ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಸಿ.ಎ. ನಿವೇಶನ ಹಂಚಿಕೆ: ಬಿಡಿಎಗೆ ದಂಡ ವಿಧಿಸಿದ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಾಗರಿಕ ಮೂಲಸೌಕರ್ಯ ಬಳಕೆಗೆ ಮೀಸಲಿರಿಸಿದ್ದ (ಸಿ.ಎ) ನಿವೇಶನವನ್ನು ಬಡಾವಣೆಯ ಎಂಟನೇ ಬ್ಲಾಕ್‌ ನಿವಾಸಿಗಳ ಹಿತರಕ್ಷಣಾ ಸಂಘಕ್ಕೆ ಹಂಚಿಕೆ ಮಾಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ತೀರ್ಮಾನವನ್ನು ಅನೂರ್ಜಿತಗೊಳಿಸಿರುವ ಹೈಕೋರ್ಟ್‌, ಪ್ರಾಧಿಕಾರಕ್ಕೆ ₹ 25 ಸಾವಿರ ದಂಡ ವಿಧಿಸಿದೆ.

ವಿಶ್ವೇಶ್ವರಯ್ಯ ಬಡಾವಣೆಯ ಎರಡನೇ ಬ್ಲಾಕ್‌ನಲ್ಲಿ 10–ಎ ಸಿ.ಎ ನಿವೇಶನವನ್ನು ಬಡಾವಣೆಯ ಎಂಟನೇ ಬ್ಲಾಕ್‌ ನಿವಾಸಿಗಳ ಹಿತರಕ್ಷಣಾ ಸಂಘಕ್ಕೆ ಹಂಚಿಕೆ ಮಾಡಿದ್ದನ್ನು ಪ್ರಶ್ನಿಸಿ ಅದೇ ಬಡಾವಣೆಯ ಮೂರನೇ ಬ್ಲಾಕ್‌ ನಿವಾಸಿಗಳ ಹಿತರಕ್ಷಣಾ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಸ್‌.ಜಿ. ಪಂಡಿತ್‌ ನೇತೃತ್ವದ ಏಕಸದಸ್ಯ ಪೀಠ, ಸಿ.ಎ ನಿವೇಶನ ಹಂಚಿಕೆ ಮಾಡಿದ್ದ ಬಿಡಿಎ ನಿರ್ಣಯವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಎರಡನೇ ಬ್ಲಾಕ್‌ನಲ್ಲಿರುವ 10–ಎ ಸಿ.ಎ ನಿವೇಶನ ಹಂಚಿಕೆಗೆ 2017ರಲ್ಲಿ ಬಿಡಿಎ ಅರ್ಜಿ ಆಹ್ವಾನಿಸಿತ್ತು. ಆಗ, ಎಂಟನೇ ಬ್ಲಾಕ್‌ ನಿವಾಸಿಗಳ ಹಿತರಕ್ಷಣಾ ಸಂಘಕ್ಕೆ ಈ ನಿವೇಶನ ಹಂಚಿಕೆ ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಮೂರನೇ ಬ್ಲಾಕ್‌ ನಿವಾಸಿಗಳ ಹಿತರಕ್ಷಣಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. 2018ರ ಡಿಸೆಂಬರ್‌ 6ಕ್ಕೆ ಬಾಕಿ ಇರುವ ಎಲ್ಲ ಅರ್ಜಿಗಳನ್ನೂ ಪಟ್ಟಿಮಾಡಿ ನಿಯಮ 7ರಡಿ ಇರುವ ಅವಕಾಶದಂತೆ ಹೊಸದಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವಂತೆ ಹೈಕೋರ್ಟ್‌ ಆದೇಶಿಸಿತ್ತು.

2018ರ ಡಿಸೆಂಬರ್‌ 15ರಂದು ಸಭೆ ನಡೆಸಿದ್ದ ಬಿಡಿಎ ಆಡಳಿತ ಮಂಡಳಿ, 6,007.73 ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ಪುನಃ ಎಂಟನೇ ಬ್ಲಾಕ್‌ ನಿವಾಸಿಗಳ ಹಿತರಕ್ಷಣಾ ಸಂಘಕ್ಕೆ ಹಂಚಿಕೆ ಮಾಡುವ ತೀರ್ಮಾನ ಕೈಗೊಂಡಿತ್ತು. ಅದನ್ನು ಪ್ರಶ್ನಿಸಿ ಮೂರನೇ ಬ್ಲಾಕ್‌ ನಿವಾಸಿಗಳ ಹಿತರಕ್ಷಣಾ ಸಂಘ ಹೈಕೋರ್ಟ್‌ಗೆ ಮತ್ತೆ ಅರ್ಜಿ ಸಲ್ಲಿಸಿತ್ತು.

‘ಹೈಕೋರ್ಟ್‌ ಆದೇಶವನ್ನು ಬಿಡಿಎ ಆಡೆಳಿತ ಮಂಡಳಿ ಸರಿಯಾಗಿ ಪಾಲಿಸಿಲ್ಲ. ಬಾಕಿ ಇರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಲಾಗಿದೆ ಎಂಬ ಸಮಜಾಯಿಷಿ ನೀಡಿ ತೀರ್ಮಾನ ಕೈಗೊಳ್ಳಲಾಗಿದೆ. ಬಿಡಿಎ ಕಾಯ್ದೆಯ ಸೆಕ್ಷನ್‌ 7ಕ್ಕೆ ವಿರುದ್ಧವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಯಾವುದೇ ದೃಷ್ಟಿಕೋನದಿಂದಲೂ ಈ ತೀರ್ಮಾನ ಸಿಂಧುವಾಗುವುದಿಲ್ಲ’ ಎಂದು ಏಕಸದಸ್ಯ ಪೀಠ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು