ಗುರುವಾರ , ಅಕ್ಟೋಬರ್ 24, 2019
21 °C
ಜ್ಯೇಷ್ಠತೆ ಕಡೆಗಣಿಸಲು ಪ್ರಭಾರ ದಾರಿ

ಜಲಮಂಡಳಿ ಮುಖ್ಯ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಲು ಮೀನಮೇಷ

Published:
Updated:

ಬೆಂಗಳೂರು: ಜಲಮಂಡಳಿಯಲ್ಲಿ ಮುಖ್ಯ ಎಂಜಿನಿಯರ್‌ ಹುದ್ದೆಗೆ ಅರ್ಹರಿಗೆ ಬಡ್ತಿ ನೀಡದೆ ಜ್ಯೇಷ್ಠತಾ ಪಟ್ಟಿಯಲ್ಲಿ ಕೆಳಗಿರುವವರಿಗೆ ಈ ಹುದ್ದೆಯನ್ನು ಪ್ರಭಾರ ಹೆಸರಿನಲ್ಲಿ ನೀಡಲಾಗಿದೆ ಎಂಬ ಆರೋಪವಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ದೂರು ಸಲ್ಲಿಕೆಯಾಗಿದೆ.

ಜಲಮಂಡಳಿಯಲ್ಲಿ ನಾಲ್ಕು ಮುಖ್ಯ ಎಂಜಿನಿಯರ್‌ಗಳ ಹುದ್ದೆ ಖಾಲಿ ಇವೆ. 2016 ಏಪ್ರಿಲ್‌ನಿಂದ ಒಂದು ಹುದ್ದೆ (ಯೋಜನೆ), 2017ರ ಜುಲೈನಿಂದ ಒಂದು ಹುದ್ದೆ (ತ್ಯಾಜ್ಯ ನೀರು ನಿರ್ವಹಣೆ) ಮತ್ತು 2018ರ ಮೇ ತಿಂಗಳಿನಿಂದ ಎರಡು ಹುದ್ದೆಗಳು (ಕಾವೇರಿ, ನಿರ್ವಹಣೆ) ಖಾಲಿ ಇವೆ.

ಮುಖ್ಯ ಎಂಜಿನಿಯರ್‌ಗಳಾಗಲು ಹೆಚ್ಚುವರಿ ಮುಖ್ಯ ಎಂಜಿನಿಯರ್‌ಗಳಾಗಿ ಎರಡು ವರ್ಷ ಸೇವೆ ಸಲ್ಲಿಸಿದ ಅನುಭವ ಇರಬೇಕು. ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಲಭ್ಯ ಇಲ್ಲದಿದ್ದರೆ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿದವರಿಗೆ ಬಡ್ತಿ ನೀಡಲು ಕಾನೂನಿನಲ್ಲಿ ಅವಕಾಶ ಇದೆ. ಇದರಂತೆ ಬಡ್ತಿ ಪಡೆಯಲು ಆರು ಎಂಜಿನಿಯರ್‌ಗಳು ಅರ್ಹರಿದ್ದಾರೆ.

ಆದರೆ, ಇದೇ ಅಗಸ್ಟ್‌ನಲ್ಲಿ ಪ್ರಕಟವಾಗಿರುವ ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಾರ, ಹೆಚ್ಚುವರಿ ಮುಖ್ಯ ಎಂಜಿನಿಯರ್‌ಗಳಾದ ಬಿ.ಶಿವಪ್ರಸಾದ್, ಈ. ನಿತ್ಯಾನಂದಕುಮಾರ್, ಬಿ.ಎಂ. ಸೋಮಶೇಖರ್, ಎಚ್.ಎಂ. ಗಂಗಾಧರಮೂರ್ತಿ ಕ್ರಮವಾಗಿ ಹಿರಿಯರು.

ಇವರಲ್ಲಿ ಬಿ. ಶಿವಪ್ರಸಾದ್ ಮತ್ತು ಈ. ನಿತ್ಯಾನಂದಕುಮಾರ್ ಮುಖ್ಯ ಎಂಜಿನಿಯರ್‌ ಹುದ್ದೆಯನ್ನು ಪ್ರಭಾರವಾಗಿ ನಿರ್ವಹಿಸುತ್ತಿದ್ದಾರೆ. ಉಳಿದ ಇಬ್ಬರು ಹೆಚ್ಚುವರಿ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲೇ ಇದ್ದಾರೆ. ಈ ಇಬ್ಬರಿಗಿಂತ ‌ಜ್ಯೇಷ್ಠತಾ ಪಟ್ಟಿಯಲ್ಲಿ ಕೆಳಗಿರುವ ಎಸ್.ವಿ. ರಮೇಶ್‌ ಮತ್ತು ಬಿ.ಸಿ. ಗಂಗಾಧರ ಅವರು ಪ್ರಭಾರವಾಗಿ ಮುಖ್ಯ ಎಂಜಿನಿಯರ್ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ.

‘ಬಡ್ತಿ ನೀಡಿದರೆ ಸೇವಾ ಜ್ಯೇಷ್ಠತೆಯನ್ನು ಪರಿಗಣಿಸಬೇಕಾಗುತ್ತದೆ. ಪ್ರಭಾರವಾಗಿ ನಿರ್ವಹಿಸಲು ಜ್ಯೇಷ್ಠತೆ ಕಡ್ಡಾಯವಲ್ಲ. ಹೀಗಾಗಿ ಪ್ರಭಾರವಾಗಿ ಕಿರಿಯರಿಗೆ ವಹಿಸಲಾಗಿದೆ’ ಎಂಬುದು ಬಡ್ತಿ ವಂಚಿತರ ಆರೋಪ.

ಬಡ್ತಿ ನೀಡಬೇಕೆಂದರೆ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಮೂಲಕ ಮಂಡಳಿಯಲ್ಲಿ ನಿರ್ಧಾರ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಈ ಪ್ರಕ್ರಿಯೆಯನ್ನು ಜಲಮಂಡಳಿ ಇನ್ನೂ ಆರಂಭಿಸಿಲ್ಲ.

ಮುಖ್ಯ ಕಾರ್ಯದರ್ಶಿಗೆ ದೂರು

‘ಸೇವಾ ಹಿರಿತನ ಇದ್ದರೂ ಮುಖ್ಯ ಎಂಜಿನಿಯರ್‌ ಹುದ್ದೆಗೆ ಏರಲು ಸಾಧ್ಯವಾಗದೆ ಅನ್ಯಾಯವಾಗಿದೆ’ ಎಂದು ಹುದ್ದೆ ವಂಚಿತ ಎಂಜಿನಿಯರ್ ಒಬ್ಬರು ಟಿ.ಎಂ.ವಿಜಯಭಾಸ್ಕರ್ ಅವರಿಗೆ ಇದೇ 6ರಂದು ದೂರು ನೀಡಿದ್ದಾರೆ. ಬಡ್ತಿ ನೀಡುವ ಮೂಲಕ ನ್ಯಾಯ ಒದಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

‘ಬಡ್ತಿ ನೀಡುವಾಗ ನೋಡೋಣ’

‘ಮುಖ್ಯ ಎಂಜಿನಿಯರ್ ಹುದ್ದೆಗಳನ್ನು ಹೆಚ್ಚುವರಿ ಮುಖ್ಯ ಎಂಜಿನಿಯರ್‌ಗಳಿಗೆ ಪ್ರಭಾರವಾಗಿ ವಹಿಸಿರುವುದು ಆಡಳಿತಾತ್ಮಕ ವಿಷಯ’ ಎಂದು ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ಹೇಳಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲರಿಗೂ ಬಡ್ತಿ ನೀಡುವ ಸಂದರ್ಭದಲ್ಲಿ ಸೇವಾ ಹಿರಿತನವನ್ನು ಪರಿಗಣಿಸೋಣ ಬಿಡಿ’ ಎಂದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)