ಗುರುವಾರ , ಮೇ 19, 2022
25 °C

ಸ್ತನ ಕ್ಯಾನ್ಸರ್: ಆರಂಭಿಕ ತಪಾಸಣೆಯೇ ರೋಗಕ್ಕೆ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸ್ತನ ಕ್ಯಾನ್ಸರ್‌ಗೆ ಒಳಗಾದವರು ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಶೇ 100ರಷ್ಟು ಗುಣಮುಖರಾಗಬಹುದು’ ಎಂದು ಮಣಿಪಾಲ್‌ ಆಸ್ಪತ್ರೆಯ ಗ್ರಂಥಿಶಾಸ್ತ್ರ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎಸ್‌.ಪಿ.ಸೋಮಶೇಖರ್ ತಿಳಿಸಿದರು.

ಮಣಿಪಾಲ್ ಆಸ್ಪತ್ರೆ ಹಾಗೂ ಡಿಎಚ್‌ ಬ್ರ್ಯಾಂಡ್‌ಸ್ಪಾಟ್‌ನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಸ್ತನ ಕ್ಯಾನ್ಸರ್ ಕುರಿತು ಯುವಜನರಿಗೆ ಮಾಹಿತಿ ಮತ್ತು ಆರಂಭಿಕ ಹಂತದಲ್ಲೇ ತಡೆಗಟ್ಟುವಿಕೆ’ ಕುರಿತು ಆನ್‌ಲೈನ್‌ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಶೇ 70ರಷ್ಟು ಮಂದಿ ಕ್ಯಾನ್ಸರ್‌ನ ಮುಂದುವರಿದ ಹಂತದಲ್ಲಿ ಚಿಕಿತ್ಸೆಗೆ ಬರುತ್ತಾರೆ. ಜನರಲ್ಲಿ ಅರಿವಿನ ಕೊರತೆ ಹಾಗೂ ತಪಾಸಣೆಗೆ ವಿಳಂಬ ತೋರುವುದರಿಂದ ಗುಣಪಡಿಸಲು ಸಾಧ್ಯವಿರುವ ಸ್ತನ ಕ್ಯಾನ್ಸರ್‌ನ ಪ್ರಮಾಣವು ಏರುತ್ತಿದೆ. ಭಾರತದಲ್ಲಿ ಸ್ತನ ಕ್ಯಾನ್ಸರ್‌ನ ಪ್ರಮಾಣ ಪ್ರತಿ ವರ್ಷ ಶೇ 3ರಷ್ಟು ಹೆಚ್ಚಳವಾಗುತ್ತಿದೆ’ ಎಂದು ವಿವರಿಸಿದರು.

ಮಣಿಪಾಲ್ ಆಸ್ಪತ್ರೆಯ ಗ್ರಂಥಿಶಾಸ್ತ್ರಜ್ಞ ಸಲಹೆಗಾರ್ತಿ ಡಾ.ಪೂನಂ ಪಾಟೀಲ್, ‘ಸ್ತನ ಕ್ಯಾನ್ಸರ್‌ನ ಆರಂಭಿಕ ಹಂತ ನೋವುರಹಿತವಾಗಿರುತ್ತದೆ. ಹಾಗಾಗಿ, ಬಹುತೇಕರು ನೋವು ಕಾಣಿಸುತ್ತಿಲ್ಲ, ವೈದ್ಯರ ಬಳಿಗೆ ಹೋಗುವ ಅಗತ್ಯವಿಲ್ಲ ಎಂದು ನಿರ್ಲಕ್ಷಿಸುತ್ತಾರೆ. ಇದರಿಂದ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಗುಣಪಡಿಸಿಕೊಳ್ಳುವಲ್ಲಿ ಎಡವುತ್ತಿದ್ದಾರೆ’ ಎಂದರು.

‘ಸ್ತನ ಕ್ಯಾನ್ಸರ್‌ಗೆ ಮಹಿಳೆಯರ ದೇಹದಲ್ಲಿನ ಹಾರ್ಮೋನ್‌ಗಳು ಪರಿಣಾಮ ಬೀರುತ್ತವೆ. ಇಂದಿನ ಜೀವನಶೈಲಿಯಿಂದಲೂ ಯುವಜನರಲ್ಲಿ ಸ್ತನ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದ್ದು, ಇದರ ಬಗ್ಗೆ ಜನರು ಜಾಗೃತರಾಗಿರಬೇಕು’ ಎಂದು ಸಲಹೆ ನೀಡಿದರು.

ವಿಕಿರಣಶಾಸ್ತ್ರ ಸಲಹೆಗಾರ್ತಿ ಡಾ.ರೂಪಾ ಅನಂತಶಿವನ್, ‘ಸ್ತನ ರೇಖನ’ (ಮ್ಯಾಮೊಗ್ರಫಿ) ಮೂಲಕ ಸ್ತನ ಕ್ಯಾನ್ಸರ್‌ನ ಪತ್ತೆ ನಡೆಯುತ್ತಿದೆ. ವಿವಿಧ ತಪಾಸಣೆಗಳ ಮೂಲಕ ಸ್ತನ ಕ್ಯಾನ್ಸರ್‌ ಇರುವ ಅಥವಾ ಇಲ್ಲದಿರುವುದನ್ನು ದೃಢಪಡಿಸಿಕೊಳ್ಳಬಹುದು. ಸಾಧ್ಯವಾದಷ್ಟು ನೋವುರಹಿತವಾಗಿ ಹಾಗೂ ಸುಲಭ ವಿಧಾನದಲ್ಲಿ ಚಿಕಿತ್ಸೆ ಲಭ್ಯವಿದೆ. ಸ್ತನಗಳಲ್ಲಿ ಬದಲಾವಣೆ ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ’ ಎಂದರು.

ಪ್ಲಾಸ್ಟಿಕ್‌, ಕಾಸ್ಮೆಟಿಕ್ ಹಾಗೂ ಪುನರ್‌ರಚನೆ ಶಸ್ತ್ರಚಿಕಿತ್ಸೆಯ ಸಲಹೆಗಾರ ಡಾ.ಬಿ.ಸಿ.ಅಶೋಕ್‌, ‘ಸ್ತನ ಕ್ಯಾನ್ಸರ್‌ ಚಿಕಿತ್ಸೆ ಬಗ್ಗೆ ಜನರಲ್ಲಿ ತಪ್ಪು ಮಾಹಿತಿ ಇದೆ. ಸ್ತನ ಕ್ಯಾನ್ಸರ್‌‌ಗೆ ಸರಳ ವಿಧಾನದಲ್ಲಿ ಚಿಕಿತ್ಸೆ ನಡೆಯುತ್ತದೆ. ರೋಗಿ ಬೆಳಿಗ್ಗೆ ಚಿಕಿತ್ಸೆಗೆ ಒಳಗಾದರೆ, ಸಂಜೆ ವೇಳೆಗೆ ಮನೆಗೆ ಮರಳಬಹುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು