ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹ: ಪುನರ್‌ ಬಳಕೆ ಮಂತ್ರ

ಭವಿಷ್ಯದ ಬೆಂಗಳೂರಿಗೆ ನೀರು–ಜಲತಜ್ಞರು, ಅಧಿಕಾರಿಗಳ ಸಂವಾದ
Last Updated 26 ಆಗಸ್ಟ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಭವಿಷ್ಯದಲ್ಲಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಿರಲು ಮಳೆ ನೀರು ಸಂಗ್ರಹ, ನೀರಿನ ಶುದ್ಧೀಕರಣ ಮತ್ತು ಪುನರ್‌ಬಳಕೆ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು ಮತ್ತು ರಾಜಧಾನಿಯ ಸುತ್ತಮುತ್ತಲಿನ ನಗರಗಳ ಅಭಿವೃದ್ಧಿ ಆಗಬೇಕು.

ಸಮಕಾಲೀನ ವಿಷಯಗಳ ಕೇಂದ್ರವು (ಸಿಸಿಐ) ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಭವಿಷ್ಯದ ಬೆಂಗಳೂರಿಗೆ ನೀರು’ ಕುರಿತು ಅಧಿಕಾರಿಗಳು, ಜಲತಜ್ಞರು ಮತ್ತು ಶಿಕ್ಷಣ ತಜ್ಞರು ಮಾತನಾಡಿದರು.

ಸಂಸದ ಪಿ.ಸಿ. ಮೋಹನ್‌, ‘ನಗರದಲ್ಲಿ ಈ ಹಿಂದೆ 400ಕ್ಕೂ ಹೆಚ್ಚು ಕೆರೆಗಳಿದ್ದವು. ಈಗ 45ರಿಂದ 50 ಕೆರೆಗಳಷ್ಟೇ ಉಳಿದಿವೆ. ಮೊದಲು, 10–15 ಎಕರೆಯಲ್ಲಿ ಒಂದು ತೆರೆದ ಬಾವಿ ಇರುತ್ತಿತ್ತು. ಈಗ, ಒಂದು ಎಕರೆಯಲ್ಲಿ 25ರಿಂದ 30 ನಿವೇಶನಗಳನ್ನು ಮಾಡಿ, 25ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ’ ಎಂದರು.

‘ಸಂಸದರ ಪ್ರದೇಶಾಭಿವೃದ್ಧಿ ನಿಧಿ ವಿನಿಯೋಗಿಸಿ, ನನ್ನ ಕ್ಷೇತ್ರದ ಉದ್ಯಾನಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡುತ್ತೇನೆ’ ಎಂದು ತಿಳಿಸಿದರು.

ಐಎಎಸ್‌ ನಿವೃತ್ತ ಅಧಿಕಾರಿ ಎಂ.ಕೆ. ಶಂಕರಲಿಂಗೇಗೌಡ ಮಾತನಾಡಿ, ‘ನಗರದ ಜನಸಂಖ್ಯೆ ಏರುತ್ತಿದ್ದು, ನೀರಿನ ಕೊರತೆ ಹೆಚ್ಚಾಗುತ್ತಿದೆ. ಭವಿಷ್ಯದಲ್ಲಿ ದಿನಕ್ಕೆ 70 ಕೋಟಿ ಲೀಟರ್‌ ನೀರು ಕೊರತೆಯಾಗುತ್ತದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ 25ರಷ್ಟು ಜನ ಇರುವುದು ಬೆಂಗಳೂರಿನಲ್ಲಿ. ಇಲ್ಲಿ ಜನಸಂಖ್ಯೆ ಕಡಿಮೆ ಮಾಡಬೇಕೆಂದರೆ, ಅಕ್ಕ–ಪಕ್ಕದ ನಗರಗಳನ್ನು ಅಭಿವೃದ್ಧಿ ಮಾಡಬೇಕು. ಅಲ್ಲಿ ಉತ್ತಮ ಶಾಲಾ–ಕಾಲೇಜು, ಆಸ್ಪತ್ರೆಗಳ ನಿರ್ಮಾಣ ಮಾಡಬೇಕು’ ಎಂದರು.

‘ತುಮಕೂರು ಮತ್ತು ಕನಕಪುರಗಳನ್ನು ಬೆಂಗಳೂರಿನ ಭಾಗವಾಗಿಯೇ ಗುರುತಿಸಬೇಕು. ಅಂದರೆ, ಬೆಂಗಳೂರು ಮಹಾನಗರ ಪ್ರದೇಶವಾಗಿ (ಬಿಎಂಆರ್‌)ಇವುಗಳನ್ನು ಪರಿಗಣಿಸಿ, ಅಭಿವೃದ್ಧಿ ಮಾಡಬೇಕು. ಕನಕಪುರದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿರುವುದರಿಂದ ಅಲ್ಲಿ ಜನಸಂಖ್ಯೆ ಹೆಚ್ಚಾದರೂ ನೀರಿನ ಕೊರತೆ ಬಾಧಿಸುವುದಿಲ್ಲ’ ಎಂದು ಸಲಹೆ ಮಾಡಿದರು. ‘ತಿಪ್ಪಗೊಂಡನಹಳ್ಳಿಯಿಂದ ನೀರು ತರುವುದಕ್ಕೆ ಬದಲಾಗಿ, ಮಾಗಡಿಯನ್ನೇ ಅಭಿವೃದ್ಧಿ ಪಡಿಸಬೇಕು. ಅಲ್ಲದೆ, ಕೆರೆಗಳನ್ನು ಶುದ್ಧೀಕರಿಸಿ ಆ ನೀರನ್ನು ಬಳಸುವ ಕಾರ್ಯವಾಗಬೇಕು’ ಎಂದರು.

ದಂಡ ದುಪ್ಪಟ್ಟು
ಮಳೆ ನೀರು ಸಂಗ್ರಹ ಕುರಿತಂತೆ ಜಲಮಂಡಳಿಯು ರೂಪಿಸಿದ ನಿಯಮಗಳನ್ನು ಪಾಲಿಸದ ಕಟ್ಟಡಗಳ ಮಾಲೀಕರಿಗೆ ವಿಧಿಸಲಾಗುವ ದಂಡದ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ಹೇಳಿದರು.

‘ಈಗಾಗಲೇ ದಂಡ ವಿಧಿಸಲಾಗುತ್ತಿದ್ದು, ತಿಂಗಳಿಗೆ ₹2.43 ಕೋಟಿ ದಂಡ ಸಂಗ್ರಹಿಸಲಾಗುತ್ತಿದೆ. ಆದರೆ, ದಂಡ ಕಟ್ಟುತ್ತಾರೆಯೇ ವಿನಾ ಮಳೆ ನೀರು ಸಂಗ್ರಹ ವ್ಯವಸ್ಥೆ ರೂಪಿಸಿಕೊಳ್ಳುತ್ತಿಲ್ಲ. ಹೀಗಾಗಿ, ವಸತಿ ಕಟ್ಟಡಗಳಿಗೆ ನೀರಿನ ಶುಲ್ಕದ ಶೇ 100ರಷ್ಟು ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ 200ರಷ್ಟು ದಂಡದ ಮೊತ್ತ ಹೆಚ್ಚಿಸಲಾಗುವುದು’ ಎಂದು ಅವರು ತಿಳಿಸಿದರು.

‘ಸಿಂಗಪುರ ಮಾದರಿ’
‘ಸಿಂಗಪುರದ ನೀರು ಬಳಕೆ ನೀತಿಯನ್ನು ನಾವು ಮಾದರಿಯನ್ನಾಗಿ ಮಾಡಿಕೊಳ್ಳಬೇಕು. ಅಲ್ಲಿ, ಮಲೇಷ್ಯಾದಿಂದ ನೀರನ್ನು ಪಡೆದುಕೊಳ್ಳಲಾಗುತ್ತಿದೆ. ಅಲ್ಲದೆ, ಮಳೆ ನೀರು ಸಂಗ್ರಹ, ಬಳಸಿದ ನೀರಿನ ಪುನರ್‌ ಬಳಕೆ ಹಾಗೂ ಸಾಗರದ ಉಪ್ಪು ನೀರನ್ನು ಶುದ್ಧೀಕರಿಸಿ ಬಳಸಲಾಗುತ್ತಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಹೇಳಿದರು.

‘ನಾವು ಕಾವೇರಿ ನೀರನ್ನೇ ಅವಲಂಬಿಸದೆ, ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ’ ಎಂದು ಹೇಳಿದರು.

ಸಾರ್ವಜನಿಕರ ಸಲಹೆ
* ರಸ್ತೆ ಬದಿಗಳಲ್ಲಿ ಮಳೆ ನೀರು ಇಂಗುವಂತಹ ವ್ಯವಸ್ಥೆ ಮಾಡಬೇಕು

* ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಯಾಗಲಿ

* ಮೆಟ್ರೊ ಮಾರ್ಗದಲ್ಲಿನ ವಯಡಕ್ಟ್‌ಗಳಲ್ಲಿ ಇನ್ನೂ ಪರಿಣಾಮಕಾರಿಯಾಗಿ ಮಳೆ ನೀರು ಸಂಗ್ರಹಿಸಬೇಕು

* ಮಳೆ ಬಿದ್ದಾಗ ಹೆಚ್ಚು ನೀರು ಹರಿಯುವ ರಸ್ತೆಗಳನ್ನು ಗುರುತಿಸಿ, ಅಲ್ಲಿ ಸಂಗ್ರಹ ವ್ಯವಸ್ಥೆ ಮಾಡಬೇಕು

* ಬೆಂಗಳೂರಿನ ಅಕ್ಕ–ಪಕ್ಕದ ನಗರಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT