಾರ ಮುಚ್ಚಿಸಿತ್ತು. ಆ ಸಂದರ್ಭದಲ್ಲಿ ತುರ್ತಾಗಿ ಬೇಕಿದ್ದ ಬಿಡಿಭಾಗಗಳನ್ನು ತಯಾರಿಸಿಕೊಡಲು ನೆರೆ ರಾಜ್ಯದಲ್ಲಿ ತೆರೆದುಕೊಂಡಿದ್ದ ಸಣ್ಣ ಕೈಗಾರಿಕೆಗಳಿಗೆ ಕೆಲಸ ಕೊಟ್ಟಿವೆ. ನಮ್ಮ ರಾಜ್ಯದ ದೊಡ್ಡ ಕೈಗಾರಿಕೆಗಳುಒಮ್ಮೆ ನೆರೆ ರಾಜ್ಯದ ಸಣ್ಣ ಕೈಗಾರಿಕೆಗಳನ್ನು ಅವಲಂಬಿಸಿದರೆ, ಅವುಗಳನ್ನು ಮರಳಿ ನಮ್ಮತ್ತ ಸೆಳೆಯುವುದು ಕಷ್ಟ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸಣ್ಣ ಕೈಗಾರಿಕೆಗಳ ಎಲ್ಲಾ ಸಮಸ್ಯೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವ ಈ ಉದ್ಯಮವನ್ನು ಉಳಿಸಿಕೊಳ್ಳಲು ಸರ್ಕಾರ ನೆರವಿಗೆ ಬರಬೇಕು’ ಎಂದು ಅವರು ಮನವಿ ಮಾಡಿದರು.

ಸವಾಲುಗಳೇನು?
*
ಕಾರ್ಮಿಕರ ಕೊರತೆ
* ಕಚ್ಚಾ ವಸ್ತುಗಳ ಬೆಲೆ ಏರಿಕೆ
* ಆಮ್ಲಜನಕದ ಕೊರತೆ
* ಬ್ಯಾಂಕ್ ಸಾಲದ ಬಾಕಿ
* ವಿದ್ಯುತ್ ದರ ಏರಿಕೆ

ಬೇಡಿಕೆಗಳೇನು?
* ವಿಶೇಷ ಪ್ಯಾಕೇಜ್ ಘೋಷಣೆ
* ಆಮ್ಲಜನಕ ನಿಷೇಧ ಹಿಂತೆಗೆತ
* ಸಾಲದ ಕಂತು ಪಾವತಿಗೆ ಕಾಲಾವಕಾಶ
* ಪರವಾನಗಿ ನವೀಕರಣ ಮುಂದೂಡಿಕೆ
* ಕಬ್ಬಿಣ ರಫ್ತಿಗೆ ಕಡಿವಾಣ
* ಸಾರ್ವಜನಿಕ ಸಾರಿಗೆ ವ್ಯವಸ್ಥೆ

***

ಉದ್ಯಮಿ ಆಗಬೇಕೆಂಬ ಆಸೆಯಿಂದ ಕೈಗಾರಿಕೆ ಆರಂಭಿಸಿದ ಒಂದೇ ತಿಂಗಳಲ್ಲಿ ಲಾಕ್‌ಡೌನ್ ಎದುರಾಯಿತು. ಈಗ ಮೂರು ತಿಂಗಳ ಬ್ಯಾಂಕ್ ಸಾಲದ ಕಂತು ಬಾಕಿ ಇದೆ. ನನ್ನ ಕನಸೇ ಛಿದ್ರವಾಗುವ ಆತಂಕ ಎದುರಾಗಿದೆ.
-ಎನ್‌. ಸತೀಶ್, ನವ ಉದ್ಯಮಿ

***

ಸಾಲ ಮಾಡಿ ಮೂರು ತಿಂಗಳ ಹಿಂದೆ ಉದ್ಯಮ ಆರಂಭಿಸಿದ್ದೇನೆ. ಊರಿಗೆ ಹೋದ ಕಾರ್ಮಿಕರು ವಾಪಸ್ ಬಂದಿಲ್ಲ. ಕಾರ್ಖಾನೆ ಮುನ್ನಡೆಸುವುದು ಹೇಗೆ ಎಂದೇ ಗೊತ್ತಾಗುತ್ತಿಲ್ಲ.
-ಯೋಗೇಶ್‌, ನವ ಉದ್ಯಮಿ

***

ಆರ್ಥಿಕ ಹಿಂಜರಿತ ಶುರುವಾದ ಬಳಿಕ ಒಂದರ ಮೇಲೊಂದು ಪೆಟ್ಟುಗಳನ್ನು ಸಣ್ಣ ಕೈಗಾರಿಕೆಗಳು ಅನುಭವಿಸುತ್ತಿವೆ. ಅದರ ಮೇಲೆ ವಿದ್ಯುತ್ ದರ ಹೆಚ್ಚಳದ ಬರೆಯನ್ನೂ ಸರ್ಕಾರ ಎಳೆದಿದೆ.
-ಮಲ್ಲರಾವ್ ಕುಲಕರ್ಣಿ, ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT