ಗುರುವಾರ , ಮಾರ್ಚ್ 4, 2021
20 °C

ಬ್ರ್ಯಾಂಡ್‌ ಬೆಂಗಳೂರು– ಮೇಯರ್‌ ಏನ್‌ ಮಾಡ್ಬೇಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಧಾನಿಗೆ ‘ಬ್ರ್ಯಾಂಡ್ ಬೆಂಗಳೂರು’ ಹೆಗ್ಗಳಿಕೆ ಮರಳಿ ತರಲು ಏನು ಮಾಡಬೇಕು? ‘ಪ್ರಜಾವಾಣಿ’ ಓದುಗರು ನೀಡಿರುವ ಸಲಹೆಗಳು ಇಲ್ಲಿವೆ. ನಿಮ್ಮ ಸಲಹೆಯನ್ನು 95133 22930 ಸಂಖ್ಯೆಗೆ ವಾಟ್ಸ್ಯಾಪ್ ಮಾಡಿ.

‘ಪಾರದರ್ಶಕ ಆಡಳಿತ ಬರಲಿ’

ಪಾಲಿಕೆಯ ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರಬೇಕು. ಪ್ಲಾಸ್ಟಿಕ್‌ಮುಕ್ತ ನಗರವನ್ನಾಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಚ್ಛತೆ, ಕಸ ವಿಲೇವಾರಿ, ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ರಸ್ತೆಯ ಇಕ್ಕೆಲಗಳಲ್ಲಿ ಗುಂಡಿ ಪರಿಶೀಲನೆ ಮಾಡಿ, ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು.

-ಶಿವಾನಂದ, ಜ್ಞಾನಜ್ಯೋತಿ ನಗರ

‘ಗಿಡಗಳ ಬೆಳೆಸಿ’

ಉದ್ಯಾನನಗರ ಎಂದು ಜನಪ್ರಿಯವಾಗಿದ್ದ ಬೆಂಗಳೂರಿನ ಸೌಂದರ್ಯ ಮರುಕಳಿಸಬೇಕಾದರೆ ಗಿಡಗಳನ್ನು ಬೆಳೆಸಬೇಕು. ಅದೇ ರೀತಿ, ನಗರದಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳ ನೆಪದಲ್ಲಿ ಮರಗಳಿಗೆ ಕೊಡಲಿಯೇಟು ಹಾಕಬಾರದು. 

–ದಿವ್ಯಶ್ರೀ‌ ವಿ., ಬೆಂಗಳೂರು

‘ಗುಣಮಟ್ಟದ ರಸ್ತೆ ನಿರ್ಮಿಸಿ’

ನಗರದ ರಸ್ತೆ ಸಮಸ್ಯೆಯಿಂದ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಗುಣಮಟ್ಟದ ರಸ್ತೆಯನ್ನು ನಿರ್ಮಿಸುವ ಜತೆಗೆ ಪಾದಚಾರಿ ಪಥವನ್ನೂ ನಿರ್ಮಿಸಬೇಕು. ವಾಹನ ನಿಲುಗಡೆ ಸಮಸ್ಯೆಗೆ ಸಹ ಪರಿಹಾರ ಒದಗಿಸಬೇಕು.

–ಎಂ. ಸುರೇಶ್, ವಿ.ವಿ ಪುರ

‘ತಜ್ಞರ ಸಮಿತಿ ರಚಿಸಿ’

ನಗರದ ಸಮಗ್ರ ಅಭಿವೃದ್ಧಿಗೆ ತಜ್ಞರ ಸಮಿತಿ ರಚಿಸಿ, ಅವರ ಸಲಹೆ ಅನುಸಾರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಪರಿಸರಕ್ಕೆ ಮಾರಕವಾಗುವ ಅಭಿವೃದ್ಧಿಗಳು ಬೇಕಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ಇರಲಿ.

–ಎಂ. ವಿಜಯ್, ಬೇಂದ್ರೆ ನಗರ

‘ರಸ್ತೆ ಗುಂಡಿ ಸಮಸ್ಯೆ ನಿವಾರಿಸಿ’

ಕಾವೇರಿ ನೀರು, ಒಳಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಉತ್ತಮ ರಸ್ತೆಗಳು ಹಾಳಾಗುತ್ತಿವೆ. ಸೂಕ್ತ ಯೋಜನೆ ರೂಪಿಸಿ, ಕಾಮಗಾರಿಗಳನ್ನು ಶೀಘ್ರ ಪೂರ್ತಿಗೊಳಿಸಬೇಕು. 

–ಶಿವಶಂಕರ ಎಸ್., ಯಲಹಂಕ

‘ಸ್ವಚ್ಛತೆಗೆ ಆದ್ಯತೆ ನೀಡಿ’

ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದಲ್ಲಿ ಕಸದ ಸಮಸ್ಯೆಯು ತೀವ್ರ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಹಾಗಾಗಿ, ಸ್ವಚ್ಛತೆಗೆ ಆದ್ಯತೆ ನೀಡಲೇಬೇಕು, ಕಸ ವಿಲೇವಾರಿಗೆ ತ್ವರಿತಗತಿಯಲ್ಲಿ ಮತ್ತು ಸಮರ್ಪಕ ರೀತಿಯಲ್ಲಿ ಪರಿಹಾರವನ್ನು ಬಿಬಿಎಂಪಿ ಕಂಡುಕೊಳ್ಳಬೇಕು. ಈ ಮೂಲಕ ಸ್ವಚ್ಛನಗರ ಪಟ್ಟಿಯಲ್ಲಿ ಬೆಂಗಳೂರು ಮಹಾ ನಗರ ಅಗ್ರಸ್ಥಾನದಲ್ಲಿರುವಂತೆಯೇ ಮಾಡಿ.

-ವಿಠಲ್ ಕೃಷ್ಣ ಪಿ., ರಾಜಾಜಿನಗರ

‘ಕನ್ನಡ ಕಟ್ಟುವ ಕೆಲಸ ಮಾಡಿ’

ಬೆಂಗಳೂರು ಮಹಾ ನಗರದಲ್ಲಿ ಕನ್ನಡಿಗರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಕನ್ನಡಿಗರೇ ನಿರುದ್ಯೋಗಿಗಳಾಗುತ್ತಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಮಾತನಾಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪರಭಾಷಿಗರ ದಬ್ಬಾಳಿಕೆಯು ದಿನೇದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಕನ್ನಡಿಗರಿಗೆ ಮತ್ತು ಕನ್ನಡ ಕಟ್ಟುವ ಕೆಲಸಕ್ಕೆ ಮೊದಲು ಆದ್ಯತೆ ನೀಡಿ.

–ನಾಗರಾಜ ಗರಗ್, ವಿಜಯನಗರ

‘ಸಂಸ್ಕೃತಿಗೆ ಆದ್ಯತೆ ನೀಡಿ’

ಅಭಿವೃದ್ಧಿಯ ನೆಪದಲ್ಲಿ ನಗರದ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ಪರಂಪರೆ ಹಾಗೂ ಪರಿಸರಕ್ಕೆ ಚ್ಯುತಿ ತರುವ ಕೆಲಸ ಆಗಬಾರದು. ಪ್ರತಿ ವಾರ್ಡ್‌ನಲ್ಲಿಯೂ ವಿವಿಧ ವಯೋಮಾನದವರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಕುಂದುಕೊರತೆಗಳನ್ನು ನಿವಾರಿಸುವ ಪ್ರಯತ್ನಗಳನ್ನು ಕೈಗೊಳ್ಳಬೇಕು. ಇದು ನಿರಂತರವಾಗಿ ನಡೆಯುವಂತೆ

–ಚಲಚತಿ ಭಾರದ್ವಾಜ್, ಹೆಬ್ಬಗೋಡಿ

‘ಚರಂಡಿಗಳು ಸ್ಚಚ್ಛವಾಗಲಿ’

ನಗರದ ಎಲ್ಲ ಚರಂಡಿಗಳನ್ನು ಆದ್ಯತೆಯ ಮೇಲೆ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಬೇಕು. ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.

–ಸಿದ್ದರಾಜು ಎನ್.ಆರ್., ನಾಗದೇವನಹಳ್ಳಿ

‘ಪ್ಲಾಸ್ಟಿಕ್‌ ನಿಷೇಧ ಜಾರಿಯಾಗಲಿ’

ನಗರದಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅದೇ ರೀತಿ, ರಸ್ತೆಗಳಲ್ಲಿ ಕಸ ಹಾಕದಂತೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು. ಪ್ಲಾಸ್ಟಿಕ್‌ನಿಂದ ಬೆಂಗಳೂರು ನಗರ ನಲುಗಿ ಹೋಗಿದೆ. ಜನಸ್ನೇಹಿ ಅಭಿವೃದ್ಧಿ ಕಾರ್ಯಗಳನ್ನು ಜನಾಭಿಪ್ರಾಯದ ಮೇರೆಗೆ ಕೈಗೊಳ್ಳಬೇಕು.

-ಧರ್ಮಾನಂದ ಶಿರ್ವ, ವಿಜಯನಗರ

‘ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ’

ನಗರದಾದ್ಯಂತ ರಸ್ತೆಗುಂಡಿಗಳ ಸಮಸ್ಯೆಯು ಗಂಭೀರ ಸ್ವರೂಪ ಪಡೆದುಕೊಂಡಿದೆ. ಹಾಗಾಗಿ ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕವಾದ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಬೇಕು. ಅದರ ನಿರ್ವಹಣೆಗೆ ಒಬ್ಬ ವ್ಯಕ್ತಿಯನ್ನು ನೇಮಿಸಿದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗಲಿದೆ. ಪ್ರಗತಿಯ ವರದಿಯನ್ನು ವಾರಕ್ಕೆ ಒಂದು ಬಾರಿ ಪ್ರತಿ ವಾರ್ಡಿನಿಂದ ಪಡೆಯಬೇಕು. ಈ ಸಮಸ್ಯೆ ಮೇಲೆ ನಿರಂತರವಾಗಿ ನಿಗಾವಹಿಸಬೇಕು.

–ಸಾಗರ ಹೊಳ್ಳ, ಜೆ.ಪಿ. ನಗರ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು