ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆಗೆ ಗ್ರಹಣ?

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯ ಬುತ್ತಿ: ಸೋತವರಿಗೆ ಮಂತ್ರಿಗಿರಿಯೂ ಕಷ್ಟ
Last Updated 6 ಜನವರಿ 2020, 20:08 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದ್ದು, ಸಂಪುಟ ಸೇರಲು ತುದಿಗಾಲಿನಲ್ಲಿ ಕುಳಿತಿರುವ 11 ನೂತನ ಶಾಸಕರ ಆತಂಕಕ್ಕೆ ಕಾರಣವಾಗಿದೆ.

ಉಪ ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ಸಚಿವರಾಗಲಿದ್ದೇವೆ ಎಂಬ ಭರವಸೆ ಶಾಸಕರಾಗಿ ಆಯ್ಕೆಯಾದವರಲ್ಲಿ ಇತ್ತು. ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆಗೆ ಒಪ್ಪಿಗೆ ಸೂಚಿಸದೇ ಇದ್ದುದರಿಂದ ಆರಂಭದಲ್ಲಿ ಕೆಲ ದಿನ ವಿಳಂಬವಾಯಿತು. ಅಷ್ಟರಲ್ಲಿ ಶೂನ್ಯಮಾಸ ಆರಂಭವಾಗಿದ್ದರಿಂದ ಅದು ಮುಗಿಯುವವರೆಗೆ ಸಂಪುಟ ವಿಸ್ತರಣೆ ಇಲ್ಲ ಎಂಬ ಸಂದೇಶವೂ ರವಾನೆಯಾಯಿತು.

ಸಂಕ್ರಾಂತಿಗೆ ಶೂನ್ಯಮಾಸ ಮುಗಿಯಲಿದ್ದು, ಆ ಕ್ಷಣವೇ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ ಎಂಬ ಲೆಕ್ಕಾಚಾರ ಶಾಸಕರದ್ದಾಗಿತ್ತು. ಈಗ ದೆಹಲಿ ವಿಧಾನಸಭೆಯ ಚುನಾವಣೆ ಘೋಷಣೆಯಾಗಿದೆ. ದೇಶದ ರಾಜಧಾನಿಯ ರಾಜಕಾರಣ ಯಾರ ಕೈಯಲ್ಲಿರಬೇಕು ಎಂಬ ನಿರ್ಧರಿಸುವ ನಿರ್ಣಾಯಕ ಚುನಾವಣೆ ಇದಾಗಿರುವುದರಿಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ.

ಚುನಾವಣೆ ಮುಗಿಯುವವರೆಗೆ (ಫೆ. 11) ಶಾ ಭೇಟಿ ಸಾಧ್ಯವಾಗದೇ ಇದ್ದರೆ ಅಲ್ಲಿಯವರೆಗೂ ವಿಸ್ತರಣೆ ಮುಂದಕ್ಕೆ ಹೋಗಲಿದೆ ಎಂಬ ಚರ್ಚೆ ಬಿಜೆಪಿ ಪಾಳಯದಲ್ಲಿ ಶುರುವಾಗಿದೆ.

ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ‘ಇದೇ 16ರ ಬಳಿಕ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೆ ಮುನ್ನ ದೆಹಲಿಗೆ ಹೋಗಿ ಅವರನ್ನು ಭೇಟಿಯಾಗಿ ಬರುವೆ. ಒಂದು ವಾರದೊಳಗೆ ಸಂಪುಟ ವಿಸ್ತರಣೆ ಮಾಡಲಾಗುವುದು’ ಎಂದು ಹೇಳಿದ್ದಾರೆ.

‍ಉಪ ಚುನಾವಣೆ ಮುಗಿದ ಕೂಡಲೇ ದೆಹಲಿಗೆ ಹೋಗಿ ಚರ್ಚಿಸಿ ಬರುವುದಾಗಿ ಯಡಿಯೂರಪ್ಪ ಹೇಳಿದ್ದರು. ಅಮಿತ್ ಶಾ ಅವರು ಜಾರ್ಖಂಡ್ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಇದ್ದುದರಿಂದ ಭೇಟಿ ಸಾಧ್ಯವಾಗಿರಲಿಲ್ಲ. ಈಗಲೂ ಮನಸ್ಸು ಮಾಡಿದರೆ, ದೆಹಲಿಗೆ ಹೋಗಿ ಅವರನ್ನು ಭೇಟಿಯಾಗಿ ಒಪ್ಪಿಗೆ ಪಡೆದು ಬಂದು, ಶೂನ್ಯಮಾಸ ಮುಗಿಯುತ್ತಿದ್ದಂತೆ ಸಂಪುಟ ವಿಸ್ತರಣೆ ಮಾಡಬಹುದು. ಆದರೆ, ಅಷ್ಟು ಬೇಗ ವಿಸ್ತರಣೆ ಮಾಡಲು ವರಿಷ್ಠರಿಗೆ ಮನಸ್ಸು ಇದ್ದಂತಿಲ್ಲ ಎಂದೂ ಹೇಳಲಾಗುತ್ತಿದೆ.

ಯಡಿಯೂರಪ್ಪ ಅವರು ಇದೇ 20ರಿಂದ 24ರವರೆಗೆ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದಕ್ಕೆ ಮುನ್ನ ವಿಸ್ತರಣೆಯಾಗದೇ ಇದ್ದರೆ ಮತ್ತಷ್ಟು ವಿಳಂಬವಾಗಲಿದೆ ಎಂದೂ ಮೂಲಗಳು ಹೇಳಿವೆ.

ಎಲ್ಲರಿಗೂ ಅವಕಾಶ ಸಿಗುವುದು ಅನುಮಾನ

ಒಂದು ವೇಳೆ ಸಂಪುಟ ವಿಸ್ತರಣೆಯಾದರೂ ಉಪ ಚುನಾವಣೆಯಲ್ಲಿ ಗೆದ್ದಿರುವ 11 ಜನರಿಗೂ ಸಂಪುಟ ಸೇರುವ ಅವಕಾಶ ಸಿಗುವುದು ಅನುಮಾನ ಎಂದು ಬಿಜೆಪಿ ಮೂಲಗಳು ಹೇಳಿವೆ.

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಬೀಳಿಸಲು ಕಾರಣರಾದ ಆ ಪಕ್ಷಗಳ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಬಿ.ಎಸ್‌. ಯಡಿಯೂರಪ್ಪ ನೀಡಿದ್ದರು. ಶಾಸಕರನ್ನು ಅನರ್ಹಗೊಳಿಸಿದ್ದರಿಂದಾಗಿ ತಕ್ಷಣವೇ ಸಚಿವರಾಗಲು ನಿರ್ಬಂಧ ಎದುರಾಯಿತು. ಉಪ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ಅವಕಾಶ ನೀಡಿದ್ದರಿಂದಾಗಿ ಚುನಾವಣೆ ನಡೆಯಿತು. ಫಲಿತಾಂಶ ಹೊರಬಿದ್ದ ಕೂಡಲೇ ಸಚಿವರಾಗುವ ಉಮೇದಿನಲ್ಲಿ ಈ ಎಲ್ಲರೂ ಇದ್ದರು. ರಾಜೀನಾಮೆ ಕೊಟ್ಟವರ ಪೈಕಿ 11 ಜನ ಗೆದ್ದರೆ, ಎಚ್.ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್ ಸೋಲು ಕಂಡರು. ಆರ್. ಶಂಕರ್‌ಗೆ ಟಿಕೆಟ್‌ ನೀಡಿರಲಿಲ್ಲ.

ಈಗ ವಿಸ್ತರಣೆಯಾದರೂ ಶ್ರೀಮಂತ ಪಾಟೀಲ (ಕಾಗವಾಡ), ಮಹೇಶ ಕುಮಠಳ್ಳಿ (ಅಥಣಿ) ಅವರಿಗೆ ಅವಕಾಶ ಸಿಗುವ ಸಾಧ್ಯತೆ ತೀರಾ ಕ್ಷೀಣ. ಸದ್ಯಕ್ಕೆ ವಿಧಾನಪರಿಷತ್ತಿನಲ್ಲಿ ಸ್ಥಾನ ಖಾಲಿ ಇಲ್ಲದೇ ಇರುವುದರಿಂದ ವಿಶ್ವನಾಥ್‌, ನಾಗರಾಜ್‌, ಆರ್. ಶಂಕರ್‌ ಅವರು ತಕ್ಷಣಕ್ಕೆ ಸಚಿವರಾಗುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ.

***

ವರಿಷ್ಠರಿಂದ ಅನುಮತಿ ಸಿಕ್ಕಿದ ತಕ್ಷಣ ವಿಸ್ತರಣೆ ಮಾಡಲಾಗುವುದು. ದಾವೋಸ್ ಸಮ್ಮೇಳನಕ್ಕೆ ಮುನ್ನ ಈ ಕೆಲಸ ಪೂರ್ಣಗೊಳಿಸಲಾಗುವುದು
–ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT