ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ರೈಲು ಯೋಜನೆ 3 ವರ್ಷಗಳಲ್ಲಿ ಪೂರ್ಣ: ಸಿಎಂ ಬಿ.ಎಸ್‌. ಯಡಿಯೂರಪ್ಪ ಭರವಸೆ

ಯೋಜನೆಗೆ ಶೇ 60 ರಷ್ಟು ಸಾಲ
Last Updated 2 ಫೆಬ್ರುವರಿ 2020, 19:20 IST
ಅಕ್ಷರ ಗಾತ್ರ

ಬೆಂಗಳೂರು: ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರ ವಿವಿಧ ಬ್ಯಾಂಕ್‌ಗಳಿಂದ ಸಾಲ ತಂದು ಕೆಲಸ ಆರಂಭಿಸಬೇಕಾಗಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಪರಿಷ್ಕೃತ ಯೋಜನೆ ಯನ್ನು ಪ್ರಕಟಿಸಿದ್ದರೂ, ಬ್ಯಾಂಕ್‌ಗಳು ಸಾಲ ಕೊಟ್ಟರಷ್ಟೇ ಯೋಜನೆಗೆ ಚಾಲನೆ ಸಿಗಲಿದೆ.

ಈ ಯೋಜನೆಗೆ ಒಟ್ಟು ₹18,621 ಕೋಟಿ ವೆಚ್ಚವಾಗಲಿದ್ದು, ಅದರಲ್ಲಿ ರಾಜ್ಯ, ಕೇಂದ್ರ ಸರ್ಕಾರ ತಲಾ ಶೇ 20ರಷ್ಟು ಹಣ ನೀಡಿದರೆ, ಶೇ 60ರಷ್ಟು ಸಾಲ ಪಡೆದುಕೊಳ್ಳಲಾಗುತ್ತದೆ.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಈ ಬಗ್ಗೆ ವಿವರಣೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಉಪನಗರ ರೈಲು ಯೋಜನೆಯು ಬೆಂಗಳೂರಿನ ನಾಗರಿಕರ ಬಹುದಿನಗಳ ಕನಸಾಗಿತ್ತು. ಮುಂದಿನ ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಿ, ರೈಲು ಸಂಚಾರ ಆರಂಭಿಸಲಾಗುವುದು’ ಎಂದರು.

‘ರೈಲಿನ ಎಲ್ಲಾ ಬೋಗಿಗಳು ಹವಾ ನಿಯಂತ್ರಿತ ಸೌಕರ್ಯ ಹೊಂದಲಿದ್ದು, ಪ್ರತಿ ದಿನ ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿವರೆಗೆ ಸಂಚರಿಸಲಿವೆ ಎಂದು ತಿಳಿಸಿದರು.

‘ಈ ಯೋಜನೆ ಕಾರ್ಯಗತಗೊಂಡರೆ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಕ್ಷಿಪ್ರಗತಿಯಲ್ಲಿ ನಿಗದಿತ ಸ್ಥಳಗಳಿಗೆ ತಲುಪಲು ಜನರಿಗೆ ಸಹಕಾರಿಯಾಗಲಿದೆ. ಜತೆಗೆ ಮಾಲಿನ್ಯ ನಿಯಂತ್ರಣಕ್ಕೂ ನೆರವಾಗಲಿದೆ’ ಎಂದು ಹೇಳಿದರು.

‘ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ (ಸಿಸಿಇಎ) ಅನು ಮೋದನೆ ಪಡೆಯಲು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಸಂಸದ ಪಿ.ಸಿ. ಮೋಹನ್ ಪ್ರಯತ್ನ ಮುಂದುವರಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುರೇಶ ಅಂಗಡಿ ಮಾತನಾಡಿ, ‘ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಇದರಿಂದಾಗಿ ನಗರದಲ್ಲಿ ರೈಲ್ವೆ ಸೌಕರ್ಯಗಳನ್ನು ಮತ್ತಷ್ಟು ವಿಸ್ತರಣೆ ಮಾಡಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಯಾರ ಪಾಲು ಎಷ್ಟು

ಕೇಂದ್ರ ಸರ್ಕಾರ:₹2,953.50 ಕೋಟಿ

ರಾಜ್ಯ ಸರ್ಕಾರ: ₹2,953.50 ಕೋಟಿ

ಸಾಲ: ₹8,860 ಕೋಟಿ

ಜಿಎಸ್‌ಟಿ, ಇತರೆ ಸುಂಕಗಳಿಗೆ ಮಾಡಬೇಕಾದ ಪ್ರತ್ಯೇಕ ಖರ್ಚು; ₹3,854 ಕೋಟಿ

‌ಮೂರು ವರ್ಷವೋ ಆರು ವರ್ಷವೋ?

ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಿ ರೈಲು ಸಂಚಾರ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆ–ರೈಡ್‌) ಸಿದ್ಧಪಡಿಸಿರುವ ಪತ್ರಿಕಾಗೊಷ್ಠಿಯ ಪ್ರಕಟಣೆಯಲ್ಲಿ 6 ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಆದರೆ, ಆದ್ಯತಾ ಕಾರಿಡಾರ್ (ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ) ಮೂರು ವರ್ಷದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಕೆ–ರೈಡ್ ವಿವರಿಸಿದೆ.

ಯೋಜನೆಯ ಪ್ರಮುಖ ಲಕ್ಷಣಗಳು

*148.17 ಕಿ.ಮೀ ಉದ್ದ ಮಾರ್ಗ

*55.40 ಕಿ.ಮೀ ಎತ್ತರಿಸಿದ(ಎಲಿವೇಟೆಡ್‌)ಮಾರ್ಗ

*15 ಮೀಟರ್ ಎತ್ತರದ ಎಲಿವೇಟೆಡ್‌ ಮಾರ್ಗ

*103 ಎಕರೆ ಖಾಸಗಿ ಭೂಮಿ ಸ್ವಾಧೀನಆಗಬೇಕಿದೆ

*57 ನಿಲ್ದಾಣಗಳು(ಈ ಪೈಕಿ 11 ನಿಲ್ದಾಣಗಳುಮೆಟ್ರೊ ರೈಲು ನಿಲ್ದಾಣ, 23 ನಿಲ್ದಾಣಗಳುಹಾಲಿ ಇರುವ ರೈಲು ನಿಲ್ದಾಣಗಳೊಂದಿಗೆಸಂಯೋಜನೆಗೊಳ್ಳಲಿವೆ)

*3,660 ಮಿ.ಮೀ. ಅಗಲದ 25 ಕೆ.ವಿಹವಾನಿಯಂತ್ರಿತ ಬೋಗಿಗಳು

*2019ರ ಜುಲೈಗೆ ಯೋಜನೆಯ ಅಂದಾಜುವೆಚ್ಚ ₹15,999 ಕೋಟಿ

*ಯೋಜನಾ ವೆಚ್ಚ ಶೇ 5ರಷ್ಟು ಹೆಚ್ಚಳವಾಗುವಸಾಧ್ಯತೆಯನ್ನೂ ಸೇರಿ ಒಟ್ಟು ಮೊತ್ತ ₹18,621ಕೋಟಿ

ಜಿಎಸ್‌ಟಿಗೆ ₹3,854 ಕೋಟಿ

ಯೋಜನೆ ಪೂರ್ಣಗೊಳ್ಳುವ ವೇಳೆಗೆ ಜಿಎಸ್‌ಟಿ ಮತ್ತು ಇತರೆ ಸುಂಕಗಳಿಗಾಗಿಯೇ ₹3,854 ಕೋಟಿಯನ್ನು ವ್ಯಯಿಸಬೇಕಾಗಿದೆ.

ಈ ಮೊತ್ತವನ್ನು ರೈಲ್ವೆ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರ ಸಮವಾಗಿ ಭರಿಸಲಿವೆ.

ಯೋಜನೆಯ ಹಾದಿ

*2017ರ ನವೆಂಬರ್‌ನಲ್ಲಿ ‌ರೈಟ್ಸ್ ಸಂಸ್ಥೆಯಿಂದ ಮೊದಲ ಕಾರ್ಯಸಾಧ್ಯತಾ ಪೂರ್ವ ವರದಿ

*2017ರ ಡಿಸೆಂಬರ್‌ನಲ್ಲಿ ಸಮಗ್ರ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸಲು ರೈಲ್ವೆ ಮಂಡಳಿ ಅನುಮತಿ

*2019ರ ಫೆಬ್ರುವರಿಯಲ್ಲಿ ರೈಟ್ಸ್ ಸಂಸ್ಥೆಯಿಂದ ಡಿಪಿಆರ್ ಸಲ್ಲಿಕೆ

*2019ರ ಮಾರ್ಚ್‌ನಲ್ಲಿ ರೈಲ್ವೆ ವಿಸ್ತರಿತ ಮಂಡಳಿಯಿಂದ (ಇಬಿಆರ್‌) ಅನುಮೋದನೆ

*ಪರಿಷ್ಕೃತ ಡಿಪಿಆರ್‌ ಸಿದ್ಧಪಡಿಸಲು ಅದೇ ತಿಂಗಳಿನಲ್ಲಿ ರೈಲ್ವೆ ಸಚಿವಾಲಯದಿಂದ ನಿರ್ದೇಶನ

*2019ರ ಜುಲೈನಲ್ಲಿ ರೈಟ್ಸ್ ಸಂಸ್ಥೆಯಿಂದ ಪರಿಷ್ಕೃತ ಡಿಪಿಆರ್‌ ಸಲ್ಲಿಕೆ(16 ನಿಲ್ದಾಣ, 12 ಕಿ.ಮೀ ಕಡಿತ ಮತ್ತು ಯೋಜನಾ ಮೊತ್ತ ₹3,500 ಕೋಟಿ ಕಡಿಮೆ ಮಾಡಲಾಯಿತು)

*2019ರ ನವೆಂಬರ್‌ 4ರಂದು ರೈಲ್ವೆ ಮಂಡಳಿಯಿಂದ ಅನುಮೋದನೆ‌

*2020 ಫೆಬ್ರುವರಿ 1ರಂದು ಬಜೆಟ್‌ನಲ್ಲಿ ಘೋಷಣೆ

*ಸದ್ಯ ಅಂತಿಮ ಅನುಮೋದನೆಗಾಗಿ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ) ಮುಂದಿರುವ ಕರಡು ಟಿಪ್ಪಣಿ

ಉಪನಗರ ರೈಲು ಮಾರ್ಗ

*ಕೆಂಗೇರಿ– ವೈಟ್‌ಫೀಲ್ಡ್

*ಕೆಎಸ್‌ಆರ್‌ ರೈಲು ನಿಲ್ದಾಣ– ಯಶವಂತಪುರ– ದೇವನಹಳ್ಳಿ (ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ)

*ಚಿಕ್ಕಬಾಣಾವರ–ಯಶವಂತಪುರ– ಬೈಯಪ್ಪನಹಳ್ಳಿ

*ಹೀಲಳಿಗೆ–ಬೈಯಪ್ಪನಹಳ್ಳಿ–ಯಲಹಂಕ–ರಾಜಾನುಕುಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT