ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಯೋಜನೆ: ಕಟ್ಟುಕಟ್ಟಳೆಗಳದ್ದೇ ರಗಳೆ

ತಂತ್ರಾಂಶದ ಲೋಪಗಳಿಂದಾಗಿ ಯೋಜನಾ ನಕ್ಷೆ ಮಂಜೂರಾತಿಗೆ ಸಮಸ್ಯೆ l ಇದನ್ನೇ ನೆಪವಾಗಿಸಿ ಸತಾಯಿಸುವ ಪಾಲಿಕೆ ಅಧಿಕಾರಿಗಳು
Last Updated 9 ಮೇ 2022, 22:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ಯೋಜನಾ ನಕ್ಷೆಗಳಿಗೆ ಮಂಜೂರಾತಿ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಬಳಸುತ್ತಿರುವ ತಂತ್ರಾಂಶದ ಕೆಲ ಲೋಪಗಳಿಂದಾಗಿ ಹಾಗೂ ಕಟ್ಟುಕಟ್ಟಳೆಗಳಿಂದಾಗಿ ಕಟ್ಟಡ ನಕ್ಷೆಗೆ ಮಂಜೂರಾತಿ ಪಡೆಯಲು ಹೆಣಗಾಡಬೇಕಾದ ಸ್ಥಿತಿ ಇದೆ.

ಕೆಲಸ ಕಾರ್ಯಗಳನ್ನು ಸುಗಮಗೊಳಿಸುವ (ಈಸ್‌ ಆಫ್‌ ಡೂಯಿಂಗ್‌ ಬ್ಯುಸಿನೆಸ್‌) ಯೋಜನೆ ಅಂಗವಾಗಿ ಬಿಬಿಎಂಪಿಯು ವರ್ಷದ ಹಿಂದೆಯೇ ಕಟ್ಟಡ ನಕ್ಷೆ ಮಂಜೂರಾತಿ ವ್ಯವಸ್ಥೆಯನ್ನು ಕಾಗದರಹಿತಗೊಳಿಸಿದೆ. ಕಟ್ಟಡ ನಿರ್ಮಿಸುವವರಿಗೆ ಕಿರಿಕಿರಿರಹಿತವಾಗಿ ಹಾಗೂ ತ್ವರಿತವಾಗಿ ನಕ್ಷೆ ಮಂಜೂರಾತಿ ಸಿಗಬೇಕೆಂಬ ಉದ್ದೇಶದಿಂದ ಅನೇಕ ಸುಧಾರಣೆಗಳನ್ನೂ ಜಾರಿಗೊಳಿಸಲಾಗಿದೆ. ಕಟ್ಟಡ ನಕ್ಷೆ ಮಂಜೂರಾತಿಗೆ ವಿಶೇಷ ತಂತ್ರಾಂಶ ಬಳಸಲಾಗುತ್ತಿದೆ.

ನಕ್ಷೆ ಮಂಜೂರಾತಿ ಕಡತ ಯಾರ ಬಳಿ ಇದೆ ಎಂಬುದನ್ನೂ ಆನ್‌ಲೈನ್‌ನಲ್ಲೇ ನೋಡಬಹುದು. ಕಡತವು ಒಬ್ಬ ಅಧಿಕಾರಿಯ ಬಳಿ 7ಕ್ಕಿಂತ ಹೆಚ್ಚು ದಿನ ಉಳಿದರೆ ಸ್ವಯಂ ಅನುಮೋದನೆ ಸಿಗಲಿದೆ. ಇವೆಲ್ಲವೂ ಸ್ವಾಗತಾರ್ಹ ಕ್ರಮಗಳು. ಆದರೆ, ತಂತ್ರಾಂಶದಲ್ಲಿ ಕೆಲವು ಲೋಪಗಳಿವೆ. ಬಿಬಿಎಂಪಿಯ ಕಟ್ಟಡ ಯೋಜನೆ ಉಪನಿಯಮಗಳಲ್ಲೂ ಕೆಲ ದೋಷಗಳು ಹಾಗೆಯೇ ಉಳಿದಿವೆ. ಅವುಗಳನ್ನು ಸರಿಪಡಿಸಬೇಕು ಎಂಬುದು ಕಟ್ಟಡ ನಿರ್ಮಾಣ ಸಲಹೆಗಾರರ ಒತ್ತಾಯ.

ಸಣ್ಣ ನಿವೇಶನಗಳಲ್ಲಿ ನಿರ್ಮಿಸುವ ಕಟ್ಟಡದ ವಾಹನ ನಿಲುಗಡೆ ‍ಪ್ರದೇಶಕ್ಕೆ ರಸ್ತೆಯಿಂದ ನೇರವಾಗಿ ಸಂಪರ್ಕ ಒದಗಿಸಲಾಗಿರುತ್ತದೆ. ಆದರೂ, ಕಟ್ಟಡ ನಕ್ಷೆಗೆ ಮಂಜೂರಾತಿ ನೀಡುವ ತಂತ್ರಾಂಶವು ‘ಕಟ್ಟಡದ ವಾಹನ ನಿಲುಗಡೆ ಪ್ರದೇಶಕ್ಕೆ ಪ್ರತ್ಯೇಕ ರಸ್ತೆ ಸಂಪರ್ಕ ಕಲ್ಪಿಸದ ಕಾರಣ’ ಮಂಜೂರಾತಿ ನಿರಾಕರಿಸುತ್ತಿದೆ.

‘ಇದೊಂದು ತಾಂತ್ರಿಕ ಲೋಪ ಎಂಬುದು ಬಿಬಿಎಂಪಿ ಅಧಿಕಾರಿಗಳಿಗೂ ಗೊತ್ತಿದೆ. ಆನ್‌ಲೈನ್‌ ವ್ಯವಸ್ಥೆಯಲ್ಲಿ ನಕ್ಷೆಯು ತಿರಸ್ಕೃತಗೊಂಡಾಗ ಕಟ್ಟಡ ನಿರ್ಮಾಣ ಸಲಹಾ ಸಂಸ್ಥೆಯ ಎಂಜಿನಿಯರ್‌ಗಳು ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಲೇ ಬೇಕಾಗುತ್ತದೆ. ಅಧಿಕಾರಿಗಳು ಏನನ್ನು ನಿರೀಕ್ಷಿಸುತ್ತಾರೆ ಎಂಬುದು ತಿಳಿಯದ ವಿಷಯವೇನಲ್ಲ’ ಎಂದು ಕಟ್ಟಡ ಸಲಹಾ ಸಂಸ್ಥೆಯ ಎಂಜಿನಿಯರ್‌ ಒಬ್ಬರು ಪರಿಸ್ಥಿತಿ ವಿವರಿಸಿದರು.

ಕೆಲವು ನಿವೇಶನಗಳ ಉದ್ದ ಮತ್ತು ಅಗಲಗಳು ಏಕರೀತಿಯಲ್ಲಿರುವುದಿಲ್ಲ. ಅಂತಹ ನಿವೇಶನಗಳಲ್ಲಿ ಮುಂಭಾಗ ಹಾಗೂ ಹಿಂಭಾಗದ ಸೆಟ್‌ಬ್ಯಾಕ್‌ಗಳನ್ನು ಅಲ್ಲಿನ ಸ್ಥಳಾವಕಾಶಕ್ಕೆ ಅನುಗುಣವಾಗಿ ಬಿಡಬೇಕೇ ಹೊರತು, ಸರಾಸರಿ ಉದ್ದಗಲಕ್ಕೆ ಅನುಗುಣವಾಗಿ ಅಲ್ಲ. ಆದರೂ ತಂತ್ರಾಂಶವು ನಿವೇಶನದಲ್ಲಿ ಹೆಚ್ಚು ಉದ್ದವಿರುವ ಬದಿಯ ಅಳತೆಯನ್ನು ಮಾತ್ರ ಪರಿಗಣಿಸುತ್ತಿರುವುದರಿಂದ ಕಟ್ಟಡ ನಕ್ಷೆ ತಿರಸ್ಕೃತಗೊಳ್ಳುತ್ತಿದೆ ಎಂದು ಇನ್ನೊಬ್ಬ ಎಂಜಿನಿಯರ್‌ ತಿಳಿಸಿದರು.

‘ತಂತ್ರಾಂಶ – ಏಕಸ್ವಾಮ್ಯ ಬೇಡ’

ಬಿಬಿಎಂಪಿಯು ಕಟ್ಟಡ ಯೋಜನೆಗಳಿಗೆ ಮಂಜೂರಾತಿ ನೀಡುವ ಪ್ರಕ್ರಿಯೆಯನ್ನು ನಿಭಾಯಿಸುವ ಹೊಣೆಯನ್ನು ಸಾಫ್ಟ್‌ಟೆಕ್‌ ಸಂಸ್ಥೆಗೆ ವಹಿಸಿದೆ. ಈ ಸಂಸ್ಥೆಯು ಆಟೊ ಕ್ಯಾಡ್‌ ತಂತ್ರಾಂಶದಲ್ಲಿ ಸಲ್ಲಿಸುವ ಕಟ್ಟಡ ನಕ್ಷೆಗಳನ್ನು ಮಾತ್ರ ಸ್ವೀಕರಿಸುತ್ತದೆ. ಇಂತಹದ್ದೇ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಬ್ರಿಕ್‌ ಕ್ಯಾಡ್‌, ಜೆಡ್‌.ಡಬ್ಲ್ಯು ಕ್ಯಾಡ್‌ ತಂತ್ರಾಂಶಗಳಲ್ಲಿ ರೂಪಿಸುವ ನಕ್ಷೆಗಳನ್ನು ಸ್ವೀಕರಿಸುತ್ತಿಲ್ಲ.

‘ಆಟೊ ಕ್ಯಾಡ್‌ ಸಂಸ್ಥೆಯ ತಂತ್ರಾಂಶ ಬಳಸಲು ವರ್ಷಕ್ಕೆ ಕನಿಷ್ಠ ₹ 85 ಸಾವಿರ ಪಾವತಿಸಬೇಕು. ಬ್ರಿಕ್‌ ಕ್ಯಾಡ್‌ ತಂತ್ರಾಂಶಕ್ಕೆ ವರ್ಷಕ್ಕೆ ₹ 13 ಸಾವಿರ ಪಾವತಿಸಿದರೆ ಸಾಕು. ಜೆಡ್.ಡಬ್ಲ್ಯು ಕ್ಯಾಡ್‌ ತಂತ್ರಾಂಶವನ್ನು ಒಮ್ಮೆ ₹ 15 ಸಾವಿರ ನೀಡಿ ಖರೀದಿಸಿದರೆ, ಬಳಿಕ ಹಣ ಪಾವತಿಸಬೇಕಾಗಿಲ್ಲ. ಒಂದೇ ಸಂಸ್ಥೆಯ ತಂತ್ರಾಂಶವನ್ನು ಮಾತ್ರ ಬಳಸುವುದು ಏಕಸ್ವಾಮ್ಯಕ್ಕೆ ದಾರಿಯಾಗುತ್ತದೆ’ ಎಂದು ಶ್ರೀಕಾಂತ್ ಚನ್ನಾಳ ಒತ್ತಾಯಿಸಿದರು.

‘ಸ್ಟಿಲ್ಟ್‌ ಮಹಡಿ–ಗೊಂದಲ ನಿವಾರಿಸಿ’

ಬಿಬಿಎಂಪಿ ಕಟ್ಟಡ ಉಪನಿಯಮಗಳ ಪ್ರಕಾರ, ವಾಹನ ನಿಲುಗಡೆಗೆ ಬಳಸುವ ಸ್ಟಿಲ್ಟ್‌ ಮಹಡಿಯ ಗರಿಷ್ಠ ಎತ್ತರ 2.4 ಮೀ ಇರಬೇಕು. ಕೆಲವು ಕಟ್ಟಡಗಳಲ್ಲಿ ಕಾಂಕ್ರೀಟ್‌ ಹಾಸಿನ ಕಾಂಕ್ರೀಟ್ ತೊಲೆಯ ಎತ್ತರವೇ 2 ಅಡಿಗಳಷ್ಟಿರುತ್ತದೆ. ತೊಲೆಯ ಅಂಚಿನಿಂದ ನೆಲದ ನಡುವೆ 2.4 ಮೀ ಎತ್ತರ ಕಾಪಾಡಿದರೆ, ಸ್ಟಿಲ್ಟ್‌ ಮಹಡಿಯ ಎತ್ತರ ಗರಿಷ್ಠ ಮಿತಿಗಿಂತ ಹೆಚ್ಚಾಗುತ್ತದೆ. ಆಗ ಸ್ಟಿಲ್ಟ್‌ ಮಹಡಿಯನ್ನೂ ಬಿಬಿಎಂಪಿ ಅಧಿಕಾರಿಗಳು ಪ್ರತ್ಯೇಕ ಮಹಡಿ ಎಂದೇ ಪರಿಗಣಿಸುತ್ತಾರೆ ಎಂಬುದು ಎಂಜಿನಿಯರ್‌ಗಳ ದೂರು.

‘ಬಿಬಿಎಂಪಿಯಿಂದ ಅನುಮೋದನೆ ಪಡೆದು, ಅದರ ಪ್ರಕಾರವೇ ಕಟ್ಟಡ ನಿರ್ಮಿಸಿದ್ದರೂ, ತೊಲೆಯ ಅಂಚು ಮತ್ತು ನೆಲದ ನಡುವೆ ಕನಿಷ್ಠ ಎತ್ತರ ಸಾಲುತ್ತಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡಲು ತಗಾದೆ ತೆಗೆದ ಉದಾಹರಣೆಗಳಿವೆ. ಸ್ಟಿಲ್ಟ್‌ ಮಹಡಿಯ ಗರಿಷ್ಠ ಎತ್ತರವನ್ನು 3 ಮೀಟರ್‌ಗೆ ಹೆಚ್ಚಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಅದನ್ನು ಬಿಬಿಎಂಪಿ ಮಾಡುತ್ತಿಲ್ಲ’ ಎಂದು ಶ್ರೀಕಾಂತ್‌ ಎಸ್.ಚನ್ನಾಳ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT