ಮಂಗಳವಾರ, ಆಗಸ್ಟ್ 16, 2022
30 °C
ಹೆಬ್ಬಾಳದಿಂದ–ಜೆ.ಪಿ ನಗರ, ಹೊಸಕೆರೆ ಹಳ್ಳಿಯಿಂದ– ಕಡಬಗೆರೆಯವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಾಣ

ನಮ್ಮ ಮೆಟ್ರೊ: ಮೂರನೇ ಹಂತದಲ್ಲಿ ಎರಡು ಮಾರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಮೆಟ್ರೊ’ದ ಮೂರನೇ ಹಂತದಲ್ಲಿ 42 ಕಿ.ಮೀ. ಉದ್ದದ ಎರಡು ಮಾರ್ಗಗಳು ನಿರ್ಮಾಣವಾಗಲಿವೆ. 20190–20ರ ವಾರ್ಷಿಕ ವರದಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ಈಗ ಬಿಡುಗಡೆ ಮಾಡಿದ್ದು, ಈ ವರದಿಯಲ್ಲಿ ಈ ಮಾರ್ಗಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾರ್ಚ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು. ಅದರ ನಂತರ, ಇದೇ ಮೊದಲ ಬಾರಿಗೆ ನಿಗಮವು ಅಧಿಕೃತವಾಗಿ ಈ ಬಗ್ಗೆ ವರದಿ ಪ್ರಕಟಿಸಿದೆ. ಮೂರನೇ ಹಂತದಲ್ಲಿ ಹೆಬ್ಬಾಳದಿಂದ ಜೆ.ಪಿ. ನಗರದವರೆಗೆ (30 ಕಿ.ಮೀ.) ಹಾಗೂ ಹೊಸಹಳ್ಳಿ ನಿಲ್ದಾಣದ ಟೋಲ್‌ಗೇಟ್‌ನಿಂದ ಕಡಬಗೆರೆಯವರೆಗೆ (12 ಕಿ.ಮೀ) ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗಲಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಈ ಮಾರ್ಗ ತಲೆ ಎತ್ತಲಿದೆ.

ಈ ಬಗ್ಗೆ ಸಮಗ್ರ ಯೋಜನಾ ವರದಿಯನ್ನು ನಿಗಮವು ಸಿದ್ಧಪಡಿಸುತ್ತಿದ್ದು, 2021ರ ಮೊದಲ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಜವಾಬ್ದಾರಿಯನ್ನು ರೈಟ್ಸ್‌ ಲಿಮಿಟೆಡ್‌ ಕಂಪನಿಗೆ ವಹಿಸಲಾಗಿದೆ. ಈ ಕಂಪನಿಯು ಈವರೆಗೆ ನಾಲ್ಕು ಮಾರ್ಗಗಳಿಗೆ ಯೋಜನಾ ವರದಿ ಮತ್ತು ಸಾಧ್ಯತಾ ವರದಿಯನ್ನು ಸಿದ್ಧಪಡಿಸಿದೆ. ನಾಗವಾರ–ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗ (23 ಕಿ.ಮೀ), ಕಾರ್ಮೆಲರಾಮ್– ಯಲಹಂಕ (32 ಕಿ.ಮೀ), ಮಾರತ್ತಹಳ್ಳಿ–ಹೊಸಕೆರೆಹಳ್ಳಿ (21 ಕಿ.ಮೀ) ಹಾಗೂ ಸಿಲ್ಕ್‌ ಬೋರ್ಡ್‌ –ಕೆ.ಆರ್. ಪುರ–ಹೆಬ್ಬಾಳ (29 ಕಿ.ಮೀ) ಮಾರ್ಗದ ಕಾರ್ಯಸಾಧ್ಯತಾ ವರದಿಯನ್ನು ಈ ಕಂಪನಿ ಸಿದ್ಧಪಡಿಸಿದೆ. 

ಮೂರನೇ ಹಂತದಲ್ಲಿ ನಿರ್ಮಾಣವಾಗುವ ಈ ಮಾರ್ಗಗಳು ಉಪನಗರ ರೈಲು ಮಾರ್ಗಗಳನ್ನು ಸಂಪರ್ಕಿಸುವ ಉದ್ದೇಶ ಹೊಂದಿವೆ. ಅಂದರೆ, ಗುಲಾಬಿ ಮಾರ್ಗದ ವಿಸ್ತರಿತ ಭಾಗವಾಗಿ ತಲೆ ಎತ್ತುವ ಗೊಟ್ಟಿಗೆರೆ–ಬಸವಪುರ, ಆರ್.ಕೆ. ಹೆಗಡೆ ನಗರ– ಏರೋಸ್ಪೇಸ್ ಪಾರ್ಕ್, ಕೋಗಿಲು ಅಡ್ಡರಸ್ತೆ–ರಾಜಾನುಕುಂಟೆ, ಬೊಮ್ಮಸಂದ್ರ ಮತ್ತು ಅತ್ತಿಬೆಲೆ ಹಾಗೂ ಇಬ್ಬಲೂರು ಹಾಗೂ ಕಾರ್ಮೆಲರಾಮ್‌ ಮಾರ್ಗವನ್ನು ಸಂಪರ್ಕಿಸುವ ಉದ್ದೇಶವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು