ಶನಿವಾರ, ಮೇ 28, 2022
31 °C
ಕನ್ನಡ ಗ್ರಾಹಕರ ಕೂಟ ಹಮ್ಮಿಕೊಂಡ ಅಭಿಯಾನಕ್ಕೆ ಉತ್ತಮ ಸ್ಪಂದನೆ * ಹಿಂದಿ ಹೇರಿಕೆಗೆ ಆಕ್ರೋಶ

ಗ್ರಾಹಕ ಸೇವೆ: ಕಾಣಲಿ ಕನ್ನಡ, ಕೇಳಲಿ ಕನ್ನಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಾಣಲಿ ಕನ್ನಡ, ಕೇಳಲಿ ಕನ್ನಡ, ಗ್ರಾಹಕ ಸೇವೆಯಲ್ಲಿ ಕನ್ನಡ’... ಎಲ್ಲಾ ತರಹದ ಸೇವೆಗಳೂ ಕನ್ನಡದಲ್ಲೇ ಸಿಗಬೇಕು ಎಂದು ಒತ್ತಾಯಿಸಿ ಕನ್ನಡ ಗ್ರಾಹಕರ ಕೂಟವು ರಾಷ್ಟ್ರೀಯ ಗ್ರಾಹಕರ ದಿನವಾದ ಶುಕ್ರವಾರ ಹಮ್ಮಿಕೊಂಡಿದ್ದ ಟ್ವಿಟರ್‌ ಅಭಿಯಾನದ ಘೋಷವಾಕ್ಯವಿದು. ಈ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಯಿತು. 

ಬ್ಯಾಂಕ್‌ಗಳು ಹಾಗೂ ವಿವಿಧ ಕಂಪನಿಗಳು ಕನ್ನಡವನ್ನು ಕಡೆಗಣಿಸಿ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಸೇವೆ ಒದಗಿಸಲು ಆದ್ಯತೆ ನೀಡಿರುವುದಕ್ಕೆ ಹಲವು ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಮೇಲೆ ಹಿಂದಿ ಹೇರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ನ ದಿನನಿತ್ಯದ ವಹಿವಾಟಿನಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡದ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜನರು ಖರೀದಿಸುವ ಉತ್ಪನ್ನಗಳ ಬಗ್ಗೆ ಮಾಹಿತಿ ಕನ್ನಡದಲ್ಲಿರಬೇಕು ಎಂಬ ಅರಿವು ಮೂಡಿಸುವ ಪ್ರಯತ್ನ ನಮ್ಮದು. ಈ ಅಭಿಯಾನದಲ್ಲಿ ಭಾಗವಹಿಸಿದ ಕನ್ನಡ ಮನಸ್ಸುಗಳಿಗೆ ಧನ್ಯವಾದಗಳು. ಗ್ರಾಹಕ ಸೇವೆಯಲ್ಲಿ ಕನ್ನಡ ಜಾರಿಯಾಗುವಂತೆ ಮಾಡಲು ಜನಾಂದೋಲನಕ್ಕಿಂತ ಮಿಗಿಲಾದ ಅನ್ಯ ಮಾರ್ಗ ಇಲ್ಲ. ಈ ಬೇಡಿಕೆಯನ್ನು ಪ್ರತಿದಿನವೂ ಮಂಡಿಸಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ’ ಎಂದು ಕನ್ನಡ ಗ್ರಾಹಕರ ಕೂಟ ತಿಳಿಸಿದೆ.

ಗ್ರಾಹಕರ ದಿನದ ಅಂಗವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರೂ ಸಹ ವಿಡಿಯೊ ಸಂದೇಶವನ್ನು ಟ್ವೀಟ್‌ ಮಾಡಿದ್ದಾರೆ.

‘ಗ್ರಾಹಕ ಸೇವೆಯಲ್ಲಿ ಕನ್ನಡಕ್ಕೆ ಆದ್ಯತೆ ಸಿಗಬೇಕು. ಅಂಚೆ ಕಚೇರಿಯಲ್ಲಿ ಪಿಂಚಣಿ ತೆಗೆದುಕೊಳ್ಳಲು ಇಂಗ್ಲಿಷ್‌ ಬಲ್ಲವರನ್ನು ಕರೆದುಕೊಂಡು ಬರಬೇಕೇ? ಇದು ಯಾವ ನ್ಯಾಯ ಸ್ವಾಮಿ. ಯಾರ ಮೇಲೆಯೂ ಅವಲಂಬನೆಯಾಗಬಾರದು ಎನ್ನುವ ಕಾರಣಕ್ಕೆ ವೃದ್ಧರು ಪಿಂಚಣಿ ತೆಗೆದುಕೊಳ್ಳಲು ಬರುತ್ತಾರೆ. ನಮ್ಮ ಭಾಷೆಯಲ್ಲೇ ಸೇವೆ ಕೊಡಿ. ಅವರ ಸ್ವಾವಲಂಬಿತನವನ್ನು ಹುರಿದುಂಬಿಸಿ’ ಎಂದು ಒತ್ತಾಯಿಸಿದ್ದಾರೆ.

‘ರಾಜ್ಯದ ನೆಲ, ಜಲ, ವಿದ್ಯುತ್‌ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡಿರುವವರು ಉದ್ಯೋಗ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಹಿಂದಿ ನಮ್ಮ ರಾಷ್ಟ್ರಿಯ ಭಾಷೆ ಅಲ್ಲ. 6.5 ಕೋಟಿ ಜನ ಶ್ರೇಷ್ಠ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಆದರೆ, ನಿಮ್ಮ ಹೋಟೆಲ್‌ಗಳಲ್ಲಿ ಕನ್ನಡದ ಫಲಕಗಳ ಕಾಣಿಸುವುದಿಲ್ಲ’ ಎಂದು ಜಹೊಮ ತಿಪ್ಪೇಸ್ವಾಮಿ ಎನ್ನುವವರು ಡೊಮಿನೋಸ್‌ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

‘ಚಾಲುಕ್ಯರ ರಾಜಧಾನಿ ಬದಾಮಿಯಲ್ಲಿ ಸಾವಿರಾರು ವರ್ಷದ ಹಿಂದೆಯೇ ಕನ್ನಡ ರಾಜಭಾಷೆಯಾಗಿತ್ತು. ಇಂದು ಕನ್ನಡವನ್ನು ಹುಡುಕಬೇಕಿದೆ...’ ಎಂದು ಟ್ವೀಟ್‌ ಮಾಡಿರುವ ಅರುಣ್‌ ಜಾವಗಲ್‌ ಅವರು ಭಾರತೀಯ ಪುರಾತತ್ವ ಇಲಾಖೆ ನೀಡುವ ಪ್ರವೇಶ ಚೀಟಿಯ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು