ಶುಕ್ರವಾರ, ಜೂನ್ 5, 2020
27 °C
ಸ್ಪಷ್ಟತೆಯಿಲ್ಲದ ಆದೇಶ: ನೌಕರರಿಗೆ ಸಂಕಷ್ಟ

345 ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಲು ಮುಂದಾದ ಜಲಮಂಡಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 345 ಕಾರ್ಮಿಕರನ್ನು ಸೇವೆಯಿಂದ ಬಿಡುಗಡೆಗೊಳಿಸಲು ಜಲಮಂಡಳಿ ಮುಂದಾಗಿದೆ. ಲಾಕ್‌ಡೌನ್‌ನಂತಹ ಸಂಕಷ್ಟದ ಸಮಯದಲ್ಲಿ ಜಲಮಂಡಳಿಯ ಈ ನಿರ್ಧಾರ ನೌಕರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. 

‘ಜಲಮಂಡಳಿಯಲ್ಲಿ ಸದ್ಯ 2,440 ಸಿಬ್ಬಂದಿ ಇದ್ದು, ಈ ಪೈಕಿ ಹೆಚ್ಚಿನವರು ಹೊರಗುತ್ತಿಗೆ ಆಧಾರದ ಮೇಲೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಕನಿಷ್ಠ ಮೂರು ತಿಂಗಳ ಅವಧಿಗಾದರೂ ಈ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕು’ ಎಂದು ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜಲಮಂಡಳಿಯ ಈ ಆದೇಶದಲ್ಲಿಯೂ ಸ್ಪಷ್ಟತೆಯಿಲ್ಲ. 345 ಹುದ್ದೆಗಳ ಪೈಕಿ, ಯಾವ ಕೇಡರ್‌ನ, ಯಾವ ಹುದ್ದೆಯಲ್ಲಿರುವವರನ್ನು ತೆಗೆಯಬೇಕು ಎಂಬುದನ್ನು ತಿಳಿಸಿಲ್ಲ. ಈ ಜವಾಬ್ದಾರಿಯನ್ನು ಸಂಬಂಧಪಟ್ಟ ಎ.ಇ ಅವರಿಗೆ ವಹಿಸಲಾಗಿದೆ’ ಎಂದರು. 

‘2010ರಲ್ಲಿ 1,700 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಜಲಮಂಡಳಿಗೆ ಅನುಮೋದನೆ ಸಿಕ್ಕಿತ್ತು. ಅಷ್ಟನ್ನೇ ಭರ್ತಿ ಮಾಡಿಕೊಳ್ಳಬೇಕಿತ್ತು. ಆದರೆ, ಹೊರಗುತ್ತಿಗೆ ಸೇರಿ 2,440 ಜನರನ್ನು ಭರ್ತಿ ಮಾಡಿಕೊಳ್ಳಲಾಯಿತು. ಕೊರೊನಾ ಸೋಂಕು ಹರಡುತ್ತಿರುವ ನಡುವೆಯೂ ಮಂಡಳಿಯ ನೌಕರರು ಹಗಲಿರುಳು ಎನ್ನದೇ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಕೆಲಸದಿಂದ ತೆಗೆಯುವುದು ಸರಿಯಲ್ಲ’ ಎಂದು ಅವರು ಹೇಳಿದರು. 

‘ಒಂದೆಡೆ 345 ಜನ ನೌಕರರು ಹೆಚ್ಚಾದರು ಎಂದು ಹೇಳುವ ಮಂಡಳಿ, 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ 1,700 ಜನ ಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದೆ. ಈ 345 ನೌಕರರನ್ನು ಆ ಯೋಜನೆಗೆ ತೆಗೆದುಕೊಳ್ಳಬಹುದು’ ಎಂದು ಅವರು ಸಲಹೆ ನೀಡಿದರು.

ಆದೇಶ ಉಲ್ಲಂಘನೆ: ‘ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಗಳ ಉದ್ಯೋಗದಾತರು ತಮ್ಮ ಉದ್ಯೋಗಿಗಳನ್ನು ಅಥವಾ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದು ಮತ್ತು ಅವರ ವೇತನವನ್ನು ಕಡಿತಗೊಳಿಸಬಾರದು ಎಂದು ಕಾರ್ಮಿಕರ ಇಲಾಖೆ ಮಾ.24ರಂದೇ ಸೂಚಿಸಿದೆ. ಈ ಆದೇಶವನ್ನು ಜಲಮಂಡಳಿ ಉಲ್ಲಂಘಿಸುತ್ತಿದೆ’ ಎಂದು ರುದ್ರೇಗೌಡ ದೂರಿದರು.

‘ಲಾಕ್‌ಡೌನ್‌ ಅವಧಿಯ ವೇತನ ಪಾವತಿ’
‘ಜಲಮಂಡಳಿಯಲ್ಲಿ ಒಟ್ಟು 2,440 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆಯನ್ನು 2095ಕ್ಕೆ ಸೀಮಿತಗೊಳಿಸುವಂತೆ ಸರ್ಕಾರ ಸೂಚಿಸಿದೆ. ಇದರಂತೆ 345 ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಬೇಕಾಗಿದೆ. ಆದರೆ, ಲಾಕ್‌ಡೌನ್‌ ಅವಧಿ ಮುಗಿಯುವವರೆಗೆ ಅವರು ಕೆಲಸ ಮಾಡಬಹುದು. ಈ ಅವಧಿಯ ವೇತನವನ್ನೂ ಪಾವತಿಸಲಾಗುತ್ತದೆ’ ಎಂದು ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಪ್ಪಂದದಂತೆ ಇವರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಮಾ. 31ಕ್ಕೆ ಅವರ ಗುತ್ತಿಗೆ ಅವಧಿ ಮುಗಿದಿದೆ. ಕೆಲಸದಿಂದ ತೆಗೆಯಬೇಕಾದ 345 ಜನರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಲಾಕ್‌ಡೌನ್‌ ಅವಧಿ ಮುಗಿದ ಮೇಲೆ ತೆಗೆದು ಹಾಕಲಾಗುತ್ತದೆ’ ಎಂದರು. 

‘ಹೆಚ್ಚು ಸಿಬ್ಬಂದಿ ಬೇಕು ಎಂದು ನಾವೂ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಅನುಮತಿ ನೀಡಿದರೆ ಅಗತ್ಯವಾಗಿ ಬೇಕಾಗಿರುವಷ್ಟು ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು