ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ 11 ಹೊಸ ಉದ್ಯಾನ: ಒತ್ತುವರಿ ತೆರವು ಜಾಗದಲ್ಲಿ ಹಸಿರೀಕರಣ

ಹಸಿರು ಪ್ರದೇಶ ವಿಸ್ತರಿಸಿಕೊಂಡ ದಕ್ಷಿಣ ವಲಯ
Last Updated 9 ಜನವರಿ 2023, 20:22 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನನಗರಿ ಎಂಬ ಖ್ಯಾತಿ ಹೊಂದಿದ್ದ ಬೆಂಗಳೂರು ಇದೀಗ ಹಸಿರು ಪ್ರದೇಶವನ್ನು ಗಮನಾರ್ಹ ರೀತಿಯಲ್ಲಿ ಹೆಚ್ಚಿಸಿಕೊಳ್ಳುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 1,233 ಉದ್ಯಾನಗಳ ಪಟ್ಟಿಗೆ 11 ಹೊಸ ಉದ್ಯಾನಗಳು ಸೇರ್ಪಡೆಗೊಳ್ಳುತ್ತಿವೆ. ಬೆಂಗಳೂರು ದಕ್ಷಿಣ ವಲಯ ಇದರಲ್ಲಿ ಹೆಚ್ಚಿನ ಪಾಲು ಪಡೆದಿದ್ದು, ಹಸಿರು ಪ್ರದೇಶವನ್ನು ವಿಸ್ತರಿಸಿಕೊಂಡು ಪ್ರಥಮ ಸ್ಥಾನ ಗಳಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪದ್ಮನಾಭನಗರ, ಬಸವನಗುಡಿ, ಕೆ.ಆರ್‌. ಪುರದಲ್ಲಿ ನಾಗರಿಕರ ಸೌಲಭ್ಯ (ಸಿ.ಎ) ಪ್ರದೇಶಗಳನ್ನು ನಿರ್ಮಿಸಿ, ಅದನ್ನು ಬಿಬಿಎಂಪಿಗೆ ವರ್ಗಾಯಿಸಿತ್ತು. ಆದರೆ ಅವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದರು. ಈ ಕುರಿತ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ, ಹಲವು ವರ್ಷಗಳ ವಿಚಾರಣೆಯ ನಂತರ ಇತ್ತೀಚೆಗೆ ತೀರ್ಪು ಬಂದಿತ್ತು. ತೀರ್ಪು ಬಂದ ಕೂಡಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯು ಎಲ್ಲ ರೀತಿಯ ಒತ್ತುವರಿಯನ್ನು ತೆರವು ಮಾಡಿ, ಅಲ್ಲಿ ಉದ್ಯಾನ ನಿರ್ಮಿಸುವ ಕಾಮಗಾರಿಯನ್ನು ಆರಂಭಿಸಿದೆ.

ಒತ್ತುವರಿಯಾಗಿದ್ದ 11 ಪ್ರಕರಣಗಳ ಪೈಕಿ ಸುಮಾರು 21 ಎಕರೆ ಪ್ರದೇಶದಲ್ಲಿ 11 ಉದ್ಯಾನಗಳನ್ನು ನಿರ್ಮಿಸಲಾಗುತ್ತಿದೆ. ಈ ಉದ್ಯಾನಗಳ ನಿರ್ಮಾಣಕ್ಕೆ ಸುಮಾರು ₹35 ಕೋಟಿ ವೆಚ್ಚ ಮಾಡಲಾಗುತ್ತಿದೆ. ಫೆನ್ಸಿಂಗ್‌, ವ್ಯಾಯಾಮ ಉಪಕರಣ, ಮಕ್ಕಳ ಆಟದ ಉಪಕರಣ, ಪಾದಚಾರಿ ಮಾರ್ಗ, ಆಸನ, ಗೆಜಬೊ ಹಾಗೂ ಎಲ್‌ಇಡಿ ದೀಪ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಲ್ಲಿ ನೀಡಲಾಗಿರುವ ಅನುದಾನ ಹಾಗೂ ಶಾಸಕರ ಅನುದಾನದಲ್ಲಿ ಈ ಉದ್ಯಾನಗಳನ್ನು ನಿರ್ಮಿಸಲಾಗುತ್ತಿದೆ. ಪದ್ಮನಾಭನಗರದ ಉದ್ಯಾನದಲ್ಲಿ ‘ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಯಲ್ಲಿ ಕಲಾಕೃತಿಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ ಉದ್ಘಾಟನೆಯಾಗಿರುವ ಅಟಲ್‌ ಬಿಹಾರಿ ವಾಜಪೇಯಿ ಉದ್ಯಾನದಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ.

‘ಕೆಲವು ಪ್ರಕರಣಗಳು 1998ರಿಂದ ನ್ಯಾಯಾಲಯದಲ್ಲಿದ್ದವು. ಒಂದೆರಡು ಉದ್ಯಾನಗಳು ಬಿಡಿಎ ನಿರ್ಮಿಸಿ, ಪಾಲಿಕೆಗೆ ನೀಡಿದ ಮೇಲೆ ಒತ್ತುವರಿಯಾಗಿದ್ದವು. ಉದ್ಯಾನಕ್ಕಾಗಿ ಮೀಸಲಾದ ಸಿಎ ನಿವೇಶನ ಎಂದು ನಮೂದಿಸಿ ಬಿಡಿಎ ಹಸ್ತಾಂತರಿಸಿದ್ದ ಪ್ರದೇಶಗಳೂ ಒತ್ತುವರಿಯಾಗಿದ್ದವು. ಕಳೆದ ಒಂದು ವರ್ಷದಲ್ಲಿ ಅವುಗಳನ್ನು ವಶಕ್ಕೆ ಪಡೆಯಲು ಸಾಕಷ್ಟು ಪ್ರಯತ್ನಪಡಲಾಯಿತು. ಕಾನೂನು ಕೋಶದ ಪ್ರಯತ್ನದಿಂದ ಬಿಬಿಎಂಪಿ ವಶಕ್ಕೆ ಈ ಪ್ರದೇಶಗಳು ಬಂದವು. ಕೂಡಲೇ ಒತ್ತುವರಿ ತೆರವು ಮಾಡಿ ಉದ್ಯಾನ ನಿರ್ಮಿಸುತ್ತಿದ್ದೇವೆ’ ಎಂದು ಬಿಬಿಎಂಪಿ ದಕ್ಷಿಣ ವಲಯದ ಕಾರ್ಯಪಾಲಕ ಎಂಜಿನಿಯರ್‌ ಮಹಾಂತೇಶ್‌ ಹೇಳಿದರು.

‘ಸಚಿವ ಆರ್‌. ಅಶೋಕ, ಶಾಸಕ ರವಿಸುಬ್ರಮಣ್ಯ ಅವರು ಶಾಸಕರ ನಿಧಿಯಿಂದ ಹಣ ಮಂಜೂರು ಮಾಡಿದ್ದು, ಕ್ಷಿಪ್ರಗತಿಯಲ್ಲಿ ಉದ್ಯಾನ ನಿರ್ಮಾಣ ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು.

ಇನ್ನಷ್ಟು ಉದ್ಯಾನ..
ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನೂ ಹಲವು ಹೊಸ ಉದ್ಯಾನಗಳನ್ನು ನಿರ್ಮಿಸುವ ಉದ್ದೇಶವಿದ್ದು ಜಾಗಗಳನ್ನು ಗುರುತಿಸಲಾಗುತ್ತಿದೆ. ಜಾಗ ಲಭ್ಯವಾಗುವ ಕಡೆ ಉದ್ಯಾನ ನಿರ್ಮಿಸಲಾಗುತ್ತದೆ. ಇದಲ್ಲದೆ 25ಕ್ಕೂ ಹೆಚ್ಚು ಉದ್ಯಾನಗಳಲ್ಲಿ ಅಭಿವೃದ್ಧಿ ಹಾಗೂ ಉನ್ನತೀಕರಣ ಕೆಲಸಗಳೂ ನಡೆಯುತ್ತಿವೆ ಎಂದು ಬಿಬಿಎಂಪಿ ತೋಟಗಾರಿಕೆ ವಿಭಾಗದ ಉಪ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು.

*
ಒತ್ತುವರಿ ತೆರವಾದ ಸ್ಥಳವನ್ನು ಹೆಚ್ಚು ದಿನ ಬಿಡಲು ಸಾಧ್ಯವಿಲ್ಲ. ಹೀಗಾಗಿ ಹಸಿರು ಪ್ರದೇಶವನ್ನಾಗಿ ಮಾಡಲು ಉದ್ಯಾನಗಳನ್ನು ನಿರ್ಮಿಸಲಾಗುತ್ತಿದೆ.
-ಜಯರಾಂ ರಾಯಪುರ, ದಕ್ಷಿಣ ವಲಯ ಆಯುಕ್ತ, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT