ಶುಕ್ರವಾರ, ಸೆಪ್ಟೆಂಬರ್ 24, 2021
26 °C
1,800 ಗ್ರಾಹಕರಿಂದ ದೂರು; ₹ 50 ಕೋಟಿ ವಂಚನೆ ದಾಖಲೆ ಲಭ್ಯ

ವಂಚಿಸಿ ಪರಾರಿಯಾಗಿದ್ದ ‘ಬೃಂದಾವನ ಪ್ರಾಪರ್ಟಿಸ್’ ನಿರ್ದೇಶಕ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಿವೇಶನ ಮಾರಾಟ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದ ‘ಬೃಂದಾವನ ಪ್ರಾಪರ್ಟಿಸ್’ ಕಂಪನಿ ನಿರ್ದೇಶಕ ದಿನೇಶ್ ಎಸ್. ಗೌಡ (38) ಅವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

‘ರಾಜಾಜಿನಗರದ 3ನೇ ಹಂತದಲ್ಲಿರುವ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದ ಆರೋಪಿ ದಿನೇಶ್, ತಮ್ಮೂರಾದ ಅರಕಲಗೂಡಿಗೆ ಹೋಗಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪೊಲೀಸರ ವಿಶೇಷ ತಂಡ ಅರಕಲಗೂಡಿಗೆ ಹೋಗಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಬಿಬಿಎ ಪದವೀಧರರಾದ ದಿನೇಶ್, ಪರಿಚಯಸ್ಥರನ್ನು ಸೇರಿಸಿಕೊಂಡು ಬೃಂದಾವನ ಪ್ರಾಪರ್ಟಿಸ್ ಕಂಪನಿ ಸ್ಥಾಪಿಸಿದ್ದರು. ತಾವರೆಕೆರೆ, ಹೆಸರಘಟ್ಟ, ನೆಲಮಂಗಲ ಹಾಗೂ ಇತರೆಡೆ ಕಂಪನಿಯ ಜಾಗವಿರುವುದಾಗಿ ಹೇಳುತ್ತಿದ್ದರು. ಅದೇ ಜಾಗದಲ್ಲಿ ನಿವೇಶಗಳನ್ನು ಅಭಿವೃದ್ಧಿಪಡಿಸಿ ಕಡಿಮೆ ದರಕ್ಕೆ ಮಾರಾಟ ಮಾಡುವುದಾಗಿ ಜಾಹೀರಾತು ನೀಡುತ್ತಿದ್ದರು.’

‘ಕೂಲಿ ಕಾರ್ಮಿಕರು, ಆಟೊ–ಟ್ಯಾಕ್ಸಿ ಚಾಲಕರು, ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಇತರರು ಕಂಪನಿಗೆ ಹಣ ತುಂಬಿ ನಿವೇಶನ ಕಾಯ್ದಿರಿಸಿದ್ದರು. ನಿಗದಿತ ಸಮಯಕ್ಕೆ ನಿವೇಶನ ನೀಡದೇ ಆರೋಪಿ ಸತಾಯಿಸಲಾರಂಭಿಸಿದ್ದರು. ಇದನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಂತೆ ಕಚೇರಿಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದರು’ ಎಂದೂ ಅಧಿಕಾರಿ ತಿಳಿಸಿದರು.

ಪೊಲೀಸರಿಂದಲೂ ಹಣ ಹೂಡಿಕೆ: ‘ಬೃಂದಾವನ ಪ್ರಾಪರ್ಟಿಸ್ ಕಂಪನಿಯಲ್ಲಿ ಕೆಲ ಪೊಲೀಸರು, ನಿವೇಶನ ಖರೀದಿಗಾಗಿ ಹಣ ಹೂಡಿಕೆ ಮಾಡಿದ್ದರು. ಅಂಥ ಪೊಲೀಸರು ಸಹ ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು