ಮಂಗಳವಾರ, ಸೆಪ್ಟೆಂಬರ್ 28, 2021
24 °C
ಸೂರ್ಯನ ಶಕ್ತಿ ಸದ್ಬಳಕೆಗೆ ನೆರವಾಗುತ್ತಿದೆ ಸೌರ ಗೃಹ ಯೋಜನೆ * ಸೌರ ಚಾವಣಿ ನಿರ್ಮಾಣಕ್ಕೆ ಸಿಗಲಿದೆ ಸಹಾಯಧನ

ಬ್ರ್ಯಾಂಡ್‌ ಬೆಂಗಳೂರು: ಮನೆ ಸೂರಿನ ಸೌರ ಇಂಧನದತ್ತ ಬೆಂಗಳೂರಿಗರ ಚಿತ್ತ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಂತ್ರಜ್ಞಾನದ ಮೇಲಿನ ಅವಲಂಬನೆ ಹೆಚ್ಚುತ್ತಿದ್ದಂತೆ ವಿದ್ಯುತ್‌ ಬಳಕೆಯೂ ಜಾಸ್ತಿಯಾಗುತ್ತಿದೆ. ಭವಿಷ್ಯದ ಭಾರಿ ಸವಾಲುಗಳಲ್ಲಿ ವಿದ್ಯುತ್‌ ಕೊರತೆ ನೀಗಿಸುವುದೂ ಸೇರಿದೆ. ನಗರ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕೆಂದರೆ ಈ ಸವಾಲನ್ನು ದಿಟ್ಟವಾಗಿ ಎದುರಿಸಲೇ ಬೇಕಾಗಿದೆ.

ಬರಿದಾಗುವ ಶಕ್ತಿ ಸಂಪನ್ಮೂಲಗಳ ಬದಲಿಗೆ, ನಿಸರ್ಗದತ್ತ ಶಕ್ತಿ ಮೂಲಗಳಿಂದ ವಿದ್ಯುತ್‌ ಉತ್ಪಾದಿಸುವುದು ಎಲ್ದಕ್ಕಿಂತಲೂ ಉತ್ತಮ ಆಯ್ಕೆ. ಅದರಲ್ಲಿಯೂ, ಸೌರಶಕ್ತಿ ಬಳಸಿಕೊಂಡು ಸುಲಭವಾಗಿ ಮತ್ತು ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್‌ ಪಡೆಯಲು ಸಾಧ್ಯ ಇರುವುದರಿಂದ ಸೌರವಿದ್ಯುತ್‌ ಘಟಕಗಳ ನಿರ್ಮಾಣ ಕಾರ್ಯ ಚುರುಕು ಪಡೆದಿದೆ.

ರಾಜಧಾನಿಯಲ್ಲಿ ಅನೇಕ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಅಥವಾ ಗುಂಪು ವಸತಿಗಳು ಹೆಚ್ಚಾಗಿ ಡೀಸೆಲ್‌ ಜನರೇಟರ್‌ಗಳನ್ನೇ ಅವಲಂಬಿಸಿವೆ. ನಗರದಲ್ಲಿ ವಿದ್ಯುತ್‌ ಉತ್ಪಾದನೆ ಮತ್ತು ಲಭ್ಯತೆ ಹೆಚ್ಚಾದರೆ, ಇಂತಹ ಜನರೇಟರ್‌ಗಳ ಅಗತ್ಯವೇ ಬೀಳುವುದಿಲ್ಲ. ಡೀಸೆಲ್‌ ಜನರೇಟರ್‌ನಿಂದ ಪಡೆಯುವ ಪ್ರತಿ ಯುನಿಟ್‌ ವಿದ್ಯುತ್‌ಗೆ ₹16ರಿಂದ ₹18 ನಿರ್ವಹಣಾ ವೆಚ್ಚ ತಗುಲಿದರೆ, ಸೌರ ವಿದ್ಯುತ್‌ ಚಾವಣಿ ಅಳವಡಿಕೆ ಮತ್ತು ನಿರ್ವಹಣೆಗೆ ಪ್ರತಿ ಯುನಿಟ್‌ಗೆ ₹5 ಅಥವಾ ₹6 ಖರ್ಚಾಗುತ್ತದೆ. ಅಂದರೆ, ನೈಸರ್ಗಿಕವಾಗಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ಈ ವ್ಯವಸ್ಥೆ ಲಾಭದಾಯಕ. ಗ್ರಾಹಕರು ಮತ್ತು ವಿದ್ಯುತ್‌ ಸರಬರಾಜು ಸಂಸ್ಥೆಗಳಿಗೂ ಸಹಕಾರಿ.

ದೇಶದಲ್ಲಿಯೇ ಮೊದಲು:

ಗ್ರಾಹಕರ ವಿದ್ಯುತ್‌ ಬೇಡಿಕೆ ಆಧಾರಿತ ನಿರ್ವಹಣೆಗೆ (ಡಿಎಸ್‌ಎಂ) ದೇಶದಲ್ಲಿಯೇ ಮೊದಲ ಬಾರಿಗೆ ಕ್ರಮ ಕೈಗೊಂಡ ವಿದ್ಯುತ್‌ ಸರಬರಾಜು ಸಂಸ್ಥೆ ಬೆಸ್ಕಾಂ. ಅಂದರೆ, ಗ್ರಾಹಕರ ವಿದ್ಯುತ್‌ ಬೇಡಿಕೆಯನ್ನು ಆದಷ್ಟು ತಗ್ಗಿಸಿ, ಅವರೇ ವಿದ್ಯುತ್‌ ಉತ್ಪಾದಿಸಲು ಅನುವು ಮಾಡಿಕೊಡುವಂತಹ ಉಪಕ್ರಮಗಳನ್ನು 2008ರಿಂದಲೇ ಪ್ರಾರಂಭಿಸಿದೆ. ‌ಸೌರವಿದ್ಯುತ್‌ ಚಾವಣಿಗಳಿಗೆ ಸಂಬಂಧಿಸಿದ ಯೋಜನೆ, ವಿನ್ಯಾಸ ಮತ್ತು ನಿರ್ವಹಣೆಯ ಚಟುವಟಿಕೆಯನ್ನು ಆಗಿನಿಂದಲೇ ನಡೆಸುತ್ತಿದೆ.

ಒಂದು ಕಿಲೊವಾಟ್‌ ಸಾಮರ್ಥ್ಯದ ಸೌರವಿದ್ಯುತ್‌ ಚಾವಣಿಯಿಂದ ದಿನಕ್ಕೆ 3ಯುನಿಟ್‌ನಿಂದ 5 ಯುನಿಟ್‌ಗಳಷ್ಟು ವಿದ್ಯುತ್‌ ಪಡೆಯಬಹುದು. ಕೇಂದ್ರ ಸರ್ಕಾರವು ಈ ವರ್ಷ ಸೌರಫಲಕಗಳ ಬೆಲೆಯನ್ನೂ ಕಡಿಮೆ ಮಾಡಿರುವುದರಿಂದ, ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಗ್ರಿಡ್‌ನಿಂದ ಪಡೆಯುವ ದರಕ್ಕಿಂತ ಅತಿ ಕಡಿಮೆ ದರದಲ್ಲಿ ಸೌರ ಚಾವಣಿಗಳಿಂದ ವಿದ್ಯುತ್‌ ಪಡೆಯಬಹುದಾಗಿದೆ.

ಸೌರ ಗೃಹ ಯೋಜನೆ:

ಹಸಿರು ಉಪ‍ಕ್ರಮದ ಅಡಿಯಲ್ಲಿ ಕೇಂದ್ರ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂಎನ್‌ಆರ್‌ಇ) ‘ಸೌರ ಗೃಹ ಯೋಜನೆ’ಯನ್ನು 2021ರ ಮಾರ್ಚ್‌ನಿಂದ ಜಾರಿಗೊಳಿಸಿದೆ. ಈ ಯೋಜನೆಯ ಅನುಷ್ಠಾನಕ್ಕೆ ಬೆಸ್ಕಾಂ ಅನ್ನು ನೋಡಲ್‌ ಏಜೆನ್ಸಿ. ವಸತಿ ಮತ್ತು ಅಪಾರ್ಟ್‌ಮೆಂಟ್ ವಸತಿ ಸಮುಚ್ಚಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಗ್ರಾಹಕರಿಗೆ ನೆಟ್‌ ಮೀಟರಿಂಗ್ ಆಧಾರದಲ್ಲಿ ಸೌರಶಕ್ತಿ ಚಾವಣಿ ಸ್ಥಾಪಿಸಲು ಸಹಾಯಧನ ನೀಡುವ ಯೋಜನೆ ಇದು.

ಸೌರವಿದ್ಯುತ್‌ ಚಾವಣಿ ಹಾಕಿಸಿಕೊಂಡವರಿಗೆ ಚಾವಣಿಯ ಮಾನದಂಡ ವೆಚ್ಚ ಅಥವಾ ನಿಗದಿತ ವೆಚ್ಚದಲ್ಲಿ ಶೇ40ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. 3 ಕಿಲೊವಾಟ್‌ನಿಂದ 10 ಕಿಲೊವಾಟ್‌ವರೆಗೆ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯದ ಸೌರವಿದ್ಯುತ್‌ ಚಾವಣಿ ನಿರ್ಮಿಸಿಕೊಳ್ಳುವ ಗುಂಪು ವಸತಿ ಅಥವಾ ಅಪಾರ್ಟ್‌ಮೆಂಟ್‌ ಸಮುಚ್ಚಯದ ವಸತಿ ಗ್ರಾಹಕರಿಗೆ ಶೇ 20ರಷ್ಟು ಸಹಾಯಧನ ಸಿಗುತ್ತದೆ.

ಉದಾಹರಣೆಗೆ, 3 ಕಿಲೊವಾಟ್‌ ಸಾಮರ್ಥ್ಯದ ಸೌರಚಾವಣಿಗೆ ₹47 ಸಾವಿರ ಮಾನದಂಡ ಅಥವಾ ಮೂಲ ವೆಚ್ಚ ನಿಗದಿ ಮಾಡಿದ್ದರೆ, ಅದಕ್ಕೆ ಶೇ 40ರಷ್ಟು ಅಂದರೆ, ₹18,800ರಷ್ಟು ಸಹಾಯಧನವನ್ನು ಸರ್ಕಾರ ನೀಡಲಿದೆ. ಉಳಿದ ಶೇ 60ರಷ್ಟನ್ನು ಅಂದರೆ, ₹28,200ನ್ನು ಗ್ರಾಹಕರೇ ಭರಿಸಬೇಕು.

ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್‌ ಬಳಸಿ, ಮಿಕ್ಕಿದ್ದನ್ನು ಬೆಸ್ಕಾಂಗೆ ಮಾರಾಟ ಮಾಡಬಹುದು. ಸಂಸ್ಥೆಯು ಯುನಿಟ್‌ಗೆ ₹2.99 ರಿಂದ ₹3.07 ವರೆಗೆ ದರ ನೀಡಲಿದೆ.

ಗ್ರಾಹಕರ ಮನೆಗಳ ಮೇಲೆ ಸೌರವಿದ್ಯುತ್‌ ಘಟಕ ಸ್ಥಾಪನೆಗೆ ಮಾತ್ರ ಆದ್ಯತೆ ನೀಡದೆ, ಸರ್ಕಾರಿ ಕಚೇರಿ, ಕಟ್ಟಡಗಳ ಮೇಲೆಯೂ ಸೌರವಿದ್ಯುತ್‌ ಘಟಕಗಳನ್ನು ಬೆಸ್ಕಾಂ ನಿರ್ಮಾಣ ಮಾಡುತ್ತಿದೆ. ಬೆಸ್ಕಾಂ ವ್ಯಾಪ್ತಿಯ 285 ಸ್ಥಳಗಳಲ್ಲಿ ಸೌರವಿದ್ಯುತ್‌ ಘಟಕಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೆಲವು ಘಟಕಗಳಿಂದ ಬೆಸ್ಕಾಂ ಈಗಾಗಲೇ ಸೌರವಿದ್ಯುತ್‌ ಪಡೆಯುತ್ತಿದೆ. ಇನ್ನು ಕೆಲವು ಕಾಮಗಾರಿ ಪ್ರಗತಿಯಲ್ಲಿವೆ.

ಪರ್ಯಾಯ ಮೂಲಗಳಿಂದ ವಿದ್ಯುತ್‌ ಪಡೆಯುವ ನಿಟ್ಟಿನಲ್ಲಿ ಗ್ರಾಹಕರಲ್ಲಿಯೂ ಅರಿವು ಮೂಡಬೇಕಾಗಿದೆ. ಬೆಸ್ಕಾಂನೊಂದಿಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೂ ಕೈ ಜೋಡಿಸಿದರೆ, ಸೌರವಿದ್ಯುತ್‌ ಉತ್ಪಾದನೆ ಹೆಚ್ಚಾಗುವುದಲ್ಲದೆ, ವಿದ್ಯುತ್‌ ಬೇಡಿಕೆ–ಪೂರೈಕೆ ನಡುವಣ ವ್ಯತ್ಯಾಸ ತಗ್ಗುವುದರಲ್ಲಿ ಅನುಮಾನವಿಲ್ಲ

ಸೌರಚಾವಣಿ ಅಳವಡಿಕೆಗೆ ಗ್ರಾಹಕರ ಉತ್ಸಾಹ

‘ಸೌರ ಗೃಹ ಯೋಜನೆಯಡಿ ವಸತಿ ಮತ್ತು ಗುಂಪು ವಸತಿ ಗ್ರಾಹಕರು ಸೌರವಿದ್ಯುತ್‌ ಚಾವಣಿ ಅಳವಡಿಸಿಕೊಳ್ಳಲು ಉತ್ಸಾಹ ತೋರುತ್ತಿದ್ದಾರೆ. ಮೊದಲ ಬಂದವರಿಗೆ ಮೊದಲ ಪ್ರಾಶಸ್ತ್ಯ ನೀಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ’ ಎಂದು ಬೆಸ್ಕಾಂನ ಡಿಎಸ್‌ಎಂ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಚ್.ವಿ. ಕೃಷ್ಣಪ್ರಸಾದ್ ಹೇಳಿದರು.

‘ಸೌರ ಗೃಹ ಯೋಜನೆಗಿಂತಲೂ ಮೊದಲೇ, ಅನೇಕರು ವೈಯಕ್ತಿಕ ಆಸಕ್ತಿಯಿಂದ ಮನೆಯ ಮೇಲೆ ಸೌರವಿದ್ಯುತ್‌ ಘಟಕ ಸ್ಥಾಪಿಸಿಕೊಂಡಿದ್ದಾರೆ. ಅವರಿಂದ ಖರೀದಿಸುವ ಪ್ರತಿ ಯುನಿಟ್‌ ವಿದ್ಯುತ್‌ಗೆ ₹3.05 ನೀಡಲಾಗುತ್ತಿದೆ. ವರ್ಷಗಳು ಕಳೆದಂತೆ ಅಥವಾ ಆದೇಶಗಳು ಬದಲಾದಂತೆ ಈ ಮೊತ್ತದಲ್ಲಿ ವ್ಯತ್ಯಾಸವಾಗಬಹುದು’ ಎಂದೂ ಅವರು ಹೇಳಿದರು.

‘₹1 ಲಕ್ಷದವರೆಗೆ ಉಳಿತಾಯ’

ತಿಂಗಳಿಗೆ ₹8ಸಾವಿರದಿಂದ ₹9 ಸಾವಿರಕ್ಕೂ ಹೆಚ್ಚು ವಿದ್ಯುತ್‌ ಶುಲ್ಕ ಬರುತ್ತಿದ್ದಾಗ, ಅದರ ಹೊರೆ ಭರಿಸಲಾಗದೆ ತಮ್ಮ ಮನೆಯ ಮೇಲೆ ಸೌರವಿದ್ಯುತ್‌ ಘಟಕ ಸ್ಥಾಪಿಸಿಕೊಂಡಿದ್ದರು ಬನ್ನೇರುಘಟ್ಟ ರಸ್ತೆ ಬಳಿಯ ಅರಕೆರೆ ನಿವಾಸಿ ಪೃಥ್ವಿ ಮಾಂಗಿರಿ. ಈಗ ಅವರು ಬೆಸ್ಕಾಂಗೇ ವಿದ್ಯುತ್ ಮಾರಾಟ ಮಾಡುತ್ತಿದ್ದಾರೆ.

₹5 ಲಕ್ಷ ವೆಚ್ಚದಲ್ಲಿ 15 ಸೌರಫಲಕಗಳನ್ನು ಅಳವಡಿಸಿ, 5 ಕಿಲೊವಾಟ್‌ ವಿದ್ಯುತ್‌ ಉತ್ಪಾದಿಸುತ್ತಿದ್ದಾರೆ.

‘ನಾನು ಡ್ರಮ್ ವಾದಕ. ನನ್ನದೇ ಆದ ಸ್ಟುಡಿಯೋ ಇದೆ. ನನ್ನ ಡ್ರಮ್‌ ವಾದನ ಅಭ್ಯಾಸದಿಂದ ತೊಂದರೆಯಾಗುತ್ತಿದೆ ಎಂದು ನೆರೆ–ಹೊರೆಯವರು ಪದೇ ಪದೇ ತಕರಾರು ಎತ್ತುತ್ತಿದ್ದರು. ಕೋಣೆಯಿಂದ ಶಬ್ದ ಆಚೆ ಹೋಗದಿರುವ ವ್ಯವಸ್ಥೆ (ಸೌಂಡ್‌ ಪ್ರೂಫ್‌) ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ಎ.ಸಿ ಸೇರಿದಂತೆ ಇನ್ನಿತರ ವ್ಯವಸ್ಥೆಗೆ ಹೆಚ್ಚು ಖರ್ಚು ಮಾಡಬೇಕಾಯಿತು. ಮೊದಲು ತಿಂಗಳಿಗೆ ₹1,500ದಷ್ಟು ಬರುತ್ತಿದ್ದ ವಿದ್ಯುತ್ ಶುಲ್ಕ ಒಂದೆರಡು ತಿಂಗಳು ₹9,000ದವರೆಗೆ ಬಂದಿತ್ತು’ ಎಂದು ಹೇಳಿದರು.

‘ದುಬಾರಿ ಶುಲ್ಕದ ಸಮಸ್ಯೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮನೆಯ ಮೇಲೆ ಸೌರವಿದ್ಯುತ್‌ ಘಟಕವನ್ನು ಅಳವಡಿಸಿಕೊಂಡೆವು. ಬೆಸ್ಕಾಂನಿಂದ ಪ್ರತ್ಯೇಕ ಮೀಟರ್‌ ಅಳವಡಿಸಲಾಗಿದೆ. ಮನೆಯ ಪಕ್ಕದ ಟ್ರಾನ್ಸ್‌ಫಾರ್ಮರ್‌ ಮೂಲಕ ಈ ವಿದ್ಯುತ್ ನೇರವಾಗಿ ಬೆಸ್ಕಾಂನ ಗ್ರಿಡ್‌ಗೆ ಹೋಗುತ್ತದೆ. ಪ್ರತಿ ಯುನಿಟ್‌ಗೆ ₹7ರಂತೆ ಬೆಸ್ಕಾಂ ಹಣ ನೀಡುತ್ತಿದೆ. ನಾವು ಬಳಸುವ ವಿದ್ಯುತ್‌ ವೆಚ್ಚವನ್ನು ಕಡಿತಗೊಳಿಸಿ ಉಳಿದ ಹಣವನ್ನು ನಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ’ ಎಂದು ಪೃಥ್ವಿ ಅವರ ತಾತ ರಾಜನ್ ಹೇಳಿದರು.

‘ನಮ್ಮ ವಿದ್ಯುತ್ ವೆಚ್ಚ, ಬೆಸ್ಕಾಂ ನೀಡುವ ಹಣ ಮತ್ತು ಬಡ್ಡಿ ಲೆಕ್ಕ ಎಲ್ಲ ಹಾಕಿದರೆ ಒಂದೂವರೆ ವರ್ಷಕ್ಕೆ ₹1 ಲಕ್ಷದವರೆಗೆ ನಮಗೆ ಲಾಭವಾಗಿದೆ. ಇನ್ನೂ 25 ವರ್ಷ ನಮಗೆ ಚಿಂತೆ ಇಲ್ಲ’ ಎಂದೂ ಹೇಳಿದರು.

ಸಹಾಯಧನಕ್ಕಾಗಿ 1,146 ಅರ್ಜಿ ಸಲ್ಲಿಕೆ

ಸೌರ ಗೃಹ ಯೋಜನೆಯಡಿ ಸಹಾಯಧನ ಪಡೆಯಲು ಜುಲೈ 31ರ ವೇಳೆಗೆ 1,146 ಜನ ಅರ್ಜಿ ಸಲ್ಲಿಸಿದ್ದಾರೆ. ತಾಂತ್ರಿಕ ಕಾರ್ಯಸಾಧ್ಯತೆಯ ಆಧಾರದ ಮೇಲೆ ಅರ್ಜಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲು ಬಂದವರಿಗೆ ಆದ್ಯತೆ ಎಂದೂ ಬೆಸ್ಕಾಂ ಹೇಳಿದೆ. 

ಸೌರಶಕ್ತಿ ಚಾವಣಿಗೆ ಅರ್ಜಿ ಸಲ್ಲಿಸುವವರು http://srtpv.bescom.org/SRTPV/expression ಈ ಲಿಂಕ್ ಬಳಸಬಹುದು.

ಸೌರವಿದ್ಯುತ್‌ ಶಕ್ತಿಗೆ ಸಂಬಂಧಿಸಿದ ಯಾವುದೇ ಯೋಜನೆಯ ಮಾಹಿತಿಗೆ, ಬೆಸ್ಕಾಂನ ಸಹಾಯವಾಣಿ 080–22340816 ಸಂಪರ್ಕಿಸಬಹುದು.

ಸೌರವಿದ್ಯುತ್ ಘಟಕ: ಅಳವಡಿಕೆ ಪ್ರಕ್ರಿಯೆ ಹೇಗೆ ? 

* ನಿಮ್ಮ ಮನೆಯ ಆರ್.ಆರ್. ಸಂಖ್ಯೆ ನಮೂದಿಸಿ ಬೆಸ್ಕಾಂ ವೆಬ್‌ಸೈಟ್‌ನಲ್ಲಿ (https://bescom.karnataka.gov.in) ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು

* ಆರ್.ಆರ್. ಸಂಖ್ಯೆ ನಂತರ ಮೊಬೈಲ್‌ ಸಂಖ್ಯೆ ನಮೂದಿಸಿ, ಉಪವಿಭಾಗ ಆಯ್ಕೆ ಮಾಡಿ ಸೌರಘಟಕಕ್ಕೆ ಅರ್ಜಿ ಸಲ್ಲಿಸಬೇಕು

*ಬೆಸ್ಕಾಂ ಹಾಗೂ ಮನೆಯ ಮಾಲೀಕರ ಮಧ್ಯೆ ವಿದ್ಯುತ್‌ ಖರೀದಿ ಒಪ್ಪಂದ ನಡೆಯುತ್ತದೆ.

* ಗ್ರಿಡ್‌ಗೆ ಪೂರೈಕೆಯಾಗುವ ವಿದ್ಯುತ್‌ ಆಧಾರದ ಮೇಲೆ ಮನೆಯ ಮಾಲೀಕರಿಗೆ ಬೆಸ್ಕಾಂ ಹಣ ಪಾವತಿಸುತ್ತದೆ.

* ಮಾಹಿತಿಗೆ–080–22340816 ಸಂಪರ್ಕಿಸಬಹುದು. 

ಸೌರಗೃಹ ಯೋಜನೆ ಉಪಯೋಗ

* ನಮ್ಮ ಮನೆಗೆ ಅಗತ್ಯವಿರುವಷ್ಟು ವಿದ್ಯುತ್‌ ನಾವೇ ಉತ್ಪಾದಿಸಬಹುದು

* ಮಾಸಿಕ ವಿದ್ಯುತ್‌ ಶುಲ್ಕದಲ್ಲಿ ಉಳಿತಾಯ

* ಹೆಚ್ಚುವರಿ ವಿದ್ಯುತ್‌ ಅನ್ನು ಬೆಸ್ಕಾಂಗೆ ನೀಡಿ 25 ವರ್ಷಗಳವರೆಗೆ ಹಣ ಸಂಪಾದಿಸಬಹುದು

* ಕಡಿಮೆ ಬಂಡವಾಳ ವೆಚ್ಚ

* ಮನೆಯ ಚಾವಣಿಯ ಅತ್ಯುತ್ತಮ ಬಳಕೆ

285 ಸ್ಥಳಗಳಲ್ಲಿ ಸೌರವಿದ್ಯುತ್‌ ಚಾವಣಿ

ಗ್ರಾಹಕರ ಮನೆಗಳ ಮೇಲೆ ಸೌರವಿದ್ಯುತ್‌ ಘಟಕ ಸ್ಥಾಪನೆಗೆ ಮಾತ್ರ ಆದ್ಯತೆ ನೀಡದೆ, ಸರ್ಕಾರಿ ಕಚೇರಿ, ಕಟ್ಟಡಗಳ ಮೇಲೆಯೂ ಸೌರವಿದ್ಯುತ್‌ ಘಟಕಗಳನ್ನು ಬೆಸ್ಕಾಂ ನಿರ್ಮಾಣ ಮಾಡುತ್ತಿದೆ. ಬೆಸ್ಕಾಂ ವ್ಯಾಪ್ತಿಯ 285 ಸ್ಥಳಗಳಲ್ಲಿ ಸೌರವಿದ್ಯುತ್‌ ಘಟಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಕೆಲವು ಕಾಮಗಾರಿ ಪ್ರಗತಿಯಲ್ಲಿದ್ದರೆ, ಮತ್ತೆ ಕೆಲವು ಘಟಕಗಳಿಂದ ಈಗಾಗಲೇ ಸೌರವಿದ್ಯುತನ್ನು ಬೆಸ್ಕಾಂ ಪಡೆಯುತ್ತಿದೆ.‌

13ನೇ ಹಣಕಾಸು ಆಯೋಗದಡಿ ಈ ಕಾರ್ಯಕ್ಕಾಗಿ ₹67.66 ಕೋಟಿ ಅನುದಾನವನ್ನೂ ಕೇಂದ್ರಸರ್ಕಾರ ನೀಡಿದೆ. 2020ರ ಜೂನ್‌ 5ರಿಂದ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇದೇ ಡಿಸೆಂಬರ್‌ ಒಳಗೆ ಪೂರ್ಣಗೊಳಿಸುವ ಗುರಿ ಇದೆ ಎಂದು ಎಚ್.ವಿ. ಕೃಷ್ಣಪ್ರಸಾದ್ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು