ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಟುಂಬ ರಾಜಕಾರಣದಿಂದ ಸಂಸದೀಯ ವ್ಯವಸ್ಥೆಗೆ ಧಕ್ಕೆ’-ಬಿ.ಎಲ್. ಶಂಕರ್‌

Last Updated 7 ಜೂನ್ 2021, 20:44 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ದೇಶದ ಬಹುಭಾಷಾ ಮತ್ತು ಬಹುಸಂಸ್ಕೃತಿಗೆ ಪೂರಕವಾಗಿಯೇ ಸಂಸದೀಯ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ, ಕುಟುಂಬ ರಾಜಕಾರಣ ಮತ್ತು ಕೋಮುವಾದದಿಂದ ಈ ವ್ಯವಸ್ಥೆಯ ಆಶಯಗಳು ಬುಡಮೇಲಾಗುತ್ತಿವೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಎಲ್. ಶಂಕರ್‌ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ‘ಸಂಸದೀಯ ಪದ್ಧತಿಗಳು ಹಾಗೂ ವಿಧಾನಗಳು’ ಕುರಿತು ಸೋಮವಾರ ನಡೆದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಸದ್ಯ ಸಂಸತ್‌ನಲ್ಲಿ ಶೇ 41ರಷ್ಟು ಅಪರಾಧಿಕ ಹಿನ್ನೆಲೆಯುಳ್ಳವರು, ಶೇ 86ರಷ್ಟು ಕೋಟ್ಯಾಧೀಶರು ಹಾಗೂ ಶೇ 60ರಷ್ಟು ಮಂದಿ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಿದ್ದು, ಇವರೇ ನಮ್ಮನ್ನು ಆಳುತ್ತಿದ್ದಾರೆ’ ಎಂದರು.

‘ಸಭಾಧ್ಯಕ್ಷ ಹಾಗೂ ರಾಜ್ಯಪಾಲರನ್ನು ನಿಷ್ಪಕ್ಷಪಾತವಾಗಿ ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಹಾಗೂ ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯ ಮೂಲಕ ಆಯ್ಕೆ ಮಾಡಿದರೆ ದೇಶದ ಸಂಸದೀಯ ಮಾದರಿಯ ವ್ಯವಸ್ಥೆಯು ಇನ್ನಷ್ಟು ಬಲಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಇತ್ತೀಚಿನ ದಿನಗಳಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಗುರಿ, ಉದ್ದೇಶಗಳು ವಿಫಲವಾಗುತ್ತಿರುವುದು ಅಸಮರ್ಥ ಸಭಾಪತಿಗಳಿಂದ. ಇಂದಿನ ರಾಜಕಾರಣ ಭ್ರಷ್ಟಗೊಳ್ಳಲಿಕ್ಕೆ, ರಾಜಕೀಯ ಮುಖಂಡರು ಹಾಗೂ ರಾಜಕೀಯ ಪಕ್ಷಗಳು ಕಾರಣವೇ ಹೊರತು ಸಾರ್ವಜನಿಕರಲ್ಲ. ಶೇಕಡ 90ರಷ್ಟು ರಾಜಕಾರಣ ವ್ಯಾಪಾರ ವಾಗಿರುವುದು ಬಹಳ ದುರ್ದೈವದ ಸಂಗತಿ’ ಎಂದು ಬೇಸರಿಸಿದರು.

ಕುಲಪತಿ ಪ್ರೊ. ಕೆ.ಆರ್ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ, ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಎನ್. ಸತೀಶ್ ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT