ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು | ವೃಷಭಾವತಿ ತ್ಯಾಜ್ಯ ನೀರು ಇನ್ನು ಕೃಷಿಗೆ ಜೀವಜಲ

ಸಂಸ್ಕೃರಿಸಿದ ತ್ಯಾಜ್ಯ ನೀರು ಪುನರ್‌ ಬಳಕೆ ಹೆಚ್ಚಿಸಲು ಮಹತ್ವಾಕಾಂಕ್ಷಿ ಯೋಜನೆl ಈಗ ಶೇ 50ರಷ್ಟು ಸಂಸ್ಕರಿತ ನೀರಷ್ಟೆ ಮರು ಬಳಕೆ
Last Updated 13 ಜೂನ್ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸಂಸ್ಕರಣೆಯಾಗುತ್ತಿರುವ ತಾಜ್ಯ ನೀರು ಶೇ 50ರಷ್ಟು ಮಾತ್ರ ಮರು ಬಳಕೆಯಾಗುತ್ತಿದ್ದು, ಮರು ಬಳಕೆ ಇನ್ನಷ್ಟು ಹೆಚ್ಚಿಸಲು ಜಲ ಮಂಡಳಿ ಮತ್ತು ಸಣ್ಣ ನೀರಾವರಿ ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಿವೆ.

ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಬಳಕೆಯಾಗುವ ನೀರನ್ನು ಶುದ್ಧೀಕರಿಸಲು ನಗರದಲ್ಲಿ 36 ತಾಜ್ಯ ನೀರು ಶುದ್ಧೀಕರಣ ಘಟಕಗಳು(ಎಸ್‌ಟಿಪಿ) ಇವೆ. 1,523 ಎಂಎಲ್‌ಡಿ (152.3 ಕೋಟಿ ಲೀಟರ್‌) ತ್ಯಾಜ್ಯ ನೀರು ಶುದ್ಧೀಕರಿಸುವ ಸಾಮರ್ಥ್ಯವನ್ನು ಜಲ ಮಂಡಳಿ ಹೊಂದಿದ್ದು, ಸದ್ಯ 1,190 ಎಂಎಲ್‌ಡಿ ನೀರು ಶುದ್ಧೀಕರಣವಾಗುತ್ತಿದೆ.

ಶುದ್ಧೀಕರಿಸಿದ ಶೇ 50ರಷ್ಟು ನೀರು ಮಾತ್ರ ಮರು ಬಳಕೆಯಾಗುತ್ತಿದ್ದು, ಇನ್ನುಳಿದ ನೀರು ಶುದ್ಧೀಕರಣಗೊಂಡರೂ ಬಳಕೆಯಾಗದೆ ರಾಜಕಾಲುವೆ ಗಳಲ್ಲಿ ಹರಿಯುತ್ತಿದೆ. ನಗರದಲ್ಲಿ ಹರಿಯುವ ಮೂರು ಕಣಿವೆಗಳಲ್ಲಿ ಹೆಬ್ಬಾಳ ಮತ್ತು ಕೆ.ಸಿ(ಕೋರಮಂಗಲ–ಚೆಲ್ಲಘಟ್ಟ) ಕಣಿವೆಯಲ್ಲಿ ಮಾತ್ರ ಶುದ್ಧೀಕರಣಗೊಂಡ ನೀರು ಸುತ್ತಮುತ್ತಲ ಕೃಷಿ ಭೂಮಿಗೆ ಬಳಕೆಯಾಗುತ್ತಿದೆ.

ಹೆಬ್ಬಾಳ ಕಣಿವೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ 150 ಎಂಎಲ್‌ಡಿ, ಕೆ.ಸಿ ಕಣಿವೆಯಿಂದ ಕೋಲಾರ ಜಿಲ್ಲೆಗೆ 150 ಎಂಎಲ್‌ಡಿ ಮತ್ತು ಆನೆಕಲ್‌ ಭಾಗಕ್ಕೆ 60 ಎಂಎಲ್‌ಡಿ ನೀರು ಕೃಷಿಗೆ ಪೂರೈಕೆಯಾಗುತ್ತಿದೆ. ಶುದ್ಧೀಕರಿಸಿದ ನೀರು ಪೂರೈಕೆ ಮಾಡುವುದು ಜಲ ಮಂಡಳಿ ಕೆಲಸವಾದರೆ, ನೀರು ಸಾಗಿಸಲು ಬೇಕಿರುವ ಪೈಪ್‌ಲೈನ್ ವ್ಯವಸ್ಥೆಯನ್ನು ಸಣ್ಣ ನೀರಾವರಿ ಇಲಾಖೆ ಮಾಡಿಕೊಂಡಿದೆ.

ವೃಷಭಾವತಿ ಕಣಿವೆ ನೀರು ಮಾತ್ರ ಈವರೆಗೆ ಕೃಷಿಗೆ ಮರು ಬಳಕೆಯಾಗುತ್ತಿಲ್ಲ. ಈ ಕಣಿವೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಭಾಗಕ್ಕೆ 308 ಎಂಎಲ್‌ಡಿ, ಬಿಡದಿ ಮತ್ತು ರಾಮನಗರ ಭಾಗಕ್ಕೆ 155 ಎಂಎಲ್‌ಡಿ ನೀರು ಹರಿಸಲು ಜಲ ಮಂಡಳಿ ಸಮ್ಮತಿಸಿದೆ. ಅದಕ್ಕೆ ಬೇಕಿರುವ ಪೈಪ್‌ಲೈನ್ ವ್ಯವಸ್ಥೆ ಮಾಡಿಕೊಳ್ಳಲು ಸಣ್ಣ ನೀರಾವರಿ ಇಲಾಖೆ ಈಗ ಮುಂದಾಗಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಿದೆ. ಈ ಯೋಜನೆ ಪೂರ್ಣಗೊಂಡರೆ ಬೆಂಗಳೂರಿನಲ್ಲಿ ಶುದ್ಧೀಕರಿಸುತ್ತಿರುವ ನೀರಿನಲ್ಲಿ ಶೇ 85ರಷ್ಟು ನೀರು ಮರು ಬಳಕೆಯಾದಂತೆ ಆಗಲಿದೆ ಎನ್ನುತ್ತಾರೆ ಜಲ ಮಂಡಳಿ ಮುಖ್ಯ ಎಂಜಿನಿಯರ್‌(ತಾಜ್ಯನೀರು ನಿರ್ವಹಣೆ) ಜಿ.ಸಿ. ಗಂಗಾಧರ್.

ಹೊಸ ಐದು ಎಸ್‌ಟಿಪಿ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಅಮೃತ್ ಯೋಜನೆಯಡಿ ಹೊಸದಾಗಿ ಐದು ತಾಜ್ಯ ನೀರು ಸಂಸ್ಕರಣಾ ಘಟಕಗಳು ನಗರದಲ್ಲಿ ನಿರ್ಮಾಣವಾಗುತ್ತಿವೆ.

ಅಗರ, ಸಾರಕ್ಕಿ, ಹುಳಿಮಾವು, ಚಿಕ್ಕಬೇಗೂರು ಮತ್ತು ಕೆ.ಆರ್‌.ಪುರದಲ್ಲಿ ಈ ಘಟಕಗಳು ಆರಂಭವಾಗುತ್ತಿವೆ. ಅಲ್ಲದೇ ಕೋರಮಂಗಲದಲ್ಲಿ ಹೆಚ್ಚುವರಿಯಾಗಿ ಒಂದು ಮಧ್ಯವರ್ತಿ ತ್ಯಾಜ್ಯ ನೀರು ಪಂಪಿಂಗ್ ಘಟಕ ಮತ್ತು ಆರು ಕಡೆ ತ್ಯಾಜ್ಯ ನೀರು ಹರಿಯುವ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ₹673 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ.

ಕೇಂದ್ರ ಸರ್ಕಾರದಿಂದ ಶೇ 33, ರಾಜ್ಯ ಸರ್ಕಾರದಿಂದ ಶೇ 20ರಷ್ಟು ಅನುದಾನ ದೊರೆತಿದ್ದು, ಬಾಕಿ ಶೇ 47ರಷ್ಟು ಅನುದಾನವನ್ನು ಜಲ ಮಂಡಳಿ ಭರಿಸಿಕೊಂಡಿದೆ. ಪೈಪ್‌ಲೈನ್ ಕಾಮಗಾರಿ ಹೊರತಾಗಿ ಉಳಿದ ಎಲ್ಲಾ ಕಾಮಗಾರಿಗಳನ್ನೂ 2022ರ ಜುಲೈ ಅಂತ್ಯಕ್ಕೆ ಪೂರ್ಣಗೊಳಿಸುವ ಉದ್ದೇಶವನ್ನು ಜಲ ಮಂಡಳಿ ಹೊಂದಿದೆ.

2,400 ಕೋಟಿ ಲೀಟರ್ ಮಳೆ ನೀರು ಸಂಗ್ರಹ

ಮಳೆ ನೀರು ಸಂಗ್ರಹ ಕಾರ್ಯವನ್ನು ಜಲ ಮಂಡಳಿ 2009ರಿಂದ ಆರಂಭಿಸಿದ್ದು, 1.70 ಲಕ್ಷ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸಲಾಗುತ್ತಿದೆ ಎಂದು ಜಲ ಮಂಡಳಿ ತಿಳಿಸಿದೆ.

2,400 ಕೋಟಿ ಲೀಟರ್ ಮಳೆ ನೀರು ಸಂಗ್ರಹಿಸಲಾಗುತ್ತಿದ್ದು, ದಿನಕ್ಕೆ ಸರಾಸರಿ 6.5 ಕೋಟಿ ಲೀಟರ್ ಮಳೆ ನೀರು ಸಂಗ್ರಹವಾದಂತೆ ಆಗಲಿದೆ ಎಂಬುದನ್ನು ಜಲ ಮಂಡಳಿ ಅಂಕಿ–ಅಂಶಗಳು ಹೇಳುತ್ತವೆ.

ಕೈತೋಟ, ಶೌಚಾಲಯಕ್ಕೆ ನೀರು ಮರು ಬಳಕೆ

ಶುದ್ಧೀಕರಿಸಿದ ನೀರನ್ನು ಟ್ಯಾಂಕರ್ ಮತ್ತು ಪೈಪ್‌ಲೈನ್‌ ಮೂಲಕ ಅಗತ್ಯ ಇದ್ದವರಿಗೆ ಜಲ ಮಂಡಳಿ ಪೂರೈಕೆ ಮಾಡುತ್ತಿದೆ. 6 ಸಾವಿರ ಲೀಟರ್‌ ನೀರಿಗೆ ₹360 ದರ ನಿಗದಿ ಮಾಡಿದೆ. ಕಟ್ಟಡಗಳ ನಿರ್ಮಾಣ, ಕೈತೋಟ, ಶೌಚಾಲಯ, ದೊಡ್ಡ ಕಟ್ಟಡಗಳಲ್ಲಿ ನೆಲ ಸ್ವಚ್ಛಗೊಳಿಸಲು, ಹವಾನಿಯಂತ್ರಣ ಯಂತ್ರಗಳಿಗೆ ಬಳಸಲಾಗುತ್ತಿದೆ. ರಾಜಭವನ, ಸರ್ಕಾರಿ ಕಚೇರಿಗಳು, ಕಬ್ಬನ್ ಉದ್ಯಾನ, ಲಾಲ್‌ಬಾಗ್, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುದ್ಧೀಕರಿಸಿದ ನೀರನ್ನು ಕೈತೋಟ ಮತ್ತು ಶೌಚಾಲಯಗಳಲ್ಲಿ ಮರು ಬಳಕೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ನೀರಿನ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ ಎಂದು ಜಲ ಮಂಡಳಿ ತಿಳಿಸಿದೆ.

ಅಂಕಿ–ಅಂಶ

1450 ಎಂಎಲ್‌ಡಿ:ನಗರಕ್ಕೆ ಸರಬರಾಜಾಗುತ್ತಿರುವ ಕಾವೇರಿ ನೀರು

10.50 ಲಕ್ಷ:ನೀರು ಪೂರೈಕೆಯಾಗುತ್ತಿರುವ ಮನೆಗಳ ಸಂಖ್ಯೆ

11,680 ಕಿಲೋ ಮೀಟರ್:ಒಟ್ಟಾರೆ ನೀರಿನ ಪೈಪ್‌ಲೈನ್ ಉದ್ದ

39:ನಗರದಲ್ಲಿರುವ ಎಸ್‌ಟಿಪಿಗಳ ಸಂಖ್ಯೆ

1190 ಎಂಎಲ್‌ಡಿ:ಶುದ್ಧೀಕರಣವಾಗುತ್ತಿರುವ ನೀರಿನ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT