ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃದು ನಿಲುವು: ಜೆಡಿಎಸ್‌ ಕ್ಷೇತ್ರಗಳಿಗೆ ಅನುದಾನದ ಹರಿವು

Last Updated 5 ಅಕ್ಟೋಬರ್ 2020, 19:48 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ವೇಳೆಯಲ್ಲಿ ಕಮಲ ಪಾಳಯದ ಮೇಲೆ ಜೆಡಿಎಸ್‌ ನಾಯಕರು ಮೃದು ಧೋರಣೆ ತಾಳಿರುವ ಬೆನ್ನಲ್ಲೇ ಆ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಭರಪೂರ ಅನುದಾನ ಬಿಡುಗಡೆಯಾಗಿದೆ.

‘ಮುಖ್ಯಮಂತ್ರಿಗಳ ನವ ನಗರೋತ್ಥಾನ’ ಯೋಜನೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲದ ರಾಮನಗರ, ಮಾಗಡಿ, ದೇವನಹಳ್ಳಿ, ನೆಲಮಂಗಲ ಕ್ಷೇತ್ರಗಳಿಗೆ ಒಟ್ಟು ₹50 ಕೋಟಿ ಅನುದಾನ ನೀಡಲು ಆರ್ಥಿಕ ಇಲಾಖೆ ಸಹಮತಿ ಸೂಚಿಸಿದೆ. ನಗರದ ಕಸವನ್ನು ಈ ಕ್ಷೇತ್ರಗಳಲ್ಲಿ ವಿಲೇವಾರಿ ಮಾಡಿದ್ದು, ಅದರಿಂದ ಬಾಧಿತಗೊಂಡಿರುವ ಇಲ್ಲಿನ ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರತಿನಿಧಿಸುವ ಚನ್ನಪಟ್ಟಣ ಕ್ಷೇತ್ರಕ್ಕೆ ಕಳೆದ ತಿಂಗಳು ₹50 ಕೋಟಿ ಅನುದಾನ ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಜೆಡಿಎಸ್– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ ನಗರದಾಚೆಯ ಈ ಕ್ಷೇತ್ರಗಳಿಗೆ ₹130 ಕೋಟಿ ಅನುದಾನ ನೀಡಲಾಗಿತ್ತು. ಜೆಡಿಎಸ್‌ ಶಾಸಕ ಪ್ರತಿನಿಧಿಸುವ ದಾಸರಹಳ್ಳಿ ಕ್ಷೇತ್ರಕ್ಕೆ ₹580 ಕೋಟಿ ಅನುದಾನ ಕೊಡಲಾಗಿತ್ತು. ಬಿಜೆಪಿ ಸರ್ಕಾರ ಬಂದ ಕೂಡಲೇ ಈ ಅನುದಾನಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಡೆ ಹಿಡಿದಿದ್ದರು. ನವ ಬೆಂಗಳೂರು ಯೋಜನೆಯ ಹೆಸರನ್ನು ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ ಎಂದು ಬದಲಾಯಿಸಿ
ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡಲಾಗಿತ್ತು.

ಎಚ್‌.ಡಿ. ಕುಮಾರಸ್ವಾಮಿ ಹಾಗೂ ದಾಸರಹಳ್ಳಿ ಶಾಸಕ ಆರ್‌.ಮಂಜುನಾಥ್‌ ಮುಖ್ಯಮಂತ್ರಿ ಅವರನ್ನು ಕಳೆದ ತಿಂಗಳು ಭೇಟಿ ಮಾಡಿ ಅನುದಾನ ಬಿಡುಗಡೆಗೆ ಒತ್ತಾಯಿಸಿದ್ದರು.

ಅಧಿವೇಶನದ ಸಮಯದಲ್ಲೂ ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿದ್ದರು.

‘ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್‌ ನಾಯಕರು ಮೃದು ಧೋರಣೆ ತಾಳಿದ್ದಾರೆ. ಕಾಂಗ್ರೆಸ್‌ ನಾಯಕರ ರೀತಿಯಲ್ಲಿ ಟೀಕಾಪ್ರಹಾರ ನಡೆಸುತ್ತಿಲ್ಲ. ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಒಂದೂ ಕ್ಷೇತ್ರ ಗೆಲ್ಲದಂತೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಎರಡೂ ಪಕ್ಷಗಳ ನಾಯಕರ ಮಧ್ಯೆ ಚರ್ಚೆ ನಡೆದಿದೆ. ಹೀಗಾಗಿ, ಜೆಡಿಎಸ್‌ ನಾಯಕರ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ‘ ಎಂದು ಬಿಜೆಪಿಯ ನಾಯಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT