ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಾಧ್ಯಮ ಬದುಕು ಕಟ್ಟಿಕೊಟ್ಟಿತು: ಡಾ.ಸಿ.ಎನ್‌.ಮಂಜುನಾಥ್‌

Last Updated 21 ಜುಲೈ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಮಾಧ್ಯಮದಲ್ಲಿ ಕಲಿತ ನಾನು ವೈದ್ಯನಾಗಿ ಹೆಸರು ಮಾಡಿದ್ದೇನೆ. ಭಾಷೆ ಯಾವುದಾದರೂ, ಕಲಿಯುವ ಹಂಬಲ ಇದ್ದರೆ ಮುಗಿಲು ಮುಟ್ಟಬಹುದು’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ್‌ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂಗ್ಲಿಷ್‌ ಶಾಲೆಗಳ ಹಿಂದೆ ಓಡಿದವರು ದಡ್ಡರಾದ ಉದಾಹರಣೆಗಳೇ ಹೆಚ್ಚು. ಆದರೆ ಕನ್ನಡ ಶಾಲೆ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ನನಗೆ ಇದ್ದ ಕ್ರಿಕೆಟ್‌ ಹುಚ್ಚಿನಿಂದಾಗಿ ಇಂಗ್ಲಿಷ್‌ ಕಲಿತೆ. ವೀಕ್ಷಕ ವಿವರಣೆ ನೋಡಿ ಆ ಭಾಷೆಯ ಅಂತರಾಳ ಅರ್ಥಮಾಡಿಕೊಂಡೆ. ಹೈಸ್ಕೂಲ್‌ನಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿದಾಗ ಮೊದಲ ಕಿರುಪರೀಕ್ಷೆಯಲ್ಲಿ 75 ವಿದ್ಯಾರ್ಥಿಗಳಲ್ಲಿ 70ನೇ ಸ್ಥಾನ ಪಡೆದಿದ್ದೆ. ಎರಡನೇ ಕಿರುಪರೀಕ್ಷೆ ಹೊತ್ತಿಗೆ ಮೊದಲ ಸ್ಥಾನ ತಲುಪಿದ್ದೆ. ಕನ್ನಡಕ್ಕೆ ಆ ಮಟ್ಟದ ಶಕ್ತಿಯಿದೆ’ ಎಂದು ತಮ್ಮ ಇಂಗ್ಲಿಷ್‌ ಪಯಣವನ್ನು ಮಂಜುನಾಥ್‌ ನೆನೆದರು.

‘ಅಮ್ಮನಿಗೆ ಎದೆನೋವು ಕಾಣಿಸಿಕೊಂಡಾಗ, ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದೆ. ಸಂಜೆಯತನಕ ಅವರಿಗೆ ಚಿಕಿತ್ಸೆ ನೀಡಲು ಅವರು ನೆಪ ಹೇಳಿದರು. ಆಗ ನಾನು ಅನುಭವಿಸಿದ ನೋವಿನಿಂದಾಗಿ ವೈದ್ಯನಾಗುವ ಹಂಬಲ ಹೆಚ್ಚಿತು. ಅದರಲ್ಲೂ ಹೃದ್ರೋಗ ತಜ್ಞನಾಗುವ ಬಗ್ಗೆ ಆಗಲೇ ಚಿಂತಿಸಿದ್ದೆ. ಈಗ ನಾನು ಅದೇ ವೈದ್ಯರಿಗೆ ಚಿಕಿತ್ಸೆ ನೀಡುತ್ತಿದ್ದೇನೆ’ ಎಂದರು.

‘ಎರಡನೇ ವರ್ಷದ ಎಂಬಿಬಿಎಸ್‌ ಓದುವಾಗ ತಲೆದಿಂಬಿನ ಕೆಳಗೆ ಮೂಳೆಗಳನ್ನು ಇಟ್ಟುಕೊಂಡು ಮಲಗುತ್ತಿದ್ದೆ. ಇದನ್ನು ಗಮನಿಸಿದ ಅಮ್ಮ, ನಿನಗೆ ಓದು ಬೇಡ, ಏನು ಬೇಡ ಊರಿಗೆ ಹೋಗೋಣ ಎಂದಿದ್ದರು. ಓದಿನ ಬಗ್ಗೆ ನಾನು ಆ ಮಟ್ಟದಲ್ಲಿ ತಲ್ಲೀನನಾಗಿರುತ್ತಿದ್ದೆ. ಕನ್ನಡ ಸಿನಿಮಾಗಳ ಹುಚ್ಚು ಇತ್ತು. ಈಗ ಇಲ್ಲ. ಬಿಡುಗಡೆಯಾದ ಎಲ್ಲಾ ಸಿನಿಮಾಗಳನ್ನು ನೋಡುತ್ತಿದ್ದೆ. ಸಿನಿಮಾ ನೋಡಿ ಬಂದಮೇಲೆ ರಾತ್ರಿ 12 ರಿಂದ ಬೆಳಿಗ್ಗೆ 6ಗಂಟೆ ವರೆಗೆ ಓದುತ್ತಿದ್ದೆ. ಸ್ನೇಹಿತರು ನನ್ನ ಕೊಠಡಿ ಕಡೆ ಬಂದರೆ ಅವರಿಗೆ ನಾನು ಓದುವುದು ಗೊತ್ತಾಗದಂತೆ ಲೈಟ್‌ ಆಫ್‌ ಮಾಡುತ್ತಿದ್ದೆ’ ಎಂದು ನೆನಪಿಸಿಕೊಂಡರು.
**
ನಿರ್ದೇಶಕರಾಗಿ ದುಡಿದ ಹಾದಿ
‘2006ರಲ್ಲಿ ಸಂಸ್ಥೆಯ ನಿರ್ದೇಶಕನಾದೆ. ಆಗ ಸಂಸ್ಥೆ ತುಂಬಾ ಕೆಟ್ಟ ಸ್ಥಿತಿಯಲ್ಲಿ ಇತ್ತು. ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಕೆಲವರು ನಂಬಿದ್ದರು. ಕೆಲಸಗಾರರು ಆಸ್ಪತ್ರೆಯಲ್ಲಿ ಜೂಜು ಆಡುತ್ತಿದ್ದರು. ಕೇವಲ ಆರು ತಿಂಗಳಿನಲ್ಲಿಯೇ ಸಾಕಷ್ಟು ಸುಧಾರಣೆಗಳನ್ನು ತರಲು ಪ್ರಯತ್ನಪಟ್ಟೆ’ ಎಂದು ಮೆಲುಕು ಹಾಕಿದರು.

ಮೊದಲ ಸ್ಥಾನ: ‘ಹೃದಯ ಕವಾಟ ಹಿಗ್ಗಿಸುವಂತಹ (ಬಲೂನ್‌ ಮಿಟ್ರಾಲ್‌ ವಾಲ್ವೋಪ್ಲಾಸ್ಟಿ) ಶಸ್ತ್ರಚಿಕಿತ್ಸೆಯಲ್ಲಿ ನಮ್ಮ ಸಂಸ್ಥೆ ಈಗ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಆರಂಭದಲ್ಲಿ ಈ ಪ್ರಯೋಗ ಮಾಡುವಾಗ ನಮ್ಮ ಕೈಯಲ್ಲಿದ್ದ ಹಣ ಹಾಕಬೇಕಾಯಿತು’ ಎಂದರು.

‘ರೋಗಿಯನ್ನು ದಾಖಲು ಮಾಡಿಕೊಳ್ಳುವ ಮೊದಲು ₹2,000 ಕಟ್ಟಬೇಕಿತ್ತು. ಆ ನಿಯಮವನ್ನು ನಾನು ಬದಲಿಸಿದೆ. ರೋಗಿ ಮೊದಲು, ನಂತರ ಹಣ ಎಂಬುದು ಈಗಿರುವ ನೀತಿ. ಕಣ್ಣಿನಲ್ಲೇ ಬಡವರನ್ನು ಗುರುತಿಸುವ ವ್ಯವಸ್ಥೆ ಜಾರಿಯಲ್ಲಿದೆ. ಅಂದರೆ ಕೇವಲ ಬಿಪಿಎಲ್‌ ಕಾರ್ಡ್‌ ಇರುವವರಿಗೆ ಮಾತ್ರ ಚಿಕಿತ್ಸೆ ಅಲ್ಲ. ಯಾವುದೇ ದಾಖಲೆ ಇಲ್ಲದ ಸಾಕಷ್ಟು ಬಡವರು, ಅಸಹಾಯಕರಿಗೆ ನಮ್ಮಲ್ಲಿ ಚಿಕಿತ್ಸೆ ಕೊಟ್ಟಿದ್ದೇವೆ’ ಎಂದರು.
**

‘ಚಿಕಿತ್ಸೆ ನೀಡಿ, ಹಣ ಕೊಟ್ಟೆವು’
‘ಒಂದು ಬಡ ಕುಟುಂಬ ತಮಗೆ ಆಧಾರವಾಗಿದ್ದ ಹಸುವನ್ನು ಮಾರಿ ಹೃದ್ರೋಗ ಚಿಕಿತ್ಸೆ ಪಡೆದುಕೊಂಡಿರುವುದು ನನ್ನ ಗಮನಕ್ಕೆ ಬಂತು. ಅವರು ಮೊದಲು ₹25,000 ಕಟ್ಟಿದ್ದರು. ನಂತರ ಇನ್ನೂ ₹60 ಸಾವಿರ ಕಟ್ಟಬೇಕಿತ್ತು. ನಾವು ಮೊದಲು ಕಟ್ಟಿದ್ದ ಹಣವನ್ನೂ ಕೊಟ್ಟು ಕಳುಹಿಸಿದೆವು’ ಎಂದು ಸಂಸ್ಥೆಯ ಮಾನವೀಯ ಗುಣಗಳನ್ನು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT