ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಸಮಗ್ರ ನಗರ ಯೋಜನೆಯೇ ದೋಷಪೂರಿತ: ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖ

2017ರಲ್ಲಿ ಸಿಡಿಪಿ ಕರಡು ಸಿದ್ಧವಾದರೂ ಅಂತಿಮಗೊಂಡಿಲ್ಲ
Last Updated 17 ಸೆಪ್ಟೆಂಬರ್ 2021, 1:50 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರೂಪಿಸಿದ್ದ, 1995ರ ಜನವರಿಯಲ್ಲಿ ಅನುಮೋದನೆಗೊಂಡು 2007ರವರೆಗೆ ಜಾರಿಯಲ್ಲಿದ್ದ ಪರಿಷ್ಕೃತ ಸಮಗ್ರ ನಗರ ಅಭಿವೃದ್ಧಿ ಯೋಜನೆಯೇ (ಸಿಡಿಪಿ) ದೋಷಪೂರಿತವಾಗಿತ್ತು ಎಂದು ನಗರದ ಮಳೆನೀರು ನಿರ್ವಹಣೆ ಕುರಿತ ಮಹಾಲೇಖಪಾಲರ ವರದಿ ಬೊಟ್ಟುಮಾಡಿದೆ.

1995ರ ಸಿಡಿಪಿಯಲ್ಲಿ ಜಲಮೂಲಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿತ್ತು. ರಾಜಕಾಲುವೆಗಳನ್ನೂ ಸ್ಪಷ್ಟವಾಗಿ ತೋರಿಸಿರಲಿಲ್ಲ. ಯಾವುದೇ ಹಂತದ ರಾಜಕಾಲುವೆ ಪ್ರಕಾರಗಳ ಬಗ್ಗೆ ಅಥವಾ ಅಗಲದ ಬಗ್ಗೆಯಾಗಲೀ ಸ್ಪಷ್ಟವಾದ ಮಾಹಿತಿ ಅದರಲ್ಲಿ ಇರಲಿಲ್ಲ. ಒತ್ತುವರಿಗಳ ಬಗ್ಗೆಯಾಗಲೀ, ರಾಜಕಾಲುವೆಯಲ್ಲಿ ನೀರಿನ ಹರಿವಿಗೆ ಇದ್ದ ಅಡೆತಡೆಗಳ ಬಗ್ಗೆಯಾಗಲೀ ಅದರಲ್ಲಿ ವಿಶ್ಲೇಷಣೆ ನಡೆಸಿರಲ್ಲ. ಆ ಸಿಡಿಪಿಯೇ ಅಪೂರ್ಣವಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

2007ರಲ್ಲಿ ಅನೊಮೋದನೆಗೊಂಡಿರುವ 2031ರ ಪರಿಷ್ಕೃತ ಸಮಗ್ರ ಯೋಜನೆ (ಆರ್‌ಎಂಪಿ) ಹಾಗೂ ಇದು ಅನುಮೋದನೆಯಾಗುವವರೆಗೆ ಮಾನ್ಯತೆ ಹೊಂದಿರುವ ಆರ್‌ಎಂಪಿ 2015 ಕೂಡ ದೋಷಪೂರಿತವಾಗಿವೆ. ರಾಜಕಾಲುವೆಗಳಿಗೆ ಮೀಸಲು ಪ್ರದೇಶಗಳನ್ನು ಹೊಂದುವ ಪ್ರಾಮುಖ್ಯತೆಯನ್ನು ಆರ್‌ಎಂಪಿ 2015ರಲ್ಲಿ ಗುರುತಿಸಲಾಗಿತ್ತು. ಆದರೂ, ಅದರಲ್ಲಿ ರಾಜಕಾಲುವೆಗಳನ್ನುಅಗತ್ಯಕ್ಕೆ ಅನುಗುಣವಾಗಿ ವರ್ಗೀಕರಿಸಲಿಲ್ಲ. ರಾಜಕಾಲುವೆಗಳ ಉದ್ದಕ್ಕೂ ಪಕ್ಕದ ಜಾಗವನ್ನು ‘ಅಭಿವೃದ್ಧಿ ಹೊರತಾದ ಪ್ರದೇಶ’ ಎಂದು ಅಧಿಸೂಚನೆ ಹೊರಡಿಸಲಿಲ್ಲ. ಕೆರೆಗಳು ಹಾಗೂ ರಾಜಕಾಲುವೆಗಳ ಉದ್ದಕ್ಕೂ ಮೀಸಲು ಪ್ರದೇಶಗಳನ್ನು ಗುರುತಿಸಿಯೂ ಇಲ್ಲ. ಅವುಗಳ ನಿರ್ವಹಣೆಗೂ ಕ್ರಮ ಕೈಗೊಳ್ಳಲಿಲ್ಲ ಎಂಬ ಟೀಕೆ ವರದಿಯಲ್ಲಿ ವ್ಯಕ್ತವಾಗಿದೆ.

ಆರ್‌ಎಂಪಿಯಲ್ಲಿ ರಾಜಕಾಲುವೆಗಳ ನಕ್ಷೆಗಳನ್ನು ತೋರಿಸಲಾಗಿತ್ತು. ಆದರೆ, ಅಸ್ತಿತ್ವದಲ್ಲಿದ್ದ ಅನೇಕ ರಾಜಕಾಲುವೆಗಳು ಹಾಗೂ ಕೆರೆಗಳನ್ನು (ಬಿಬಿಎಂಪಿ ತಯಾರಿಸಿದ ರಾಜಕಾಲುವೆಗಳ ಮಾಸ್ಟರ್‌ ಪ್ಲ್ಯಾನ್‌ ಪ್ರಕಾರ), ಬಿಡಿಎ ಪ್ರಕಟಿಸಿದ ನಕ್ಷೆಗಳಲ್ಲಿ ತೋರಿಸಿಯೇ ಇರಲಿಲ್ಲ. ಈ ನ್ಯೂನತೆಯಿಂದಾಗಿ ರಾಜಕಾಲುವೆ ಪಕ್ಕದ ಮೀಸಲು ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆ ನಡೆಸಲು ಅವಕಾಶ ಸಿಕ್ಕಿತು ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಆರ್‌ಎಂಪಿ 2015ರ ನ್ಯೂನತೆಯನ್ನು ಒಪ್ಪಿಕೊಂಡಿರುವ ಸರ್ಕಾರ, 2031ರ ಆರ್‌ಎಂಪಿಯಲ್ಲಿ ಅದನ್ನು ಸರಿಪಡಿಸಲು ಕ್ರಮಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದೆ. ಆದರೂ, ಸಿಡಿಪಿ ತಯಾರಿ ಸಂದರ್ಭದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಕೆರೆಗಳು ಮತ್ತು ರಾಜಕಾಲುವೆಗಳ ಮಹತ್ವನ್ನು ಕಡೆಗಣಿಸಿರುವುದು ಸ್ಪಷ್ಟ ಎಂದೂ ವರದಿಯಲ್ಲಿ ಮಹಾಲೇಖಪಾಲರು ಅಭಿಪ್ರಾಯಪಟ್ಟಿದ್ದಾರೆ.

‘ಆರ್‌ಎಂಪಿ 2031’ ವಿಳಂಬಕ್ಕೆ ಆಕ್ಷೇಪ
2017ರ ಒಳಗೆ ಪರಿಷ್ಕರಣೆ ಆಗಬೇಕಿದ್ದ ಐದನೇ ಸಮಗ್ರ ಅಭಿವೃದ್ಧಿ ಯೋಜನೆಯು ಇದುವರೆಗೂ ಪರಿಷ್ಕರಣೆ ಆಗಿಲ್ಲ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು 2031ರ ಸಿಡಿಪಿ ಕರಡನ್ನು 2017ರಲ್ಲಿ ನವೆಂಬರ್‌ನಲ್ಲಿ ಪ್ರಕಟಿಸಲಾಯಿತಾದರೂ ಈ ಕುರಿತು ಇನ್ನೂ ಅಂತಿಮ ಅಧಿಸೂಚನೆ ಪ್ರಕಟವಾಗಿಲ್ಲ. ಈ ಬಗ್ಗೆಯೂ ಸಿಎಜಿ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಬೆಂಗಳೂರುಸಮಗ್ರ ಅಭಿವೃದ್ಧಿಯ ಎರಡನೇ ಮತ್ತು ನಾಲ್ಕನೇ ಯೋಜನೆಗಳ ಪರಿಷ್ಕರಣೆ ಎರಡು ವರ್ಷ ವಿಳಂಬವಾಗಿದ್ದ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಿರುವ ಮಹಾಲೇಖಪಾಲರು, ‘1961ರ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯ ಪ್ರಕಾರ, ಸಮಗ್ರ ಅಭಿವೃದ್ಧಿ ಯೋಜನೆಯನ್ನು ಹತ್ತು ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು. ಆರ್‌ಎಂಪಿಯ ಸಮಯೋಚಿತ ಹಾಗೂ ನಿಯತಕಾಲಿಕ ಪರಿಷ್ಕರಣೆಯಿಂದ ಯೋಜನಾ ಪ್ರಾಧಿಕಾರಗಳು ನಗರದ ಬೆಳವಣಿಗೆ ಆಧರಿಸಿ ವಲಯ ನಿಯಮಗಳ ಅನುಸಾರ ಭವಿಷ್ಯದ ವಿಸ್ತರಣೆಯನ್ನು ಯೋಜಿಸಲು ಸಾಧ್ಯವಾಗುತ್ತದೆ. ಹಿಂದಿನ ಯೋಜನೆಗಳ ದೋಷಗಳನ್ನು ಸರಿಪಡಿಸಲು ಅವಕಾಶ ಸಿಗುತ್ತದೆ. ಸಿಡಿಪಿ ಪರಿಷ್ಕರಣೆಯಲ್ಲಿ ಆಗುವ ವಿಳಂಬವು ಅನಿಯಂತ್ರಿತ ವಿಸ್ತರಣೆಗೆ ಕಾರಣವಾಗುತ್ತದೆ. ಇದರಿಂದ ಸರ್ಕಾರಿ ಜಮೀನುಗಳ ಒತ್ತುವರಿ ಹಾಗೂ ವಲಯ ನಿಯಮಗಳ ಉಲ್ಲಂಘನೆ ಹೆಚ್ಚುತ್ತದೆ’ ಎಂದೂ ಎಚ್ಚರಿಸಿದ್ದಾರೆ.

ಭೂಮಿ, ಕೆರೆಗಳಂತರ ಸರ್ಕಾರಿ ಆಸ್ತಿಗಳ ಒತ್ತುವರಿ ತಡೆಯಲು ಪರಿಷ್ಕೃತ ಸಿಡಿಪಿಯನ್ನು ಅಂತಿಮಗೊಳಿಸಲು ಸರ್ಕಾರ ಹಾಗೂ ಬಿಡಿಎ ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜಕಾಲುವೆಗಳ ಸಂರಕ್ಷಣೆಗೆ ಸಂಬಂಧಿಸಿದ ಲೋಪಗಳನ್ನೂ ಸರಿಪಡಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT