ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿನೀರಿನ ಹಬೆ: ದೇಹ ಸುಟ್ಟುಕೊಂಡ ಬಾಲಕ

Last Updated 29 ಜುಲೈ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಏಳು ವರ್ಷದ ಬಾಲಕನೊಬ್ಬ ಹಬೆ ತೆಗೆದುಕೊಳ್ಳುವಾಗ ಬಿಸಿನೀರು ಮೈಮೇಲೆ ಚೆಲ್ಲಿ ದೇಹದ ಅರ್ಧದಷ್ಟು ಭಾಗ ಸುಟ್ಟು ಹೋದ ಘಟನೆ ನಗರದಲ್ಲಿ ನಡೆದಿದೆ.

ವೈಟ್‌ಫೀಲ್ಡ್‌ನ ಬಾಲಕನಿಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದು, ಚರ್ಮದ ಕಸಿ ಮಾಡಲಾಗಿದೆ. ಇದರಿಂದಾಗಿ ಬಾಲಕ ಚೇತರಿಸಿಕೊಂಡಿದ್ದಾನೆ.

‘ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ ಬಾಲಕನಿಗೆ ಕಾಣಿಸಿಕೊಂಡಿತ್ತು. ಇದರಿಂದಾಗಿ ರಾತ್ರಿ ವೇಳೆ ಅವನಿಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಹಬೆ ತೆಗೆದುಕೊಳ್ಳುವಂತೆ ಸೂಚಿಸಿ, ಬಿಸಿನೀರು ಒಳಗೊಂಡ ಸಾಧನವನ್ನು ಆತನ ತಾಯಿ ಒದಗಿಸಿದ್ದರು. ಹಬೆ ತೆಗೆದುಕೊಳ್ಳುವ ವೇಳೆ ನಿದ್ದೆಗಣ್ಣಿನಲ್ಲಿ ತೂಕಡಿಸಿದ ಬಾಲಕ, ಅರಿವಿಲ್ಲದೆಯೇ ಆ ಸಾಧನವನ್ನು ತಳ್ಳಿದ್ದಾನೆ. ಇದರಿಂದಾಗಿ ಅದರಲ್ಲಿನ ಬಿಸಿ ನೀರು ಮೈ ಮೇಲೆ ಬಿದ್ದು, ಕಾಲು, ಕೈ, ಹೊಟ್ಟೆ ಸೇರಿದಂತೆ ದೇಹದ ವಿವಿಧ ಭಾಗಗಳು ಸುಟ್ಟಿವೆ’ ಎಂದು ಆಸ್ಪತ್ರೆ ತಿಳಿಸಿದೆ.

‘ಬಾಲಕನ ದೇಹದ ತುಂಬ ಸುಟ್ಟಗಾಯಗಳಾಗಿದ್ದವು. ಅವು ಚರ್ಮದ ಮೇಲ್ಪದರಕ್ಕೆ ಮಾತ್ರ ಹಾನಿ ಮಾಡಿದಲ್ಲಿ ಅಷ್ಟೊಂದು ಸಮಸ್ಯೆ ಇರುತ್ತಿರಲಿಲ್ಲ. ನೀರು ಹೆಚ್ಚು ಬಿಸಿಯಿದ್ದರಿಂದ ಗಾಯಗಳು ಚರ್ಮದ ಒಳಪದರಗಳಿಗೆ ಕೂಡ ಹಾನಿ ಮಾಡಿದ್ದವು. ಹೀಗಾಗಿ, ಚರ್ಮದ ಕಸಿ ಅಗತ್ಯವಾಗಿತ್ತು‌’ ಎಂದುಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ. ಕಾರ್ತಿಕ್ ತಲ್ಲಮ್ ತಿಳಿಸಿದರು.

ಮಕ್ಕಳ ವೈದ್ಯ ಡಾ.ಎಸ್.ಪಿ. ಸೆಂಥಿಲ್ ಕುಮಾರ್, ‘ಹಬೆ ತೆಗೆದುಕೊಳ್ಳುವ ವೇಳೆ ಮಕ್ಕಳು ಸುಟ್ಟುಕೊಂಡ 10 ಪ್ರಕರಣಗಳನ್ನು ಕಳೆದೊಂದು ವರ್ಷದಲ್ಲಿ ನೋಡಿದ್ದೇವೆ. ಕೋವಿಡ್‌ ತಡೆಗೆ ಹಬೆ ತೆಗೆದುಕೊಳ್ಳುವುದು ಸಹಾಯಕಾರಿ ಎಂಬ ಕಲ್ಪನೆ ಹಲವರಲ್ಲಿದೆ. ಈ ರೀತಿ ಹಬೆ ಪಡೆಯುವುದರಿಂದ ಉಸಿರಾಟದ ಸಮಸ್ಯೆ ಸ್ವಲ್ಪಮಟ್ಟಿಗೆ ದೂರವಾದರೂ ಕೊರೊನಾ ಸೋಂಕನ್ನು ನಿವಾರಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT